ಪ್ರಸ್ತುತ ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತಿರುವ ನಡುವೆ ದೆಹಲಿಯ ನೇಹಾ ಭಾರ್ತಿ ಎಂಬ ಯುವತಿ ಪ್ರೀತಿ ಹಂಚುತ್ತಿದ್ದಾರೆ. ರಂಝಾನ್ ಉಪವಾಸದ ಸಂದರ್ಭದಲ್ಲಿ ನೇಹಾ ಭಾರ್ತಿ ಮತ್ತು ಅವರ ತಂಡವು ದೆಹಲಿಯ ಜಾಮಾ ಮಸೀದಿಯಲ್ಲಿ ಇಫ್ತಾರ್ ಅನ್ನು ಆಯೋಜಿಸುತ್ತಿದ್ದಾರೆ. ಅದು ಕೂಡಾ ಪ್ರತಿ ದಿನ.
“ಸುತ್ತಲೂ ದ್ವೇಷದ ವಾತಾವರಣವಿದೆ. ಪ್ರೀತಿ ಮಾತ್ರ ದ್ವೇಷವನ್ನು ಎದುರಿಸಲು ಸಾಧ್ಯ. ನಾವು ಒಬ್ಬರನ್ನೊಬ್ಬರು ಮತ್ತು ಪರಸ್ಪರರ ಧರ್ಮ, ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಗೌರವಿಸಬೇಕು” ಎನ್ನುತ್ತಾರೆ ನೇಹಾ ಭಾರ್ತಿ.
ಇದನ್ನು ಓದಿದ್ದೀರಾ? ದ್ವೇಷ ಹರಡುವವರ ಮಧ್ಯೆ ಮುಸ್ಲಿಮರಿಗಾಗಿ ‘ಇಫ್ತಾರ್ ಕೂಟ’ ಆಯೋಜಿಸಿದ ‘ಮೀನಾಕ್ಷಿ ಅಮ್ಮ’ನ ಕುಟುಂಬ!
ರಂಝಾನ್ ಸಂದರ್ಭದಲ್ಲಿ ಜಾಮಾ ಮಸೀದಿ ಬಳಿ ಪ್ರತಿ ದಿನ ಇಫ್ತಾರ್ ಆಹಾರ ಹಂಚುವ ನೇಹಾ ಮತ್ತು ಅವರ ತಂಡಕ್ಕೆ ಹಲವು ಹಿಂದೂಗಳು ಹಣ ಸಹಾಯ ಮಾಡುತ್ತಿದ್ದಾರೆ ಎಂದು ನೇಹಾ ತಿಳಿಸಿದ್ದಾರೆ. ನೇಹಾ, ಅವರ ಅತ್ತಿಗೆ ರಣಿತ ಸಿಂಗ್ ಭಾರ್ತಿ ಮತ್ತು ಅವರ ಸ್ನೇಹಿತ ರಣೀಶ್ ನೂರ್ ತಮ್ಮ ಇತರೆ ಸ್ನೇಹಿತರೊಂದಿಗೆ ಸೇರಿಕೊಂಡು ಈ ಕಾರ್ಯವನ್ನು ಮಾಡುತ್ತಿದ್ದಾರೆ.
ನೇಹಾ ಮೂರು ವರ್ಷಗಳಿಂದ ರಂಝಾನ್‌ನ ಪ್ರತಿ ಸಂಜೆ ನೂರಾರು ಉಪವಾಸ ನಿರತರಿಗೆ ಇಫ್ತಾರ್ ಆಯೋಜಿಸುತ್ತಿದ್ದಾರೆ. ನೇಹಾ ದೆಹಲಿಯ ಚಾವ್ರಿ ಬಜಾರ್ ನಿವಾಸಿಯಾಗಿದ್ದು, ನೇಹಾ ಕಾರ್ಯಕ್ಕೆ ಅವರ ಕುಟುಂಬಸ್ಥರೂ ಕೂಡಾ ಸಾಥ್ ನೀಡಿದ್ದಾರೆ. “ಇಂತಹ ಕಾರ್ಯಗಳು ಹೆಚ್ಚಾಗಿ ನಡೆದು, ಮುಂದೊಂದು ದಿನ ನಾವು ದ್ವೇಷವನ್ನು ತೊಡೆದುಹಾಕಬಲ್ಲೆವು ಎಂಬ ಭರವಸೆ ನನಗಿದೆ” ಎಂಬುದು ನೇಹಾ ಅಭಿಪ್ರಾಯ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನೇಹಾ ಭಾರ್ತಿ, “ಬಾಲ್ಯದಿಂದಲೂ ಜನರಿಗೆ ಆಹಾರ ನೀಡುವುದನ್ನು ನಾನು ಇಷ್ಟಪಡುತ್ತಿದ್ದೆ. ಈಗ ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ ಮಾಡಿದವರಿಗೆ ಸಂಜೆ ಇಫ್ತಾರ್‌ಗೆ ಆಹಾರ ನೀಡುವುದು ನನಗೆ ಸಂತೋಷ ತರುತ್ತಿದೆ. ಇದು ಎರಡು ಸಮುದಾಯಗಳ ನಡುವೆ ಸ್ನೇಹ ಸೇತುವೆ ನಿರ್ಮಿಸುತ್ತದೆ. ಇದರಿಂದಾಗಿ ದೇಶದ ಅಡಿಪಾಯ ಬಲವಾಗುತ್ತದೆ, ಅದು ಮುಖ್ಯ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಪ್ರಾಣತ್ಯಾಗ ಮಾಡಿದ್ದಾರೆ: ಡಿಎಂಕೆ ಸಂಸದೆ ಕನಿಮೋಳಿ
“ನಾನು ಹಳೆಯ ದೆಹಲಿಯ ನಿವಾಸಿ. ನಾನು ಬೆಳೆದ ಸ್ಥಳ ಇದು. ನನಗೆ ಎಂದಿಗೂ ಪೋಷಕರು ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆ ಎಂದು ಹೇಳಿಕೊಟ್ಟಿಲ್ಲ. ಇತ್ತೀಚೆಗೆ ಜನರಲ್ಲಿ ದ್ವೇಷವನ್ನು ಉತ್ತೇಜಿಸಲಾಗುತ್ತಿದೆ. ಇದನ್ನು ನೋಡಿ ನನಗೆ ಬೇಸರವಾಗಿದೆ. ನನ್ನನ್ನು ಪೋಷಕರು ಬೆಳೆಸಿದ ರೀತಿ ಇದಕ್ಕೆ ವಿರುದ್ಧವಾಗಿದೆ. ನಾವು ರೈತರ ಆಂದೋಲನದ ವೇಳೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ಇದೀಗ ಮೂರು ವರ್ಷಗಳಿಂದ ಜಾಮಾ ಮಸೀದಿಯಲ್ಲಿ ರಂಝಾನ್‌ನ 30 ದಿನಗಳವರೆಗೆ ಇಫ್ತಾರ್ ಅನ್ನು ಆಯೋಜಿಸುತ್ತಿದ್ದೇವೆ” ಎಂದು ನೇಹಾ ಮಾಹಿತಿ ನೀಡಿದ್ದಾರೆ.
"Why are you doing it for Muslims when you're a Hindu?"
— Brut India (@BrutIndia) March 19, 2025
Here's how Delhi's Neha Bharti organises Iftar for hundreds of fasting people during #Ramzan—an initiative to combat hatred. pic.twitter.com/RZ66I1mHiy
“ನಾನು ಇಫ್ತಾರ್‌ಗೆ ನೀಡುವ ಆಹಾರವನ್ನು ನನ್ನ ಮನೆಯಲ್ಲೇ ತಯಾರಿಸಲಾಗುತ್ತದೆ. ನನ್ನ ಪೋಷಕರು, ಸಹೋದರರು, ಅತ್ತಿಗೆಯರು ಮತ್ತು ಸ್ನೇಹಿತರೊಂದಿಗೆ ಸೇರಿ ನಾನು ಇಫ್ತಾರ್ ಆಹಾರ ತಯಾರಿಸುತ್ತೇನೆ. ನನ್ನ ಪೋಷಕರು ಹೆಚ್ಚಾಗಿ ಆಹಾರ ತಯಾರಿಸುತ್ತಾರೆ. ನಾನು ಅದನ್ನು ಪ್ಯಾಕ್ ಮಾಡಿ ಮಸೀದಿಗೆ ಬಂದು ವಿತರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಶರಣ ಬಸವೇಶ್ವರ ದೇವಸ್ಥಾನ
ಎನ್‌ಜಿಒ ಹೆಲ್ಪಿಂಗ್ ಹ್ಯಾಂಡ್ಸ್ ಅನ್ನು ಸ್ಥಾಪಿಸಿ ನೇಹಾ ಈ ಕಾರ್ಯವನ್ನು ಮಾಡುತ್ತಿದ್ದು, ಹಲವು ಮಂದಿ ಧನ ಸಹಾಯ ಮಾಡಿದ್ದಾರೆ. “ನನಗೆ ಸಾಮಾಜಿಕ ಮಾಧ್ಯಮದಿಂದ ಹಣ ಸೇರಿದಂತೆ ಸಾಕಷ್ಟು ಬೆಂಬಲ ಸಿಗುತ್ತದೆ. ದೇಣಿಗೆಗಳು ಭಾರತೀಯರಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಬರುತ್ತವೆ. ಜನರು ದೇಣಿಗೆ ನೀಡುವ ಮೂಲಕ ಉತ್ತಮ ಕಾರ್ಯವನ್ನು ಮಾಡಲು ಬಯಸುತ್ತಾರೆ” ಎಂದು ನೇಹಾ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ.
ನೇಹಾ ಕಾರ್ಯಕ್ಕೆ ಸಾಮಾಜಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರು ನೇಹಾ ಕಾರ್ಯವನ್ನು ಹಾಡಿಹೊಗಳಿದ್ದಾರೆ. ದ್ವೇಷ ಹರಡುತ್ತಿರುವವರ ಮಧ್ಯೆ ಪ್ರೀತಿ ಹರಡುತ್ತಿರುವ ನಿಮಗೆ ನಮ್ಮ ಪ್ರಣಾಮ ಎಂದು ನೆಟ್ಟಿಗರು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ತಮಿಳುನಾಡು ಮೂಲದ ಮೀನಾಕ್ಷಿ ಅಮ್ಮನ ಕುಟುಂಬ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ‘ಅಮ್ಮನ ಇಫ್ತಾರ್ ಕೂಟ’ವನ್ನು ಏರ್ಪಡಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಮಂದಿಯೂ ಭಾಗವಹಿಸಿ, ‘ದ್ವೇಷದ ಭಾಷೆಗೆ ಪ್ರೀತಿಯೇ ಉತ್ತರ’ ಎಂದು ಸಾರಿದರು.
