- ಕೇಂದ್ರದ 5 ಕೆ.ಜಿ, ಭರವಸೆ ನೀಡಿದಂತೆ 10 ಕೆ.ಜಿ ಸೇರಿ 15 ಕೆ.ಜಿ. ಅಕ್ಕಿ ನೀಡಲಿ
- ಒಂದುವರೆ ತಿಂಗಳಾದರೂ ಕಾಂಗ್ರೆಸ್ನ ನಾಲ್ಕು ಗ್ಯಾರಂಟಿ ಇನ್ನೂ ಜಾರಿಯಾಗಿಲ್ಲ
ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಜು. 4ರಂದು ಬಜೆಟ್ ಪೂರ್ವಭಾವಿ ಅಧಿವೇಶನಕ್ಕೂ ಮೊದಲೇ ಷರತ್ತು ವಿಧಿಸದೇ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ಜು. 5ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಶಾಸಕರು ನನ್ನ ಜೊತೆ ಪಾಲ್ಗೊಳ್ಳುವರು. ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಶಾಸಕರು ಹೋರಾಟ ನಡೆಸುವ ಮೂಲಕ ಕಾಂಗ್ರೆಸ್ ಕಿವಿ ಹಿಂಡುತ್ತೇವೆ. ಭರವಸೆ ಈಡೇರಿಸುವ ತನಕ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಹಿ ಮಾಡಿದ ಪತ್ರವನ್ನು ಮನೆ ಮನೆಗೆ ಕೊಟ್ಟು ಬಂದಿದ್ದರು. ಈ ಕಾರಣಕ್ಕಾಗಿ ಜನರು ನಂಬಿಕೆಯಿಂದ ಅವರಿಗೆ ಮತ ನೀಡಿದರು. ಅದರ ಪರಿಣಾಮ ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಕಾಂಗ್ರೆಸ್ ಗೆಲುವು ಸಾಧಿಸಿತು ಎಂದು ಹೇಳಿದರು.
ಅಧಿಕಾರಕ್ಕೆ ಬಂದು ಒಂದುವರೆ ತಿಂಗಳು ಕಳೆದಿದೆ, ಹಲವು ಷರತ್ತುಗಳೊಂದಿಗೆ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ತೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು ಬಿಟ್ಟರೆ ಉಳಿದ ಯಾವ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಗ್ಯಾರಂಟಿ ಅನುಷ್ಠಾನ ಮಾಡಲು ಆಗದೇ ಇದ್ದರೆ ಅಧಿಕಾರ ಬಿಟ್ಟು ತೊಲಗಿ: ಮಾಜಿ ಸಿಎಂ ಬಿಎಸ್ವೈ
ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆಯೇ ಹೊರತು ಕೇಂದ್ರವನ್ನು ಕೇಳಿ ಅಕ್ಕಿ ನೀಡುವ ಭರವಸೆ ನೀಡಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನರನ್ನು ಮರುಳು ಮಾಡಲು ದಿನಕ್ಕೊಂದು ನಾಟಕ ಆಡುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ 5 ಕೆ.ಜಿ ಅಕ್ಕಿ ನೀಡುತ್ತಿದ್ದು, ಭರವಸೆ ನೀಡಿದಂತೆ 10 ಕೆ.ಜಿ ಸೇರಿ 15 ಕೆ.ಜಿ. ಅಕ್ಕಿ ನೀಡಬೇಕು. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ವಾಗ್ದಾಳಿ ನಡೆಸಿದರು.