ಯೋಗವನ್ನು ಭಾರತೀಯ ಪಾರಂಪರಿಕ ವಿದ್ಯೆ ಎಂದು ಪ್ರತಿಪಾದಿಸುವ ಬಹುತೇಕರಲ್ಲಿ ಧರ್ಮಾಂಧತೆ ಇದೆಯೇ ಹೊರತು ಸಮತೆ ಕಾಣುವುದಿಲ್ಲ. ಶರಣರು ಅದಕ್ಕೆಂದೇ “ಸಮತೆಯೆ ಯೋಗದಾಗು ನೋಡಾ” ಎನ್ನುತ್ತಾರೆ. ಯೋಗವನ್ನು ಸ್ಮರಿಸಿಕೊಳ್ಳಲು ವರ್ಷದ ಒಂದು ದಿನ ಯೋಗ ದಿನವನ್ನಾಗಿ ಆಚರಿಸಿ, ಫೋಟೊ ತೆಗೆಸಿಕೊಳ್ಳುವ ಮೂಲಕ ಯೋಗದ ಮಹತ್ವ ರಕ್ಷಿಸಿದಂತಾಗುವುದಿಲ್ಲ. ಯೋಗವು ಇಂದಿನ ಸರಕಾರ ಮತ್ತು ವರ್ತಮಾನದ ಯೋಗೋದ್ಯಮಿಗಳು ಭಾವಿಸಿದಷ್ಟು ಸರಳವಾದದ್ದಲ್ಲ ಎನ್ನುವುದು ಶರಣರ ವಾದ.
ಭಾರತೀಯ ಅಧ್ಯಾತ್ಮ ಪರಂಪರೆಯು ಬಹುತ್ವ ಹಾಗೂ ವೈವಿಧ್ಯತೆಯಿಂದ ಕೂಡಿದೆ. ಇಡೀ ಪರಂಪರೆಗೆ ಸನಾತನ ಅಥವಾ ವೈದಿಕತೆಯ ಚೌಕಟ್ಟು ಹಾಕುವ ಬಲಪಂಥೀಯ ವಿದ್ವಂಸಕರ ನಿರಂತರ ಪ್ರಯತ್ನವು ಕಳೆದ ಹತ್ತೆಂಟು ವರ್ಷಗಳಲ್ಲಿ ವೇಗ ಪಡೆದಿದೆ. ಭಾರತೀಯ ಪ್ರಾಚೀನ ಪರಂಪರೆಗಳಲ್ಲಿ ಯೋಗವೂ ಒಂದು. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕವಾಗಿ ಧೃಡತೆ ಹಾಗೂ ಸಂಯಮ ಸಾಧಿಸಲು ಆಚರಿಸುವ ಒಂದು ವಿಶಿಷ್ಟ ಸಾಧನವೇ ಯೋಗ. ಇದನ್ನು ಯೋಗವಿದ್ಯೆ ಎಂದು ನಮ್ಮ ಋಷಿ ಮುನಿಗಳು ಹಾಗೂ ಅಧ್ಯಾತ್ಮ ಸಾಧಕರು ಕರೆದಿದ್ದಾರೆ. ಪತಂಜಲಿ ಮುನಿಯನ್ನು ಯೋಗದ ಪ್ರವರ್ತಕ ಎಂದು ಇತ್ತೀಚಿಗೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಪತಂಜಲಿಗಿಂತ ಸಾವಿರಾರು ವರ್ಷಗಳ ಹಿಂದೆಯೆ ಯೋಗವಿದ್ಯೆಯು ಭಾರತದಲ್ಲಿ ಅಸ್ವಿತ್ವದಲ್ಲಿತ್ತು. ಮುಂದಿನ ದಿನಗಳಲ್ಲಿ ಪತಂಜಲಿಯು ಕ್ಲಿಷ್ಟಕರವಾದ ಯೋಗ ರಹಸ್ಯಗಳನ್ನು ಸುಲಭವಾಗಿ ತಿಳಿಸಿದ್ದಾನೆ. ಯೋಗ ಪದವು ಸಂಸ್ಕೃತ ಹಾಗೂ ಪಾಳಿ ಭಾಷೆಯಿಂದ ಉತ್ಪತ್ತಿಯಾಗಿದೆ ಎನ್ನಲಾಗುತ್ತದೆ. ಪ್ರಾಚೀನ ಭಾರತದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಆಚರಣೆಗಳ ಬೋಧನ ಶಾಖೆಯೆ ಯೋಗವಿದ್ಯೆ. ಸನಾತನ ಬ್ರಾಹ್ಮಣ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಹಾಗೂ ಲಿಂಗಾಯತ ಧರ್ಮಗಳಲ್ಲಿ ಈ ಪದವನ್ನು ಧ್ಯಾನಕ್ಕೆ ಸಮೀಕರಿಸಿ ಬಳಸಲಾಗುತ್ತದೆ. ಲಿಂಗಾಯತ ಧರ್ಮದಲ್ಲಿ ಈ ಯೋಗವು ಅನೇಕ ಮಾರ್ಪಾಡುಗಳೊಂದಿಗೆ ಇಷ್ಟಲಿಂಗಯೋಗ/ ಶಿವಯೋಗ/ ತ್ರಾಟಕಯೋಗ/ ಅನಿಮಿಷ ಯೋಗ/ ದೃಷ್ಟಿಯೋಗ ಎಂದು ಕರೆಯಲ್ಪಡುತ್ತದೆ.
ಸನಾತನ ಬ್ರಾಹ್ಮಣ ಧರ್ಮದ ತತ್ವಶಾಸ್ತ್ರದ ಆರು ಸಂಪ್ರದಾಯಿಕ ಪಂಥಗಳಲ್ಲಿ ಒಂದಕ್ಕೆ ಈ ಯೋಗವೆಂಬ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ ಮಾನಸಿಕ, ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವು ಬಳಸಲ್ಪಡುತ್ತದೆ. ಭಾರತದಲ್ಲಿ ಪತಂಜಲಿಗೆ ಪೂರ್ವದಲ್ಲಿಯೆ ಶಿವನನ್ನು ಆದಿಯೋಗಿ, ಯೋಗಿರಾಜ ಮುಂತಾಗಿ ಗುರುತಿಸಲಾಗುತ್ತದೆ. ಪದ್ಮಾಸನದ ಭಂಗಿಯಲ್ಲಿ ಯೋಗನಿರತನಾಗಿ ಧ್ಯಾನಿಸುತ್ತಿರುವ ಶಿವನ ಪ್ರಸ್ತಾಪ ನಮ್ಮ ತತ್ವಶಾಸ್ತ್ರಗಳಲ್ಲಿ ಯತೇಚ್ಛವಾಗಿ ಲಭ್ಯವಿದೆ. ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ. ಪತಂಜಲಿಯ ಯೋಗಸೂತ್ರವು ರಾಜ ಯೋಗದ ಕುರಿತು ಹೇಳುತ್ತದೆ ಮತ್ತು ಅದು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು ಎನ್ನಲಾಗುತ್ತದೆ. ಸನಾತನ ಬ್ರಾಹ್ಮಣ ಧರ್ಮದ ಇತರ ಗ್ರಂಥಗಳಾದ ಉಪನಿಷತ್ ಅಥವಾ ವೇದಾಂತಗಳು, ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಇನ್ನೂ ಅನೇಕ ಬಗೆಯ ತಂತ್ರಗಳು ಸೇರಿದಂತೆ ಯೋಗದ ವಿವಿಧ ಬಗೆಗಳನ್ನು ವರ್ಣಿಸುತ್ತವೆ. ಬೌದ್ಧ ಧರ್ಮಕ್ಕೆ ಮುಂಚೆ ಅಸ್ತಿತ್ವದಲ್ಲಿದ್ದ ಬ್ರಾಹ್ಮಣ ಧರ್ಮದ ಗ್ರಂಥಗಳಲ್ಲಿ ಧ್ಯಾನದ ಕುರಿತು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎನ್ನುತ್ತವೆ ದಾಖಲೆಗಳು. ಬುದ್ದೋತ್ತರ ಕಾಲದ ಉಪನಿಷತ್ತುಗಳಲ್ಲಿ ಬ್ರಹ್ಮಾಂಡ ಕುರಿತ ವರ್ಣನೆಗಳು ಪ್ರಾಚೀನ ಬೌದ್ಧ ಧರ್ಮಗ್ರಂಥಗಳಲ್ಲಿ ದಾಖಲಾಗಿರುವ ಬುದ್ಧ ಇಬ್ಬರು ಗುರುಗಳು ಧ್ಯಾನದಿಂದ ಸಾಧಿಸಿದ ಗುರಿಗಳ ಬಗೆಗಿನ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡು ಬ್ರಾಹ್ಮಣ ಧರ್ಮೀಯರು ಧ್ಯಾನವನ್ನು ಹೈಜಾಕ್ ಮಾಡಿದರು ಎನ್ನಲಾಗುತ್ತದೆ.

ಶಿವ ದ್ರಾವಿಡ ಸಂಸ್ಕೃತಿಯಲ್ಲಿನ ಯೋಗ ಹಾಗೂ ಧ್ಯಾನಗಳ ಪರಿಕಲ್ಪನೆಯನ್ನು ಗೌತಮ ಬುದ್ದ ಪರಿಷ್ಕರಿಸಿದ ಎನ್ನುವ ಸಂಗತಿ ಸತ್ಯಕ್ಕೆ ಅತ್ಯಂತ ಹತ್ತಿರವಾಗುತ್ತದೆ. ಬೌದ್ಧ ಧರ್ಮದ ಗ್ರಂಥಗಳೇ ಬಹುಶಃ ಧ್ಯಾನˌ ತಂತ್ರ ಮುಂತಾದ ಆಚರಣೆಗಳನ್ನು ವಿವರಿಸುವ ಪ್ರಾಚೀನ ಗ್ರಂಥಗಳಿರಬೇಕು ಎನ್ನುವುದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ. ಸನಾತನ ಬ್ರಾಹ್ಮಣ ಧರ್ಮ ಗ್ರಂಥಗಳಲ್ಲಿ ಯೋಗ ಎಂಬ ಪದವು ಮೊದಲಿಗೆ ಕಠೋಪನಿಷತ್‌ನಲ್ಲಿ ಬಳಸಿದ್ದು, ಅದರಲ್ಲಿ ಇಂದ್ರಿಯಗಳು ಹಾಗೂ ಮನಸ್ಸನ್ನು ನಿಯಂತ್ರಿಸುವ ಸಾಧನವಾಗಿ ಪ್ರಯೋಗಿಸಲಾಗಿದೆ. ಇದು ಬುದ್ದೋತ್ತರ ಕಾಲದ್ದು ಎನ್ನುವ ವಾದವೂ ಇದೆ. ಏನೆ ಇರಲಿ, ಯೋಗವು ಜಾತ್ಯತೀತವಾಗಿ ಭಾರತೀಯರ ಅಧ್ಯಾತ್ಮ ಮತ್ತು ದೈಹಿಕ ಕಸರತ್ತಿನ ಆಚರಣಾ ವಿದ್ಯೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅದರ ಮೇಲೆ ಸನಾತನಿಗಳು ಹಕ್ಕನ್ನು ಸಾಧಿಸುವ ಹಾಗೂ ಅದನ್ನು ಸನಾತನ ಧರ್ಮದ ಚೌಕಟ್ಟಿಗೆ ಸಿಲುಕಿಸುವ ದುಸ್ಸಾಹಸವನ್ನು ಭಾರತೀಯರಾದ ನಾವೆಲ್ಲರೂ ಖಂಡಿಸಲೇಬೇಕಿದೆ. ಇತ್ತೀಚಿನ ದಿನಗಳಲ್ಲಿ ಮೈಗಳ್ಳರು, ಪರಾವಲಂಬಿಗಳು ಕಪಟ ಸನ್ಯಾಸಿಗಳ ವೇಷದಲ್ಲಿ ಯೋಗವನ್ನು ಒಂದು ದಂಧೆಯಾಗಿಸಿಕೊಂಡದ್ದು ಖಂಡನಾರ್ಹ. ಯೋಗವನ್ನು ಪಾಖಂಡಿಗಳು ಇಂದು ಅಧ್ಯಾತ್ಮದಿಂದ ಬೇರ್ಪಡಿಸಿ ಅದೊಂದು ಕೇವಲ ದೈಹಿಕ ಕಸರತ್ತು ಎಂದು ಸಾಧಿಸುತ್ತಿದ್ದಾರೆ ಮತ್ತು ಯೋಗದ ಹೆಸರಿನಲ್ಲಿ ಬೃಹತ್ ಪ್ರಮಾಣದ ದಂಧೆಯನ್ನು ಆರಂಭಿಸಿದ್ದಾರೆ.
ಯೋಗವನ್ನು ಇಡಿಯಾಗಿ ಒಂದು ವಿದ್ಯೆ ಅಥವಾ ಪರಂಪರೆಯಾಗಿ ನೋಡದೆ ಅದೊಂದು ದಂಧೆಯಾಗಿ ಪರಿವರ್ತಿಸಿರುವ ಅಧುನಿಕ ಡೋಂಗಿ ಬಾಬಾಗಳು ಸಾವಿರಾರು ಕೋಟಿ ಮೌಲ್ಯದ ವಹಿವಾಟನ್ನು ನಡೆಸುತ್ತಿದ್ದಾರೆ. ಭಾರತೀಯರ ಭಾವನೆಗಳೊಂದಿಗೆ ಆಟವಾಡುತ್ತ ದೇವರು ಮತ್ತು ಧರ್ಮವನ್ನು ಒಂದು ವ್ಯಾಪಾರದ ಸರಕಾಗಿಸಿಕೊಂಡಿರುವ ಪಾಖಂಡಿಗಳು ಈ ನೆಲದ ಮುಗ್ಧ ಜನರ ಸುಲಿಗೆ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಈ ಧರ್ಮಾಂಧರ ವ್ಯವಹಾರಿಕ ನಡೆಯನ್ನು ಪ್ರಶ್ನಿಸುವˌ ದಿಕ್ಕರಿಸುವ ಹಾಗೂ ಅವಕ್ಕೆ ಪರ್ಯಾಯವನ್ನು ನೀಡುವ ಅನೇಕ ಚಳವಳಿಗಳು ಈ ನೆಲದಲ್ಲಿ ಹುಟ್ಟಿಕೊಂಡಿವೆ. ಹನ್ನೆರಡನೇ ಶತಮಾನದಲ್ಲಿ ಕನ್ನಡ ಮಣ್ಣಿನಲ್ಲಿ ಹುಟ್ಟಿದ ವಚನ ಚಳವಳಿ ಕೂಡ ಅಂತಹ ಒಂದು ಗಂಭೀರ ಪ್ರಯತ್ನದ ಭಾಗವಾಗಿದೆ. ಬಸವಾದಿ ಶರಣರು ಯೋಗವನ್ನು ನೋಡುವ ದೃಷ್ಟಿಕೋನವೇ ವಿಭಿನ್ನವಾಗಿದೆ. ತಮ್ಮನ್ನು ತಾವು ಯೋಗಿಗಳೆಂದು ಕರೆದುಕೊಳ್ಳುವ ಡೋಂಗಿಗಳನ್ನು ಉದ್ದೇಶಿಸಿಯೆ ಶರಣರು ದೃಷ್ಟಿ ಯೋಗ ಅಥವಾ ಅನಿಮಿಷಯೋಗವನ್ನು ಅವಿಷ್ಕರಿಸಿದ್ದಾರೆ. ಯೋಗದ ಕುರಿತು ಶರಣರು ಚಿಕಿತ್ಸಾತ್ಮಕ ಚಿಂತನೆಯನ್ನು ಪ್ರತಿಪಾದಿಸಿದ್ದಾರೆ. ಹಾವಿನಹಾಳ ಕಲ್ಲಯ್ಯ ಎನ್ನುವ ಶರಣ ಯೋಗವನ್ನು ವಿಭಿನ್ನ ರೀತಿಯಲ್ಲಿ ವಿವರಿಸಿದ್ದಾರೆ. ತನ್ನ ಮನೆಯ ನಾಯಿಯ ಬಾಯಲ್ಲಿ ವೇದವನ್ನು ಓದಿಸಿದ ಎನ್ನುವ ಅತಿರಂಚಿತ ಪ್ರಸಂಗದಿಂದ ಖ್ಯಾತನಾಗಿದ್ದ ಶರಣ ಹಾವಿನಹಾಳ ಕಲ್ಲಯ್ಯ ಅತ್ಯಂತ ವೈಚಾರಿಕ ಶರಣನಾಗಿದ್ದ. ವೇದ ಓದಿದವರ ಗರ್ವ ಮುರಿಯಲೆಂದೆ ಆತ ವೇದ ಓದುವವರೆಲ್ಲ ಶ್ರೇಷ್ಠರಲ್ಲ, ವೇದವನ್ನು ಕಲಿಸಿದರೆ ನನ್ನ ಮನೆಯ ನಾಯಿಯೂ ಓದಬಲ್ಲುದು ಎಂದು ವೈದಿಕರನ್ನು ಸಾಂದರ್ಭಿಕವಾಗಿ ವಿಡಂಬಿಸಿದ್ದಾರೆ. ಶರಣ ಹಾವಿನಹಾಳ ಕಲ್ಲಯ್ಯನವರ ಒಂದು ವಚನ:
“ಅರಿವೆ ಗುರು, ಆಚಾರವೆ ಶಿಷ್ಯ,
ಜ್ಞಾನವೆ ಲಿಂಗ, ಪರಿಣಾಮವೆ ತಪ,
ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ,
ಲೋಚು ಬೋಳಾದಡೆ ಮಹಾಲಿಂಗ
ಕಲ್ಲೇಶ್ವರದೇವರು ನಗುವರು.”
-ಶರಣ ಹಾವಿನಾಳ ಕಲ್ಲಯ್ಯ.
ಭಾವಾರ್ಥ: ತನ್ನ ಅರಿವೆ ಗುರು ಹೊರತು ಸಾಧಕನಿಗೆ ಮತ್ತೊಬ್ಬ ಗುರುವಿಲ್ಲ. ಆ ಅರಿವನ್ನು ಸಮರ್ಪಕವಾಗಿ ಆಚರಿಸುವಾತನೆ ಶಿಷ್ಯ ಹೊರತು ಮತ್ತೊಬ್ಬನಲ್ಲ. ಆ ಸಾಧಕನಲ್ಲಿರುವ ಜ್ಞಾನವೆ ಲಿಂಗ ಹೊರತು ಮತ್ತೊಂದು ಭೌತಿಕ ಲಿಂಗವಿಲ್ಲ. ಅರಿವುಗೊಂಡು ಆಚರಿಸುತ್ತ ಜ್ಞಾನ ಹೊಂದುವುದೇ ಆ ಪ್ರಕ್ರಿಯೆಯ ಪರಿಣಾಮ(ಫಲಿತಾಂಶ). ಲಿಂಗಾಂಗ ಯೋಗದಿಂದ ದೊರೆಯುವ ಪರಿಣಾಮವೇ ಸಾಧಕನಲ್ಲಿ ಹುಟ್ಟಬಹುದಾದ ಸಮತೆಯ ಭಾವ. ಈ ಜಗತ್ತಿನಲ್ಲಿ ಹೇಗೆ ಬಾಳಬೇಕು ಎನ್ನುವುದನ್ನು ತಿಳಿದುಕೊಳ್ಳದೇ ಅನೇಕರು ವೇಷಧಾರಿಗಳಾಗಿದ್ದಾರೆ. ಅಂತವರು ಈಜುವುದನ್ನು ಅರಿಯದವರು. ಸಾಧನೆಯಿಂದ ತಲೆ ಬೆಳೆಸಬೇಕೇ ಹೊರತು ಭೋದನೆಯಿಂದ ತಲೆ ಬೋಳಿಸಿಕೊಳ್ಳಬಾರದು. ಹೀಗೆ ಏನೂ ಅರಿಯದೆ ತಲೆ ಬೋಳಿಸಿಕೊಂಡು ವೇಷ ಹಾಕಿದವರನ್ನು ನೋಡಿ ಮಹಾಲಿಂಗ ಕಲ್ಲೇಶ್ವರನು ನಗುತ್ತಾನೆ ಎನ್ನುತ್ತಾರೆ ಶರಣ ಹಾವಿನಹಾಳ ಕಲ್ಲಯ್ಯನವರು. ಇಡೀ ವಚನದಲ್ಲಿ ಸನಾತನ ವೈದಿಕ ಪರಂಪರೆಯ ಸ್ಥಾಪಿತ ಗುರುˌ ಶಿಷ್ಯ ಪರಂಪರೆಯನ್ನು ಸೂಕ್ಷ್ಮವಾಗಿ ಅಲ್ಲಗಳೆಯಲಾಗುತ್ತದೆ. ಅರಿವನ್ನೆ ಗುರು ಎಂದು ಹೇಳಲಾಗುತ್ತದೆ. ಯೋಗದ ಒಟ್ಟಾರೆ ಫಲಿತಾಂಶ ಅಥವಾ ಪರಿಣಾಮವು ಸಮತೆ ಎಂದು ಶರಣ ಕಲ್ಲಯ್ಯನವರು ಘಂಟಾಘೋಷವಾಗಿ ಹೇಳುತ್ತಾರೆ. ಸಾಧಕನಲ್ಲಿ ಸಮತೆಯ ಭಾವ ಇಲ್ಲದಿದ್ದರೆ ಆತ ನಿಜವಾದ ಯೋಗಿ ಅಲ್ಲ ಅಥವಾ ಸಾಧಕನಲ್ಲಿ ಸಮತೆಯ ಭಾವ ಮೂಡಿಸದಿದ್ದರೆ ಅದು ಯೋಗ ವಿದ್ಯೆಯೆ ಅಲ್ಲ ಎನ್ನುವುದೆ ವಚನದ ಭಾವಾರ್ಥ.
ಟಿಪ್ಪಣಿ : ಗುರು ಶಿಷ್ಯ, ಲಿಂಗ, ತಪಸ್ಸು ಮುಂತಾದ ಸನಾತನ ಕರ್ಮಠ ಪರಿಪಲ್ಪನೆಗಳಿಗೆ ನಿಜದ ನಿಲುವಿನ ಅನುಭಾವಿಕ ನೆಲೆಯನ್ನು ಈ ವಚನ ಒದಗಿಸುತ್ತದೆ. ಲಿಂಗಾಯತ ಧರ್ಮದಲ್ಲಿ ಭೌತಿಕ ಗುರುವಿಗೆ ಸ್ಥಾನವಿಲ್ಲ. ನಮ್ಮನ್ನು ಶೋಷಿಸುವ ವ್ಯವಸ್ಥೆಯ ಕುರಿತು ಜಾಗೃತಿ ಹೊಂದುವುದನ್ನು ಶರಣರು ಅರಿವು ಎಂದು ಕರೆಯುತ್ತಾರೆ. ಆ ಅರಿವಿನ ಮೂಲಕ ಆಚರಿಸುವ ಲಿಂಗಾಂಗ ಯೋಗವೆ ಜ್ಞಾನˌ ಅದರಿಂದ ಸಿಗುವ ಪರಿಮಾಣವೇ ಸಮತೆ ಎನ್ನುವುದು ಶರಣರ ಅಚಲ ನಿಲುವು. ಇಂದಿನ ದಿನಮಾನದಲ್ಲಿ ಯೋಗವನ್ನು ವ್ಯಾಪಾರದ ಸರಕಾಗಿಸಿಕೊಂಡವರು ಸನಾತನ ಸಂಸ್ಕೃತಿ, ಪರಂಪರೆಯ ಕುರಿತು ಪುಷ್ಕಳವಾಗಿ ಭಾಷಣ ಮಾಡುತ್ತಾರೆ. ಸನಾತನ ಸಂಸ್ಕೃತಿ ಉಳಿಸಬೇಕೆಂಬ ಕಕ್ಕುಲಾತಿ ಹೊಂದಿದವರು ಯಾರಾದರು ಯೋಗವನ್ನು ಒಂದು ವ್ಯಾಪಾರದ ಸರಕಾಗಿಸಿಕೊಳ್ಳಲು ಸಾಧ್ಯವೆ? ಇದು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ. ಯೋಗ ಮತ್ತು ಧ್ಯಾನಗಳು ಇಂದಿನ ಅಧುನಿಕ ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ತೀರ ಅತ್ಯಗತ್ಯ. ಯೋಗವನ್ನು ಭಾರತೀಯ ಪರಂಪರೆಯ ಭಾಗವೆಂದು ಬಿಂಬಿಸುತ್ತಿರುವ ಮತ್ತು ಅಂತಾರಾಷ್ತ್ರೀಯ ಯೋಗ ದಿನಾಚರಣೆಯನ್ನು ಘೋಷಿಸಿರುವ ಇಂದಿನ ಸರಕಾರ ಯೋಗ ಶಿಕ್ಷಣವನ್ನು ಈ ದೇಶದಲ್ಲಿ ಮೂಲಭೂತ ಶಿಕ್ಷಣದ ಭಾಗವಾಗಿಸಬೇಕಿದೆ. ಅದರ ಜೊತೆಗೆ ಯೋಗವಿದ್ಯೆಯನ್ನು ಜನರಿಗೆ ಉಚಿತವಾಗಿ ನೀಡಬೇಕಿದೆ.

ಸರಕಾರ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗದಿದ್ದರೆ ಯೋಗವನ್ನು ಖಾಸಗಿ ಬಾಬಾಗಳು ಹಾಗೂ ಯೋಗೋದ್ಯಮಿಗಳು ಒಂದು ದಂಧೆಯಾಗಿಸಿಕೊಂಡು ಜನರನ್ನು ಇನ್ನಿಲ್ಲದಂತೆ ವಂಚಿಸುತ್ತಾರೆ. ಯೋಗವಿದ್ಯೆಯ ಪೂರೈಕೆ ಸರಕಾರದ ಆದ್ಯತೆಯಾಗಬೇಕು. ಅಷ್ಟಕ್ಕೂ ಸಮತೆಯನ್ನು ಮೂಡಿಸದ ಯೋಗ ಯೋಗವೆಂದು ಕರೆಸಿಕೊಳ್ಳಲಾರದು. ಯೋಗವನ್ನು ಭಾರತೀಯ ಪಾರಂಪರಿಕ ವಿದ್ಯೆ ಎಂದು ಪ್ರತಿಪಾದಿಸುವ ಬಹುತೇಕರಲ್ಲಿ ಧರ್ಮಾಂಧತೆ ಇದೆಯೇ ಹೊರತು ಸಮತೆ ಕಾಣುವುದಿಲ್ಲ. ಶರಣರು ಅದಕ್ಕೆಂದೆ “ಸಮತೆಯೆ ಯೋಗದಾಗು ನೋಡಾ” ಎನ್ನುತ್ತಾರೆ. ಯೋಗವನ್ನು ಸ್ಮರಿಸಿಕೊಳ್ಳಲು ವರ್ಷದ ಒಂದು ದಿನ ಯೋಗ ದಿನವನ್ನಾಗಿ ಆಚರಿಸಿ, ಫೋಟೊ ತೆಗೆಸಿಕೊಳ್ಳುವ ಮೂಲಕ ಯೋಗದ ಮಹತ್ವ ರಕ್ಷಿಸಿದಂತಾಗುವುದಿಲ್ಲ. ಯೋಗವು ಇಂದಿನ ಸರಕಾರ ಮತ್ತು ವರ್ತಮಾನದ ಯೋಗೋದ್ಯಮಿಗಳು ಭಾವಿಸಿದಷ್ಟು ಸರಳವಾದದ್ದಲ್ಲ ಎನ್ನುವುದು ಶರಣರ ವಾದ. ಶರಣ ಶಿವಯೋಗಿ ಸಿದ್ಧರಾಮ ಹಾಗೂ ಹಠಯೋಗಿ ಅಲ್ಲಮರು ಯೋಗದ ಕುರಿತು ತಮ್ಮ ವಚನಗಳಲ್ಲಿ ಹೀಗೆ ಹೇಳುತ್ತಾರೆ:
“ಯೋಗದ ನೆಲೆಯನರಿದೆನೆಂಬಾತ
ಲಿಂಗಾರ್ಚನೆಯ ಮಾಡಯ್ಯ.
ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು
ತನುತ್ರಯಂಗಳನೇಕೀಭವಿಸಿ ಲಿಂಗತ್ರಯದಲ್ಲಿ ಶಬ್ದಮುಗ್ದನಾಗಿ ಲಿಂಗಾರ್ಚನೆಯ ಮಾಡಯ್ಯಾ.
ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು
ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.”
ಇಲ್ಲಿ ಶಿವಯೋಗದ ಅಥವಾ ಲಿಂಗಾಂಗಯೋಗದ ಮಹತ್ವವನ್ನು ಹೇಳಲಾಗಿದೆ.
“ಯೋಗ ಶಿವಯೋಗವೆಂಬರು, ಯೋಗದ ಹೊಲಬನಾರು ಬಲ್ಲರಯ್ಯಾ? ಹೃದಯಕಮಲ ಮಧ್ಯದಲ್ಲಿ ಭ್ರಮಿಸುವನ ಕಳೆದಲ್ಲದೆ ಯೋಗವೆಂತಪ್ಪುದೊ? ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ ತಿಳಿದಲ್ಲದೆ ಯೋಗವೆಂತಪ್ಪುದೊ? ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ ಅದು ಯೋಗ! ʼಸ್ಯೋಹಂʼಎಂಬಲ್ಲಿ ಸುಳುಹಡಗಿ ಮನ ನಷ್ಟವಾಗಿರಬಲ್ಲ ಕಾರಣ, ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರಧೀರನೆಂಬುದು ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ.
“ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.”
ಅಲ್ಲಮರ ಮೇಲಿನ ಎರಡೂ ವಚನಗಳು ಯೋಗದ ನೈಜ ಅರ್ಥ ಉದ್ದೇಶ ಮತ್ತು ಪ್ರಕ್ರಿಯೆಯನ್ನು ವಿವರಿಸುತ್ತವೆ. ಒಟ್ಟಾರೆ ಶರಣರ ದೃಷ್ಟಿಯಲ್ಲಿ “ಸಮತೆಯೆಂಬುದು ಯೋಗದಾಗು ನೋಡಾ” ಎನ್ನುವ ಮಾತನ್ನು ನಾವು ಹೆಚ್ಚು ಹೆಚ್ಚು ಮನಗಾಣಿಸಬೇಕಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ