“ರಾಜ್ಯ ವಿಧಾನಸಭೆಯು ಸಚಿವರ, ಶಾಸಕರ, ಸಭಾಧ್ಯಕ್ಷರ ಮತ್ತು ಸಚೇತಕರ ವೇತನ ಮತ್ತು ಭತ್ಯೆಯನ್ನು ಹೆಚ್ಚಳ ಮಾಡುವ ಮಸೂದೆಯನ್ನು ಸರ್ವಾನುಮತದಿಂದ ಮಂಜೂರು ಮಾಡಿರುವುದು ಅತ್ಯಂತ ವಿಪರ್ಯಾಸದ ಸಂಗತಿ” ಎಂದು ಎಸ್‌ಯುಸಿಐ ಕಮ್ಯುನಿಸ್ಟದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಗವಾನ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ವಿಜಯಪುರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರಿವ ಅವರು “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನ ಸಭೆಯ ಸದಸ್ಯರು ರಾಜ್ಯದ ಜನಸಾಮಾನ್ಯರ ಹಿತ ಕಾಪಾಡಲು ಅವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆಂಬುದು ಆಶಯವಾಗಿದೆ. ಆದರೆ ಇಂದು ಬಹುತೇಕ ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ” ಎಂದರು.
“ಜನ ಸಾಮಾನ್ಯರು ನಿರ್ಗತಿಕರಾಗುತ್ತಿದ್ದಾರೆ. ವಿವಿಧ ರಂಗಗಳ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ 7 ವರ್ಷಗಳಿಂದ ಏರಿಕೆ ಮಾಡಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಮುಂತಾದ ಅಗತ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿಲ್ಲ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಹಣಕಾಸಿನ ಕೊರತೆಯ ಕಾರಣ ನೀಡಲಾಗುತ್ತದೆ. ದಿನನಿತ್ಯ ದುಡಿಯುವ ಆಶಾ, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಂ ನೌಕರರಿಗೆ ಪುಡಿಗಾಸಿನ ಸಂಬಳವನ್ನೂ ನೀಡಲಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇಂತಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟ ನಿವಾರಣೆಗೆ ದುಡಿಯ ಬೇಕಾದ, ಜನರ ತೆರಿಗೆಯನ್ನು ಜನ ಕಲ್ಯಾಣಕ್ಕೆ ಬಳಸಬೇಕಾದ ಸಚಿವ, ಶಾಸಕರು ಯಾವುದೇ ಪಕ್ಷ ಬೇಧವಿಲ್ಲದೆ ಸರ್ವಾನುಮತದಿಂದ ತಮ್ಮ ವೇತನಗಳನ್ನು ದುಪ್ಪಟ್ಟು ಮಾಡಿಕೊಂಡಿರುವುದು ಕ್ರೂರ ಹಾಸ್ಯವಲ್ಲದೆ ಇನ್ನೇನೂ ಅಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಇಂತಹ ವಿಲಾಸ, ದುಂದುವೆಚ್ಚವನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.