ಖಾಸಗೀ ಶಾಲೆಗಳ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವೆಡೆಯಂತೂ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಹಾವಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲ ಪ್ರಯತ್ನ ಮಾಡುತ್ತಿದೆ. ಆದರೂ ಪೋಷಕರನ್ನು ಸಂಪೂರ್ಣವಾಗಿ ಖಾಸಗಿಯವರ ಕಪಿಮುಷ್ಟಿಯಿಂದ ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ.
ಇಂತಹ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತ ಸರ್ಕಾರಿ ಶಾಲೆಯೊಂದು ಒಬ್ಬಳೇ ವಿದ್ಯಾರ್ಥಿನಿಯಿಂದ ನಡೆಯುತ್ತಿದೆ. ಹೌದು.. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದ್ದೇವಳ್ಳಿ ಕಿರಿಯ ಪ್ರಾಥಮಿಕ ಶಾಲೆಯು ಶೌಚಾಲಯ, ಕುಡಿಯುವ ನೀರು, ಪ್ರತ್ಯೇಕ ಅಡುಗೆ ಕೊಠಡಿ ಸೇರಿದಂತೆ ಸಕಲ ಮೂಲ ಸೌಕರ್ಯಗಳನ್ನೊಳಗೊಂಡು ಸರ್ಕಾರಿ ಶಾಲೆಗಳ ಘನತೆಯನ್ನು ಕಾಪಾಡಿಕೊಂಡಿದೆ.
2024-25ನೇ ಸಾಲಿಗೆ ಒಂದನೇ ತರಗತಿಯಲ್ಲಿ ಮಾನಸ ಎಂಬ ಒಬ್ಬ ವಿದ್ಯಾರ್ಥಿನಿ ಮಾತ್ರ ದಾಖಲಾಗಿದ್ದಾಳೆ. ಈ ಶಾಲೆಯಲ್ಲಿ 5ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲದಿದ್ದರೂ ಶಾಲೆಯಲ್ಲಿ ಬೋಧನೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಒಬ್ಬಳೇ ವಿದ್ಯಾರ್ಥಿನಿಗಾಗಿ ಒಬ್ಬರೇ ಶಿಕ್ಷಕಿ, ಒಬ್ಬರೇ ಅಡುಗೆ ಸಿಬ್ಬಂದಿ ಇಲ್ಲಿನ ಇನ್ನೊಂದು ವಿಶೇಷ.

ಶಾಲೆಯ ಕುರಿತು ಈದಿನ ಡಾಟ್ ಕಾಮ್ ಜತೆ ಮಾತನಾಡಿದ ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಸಿ ಎನ್, “ಇತ್ತೀಚೆಗೆ ಬಹುತೇಕ ಪೋಷಕರು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಪರಿಣಾಮ ಕಳೆದ ವರ್ಷ 5 ಮಂದಿ ಮಕ್ಕಳಿದ್ದ ಮದ್ದೇವಳ್ಳಿ ಶಾಲೆಯಲ್ಲಿ ಈಗ ಒಬ್ಬಳೇ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಾಳೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಸಮವಸ್ತ್ರ, ಬಿಸಿಯೂಟ, ಉಚಿತ ಪಠ್ಯಪುಸ್ತಕಗಳನ್ನು ನೀಡಿದರೂ ಬಹುತೇಕ ಪೋಷಕರು ನಗರ ಜೀವನ, ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ಮಗುವಿದ್ದರೂ ತರಗತಿಗಳು ನಡೆಯುತ್ತವೆ. ಮಗುವಿನ ಪೋಷಕರು ಬಯಸಿದಲ್ಲಿ ಬೇರೆ ಶಾಲೆಗೆ ಹೋಗುವ ಅವಕಾಶವೂ ಇದೆ. ಈ ರೀತಿಯ ಪ್ರಕರಣಗಳಲ್ಲಿ ಮಗುವಿನ ಓಡಾಟದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ” ಎಂದರು.
“ದಾಖಲಾತಿ ಹೆಚ್ಚಿಸಲು ಎಲ್ಲಾ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಖುದ್ದು ಮನೆ ಭೇಟಿ ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದಾಗ್ಯೂ ಶೂನ್ಯ ದಾಖಲಾತಿ ಮುಂದುವರೆದರೆ ತಾತ್ಕಾಲಿಕವಾಗಿ ಶಾಲೆಯನ್ನು ಸ್ಥಗಿತಗಗೊಳಿಸಲಾಗುತ್ತದೆ ಅಷ್ಟೆ.. ಮಕ್ಕಳು ಬಂದರೆ ಎಂದಿನಂತೆ ಶಾಲೆ ಪುನಾರಂಭವಾಗಲಿದೆ” ಎಂದರು.

”ಸಾಮಾನ್ಯವಾಗಿ ಮಕ್ಕಳು ಗುಂಪಿನಲ್ಲಿ ಕಲಿಯಬೇಕು. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ಈ ರೀತಿ ಒಂಟಿಯಾಗಿ ಕಲಿಯುವ ಮಗುವಿಗೆ ಸಂಪೂರ್ಣ ಕಲಿಕೆ ಆಗುವುದಿಲ್ಲ. ಅಂತಹ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಇರುವುದಿಲ್ಲ. ಕಲಿಕೆಗೆ ಪೂರಕ ವಾತಾವರಣ ಇಲ್ಲದೆ ಮಗು ಒಂಟಿ ಭಾವನೆಯಿಂದ ಶೈಕ್ಷಣಿಕವಾಗಿ ಹಿಂದುಳಿದುಬಿಡುತ್ತದೆ. ಪ್ರಸ್ತುತ ಇರುವ ಶಿಕ್ಷಕರು ಹೆಚ್ಚು ಮಕ್ಕಳ ದಾಖಲಾತಿ ಮಾಡಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು” ಎಂದು ಹೇಳಿದರು.
ಶಾಲೆಯ ಏಕೈಕ ಶಿಕ್ಷಕಿ ಡಿ.ಪದ್ಮಕ್ಕ ಮಾತನಾಡಿ, “ಕೊರೊನಾ ಸಮಯದಲ್ಲಿ 10 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ದಾಖಲಾತಿ ಹೆಚ್ಚಿಸಬಹುದೆಂದು ಇಲ್ಲಿಗೆ ಬಂದೆ. ಆದರೆ ಖಾಸಗಿ ಶಾಲೆಯಿಂದ ಬಂದಿದ್ದ ಮಕ್ಕಳು ಕೊರೊನಾ ಇಳಿಮುಖವಾದ ನಂತರ ವಾಪಸ್ ಖಾಸಗಿ ಶಾಲೆಗೇ ಹೋದರು. ಅಲ್ಲಿಂದ ಇಲ್ಲಿಯವರೆಗೆ ಈ ಶಾಲೆಯಲ್ಲಿ ಯಾವುದೇ ದಾಖಲಾತಿ ಇಲ್ಲದಂತಾಗಿದೆ. ನಾನು ಇಲ್ಲಿಗೆ ಬಂದು ಮೂರು ವರ್ಷ ಆಯಿತು. ಈಗ ಒಬ್ಬ ವಿದ್ಯಾರ್ಥಿನಿ ಮಾತ್ರ ಅಡ್ಮಿಷನ್ ಆಗಿದ್ದಾರೆ. ಈ ಶಾಲೆಯ ಉಳಿವಿಗಾಗಿ ಸಂಬಂಧಪಟ್ಟವರು ಗಮನ ಹರಿಸಬೇಕು. ಒಮ್ಮೆ ಶಾಲೆ ಮುಚ್ಚಿದರೆ ಮತ್ತೆ ಪ್ರಾರಂಭಿಸುವುದು ಕಷ್ಟ” ಎಂದರು.
ಮಧುಗಿರಿ ಡಿಡಿಪಿಐ ಗಿರಿಜಮ್ಮ ಮಾತನಾಡಿ, “ಮುಂದಿನ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳ ದಾಖಲಾತಿ ಆಗದಿದ್ದರೆ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನ ಸಮೀಪದ ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚುವುದಿಲ್ಲ. ಶೂನ್ಯ ದಾಖಲಾತಿ ಎಂದು ಗುರುತಿಸಿ ಹಾಗೆ ಇರಿಸಲಾಗುವುದು. ಮುಂದಿನ ಮೂರು ವರ್ಷಗಳ ಕಾಲ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಪ್ರಯತ್ನ ಮುಂದುವರೆಸಲಾಗುವುದು” ಎಂದು ತಿಳಿಸಿದರು.
ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರನ್ನು ಮಾತನಾಡಿಸಲಾಗಿ, “ರಾಜ್ಯದಲ್ಲಿ ಪ್ರಸ್ತುತ ಒಟ್ಟು 14758 ಪ್ರಾಥಮಿಕ ಶಾಲೆಗಳು, 2830 ಹಿರಿಯ ಪ್ರಾಥಮಿಕ ಶಾಲೆಗಳು, 51 ಪ್ರೌಢಶಾಲೆ ಸೇರಿ ಒಟ್ಟು 17639 ಸರ್ಕಾರಿ ಶಾಲೆಗಳು 30ಕ್ಕಿಂತ ಕಡಿಮೆ ದಾಖಲಾತಿಯಿಂದ ನಡೆಯುತ್ತಿವೆ. ಮಕ್ಕಳು ಸರ್ಕಾರಿ ಶಾಲೆ ಇದ್ದರೂ ಖಾಸಗಿ ಶಾಲೆಗೆ ಹೋಗಲು ಕಾರಣವೇನು ಎಂಬುದನ್ನು ಸರ್ಕಾರ ಮೊದಲು ಕಂಡುಕೊಂಡು ಕಾರ್ಯಯೋಜನೆ ರೂಪಿಸಬೇಕು. ಸಮಸ್ಯೆ ಕಂಡುಕೊಂಡ ಬಳಿಕವೇ ಪರಿಹಾರ ಸಾಧ್ಯ” ಎಂದರು.

“ಆ ಕ್ಷೇತ್ರದ ಶಾಸಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆಸಲು ತಮ್ಮ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ನಿಯಮಿತವಾಗಿ ಪೋಷಕರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಖುದ್ದು ಪೋಷಕರನ್ನು ಭೇಟಿ ಮಾಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದಿರಲು ಕಾರಣಗಳನ್ನು ತಿಳಿದುಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಭೋದಕ ವರ್ಗ, ಇಂಗ್ಲಿಷ್ ಭೋದನೆ ಸೇರಿದಂತೆ ಸಮಸ್ಯೆಗಳನ್ನು ಹೇಳಿಕೊಂಡರೆ.. ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
“ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಲೆಯನ್ನು ರೂಪಿಸಬೇಕು. ಆ ಶಾಲೆಯಲ್ಲಿ ನವೋದಯ ಶಾಲೆಗಳು ಅನುಸರಿಸುವ ಮಾನದಂಡಗಳನ್ನು ಅನುಸರಿಸಬೇಕು. ಹಾಗಾದಲ್ಲಿ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ʼಹಬ್ ಅಂಡ್ ಸ್ಪೋಕ್ ಮಾಡೆಲ್ ಸ್ಕೂಲ್’ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹಾಗೂ ಬೇರೆ ಶಾಲೆಗಳೊಂದಿಗೆ ವಿಲೀನಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಉದ್ದೇಶಿಸಿರುವುದು ಗೊತ್ತೇ ಇದೆ. ಇದರ ವಿರುದ್ಧ ಹಲವು ಸಂಘಟನೆಗಳು ಸಾಲು ಸಾಲು ಪ್ರತಿಭಟನೆಗಳನ್ನೂ ನಡೆಸುತ್ತಿವೆ. ಇದಕ್ಕೆ ಕ್ಯಾರೇ ಎನ್ನದ ಸರ್ಕಾರ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಒಂದು ಕಡೆ ಕಡಿಮೆ ದಾಖಲಾತಿ ಇರುವ ಶಾಲೆಗಳ ಶಿಕ್ಷಕರಿಗೆ, ಪೋಷಕರಿಗೆ ಆತಂಕವನ್ನುಂಟು ಮಾಡಿದರೆ, ಮತ್ತೊಂದೆಡೆ ಖಾಸಗಿ ಪೆಡಂಬೂತದ ಎದುರು ಸರ್ಕಾರಿ ಶಿಕ್ಷಣ ವ್ಯವಸ್ಥೆ ಮಂಡಿಯೂರಿತೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ, ಕಡಿಮೆ ದಾಖಲಾತಿಯಿರುವ ಸುಮಾರು 4,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಾಗಿಲು ಬಂದ್ ಮಾಡಲಿವೆ.
ಯಾವುದೇ ಪಕ್ಷ ಅಧಿಕಾರಿಕ್ಕೆ ಬಂದರೂ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುವುದರಲ್ಲಿ ಹಿಂದುಳಿದಿಲ್ಲ. 1986ರ ಕಾಂಗ್ರೆಸ್ ನೇತೃತ್ವದ ಸರ್ಕಾರ ತಂದಿದ್ದ ಶಿಕ್ಷಣ ನೀತಿಯು ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು ಮತ್ತು ನಂತರದ ಪ್ರತಿಯೊಂದು ಸರ್ಕಾರವು ಅದೇ ಪಥ ಅನುಸರಿಸಿ ಶಿಕ್ಷಣವನ್ನು ಒಂದು ಉದ್ಯಮವನ್ನಾಗಿ, ದುಡ್ಡು ಮಾಡುವ ಸರಕನ್ನಾಗಿ ಪರಿವರ್ತಿಸಿದೆ” ಎಂದು ಕೆಲ ಸಂಘಟನೆಗಳು ಆರೋಪಿಸುತ್ತಿರುವುದು ಸುಳ್ಳಲ್ಲ.

ಈ ಮೊದಲು ಬಿಜೆಪಿ ಸರ್ಕಾರವು 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾದಾಗ, ಸಾವಿರಾರು ವಿದ್ಯಾರ್ಥಿಗಳು ಸಜ್ಜುಗೊಂಡು ಪ್ರತಿಭಟನೆಯಲ್ಲಿ 36 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿ, ಸರ್ಕಾರದ ನಡೆ ಮುಂದೆ ಮುನ್ನಡೆ ಸಾಧಿಸಿದ್ದರು. ಈಗ, ಕಾಂಗ್ರೆಸ್ ಸರ್ಕಾರ ಮಕ್ಕಳ ದಾಖಲಾತಿ ಕಡಿಮೆಯಾಗಲು ಮೂಲ ಕಾರಣಗಳನ್ನು ಪರಿಹರಿಸುವ ಬದಲು 4,200 ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈಗ ಇನ್ನೆಷ್ಟು ಸಹಿಗಳನ್ನು ಸಂಗ್ರಹಿಸಬೇಕೋ ಎನ್ನುವುದು ಪ್ರಜ್ಞಾವಂತರ ಮಾತು.
ಮದ್ದೇವಳ್ಳಿ ಶಾಲೆಯ ಒಬ್ಬಳೇ ವಿದ್ಯಾರ್ಥಿನಿಗೆ ಮುಂದಿನ ದಿನಗಳಲ್ಲಿಯಾದರೂ ಸಹಪಾಠಿಗಳು ಸಿಗಬೇಕು. ಆಕೆಗೆ ಪೂರಕ ಕಲಿಕಾ ವಾತಾವರಣ ಸೃಷ್ಟಿಯಾಗಬೇಕು. ಶಾಲೆಗೆ ಮಕ್ಕಳನ್ನು ಕರೆತರುವಲ್ಲಿ ಸ್ಥಳೀಯ ಆಡಳಿತ ಕಾರ್ಯನಿರ್ವಹಿಸಬೇಕು. ಶಾಲೆ ಈ ಎಲ್ಲಾ ಗೊಂದಲಗಳಿಗೆ ಒಂದೊಳ್ಳೆ ಉತ್ತರವಾಗಬಲ್ಲದೇ..?