ಗೃಹಜ್ಯೋತಿ ಯೋಜನೆಯ ಅಡಿ ಉಚಿತ ವಿದ್ಯುತ್ ನೀಡಲಿ. ಆದರೆ, ವಾಮಮಾರ್ಗದ ಮೂಲಕ ವಿದ್ಯುತ್ ದರ ಏರಿಕೆ ಮಾಡುವುದು ತಪ್ಪಾಗುತ್ತದೆ ಎಂದು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.
ಗುರುವಾರ ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, “ವಿದ್ಯುತ್ ವಿತರಣಾ ಸಂಸ್ಥೆ ಕೇಳಿದ ಪ್ರಮಾಣಕ್ಕಿಂತ ಹೆಚ್ಚು ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ವಿದ್ಯುತ್ ದರ ಪರಿಷ್ಕರಣೆ ಮಾಡಲು ಆಗ್ರಹಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಣಿಜ್ಯೋದ್ಯಮ ಸಂಘದ ಸದಸ್ಯರು ರಾಜ್ಯಾದ್ಯಂತ ಬಂದ್ ಕರೆ ನೀಡಿದ್ದಾರೆ” ಎಂದು ಅವರು ಹೇಳಿದರು.
“ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ತಪ್ಪಾಗಿದೆ. ವಿದ್ಯುತ್ ಹೆಚ್ಚಳದಿಂದ ಕೈಗಾರಿಕೋದ್ಯಮಿಗಳು ಬೇರೆ ರಾಜ್ಯಗಳತ್ತ ಗಮನ ಹರಿಸುತ್ತವೆ. ಆಗ ಸಹಜವಾಗಿ ಕರ್ನಾಟಕದಲ್ಲಿ ನಿರುದ್ಯೋಗ ಸೃಷ್ಟಿಯಾಗುತ್ತದೆ” ಎಂದು ಮುನ್ನೆಚ್ಚರಿಕೆ ನೀಡಿದರು.
ಹುಬ್ಬಳ್ಳಿ ಧಾರವಾಡ ಮಾರ್ಗಮದ್ಯದಲ್ಲಿ ಸಂಚರಿಸುವ ಬಿಆರ್‌ಟಿಎಸ್ ಚಿಗರಿ ಬಸ್ಸಿನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.