ಅನಾರೋಗ್ಯದ ಹಿನ್ನಲೆಯಲ್ಲಿ ಜೂನ್ 27 ರವರೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿ ಗುರುವಾರ ತಿಳಿಸಿದೆ.
ಪಿಣರಾಯಿ ವಿಜಯನ್ ಅವರು 12 ದಿನಗಳ ಅಮೆರಿಕ, ಕ್ಯೂಬಾ ಮತ್ತು ಯುಎಇ ಪ್ರವಾಸ ಮುಗಿಸಿ ಮಂಗಳವಾರ ರಾಜ್ಯಕ್ಕೆ ವಾಪಸಾದ ನಂತರ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ.
ತಮ್ಮ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನ್ಯೂಯಾರ್ಕ್‌ನ ಲೋಕ ಕೇರಳ ಸಭಾದ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಮೋದಿಗೆ ಭಾರತದಲ್ಲಿ ಪತ್ರಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಹೇಳಿ: ಬೈಡನ್‌ಗೆ ಸಿಪಿಜೆ ಒತ್ತಾಯ
ಅಮೆರಿಕ ಭೇಟಿಯ ನಂತರ ಮುಖ್ಯಮಂತ್ರಿ ನೇತೃತ್ವದ ನಿಯೋಗವು ಕ್ಯೂಬಾಕ್ಕೆ ತೆರಳಿತ್ತು. ಅಲ್ಲಿ ಅವರು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕನೆಲ್ ಅವರನ್ನು ಭೇಟಿಯಾಗಿದ್ದರು.
ಸಚಿವರಾದ ಕೆ ಎನ್ ಬಾಲಗೋಪಾಲ್, ವೀಣಾ ಜಾರ್ಜ್, ಯೋಜನಾ ಮಂಡಳಿ ಉಪಾಧ್ಯಕ್ಷ ವಿ ಕೆ ರಾಮಚಂದ್ರನ್, ಸಂಸದ ಜಾನ್ ಬ್ರಿಟ್ಟಾಸ್, ಮುಖ್ಯ ಕಾರ್ಯದರ್ಶಿ ವಿ ಪಿ ಜಾಯ್, ದೆಹಲಿಯ ರಾಜ್ಯ ಸರ್ಕಾರದ ವಿಶೇಷ ಕರ್ತವ್ಯಾಧಿಕಾರಿ ವೇಣು ರಾಜಾಮೋನಿ, ಆರೋಗ್ಯ ಕಾರ್ಯದರ್ಶಿ ಎಪಿಎಂ ಮಹಮ್ಮದ್ ಹನೀಷ್ ಅವರು ಸಿಎಂ ಪಿಣರಾಯಿ ನೇತೃತ್ವದಲ್ಲಿ ಜತೆಗಿದ್ದರು.
ಪ್ರವಾಸದ ಅಂತಿಮ ಹಂತದಲ್ಲಿ, ಕೇರಳ ಸ್ಟಾರ್ಟ್ಅಪ್ ಮಿಷನ್‌ನ ಪ್ರೀಮಿಯರ್ ಇನ್ಫಿನಿಟಿ ಕೇಂದ್ರವನ್ನು ಉದ್ಘಾಟಿಸಲು ಮುಖ್ಯಮಂತ್ರಿಗಳು ದುಬೈಗೆ ಪ್ರಯಾಣ ಬೆಳೆಸಿದ್ದರು.