ಅಡಿಕೆ ತೋಟದಲ್ಲಿ ರಾತ್ರಿ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಅಳಗವಾಡಿಯಲ್ಲಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದ ಶಿವಪ್ಪ ಹಾಗೂ ಅವರ ಮಗ ರಂಗನಾಥ್ (25) ಇಬ್ಬರು ಶುಕ್ರವಾರ ರಾತ್ರಿ ವಿದ್ಯುತ್ ಗೆ ಬೋರ್ವೆಲ್ ನಿಂದ ಅಡಿಕೆ ತೋಟಕ್ಕೆ ನೀರು ಹಾಯಿಸಲು ಜಮೀನಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಯುವಕ ರಂಗನಾಥ್ ನೀರು ಹಾಯಿಸುವ ವೇಳೆ ಆಯಾಸ ನಿವಾರಿಸಿಕೊಳ್ಳಲು ಹಲಸಿನ ಮರದ ಕೆಳಗೆ ಮಲಗಿದ್ದಾನೆ.
ಈ ವೇಳೆ ರಂಗನಾಥ್ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದ್ದು, ತಲೆಯ ಭಾಗಕ್ಕೆ ಬಾಯಿ ಹಾಕಿ ಕಚ್ಚಿದೆ. ಕೈಯಿಂದ ತರಚಿದಂತೆ ಮಾಡಿದ್ದು ತೀವ್ರ ರಕ್ತಸ್ರಾವವಾಗಿ ಕರಡಿ ದಾಳಿಗೆ ಸಿಲುಕಿ ಬಿಡಿಸಿಕೊಳ್ಳಲಾಗದೆ ಕಿರುಚುತ್ತಿರುವುದನ್ನು ಕೇಳಿ ದೂರದಲ್ಲಿದ್ದ ತಂದೆ ಶಿವಪ್ಪ ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ.

ತಕ್ಷಣ ಬೈಕ್ ಸಹಾಯದಿಂದ ಪುತ್ರನನ್ನು ಸಿರಿಗೆರೆ, ದಾವಣಗೆರೆ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.
ರೈತರಿಗೆ ಹೆಚ್ಚಾಗಿ ರಾತ್ರಿ ವೇಳೆಯೇ ಬೋರ್ವೆಲ್ ವಿದ್ಯುತ್ ನೀಡುತ್ತಿದ್ದು, ಇತ್ತೀಚೆಗೆ ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ರಾತ್ರಿ ವೇಳೆ ಹೆಚ್ಚಾಗಿದೆ. ಹಲವು ಕಡೆ ರೈತರ ಮೇಲೆ ಪ್ರಾಣಿಗಳ ದಾಳಿ ನೆಡೆದಿವೆ. ಈ ಬಗ್ಗೆ ವಿದ್ಯುತ್ ಇಲಾಖೆ ಕೂಡ ಗಮನಹರಿಸಿ ಹಗಲಿನ ವೇಳೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತ ಮುಖಂಡರು ಒತ್ತಾಯಿಸಿದ್ದಾರೆ.