- ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಸಮಾಜಮುಖಿಗಳಾಗಿರಬೇಕು
- ‘ಸ್ಪೀಕರ್ ಸ್ಥಾನದ ಮೌಲ್ಯಗಳನ್ನು ಇಮ್ಮಡಿಗೊಳಿಸುವ ನಿರೀಕ್ಷೆ’
ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಂಡವರನ್ನು ಅಥವಾ ಪೂರ್ವಗ್ರಹಪೀಡಿತರಾಗಿ ಚಿಂತಿಸುವವರನ್ನು ರಾಜ್ಯ ವಿಧಾನಸಭೆಯ ನೂತನ ಸದಸ್ಯರಿಗೆ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವಿಷಯ ಮಂಡನೆಗೆ ಅವಕಾಶ ನೀಡಿದರೆ, ಅಂತಹ ಬೋಧನೆಗಳು ಅಥವಾ ಚರ್ಚೆಗಳು ಶಿಬಿರದ ಒಟ್ಟಾರೆ ಮೌಲ್ಯಗಳನ್ನು ಕಳಂಕಗೊಳಿಸುತ್ತವೆ ಎಂದು ಮಾಜಿ ಎಂಎಲ್ಸಿ ರಮೇಶ್ ಬಾಬು ತಿಳಿಸಿದ್ದಾರೆ.
ಈ ಕುರಿತು ಅವರು ನೂತನ ಸಭಾಧ್ಯಕ್ಷ ಯು ಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, “ನೂತನ ವಿಧಾನಸಭಾ ಸದಸ್ಯರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಿರುವುದು ಒಳ್ಳೆಯ ಕ್ರಮ. ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಶಾಸಕರನ್ನು ಗಟ್ಟಿಗೊಳಿಸುವ ಯಾವುದೇ ಪ್ರಯತ್ನ ಔಚಿತ್ಯಪೂರ್ಣವಾಗಿರುತ್ತದೆ. ಇಂತಹ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಸಮಾಜಮುಖಿಗಳಾಗಿರಬೇಕು” ಎಂದಿದ್ದಾರೆ.
“ಜೀವನಬದ್ಧತೆ, ಗಟ್ಟಿತನದ ಮೌಲ್ಯ ಮತ್ತು ಸಂವಿಧಾನದ ಆಶಯಗಳಿಗೆ ಪೂರಕವಾಗಿ ವಿಶಾಲವಾದ ಮಾನವೀಯ ಮೌಲ್ಯಗಳ ಚಿಂತನೆ ಹೊಂದಿರುವವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳ ಕುರಿತು ಅನೇಕ ಬಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ದಯಮಾಡಿ ಇದನ್ನು ಮರುಪರಿಶೀಲಿಸಲು ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸರ್ಕಾರಗಳು ಬದಲಾದರೂ ಶಾಲೆಗಳು ಅಭಿವೃದ್ಧಿ ಕಂಡಿಲ್ಲ: ಹೈಕೋರ್ಟ್ ತರಾಟೆ
“ಹದಿನಾರನೇ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ತಾವು ಆಯ್ಕೆ ಆಗುವುದರ ಮೂಲಕ ಕರ್ನಾಟಕದ ಸಂಸದೀಯ ವ್ಯವಸ್ಥೆಯಲ್ಲಿ ಹೊಸ ಪರಿಕಲ್ಪನೆ ಮತ್ತು ವೈಚಾರಿಕ ಚಿಂತನೆಗಳಿಗೆ ಅವಕಾಶ ನೀಡುತ್ತೀರಿ ಎಂಬ ಭರವಸೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಬಹುತೇಕರಿಗೆ ಇದೆ. ತಾವು ನಡೆದು ಬಂದ ದಾರಿ ಮತ್ತು ಸೈದ್ಧಾಂತಿಕ ವಿಚಾರಗಳು ಸ್ಪೀಕರ್ ಸ್ಥಾನದ ಮೌಲ್ಯಗಳನ್ನು ಇಮ್ಮಡಿಗೊಳಿಸುವ ನಿರೀಕ್ಷೆ ನಮ್ಮದಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಭಾವನೆಗಳನ್ನು ಕೆರಳಿಸಲು ಮತ್ತು ಕುವೆಂಪುರವರ ಸರ್ವಧರ್ಮಗಳ ಶಾಂತಿಯ ತೋಟದ ಕಲ್ಪನೆಗೆ ಭಂಗ ತರಲು ಪ್ರಯತ್ನಿಸಿದವರ ಹಿನ್ನೆಲೆಯನ್ನು, ತಂತ್ರಗಾರಿಕೆಯ ಪ್ರಯತ್ನವನ್ನು ತಾವು ಗಮನಿಸಿರುತ್ತೀರಿ. ಅನೇಕ ಸಂದರ್ಭಗಳಲ್ಲಿ ಇಂತಹ ಶಕ್ತಿಗಳ ಕುತಂತ್ರಗಳನ್ನು ನೀವೂ ಸೇರಿದಂತೆ ನಾವೆಲ್ಲರೂ ಅಸಹಾಯಕರಾಗಿ ಎದುರಿಸಿದ ಪ್ರಸಂಗಗಳಿವೆ. ಇದರ ಹಿನ್ನೆಲೆಯಲ್ಲಿ ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸುವ ಕೆಲಸವನ್ನು ನಾವೆಲ್ಲರೂ ತರಬೇತಿ ಶಿಬಿರಗಳಲ್ಲಿ ನಿರೀಕ್ಷಿಸುತ್ತೇವೆ” ಎಂದು ರಮೇಶ್ ಬಾಬು ಬರೆದಿದ್ದಾರೆ.