- ಕೆಂಪೇಗೌಡ ಜಯಂತಿ ಕಾರ್ಯಕ್ರಮ ಕಡ್ಡಾಯ ಆಚರಣೆಗೆ ಸೂಚನೆ
- ಮೂರು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿರುವ ಸರ್ಕಾರ
ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಕಡ್ಡಾಯವಾಗಿ ಆಚರಿಸುವಂತೆ ಸೂಚನೆ ಹೊರಡಿಸಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು. ಯಾವುದೇ ಜಾತಿ ಧರ್ಮ ಮತ್ತು ಭಾಷೆಗೆ ಸೀಮಿತವಾಗದಂತೆ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.
ಇದರ ಜೊತೆಗೆ ರಾಜ್ಯ ಸರ್ಕಾರ ಮೂವರು ಸಾಧಕರಿಗೆ ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯನ್ನು ನೀಡುತ್ತಿದೆ. ಇಲ್ಲಿನ ಸಾಧಕರ ಆಯ್ಕೆ ಜವಾಬ್ಧಾರಿ ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಅವರದ್ದಾಗಿರುತ್ತದೆ ಎಂದು ಡಿಕೆಶಿ ಹೇಳಿದರು.
ಉಳಿದಂತೆ ಬೆಂಗಳೂರು ವ್ಯಾಪ್ತಿಯ ವಾರ್ಡ್ ಸಂಖ್ಯೆ 198ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಇಷ್ಟೇ ಪ್ರಮಾಣದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಜುಲೈ 9ಕ್ಕೆ ಜರುಗಲಿದೆ ಎಂದವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? : ಮೊಟ್ಟೆ ವಿತರಣೆ ನಿಲ್ಲಿಸಿಲ್ಲ; ಹೈಸ್ಕೂಲಿಗೂ ವಿಸ್ತರಿಸುತ್ತೇವೆ: ಸಚಿವ ಮಧು ಬಂಗಾರಪ್ಪ
ಉಳಿದಂತೆ ಪೂರ್ವಭಾವಿ ಸಭೆ ತೆಗೆದುಕೊಂಡ ನಿರ್ಧಾರಗಳು ಹೀಗಿವೆ.
- ಈ ಹಿಂದಿನಂತೆಯೇ ಹಾಸನದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಸಲಾಗುತ್ತದೆ.
- ಎಲ್ಲಾ ತಾಲೂಕುಗಳಲ್ಲೂ ಕಡ್ಡಾಯವಾಗಿ ಜಯಂತಿ ಆಚರಣೆ ಮಾಡಬೇಕು.
- ಬೆಂಗಳೂರು ನಗರದಲ್ಲಿ 28 ರಿಂದ 5 ರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅನುಕೂಲಕ್ಕೆ ತಕ್ಕಂತೆ, ವಲಯ ಜಂಟಿ ಆಯುಕ್ತರುಗಳು ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಬೇಕು.
- ಬಿಬಿಎಂಪಿ ವತಿಯಿಂದ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ನೀಡುವ ಕೆಂಪೇಗೌಡ ಪ್ರಶಸ್ತಿಗಾಗಿ ಸಮಿತಿ ರಚಿಸಲಾಗುವುದು.
- ವಾರ್ಡ್‌ಗೆ ಒಂದರಂತೆ 198 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
- ಯಾವುದೇ ತಾರತಮ್ಯ ಮಾಡದಂತೆ ಎಲ್ಲಾ ಜಾತಿ ಧರ್ಮಕ್ಕೂ ಪ್ರಶಸ್ತಿ ಸಿಗುವಂತೆ ಆಯ್ಕೆ ಮಾಡಬೇಕು.
- ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು.
- 9ರಂದು ಈ ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಬೇಕು.
- ರಾಜ್ಯ ಸರ್ಕಾರ ಮೂವರು ಸಾಧಕರಿಗೆ ಪ್ರಶಸ್ತಿ ನೀಡಲಿದ್ದು, ಇದರ ಆಯ್ಕೆ ಜವಾಬ್ದಾರಿ ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಅವರದ್ದಾಗಿರುತ್ತದೆ.
- ಐದು ಗೋಪುರಗಳಿಂದ ವಿಧಾನಸೌಧಕ್ಕೆ ಕೆಂಪೇಗೌಡ ಜ್ಯೋತಿ ಆಗಮಿಸಲಿದೆ.ಇದಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ, ಈ ಕಾರ್ಯಕ್ರಮದ ಜವಾಬ್ಧಾರಿ ಪಾಲಿಕೆಯದ್ದಾಗಿರುತ್ತದೆ.
ಇಂದಿನ ಪೂರ್ವಭಾವಿ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಮಾಗಡಿ ಶಾಸಕರಾದ ಬಾಲಕೃಷ್ಣಾ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಳಾ, ರಾಜೇಂದ್ರ ಕುಮಾರ್ ಕಠಾರಿಯಾ, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.