ಭಗತ್ ಸಿಂಗ್ ಆಶಯವನ್ನು ಯುವಜನರು ಮೈಗೂಡಿಸಿಕೊಳ್ಳುವ ಮೂಲಕ ಸೌಹಾರ್ದ ಪರಂಪರೆಯ ಎತ್ತಿ ಹಿಡಿಯಬೇಕು ಎಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಮಾಜಿ ರಾಜ್ಯ ಮುಖಂಡ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಡಿವೈಎಫ್‌ಐ ಜಿಲ್ಲಾ ಸಮಿತಿಯ ಅಂಗವಾಗಿ ಮಾರ್ಚ್ 23ರಂದು ಭಗತ್ ಸಿಂಗ್ ಹುತಾತ್ಮ ದಿನವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತ್‌ನಿಂದ ಮೆರವಣಿಗೆ ಹೊರಟು ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.
ಇದನ್ನು ಓದಿದ್ದೀರಾ? ಕರಾವಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ?
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐನ ಮಾಜಿ ಮುಖಂಡ ಸುನೀಲ್ ಕುಮಾರ್ ಬಜಾಲ್, “ನಾವು ಅಧಿಕಾರಕ್ಕೆ ಬಂದರೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದವರು ಈಗ ಅದರ ಬಗ್ಗೆ ಮಾತನಾಡುತ್ತಿಲ್ಲ” ಎಂದು ನಿರುದ್ಯೋಗ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕುಟುಕಿದರು.

“ಮನುಷ್ಯ ಮನುಷ್ಯರ ನಡುವೆ ಶೋಷಣೆ, ಅಸಮಾನತೆ ಇಲ್ಲದಾಗಿಸಬೇಕು ಎಂಬುದು ಕ್ರಾಂತಿಕಾರಿ ಭಗತ್ ಸಿಂಗ್ ಅವರ ಆಶಯವಾಗಿತ್ತು. ಆ ಕನಸನ್ನು ನನಸಾಗಿಸಲು ದೇಶದ ಯುವಜನರು ಜಾತಿ, ಧರ್ಮ ಭೇದ ಮರೆತು ಒಗ್ಗೂಡಿ ಅನ್ಯಾಯದ ವಿರುದ್ಧ ಹೋರಾಡಬೇಕಿದೆ. ತಾರತಮ್ಯದ ವಿರುದ್ಧ, ದ್ವೇಷ ಬಿತ್ತುವವರ ವಿರುದ್ಧ ಧ್ವನಿ ಎತ್ತಬೇಕಿದೆ” ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು.
ನಿರುದ್ಯೋಗ ಮತ್ತು ಉದ್ಯೋಗ ಭರ್ತಿಯ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಇಮ್ತಿಯಾಝ್, “ಕಾನ್‌ಸ್ಟೆಬಲ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆ ಭರ್ತಿ ಮಾಡದ ಕಾರಣ ಪೊಲೀಸರು ದಿನದ ಹದಿನೆಂಟು ಗಂಟೆಗಳ ಕಾಲ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪೊಲೀಸರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ” ಎಂದು ಆರೋಪಿಸಿದರು.

ಇದನ್ನು ಓದಿದ್ದೀರಾ? ಮಂಗಳೂರು | ಪೊಲೀಸರಿಂದ ನೆಮ್ಮದಿಯೇ ಇಲ್ಲದಾಗ ನಿದ್ದೆ ಎಲ್ಲಿಂದ ಸಭಾಪತಿಗಳೇ – ಸುನೀಲ್ ಕುಮಾರ್ ಬಜಾಲ್
ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮಾಜಿ ಮುಖಂಡ ಸುನೀಲ್ ಕುಮಾರ್ ಬಜಾಲ್ , ಡಿವೈಎಫ್ಐ ಉರ್ವಸ್ಟೋರ್ ಘಟಕದ ಅಧ್ಯಕ್ಷ ಪುನೀತ್ ಉರ್ವಸ್ಟೋರ್, ಜಿಲ್ಲಾ ಪದಾಧಿಕಾರಿಗಳಾದ ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಮಾಧುರಿ ಬೋಳಾರ್ ಉಪಸ್ಥಿತರಿದ್ದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವೀನ್ ಕೊಂಚಾಡಿ ಧನ್ಯವಾದ ಸಲ್ಲಿಸಿದರು.
