ವಿಜಯಪುರದ ಇಂಡಿ ತಾಲೂಕಿನ ಬಬಲಾದಿ ಗ್ರಾಮದಲ್ಲಿ ಬರಗಾಲಕ್ಕೆ ತುತ್ತಾಗುತ್ತಿದ್ದ ಮಹಿಳೆಯರು ದುಡಿಯಲು ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೈಗೊಂಡ ಸಾವಯವ ಆಹಾರೋದ್ಯಮದಿಂದ ಇಂದು ಸಬಲೀಕರಣದತ್ತ ಹೆಜ್ಜೆ ಇಡುತ್ತಿದ್ದಾರೆ. ಸುಮಾರು 1000ಕ್ಕೂ ಅಧಿಕ ಮಂದಿ ಮಹಿಳೆಯರು ಒಡಲದನಿ ಮಹಿಳಾ ಒಕ್ಕೂಟವೆಂಬ ಸಂಘವನ್ನು ರಚನೆ ಮಾಡಿಕೊಂಡಿದ್ದು, ಹೊಲಿಗೆ ಕೆಲಸ, ಆಡು ಸಾಕಾಣಿಕೆ, ಹೈನುಗಾರಿಕೆಯಂತಹ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಬರಗಾಲಕ್ಕೆ ತುತ್ತಾಗುತ್ತಿರುವ ಈ ಭಾಗದ ಮಹಿಳೆಯರು ದುಡಿಯಲು ಬೇರೆ ರಾಜ್ಯಗಳಿಗೆ ಹೋಗಬಾರದೆಂದು ಬಬಲಾದ ಗ್ರಾಮದಲ್ಲಿ ಮೊದಲು ತಮ್ಮ ನಿತ್ಯದ ಕೆಲಸಕ್ಕೆ ಹೋಗಿ ನಂತರ ಬಿಡುವಿನ ವೇಳೆ ಶೇಂಗಾ ಹೋಳಿಗೆ ಮಾಡುವ ವ್ಯಾಪಾರ ಪ್ರಾರಂಭಿಸಿದರು. 20 ಮಹಿಳೆಯರು ಸೇರಿ ಪ್ರತಿದಿನ 200 ಹೋಳಿಗೆ ತಯಾರಿಸಿ ಅವುಗಳನ್ನು ಇಬ್ಬರು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೋಗಿ ಬರಲು ಮಹಿಳೆಯರಿಗೆ ಶಕ್ತಿ ಯೋಜನೆ ಸಹಕಾರಿಯಾಗಿದೆ ಎಂದು ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭುವನೇಶ್ವರಿ ಕಾಂಬಳೆ ಎಂಬುವವರು ತಮ್ಮ ಪಿಎಚ್‌ಡಿ ವಿಷಯವಾಗಿ ವಲಸೆ ಮತ್ತು ಮಹಿಳೆಯರ ಬದುಕು ಎಂಬ ವಿಷಯದ ಕುರಿತು ಅಧ್ಯಯನ ಮಾಡುವ ವೇಳೆ ವಲಸೆ ಹೋಗುವ ಮಹಿಳೆಯರ ದುಸ್ತರ ಬದುಕನ್ನು ಕಂಡ ಅವರು ಮಹಿಳೆಯರನ್ನೆಲ್ಲ ಒಟ್ಟುಗೂಡಿಸಿ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುವಂತೆ ಪ್ರೋತ್ಸಾಹಿಸಿದ್ದು, ಸಾವಯವ ಆಹಾರ ಉತ್ಪನ್ನಗಳ ಮೂಲಕ ಹಳ್ಳಿ ಮಹಿಳೆಯರ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಇವರ ನಿರ್ದೇಶನದ ಮೇರೆಗೆ ಎಲ್ಲ ವ್ಯಾಪಾರ, ವ್ಯವಹಾರ ನಡೆಯುತ್ತಿದೆ.

ಒಡಲದನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ ಕಾಂಬಳೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಹಿಳೆಯರು ಮಕ್ಕಳು ಮರಿ ಬಿಟ್ಟು ಗುಳೆ ಹೋಗುತ್ತಿದ್ದರು. ಇದರ ಕುರಿತು ನಾನು ಅಧ್ಯಯನ ಮಾಡಲು ಆರಂಭಿಸಿದಾಗ ಅವರ ಜಮೀನುಗಳಲ್ಲಿಯೇ ಕೃಷಿ ಆರಂಭಿಸುವುದರ ಮೂಲಕ ಸುಸ್ಥಿರ ಬದುಕು ಕಟ್ಟಿಕೊಡುವತ್ತ ದಾಪುಗಾಲಿರಿಸಲಾಗಿದೆ” ಎಂದು ಹೇಳಿದರು.
“ಉದ್ಯೋಗ ಖಾತ್ರಿ ಯೋಜನೆಯಡಿಯೂ ಸರಿಯಾದ ಕೂಲಿ ಸಿಗದೆ, ಎಲ್ಲವೂ ಬಲಾಢ್ಯರ ಕೈಗಳಲ್ಲಿವೆ. ಹಾಗಾಗಿ ಕೆಲಸ ಕಾರ್ಯಗಳು ಸಿಗದೆ, ಬರದಿಂದ ತತ್ತರಿಸಿದ್ದ ಸ್ಥಳೀಯರು, ಕೂಲಿ ಹರಸಿ ಬೇರೆಡೆಗೆ ಗುಳೆ ಹೋಗುತ್ತಿದ್ದರು. ಇದನ್ನು ತಪ್ಪಿಸಲು ಮಹಿಳೆಯರನ್ನು ಸಂಘಟಿಸಿ ತಮ್ಮಗಳ ಜಮೀನಿನಲ್ಲಿಯೇ ಸ್ಥಳೀಯ ಬೆಲೆಗಳನ್ನು ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸಲಾಯಿತು. ಇದರಂತೆ 12 ಕ್ವಿಂಟಲ್‌ವರೆಗೆ ಸಜ್ಜೆ ಬೆಳೆ ಬೆಳದಿದ್ದಾರೆ. ಶೇಂಗಾ ಹಾಗೂ ತೊಗರಿ ಬೆಳೆಗಳನ್ನೂ ಕೂಡಾ ಬೆಳೆದಿದ್ದಾರೆ. ಇದೆಲ್ಲವೂ ಯಾವುದೇ ರೀತಿಯ ರಾಸಾಯನಿಕ ಉಪಯೋಗಿಸದೆ ಶುದ್ಧ ಸಾವಯವ ಕೃಷಿಯಾಗಿದ್ದು, ಅದರಿಂದಲೇ ಸಾವಯವ ಆಹಾರ ಉತ್ಪನ್ನಗಳ ಉದ್ಯಮವನ್ನು ಕೈಗೊಂಡಿದ್ದೇವೆ” ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯಲಿಲ್ಲ. ಮಾರುಕಟ್ಟೆಯಲ್ಲಿ ರಾಸಾಯನಿಕ ಭರಿತ ಕೃಷಿ ಉತ್ಪನ್ನಗಳ ಬೆಲೆಗೇ ಸಾವಯವ ಉತ್ಪನ್ನಗಳನ್ನೂ ಕೇಳಿದರು. ಹಾಗಾಗಿ ಬಂದ ಫಸಲನ್ನು ಮಾರಾಟ ಮಾಡದೆ, ಅದರಿಂದ ಆಹಾರ ಉತ್ಪನ್ನ ಮಾಡಿ ಮಾರಾಟ ಮಾಡಲು ಆರಂಭಿಸಿದೆವು. ಇದೀಗ ಒಡಲದನಿ ಮಹಿಳಾ ಒಕ್ಕೂಟವೆಂಬ ಸಂಘಟನೆಯ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಇಲ್ಲಿಯ ಬಡ ಮಹಿಳೆಯರು ಸ್ವಾವಲಂಭಿಗಳಾಗುತ್ತಿದ್ದಾರೆ.

“ಶೇಂಗಾ ಮತ್ತು ಸಾವಯವ ಬೆಲ್ಲವನ್ನು ಉಪಯೋಗಿಸಿ ಹೋಳಿಗೆ ಮಾಡುತ್ತೇವೆ. ಸಜ್ಜೆಯಿಂದ ಖಡಕ್ ರೊಟ್ಟಿ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೇವೆ. ಸಾವಯವ ಹೋಳಿಗೆಗೆ ಅತಿಯಾದ ಬೇಡಿಕೆ ಬಂದಿದೆ. ಒಂದು ಹೋಳಿಗೆಗೆ ₹20 ಪಡೆಯುತ್ತಿದ್ದು, ಪ್ರತಿದಿನ 200 ಹೋಳಿಗೆಗೆ ₹4,000 ಬರುತ್ತದೆ. ಬರುಬರುತ್ತ ಬೇಡಿಕೆ ಹೆಚ್ಚಾಗಿ 200 ಹೋಳಿಗೆ ಬದಲಿಗೆ ಸಾವಿರ ಹೋಳಿಗೆ ಹೆಚ್ಚಾಗಿ ಕಳುಹಿಸುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ₹20,000 ಲಾಭ ಬರುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.

“ಬೆಂಗಳೂರಿನ ರಾಗಿ ಕಣದಲ್ಲಿ ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ನಮ್ಮ ಆಹಾರ ಉತ್ಪನ್ನಗಳನ್ನು ಅಲ್ಲಿಯೂ ಮಾರಾಟ ಮಾಡುತ್ತೇವೆ. ಬೆಂಗಳೂರಿನ ಸಂವಾದ ಬದುಕು ಸಂಸ್ಥೆಯಲ್ಲಿ ವಸತಿ ಸಹಿತ ಶಿಕ್ಷಣ ನೀಡುವ ಕಾರಣ ಅಲ್ಲಿ ನಿರಂತರವಾಗಿ ಆಹಾರ ತಯಾರಿಕೆ ನಡೆಯುತ್ತದೆ. ಹಾಗಾಗಿ ಅಲ್ಲಿಗೂ ಕೂಡ ನಿರಂತರವಾಗಿ ಸಜ್ಜೆರೊಟ್ಟಿಗಳನ್ನು ಕಳುಹಿಸುತ್ತೇವೆ” ಎಂದು ಹೇಳಿದರು.
“ಶೇಂಗಾ ಹೋಳಿಗೆ ಜತೆಗೆ, ಶೇಂಗಾ ಹಿಂಡಿ, ಸಜ್ಜೆ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಉಪ್ಪಿನಕಾಯಿ, ನಿಂಬೆರಸ, ನಿಂಬೆ ಪೌಡರ್ ಮುಂತಾದ ಪದಾರ್ಥಗಳನ್ನು ಬೇಡಿಕೆಗನುಗುಣವಾಗಿ ಕಳುಹಿಸುತ್ತಿದ್ದಾರೆ” ಎಂದರು.

“ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಇಂಡಿ ಪಟ್ಟಣ, ವಿಜಯಪುರ ಪಟ್ಟಣಗಳಿಗೆ ಶೇಂಗಾ ಹೋಳಿಗೆ ಪೂರೈಸುವ ಗುರಿ ಹೊಂದಿದ್ದಾರೆ. ಮದುವೆ ಇನ್ನಿತರ ಕಾರ್ಯಗಳಿಗೆ ಹೆಚ್ಚಿನ ಹೋಳಿಗೆ ಪೂರೈಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಆರ್ಡರ್‌ಗಳನ್ನು ಒಪ್ಪಿಕೊಂಡು ಆಹಾರ ಉತ್ಪನ್ನ ಪೂರೈಸಿ ಇನ್ನಷ್ಟು ಸಬಲರಾಗಬೇಕು ಅಂದುಕೊಂಡಿದ್ದೇವೆ” ಎಂದು ಹೇಳಿದರು.

“ಸರ್ಕಾರವು ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಬಡ ಹೆಣ್ಣುಮಕ್ಕಳಿಗೆ, ನಮ್ಮ ಬಡ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಪ್ರತಿದಿನ ಬೆಂಗಳೂರಿಗೆ ಹೋಗಿ ಬರುವ ವ್ಯವಸ್ಥೆ ಪ್ರಾರಂಭಿಸಿದ್ದೇವೆ. ಹೋಳಿಗೆಯ ಬೇಡಿಕೆ ಹೆಚ್ಚಾಗಿರುವುದರಿಂದ ಸಾವಿರ ಹೋಳಿಗೆಗಳ ಸಂಖ್ಯೆಯನ್ನು ಎರಡು ಸಾವಿರಕ್ಕೆ ಹೆಚ್ಚಿಸುವ ಸಾಧ್ಯತೆ ಹೊಂದಿದ್ದೇವೆ. ಹಾಗಾಗಿ ಪ್ರತಿ ಬಾರಿ ಬೆಂಗಳೂರಿಗೆ ಪ್ರಯಾಣಿಸುವುದರಿಂದ ನಮಗೆ ಸಾರಿಗೆ ವೆಚ್ಚವೂ ಉಳಿಯುತ್ತಿದೆ. ಇಬ್ಬರು ಮೂವರು ಜತೆಯಾಗಿ ಹೋಗಿ ಆಹಾರೋತ್ಪನ್ನಗಳನ್ನು ಮಾರಾಟ ಮಾಡಿ ಬರುತ್ತಾರೆ” ಎಂದು ಹೇಳಿದರು.

ಪವಿತ್ರ ಶೀ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಭೂಮಿಯಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡದೆ ವರ್ಷಪೂರ್ತಿಗೆ ನಮಗೆ ಬೇಕಾಗುವಷ್ಟು ಎತ್ತಿಟ್ಟುಕೊಂಡು, ಉಳಿದ ಬೆಳೆಯನ್ನು ಮೌಲ್ಯವರ್ಧನೆ ಮಾಡುವ ಮೂಕ ಆದಾಯ ಗಳಿಸುತ್ತಿದ್ದೇವೆ. ಮಹಿಳೆಯರೆಲ್ಲ ಒಗ್ಗೂಡಿಕೊಂಡು, ಸಾವಯವ ಆಹಾರೋತ್ಪನ್ನಗಳನ್ನು ತಯಾರಿಸುತ್ತೇವೆ. ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಮ್ಮ ಶ್ರಮಶಕ್ತಿಯಿಂದಲೇ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ” ಎಂದು ಹೇಳಿದರು.

“ನಾವು ಹೊರಗೆ ದುಡಿಯಲು ಹೋಗುವುದಿಲ್ಲ. ಪೂರ್ತಿಯಾಗಿ ಆಹಾರೋದ್ಯಮದಲ್ಲಿಯೇ ತೊಡಗಿಸಿಕೊಂಡಿದ್ದೇವೆ. ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ನಮ್ಮದೇ ಉದ್ಯಮದಿಂದ ಆದಾಯ ನೋಡುವುದು ನಿಜಕ್ಕೂ ಸಂತಸದ ವಿಷಯ. ಬೆಣ್ಣೆ, ತುಪ್ಪವನ್ನೂ ಕೂಡ ಮಾಡುತ್ತೇವೆ. ಇದರಿಂದ ಹೈನುಗಾರಿಕೆಯನ್ನೂ ಉತ್ತೇಜಿಸಿದಂತಾಗುತ್ತಿದ್ದು, ಅದರಿಂದಲೂ ಲಾಭ ಬರುತ್ತದೆ. ಇದರಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಇನ್ನೂ ಹೆಚ್ಚೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಿ, ಸಬಲರಾಗಬೇಕು ಎನ್ನುವುದೇ ನಮ್ಮ ಗುರಿಯಾಗಿದೆ” ಎಂದರು.

ಈ ಕೆಲಸಗಳ ಜತೆಗೆ ಒಡಲದನಿ ಮಹಿಳಾ ಸಂಘಟನೆಯಿಂದ ಚಿಕ್ಕ ಮಕ್ಕಳಿಗಾಗಿ ಸಾವಿತ್ರಿ ಬಾಯಿ ಕಲಿಕಾ ಕೇಂದ್ರವನ್ನೂ ಆರಂಭಿಸಿದ್ದೇವೆ. ಮಕ್ಕಳು ಶಾಲೆಯಿಂದ ಬಂದ ಕೂಡಲೇ ಅವರು ಕಲಿಕಾ ಕೇಂದ್ರಕ್ಕೆ ಬರುತ್ತಾರೆ. ಇದರಿಂದ ಅವರಿಗೆ ಇನ್ನೂ ಹೆಚ್ಚಿನ ಕಲಿಕೆ ಸಿಕ್ಕಂತಾಗುತ್ತದೆ. ಅಲ್ಲಿ ನಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತೇನೆ. ಮಕ್ಕಳು ತುಂಬಾ ಖುಷಿಯಿಂದ ಕಲಿಯುತ್ತಾರೆ. ವಾರದಲ್ಲಿ ಒಂದು ದಿನ ರಜೆ ನೀಡಿದರೆ, ಮರುದಿನ ಬಂದು ನಮಗೆ ರಜೆ ಕೊಡಬೇಡಿ, ಮನೆಯಲ್ಲಿ ಬೇಜಾರಾಗುತ್ತದೆಂದು ಹೇಳುತ್ತಾರೆ. ಅವರಿಗೆ ಕಲಿಕಾ ಕೇಂದ್ರಕ್ಕೆ ಬರುವುದೇ ಖುಷಿ” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? 10.43 ಕೋಟಿ ಮನರೇಗಾ ದಿನಗೂಲಿಗಳ ನೋಂದಣಿ ರದ್ದು; ಬಡವರ ಬದುಕು ಕಸಿದ ಮೋದಿ ಸರ್ಕಾರ
ಇಂದು ಹೊಸಮನಿ ಮಾತನಾಡಿ, “ನಮ್ಮ ಭೂಮಿಯಲ್ಲೇ ಬೆಳೆದ ಫಸಲಿನಿಂದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಸಿರಿಧಾನ್ಯಗಳ ಚಕ್ಕಲಿ, ಶೇಂಗಾ ಚಟ್ನಿಪುಡಿ, ಬೆಲ್ಲದುಂಡೆ, ಪುರಿಉಂಡೆ, ಮಂಡಕ್ಕಿ ವಗ್ಗರಣೆ ಸೇರಿದಂತೆ ಹಲವು ರೀತಿಯ ಖಾದ್ಯಗಳನ್ನೂ ತಯಾರಿಸುತ್ತೇವೆ. 5 ರೊಟ್ಟಿಗಳಿರುವ ಒಂದು ಪ್ಯಾಕೆಟ್‌ನಂತೆ ರೊಟ್ಟಿ ಪ್ಯಾಕ್ ಮಾಡುತ್ತೇವೆ. ಒಂದು ಪ್ಯಾಕ್ ರೊಟ್ಟಗೆ ₹100 ಇರುತ್ತದೆ. 100 ಗ್ರಾಂ ಚಟ್ನಿಪುಡಿ ₹30ರಂತೆ ಬೆಲೆ ನಿಗದಿ ಮಾಡಿದ್ದೇವೆ. ಸದ್ಯಕ್ಕೆ ನಮ್ಮೂರಿನಲ್ಲಿ ವ್ಯಾಪಾರ ಪ್ರಚಾರ ನಡೆದಿಲ್ಲ. ಇವುಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತೇವೆ. ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಇನ್ನೂ ಹೆಚ್ಚೆಚ್ಚು ಆರ್ಡರ್‌ಗಳನ್ನು ತೆಗದುಕೊಂಡು ಪೂರೈಕೆ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ, ಬೆಂಬಲ ಮುಖ್ಯವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಒಡಲದನಿ ಮಹಿಳಾ ಒಕ್ಕೂಟದಲ್ಲಿ ಒಟ್ಟಾರೆಯಾಗಿ 1000 ಮಂದಿ ವಲಸೆ ಮಹಿಳಾ ಕಾರ್ಮಿಕರಿದ್ದು, 20ರಿಂದ 40 ಮಂದಿ ಸಾವಯವ ಕೃಷಿ ಮಾಡಿಕೊಂಡು ಹೋಳಿಗೆ, ರೊಟ್ಟಿ ಪ್ರಾರಂಭ ಮಾಡಿದ್ದಾರೆ. ಉಳಿದವರು ಹೊಲಿಗೆ ಕೆಲಸ(ಟೇಲರಿಂಗ್), ಆಡು ಸಾಕಾಣಿಕೆ, ಹೈನುಗಾರಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಕೂಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಇದರಿಂದ 1000 ಜನರ ಪೈಕಿ 300ಜನ ವಲಸೆ ಹೋಗುವುದು ತಪ್ಪಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವತ್ತ ಮುನ್ನಡೆಯುತ್ತಿದ್ದಾರೆ. ಜತೆಗೆ ಪ್ರೊ. ಹೇಮಲತಾ, ಡಾ. ಸುಧಾ ಅವರು ಮಹಿಳೆಯರಿಗೆ ನೆರವಿನ ಮೂಲಕ ಬೆಂಬಲವಾಗಿದ್ದಾರೆ.

ಕೂಲಿ ಹರಸಿ ಬೇರೆಡೆಗೆ ಗುಳೆ ಹೋಗುತ್ತಿದ್ದುದನ್ನು ತಡೆಯಲು ಭುವನೇಶ್ವರಿಯವರು ಕೈಗೊಂಡ ನಿರ್ಧಾರ, ಆಲೋಚನೆ ನಿಜಕ್ಕೂ ಶ್ಲಾಘನೀಯ. ಒಂದೊತ್ತಿನ ಊಟಕ್ಕಾಗಿ ಕೂಲಿ ಮಾಡಿಕೊಂಡು ಬದುಕುತ್ತಿದ್ದ ಮಹಿಳೆಯರನ್ನೆಲ್ಲ ಒಗ್ಗೂಡಿಸಿ ಸಂಘಟನೆ ಕಟ್ಟಿ, ಮಹಿಳೆಯರಿಗೆ ಸ್ವ ಉದ್ಯಮದ ಮೂಲಕ ಉದ್ಯೋಗ ನೀಡಿದ್ದು, ಹೆಚ್ಚು ಲಾಭಗಳಿಸುವಂತಹ ಒಂದು ಉದ್ಯಮವನ್ನು ಆರಂಭಿಸಿದ್ದಾರೆ. ಇದರಲ್ಲಿ ಎಲ್ಲ ಮಹಿಳೆಯರು ತೊಡಗಿಸಿಕೊಂಡು ತಮ್ಮ ಭೂಮಿಯಲ್ಲಿಯೇ ಸಾವಯವ ಕೃಷಿ ಮಾಡಿ, ಬಂದ ಫಸಲಿನಿಂದ ಆಹಾರ ತಯಾರಿಸುವ ಮೂಲಕ ಮೌಲ್ಯವರ್ಧನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಬಡ ಹೆಣ್ಣುಮಕ್ಕಳ ಉತ್ಸಾಹ ಹಾಗೂ ಶ್ರಮಕ್ಕೆ ಎಲ್ಲರೂ ಪ್ರೋತ್ಸಾಹಿಸುತ್ತ ಬೆಂಬಲಿಸೋಣ. ಅವರ ಉದ್ಯಮವನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಅವರ ಸಬಲೀಕರಣದಲ್ಲಿ ಪಾತ್ರರಾಗೋಣ.
Inspirational story🥰
please share contact no. want to order food