ವಾಹನಗಳ ವೇಗ ನಿಯಂತ್ರಣಕ್ಕೆಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿದ್ದ ರಿಫ್ಲೆಕ್ಟರ್ ಕಟೌಟ್ ವೊಂದನ್ನು, ಐನಾತಿ ಕಳ್ಳರ ತಂಡವೊಂದು ಕಾರಿನಲ್ಲಿ ಆಗಮಿಸಿ ಹೊತ್ತೊಯ್ದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಕಟೌಟ್ ಕಳವು ಮಾಡಿ ಕೊಂಡೊಯ್ಯುತ್ತಿರುವ ದೃಶ್ಯ, ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಅವರು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಿಧಾನವಾಗಿ ಚಲಿಸಿ (ಗೋ ಸ್ಲೋ) ಎಂಬ ಘೋಷವಾಕ್ಯ ತೋರ್ಪಡಿಸುವ ಆಳೆತ್ತರದ ‘ಟ್ರಾಫಿಕ್ ಪೊಲೀಸ್ ರಿಫ್ಲೆಕ್ಟ್ ಕಟೌಟ್’ಗಳು ದೂರದಿಂದ ನೋಡಿದರೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಂತೆ ಗೋಚರಿಸುತ್ತದೆ. ಸದರಿ ಕಟೌಟ್ ಗಳು ರಿಫ್ಲೆಕ್ಟ್ (ಪ್ರತಿಫಲನ) ಆಗುವುದರಿಂದ, ಸಂಜೆ ಹಾಗೂ ರಾತ್ರಿಯ ವೇಳೆ ವಾಹನದ ಹೆಡ್ ಲೈಟ್ ಬೆಳಕಿಗೆ ಗೋಚರಿಸುತ್ತವೆ. ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಅವರು, ವಾಹನ ದಟ್ಟಣೆ ಹೆಚ್ಚಿರುವ ಮತ್ತು ಅಪಘಾತ ವಲಯ ಸರ್ಕಲ್ ಹಾಗೂ ರಸ್ತೆಗಳಲ್ಲಿ ‘ಟ್ರಾಫಿಕ್ ಪೊಲೀಸ್ ಕಟೌಟ್’ಗಳನ್ನು ನಿಲ್ಲಿಸಿದ್ದರು. ಈ ಮೂಲಕ ವಾಹನ ಚಾಲಕರ ಗಮನ ಸೆಳೆಯುವ ವಿನೂತನ ಕ್ರಮಕ್ಕೆ ಮುಂದಾಗಿದ್ದರು. ಅಪಘಾತಗಳ ತಡೆ ಹಾಗೂ ಮಿತಿಮೀರಿದ ವೇಗದಲ್ಲಿ ಆಗಮಿಸುವ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ, ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಅವರು ಕಳೆದ ಕೆಲ ತಿಂಗಳುಗಳ ಹಿಂದೆ, ತಮ್ಮ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳ ಅಪಘಾತ ವಲಯಗಳಲ್ಲಿ, ಟ್ರಾಫಿಕ್ ಪೊಲೀಸ್ ಚಿತ್ರವಿದ್ದ ಹಾಗೂ ಗೋ ಸ್ಲೋ (ನಿಧಾನವಾಗಿ ಚಲಿಸಿ) ಎಂಬ ಸಂದೇಶವಿರುವ ರಿಫ್ಲೆಕ್ಟರ್ ಕಟೌಟ್ ಗಳನ್ನು ಅಳವಡಿಸಿದ್ದರು.

ಅದರಂತೆ ಗಾಡಿಕೊಪ್ಪದ ಮಹೇಂದ್ರ ಶೋ ರೂಂ ಬಳಿಯ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿಯೂ ಕಟೌಟ್ ಹಾಕಿದ್ದರು. ಇತ್ತೀಚೆಗೆ ತಿರುಮಲೇಶ್ ಅವರು ಸದರಿ ಹೆದ್ದಾರಿಯಲ್ಲಿ ಗಸ್ತು ಕಾರ್ಯ ನಡೆಸುತ್ತಿದ್ದ ವೇಳೆ, ಕಟೌಟ್ ನಾಪತ್ತೆಯಾಗಿರುವುದು ಕಂಡುಬಂದಿತ್ತು. ತಕ್ಷಣವೇ ಸಮೀಪದ ಕಟ್ಟಡಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರೊಂದರಲ್ಲಿ ಆಗಮಿಸಿದ ನಾಲ್ವರು ಅಪರಿಚಿತರು, ಕಟೌಟ್ ಮುರಿದು ಕಾರಿನಲ್ಲಿ ಕೊಂಡೊಯ್ದಿರುವುದು ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ
ಪೊಲೀಸ್ ಇಲಾಖೆಗೆ ಸೇರಿದ ವಸ್ತು ಕಳವು ಮಾಡಿದ ಐನಾತಿ ಆರೋಪಿಗಳು ಯಾರೆಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.