ಮೈಸೂರಿನ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಭಾನುವಾರ ಸಂಜೆ ನಡೆದ ಇಫ್ತಾರ್ ಕೂಟದಲ್ಲಿ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಪ್ರೊ ಹೇಮಲತ ಮಾತನಾಡಿ ‘ಸೌಹಾರ್ದತೆ,ಸಹಬಾಳ್ವೆ, ಪರೋಪಕಾರ ಜೀವನದ ಧ್ಯೇಯವಾಗಬೇಕು’ ಎಂದರು.
” ಸಮಾಜದಲ್ಲಿ ಹಿಂದೂ ಮುಸ್ಲೀಂ ಬಾಂಧವ್ಯಕ್ಕೆ ಹುಳಿ ಹಿಂಡುವ ಕೆಲಸಗಳು ನಿರಂತರವಾಗಿ ನಡೆಯುತ್ತಾ ಇದೆ. ನನ್ನ ಬದುಕಿನಲ್ಲಿ ನಾನು ಸಹ ಕಂಡಿರುವಂತೆ ಎಂದಿಗೂ ಮುಸ್ಲೀಂ ಸಮುದಾಯ ನನ್ನದಲ್ಲ ಅನಿಸಿಲ್ಲ,ನನ್ನವರೇ ಅನಿಸಿದೆ. ಎಲ್ಲರೂ ಕೆಟ್ಟವರಲ್ಲ, ಎಲ್ಲವನ್ನೂ ಕೆಟ್ಟದ್ದು ಅನ್ನುವಂತಿಲ್ಲ. ಎಲ್ಲರೂ ಪರಸ್ಪರ ಅನೂನ್ಯತೆಯಿಂದ ಬದುಕುವಂತಾಗಬೇಕು.ಯಾರು ಏನೇ ಹೇಳಲಿ,ಅದನ್ನೆಲ್ಲ ಬದಿಗೊತ್ತಿ ನಮ್ಮವರ ಜೊತೆ ನಾವು ಹೆಜ್ಜೆ ಹಾಕಬೇಕು.
‘ ಕುರಾನ್ ‘ ಧರ್ಮ ಗ್ರಂಥ ಸಹ ಇದನ್ನೇ ಹೇಳಿದೆ.ಕೇಡು ಬಯಸಬೇಡ,ಅನ್ಯರಿಗೆ ತೊಂದರೆ ನೀಡಬೇಡ,ಹಂಚಿ ತಿನ್ನುವುದನ್ನು ಹೇಳಿಕೊಟ್ಟಿದೆ.ಕುರಾನ್ ಮುಸ್ಲೀಮರಿಗಷ್ಟೇ ಸೀಮಿತವಲ್ಲ ಅದುವೇ ಜೀವನದ ಪಾಠ ಕಲಿಸುವ ಹೊತ್ತಿಗೆಯಾಗಿದೆ,ಜೀವನದ ದಾರಿ ತೋರುವ ದೀಪವಾಗಿದೆ ” ಎಂದು ಹೇಳಿದರು.

ಸುಯೋಗ್ ಆಸ್ಪತ್ರೆಯ ಹೃದ್ರೋಗ ತಜ್ಞ ಹಾಗೂ ಸಾಹಿತಿಗಳಾದ ಡಾ ಎಸ್ ಪಿ ಯೋಗಣ್ಣ ಮಾತನಾಡಿ ” ರಾಜಕೀಯದ ಲಾಲಸೆಯಿಂದ, ಅಧಿಕಾರಕ್ಕಾಗಿ ಧರ್ಮ ಧರ್ಮಗಳ ನಡುವೆ ಅಂತರ ಸೃಷ್ಟಿಸಿ,ನಮ್ಮವರನ್ನೇ ನಮ್ಮವರಲ್ಲದಂತೆ ಮಾಡುವ ವ್ಯವಸ್ಥಿತ ಸಂಚಿಗೆ ನಾವೆಲ್ಲ ಒಳಗಾಗಿದ್ದೇವೆ.
ಎಲ್ಲೆಂದರಲ್ಲಿ ದ್ವೇಷ,ಅಸೂಯೆ,ಕೋಮುವಾದದ ಬಣ್ಣ ಬಳಿದು ಮುಸ್ಲೀಂ ಅಂದರೆ ನಮ್ಮವರಲ್ಲ ಅನ್ನುವಂತಹ ಸ್ಥಿತಿಗೆ ದೂಡುವ ಕೆಲಸ ಮಾಡುತ್ತಿದ್ದಾರೆ.ಆದರೆ, ಮುಸ್ಲೀಂ ಸಮುದಾಯ ಎಲ್ಲರೊಟ್ಟಿಗೆ ಸಹಬಾಳ್ವೆ ಬದುಕನ್ನು ನಡೆಸುತ್ತಾ ಸರ್ವರ ಏಳಿಗೆಗೆ ಪ್ರಾರ್ಥಿಸುತ್ತಿದೆ. ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟ ಆಚರಿಸುತ್ತಿರುವುದು ಮನಸಿಗೆ ಸಂತಸ ತಂದಿದೆ ” ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಮಿತಿ ಸದಸ್ಯ ಜನಾಬ್ ಲಬೀದ್ ಶಾಫಿ ಮಾತನಾಡಿ ” ರಂಜಾನ್ ಪದದ ಅರ್ಥ ಸುಟ್ಟು ಹಾಕುವುದು ಎಂದರ್ಥ. ಸುಟ್ಟಾಕುವುದೆಂದರೆ ನಮ್ಮಲ್ಲಿರುವಂತಹ ಕೆಡಕು, ಅನಿಯಂತ್ರಿತವಾದ ವಾಂಚೆ, ದೈಇಚ್ಛೆ,ಕೆಟ್ಟ ಚಟಗಳನ್ನ ಹತ್ತಿಕ್ಕುವುದೇ ರಂಜಾನ್ ತಿಂಗಳು.

ಉಪವಾಸ ಸಂದರ್ಭದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಮುಸ್ಲೀಮರು ಅನ್ನಪಾನಿಯಗಳನ್ನು ಸೇವಿಸುವುದಿಲ್ಲ. ಕಾಮಾಸಕ್ತಿಗಳನ್ನ ತೊರೆದಿರುತ್ತಾರೆ.ಆದರೆ,ಪ್ರವಾದಿಯವರು ಹೇಳ್ತಾರೆ ಒಂದು ವೇಳೆ ನೀವು ಕೆಟ್ಟ ಮಾತುಗಳನ್ನು ,ಕೆಟ್ಟ ಕೃತ್ಯಗಳನ್ನು, ಕೆಟ್ಟ ಕೆಲಸಗಳನ್ನು ತೊರೆಯುವುದಿಲ್ಲವೋ ಅಂತಹ ವ್ಯಕ್ತಿ ಅನ್ನ ಪಾನೀಯ ತೊರೆಯುವ ಅಗತ್ಯತೆ ಇಲ್ಲ. ರಂಜಾನ್ ಅಂದರೆ ಬರೀ ಉಪವಾಸವಲ್ಲ ಅದೊಂದು ಸನ್ನಡತೆಯ ದಾರಿ ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ನೂರ್ ಮರ್ಚೆಂಟ್,ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ ಡಿ ರಾಜಣ್ಣ, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನಿಕ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ, ಜಾಗೃತ ಕರ್ನಾಟಕದ ಸುಹೇಲ್ ಅಹಮದ್, ಸ್ಥಾನಿಕ ಉಪಾಧ್ಯಕ್ಷ ಅಸಾದುಲ್ಲಾ, ಸವಿತಾ ಪಾ ಮಲ್ಲೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸರ್ವಧರ್ಮೀಯರಿದ್ದರು.