ಈ ದಿನ ಸಂಪಾದಕೀಯ | ಜಾತಿ ವಿನಾಶ: ಆರ್‌ಎಸ್‌ಎಸ್ ಬೂಟಾಟಿಕೆಗೆ ಮಿತಿ ಇಲ್ಲವೇ?

Date:

Advertisements
"ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಲಿ ರಚಿಸಬೇಕು" ಎಂದಿದ್ದರು ಪೇಜಾವರ ಸ್ವಾಮೀಜಿ. ಇಂತಹ ಹೇಳಿಕೆಗಳ ಬಗ್ಗೆ ಆರ್‌ಎಸ್‌ಎಸ್‌ ನಿಲುವೇನು?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ”ಜಾತಿ ವಿನಾಶಕ್ಕೆ ಆರ್‌ಎಸ್‌ಎಸ್ ಸೇರಿಕೊಳ್ಳಿರಿ” ಎಂದು ಕರೆ ನೀಡಿದ್ದಾರೆ. ”ಜಾತಿ ಬಗ್ಗೆ ಮಾತನಾಡಿದಷ್ಟೂ ಸಮಾವೇಶಗಳನ್ನು ಮಾಡಿದಷ್ಟು ಜಾತಿ ಗಟ್ಟಿಯಾಗುತ್ತಾ ಹೋಗುತ್ತದೆ. ಸಂಘವು ಯಾವುದೇ ಪ್ರಚಾರವಿಲ್ಲದೆ ಜಾತಿ ಪದ್ಧತಿಯ ವಿನಾಶಕ್ಕೆ ಶ್ರಮಿಸುತ್ತಿದೆ. ಸಂಘಕ್ಕೆ ಸೇರಿದ ಮೇಲೆ ಜಾತಿ ಭಾವ ಇಲ್ಲದೆ ಎಲ್ಲರೂ ಸಮಾನರಾಗಿ ಕಾರ್ಯನಿರ್ವಹಿಸುತ್ತಾರೆ. ಅಂತರ್ಜಾತಿ ವಿವಾಹ ಆಗುತ್ತವೆ. ಜಾತಿ ವಿನಾಶ ಬಯಸುವವರು ಸಂಘಕ್ಕೆ ಸೇರಬೇಕು” ಎಂದಿದ್ದಾರೆ.

ಜಾತಿ ವಿನಾಶ ಆಗಬೇಕೆಂಬ ಆಶಯ ವ್ಯಕ್ತಪಡಿಸುವುದು ಸ್ವಾಗತಾರ್ಹ. ಆದರೆ ಆರ್‌ಎಸ್‌ಎಸ್‌ ಹೇಳುವುದು ಒಂದು, ನಡೆದುಕೊಳ್ಳುವುದೇ ಮತ್ತೊಂದು ರೀತಿ ಎಂಬಂತಾಗಬಾರದು. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ಕೆಲಸಗಳನ್ನೇ ಮಾಡುತ್ತಾ ಬಂದ ಬಹುದೊಡ್ಡ ಇತಿಹಾಸ ಆರ್‌ಎಸ್‌ಎಸ್‌ಗಿದೆ.

ದಲಿತರ ಮೇಲೆ ದೌರ್ಜನ್ಯಗಳಾದಾಗ ಸಂಘಪರಿವಾರ ಬೀದಿಗಿಳಿದು ಹೋರಾಟ ಮಾಡಿದ ಉದಾಹರಣೆಗಳಿಲ್ಲ. ಬಲಾಢ್ಯ ಜಾತಿಗಳು ನಡೆಸುವ ಜಾತಿ ಕ್ರೌರ್ಯಗಳನ್ನು, ಮರ್ಯಾದೆ ಹೆಸರಲ್ಲಿ ನಡೆಯುವ ಹತ್ಯೆಗಳನ್ನು ನಿಲ್ಲಿಸುವ ಪ್ರಯತ್ನವನ್ನು ಆರ್‌ಎಸ್‌ಎಸ್‌ ಮಾಡಿದ್ದೂ ಇಲ್ಲ. ಅಂತರ್ಜಾತಿ ವಿವಾಹವಾಗಿ ಜೀವಭಯದಲ್ಲಿ ಬದುಕುವ ಪ್ರೇಮಿಗಳಿಗೆ ರಕ್ಷಣೆ ಕೊಟ್ಟ ಉದಾಹರಣೆಯೂ ಇಲ್ಲ.

Advertisements

ಸಂಘಪರಿವಾರವು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ, ಒಡಕುಗಳನ್ನು ಮೂಡಿಸುವ ಕೆಲಸಗಳನ್ನು ನಿರಂತರ ಮಾಡುತ್ತಲೇ ಬಂದಿದೆ. ಜಾತಿ ಅಸ್ಮಿತೆಯ ಪ್ರಶ್ನೆಗಳು ಬಂದಾಗ ತಮ್ಮ ಮತ ರಾಜಕಾರಣಕ್ಕೆ ಪೆಟ್ಟಾಗುವಂತಿದ್ದರೆ ‘ಹಿಂದೂ ನಾವೆಲ್ಲ ಒಂದು’ ಎನ್ನುತ್ತದೆ. ಆದರೆ ಜಾತಿ ಅಸ್ಮಿತೆಗಳನ್ನೇ ಬಳಸಿ ಸಮುದಾಯಗಳ ನಡುವೆ ಒಡಕುಗಳನ್ನು ಮೂಡಿಸಲು ಕೆಲಸವನ್ನು ಆರ್‌ಎಸ್‌ಎಸ್ ಮಾಡುವುದುಂಟು. ಮುಸ್ಲಿಂ ದ್ವೇಷವು ಅದರ ಬಾಹ್ಯ ಸ್ವರೂಪದ್ದಾದರೆ, ಜಾತಿ ತರತಮಗಳ ಯಥಾಸ್ಥಿತಿಯನ್ನು ಜೋಪಾನವಾಗಿಡುವುದು ಅದರ ಹಿಡನ್ ಅಜೆಂಡಾ. ಅದಕ್ಕಾಗಿ ಯಾವ ವೇಷ ಧರಿಸಲೂ ಆರ್‌ಎಸ್‌ಎಸ್ ಸಿದ್ಧವಾಗುವುದನ್ನು ಗಮನಿಸಬಹುದು.

ಸಂಘಪರಿವಾರದ ಭಾಗವೇ ಆಗಿರುವ ಅಯೋಧ್ಯೆ ಪ್ರಕಾಶನ ಈ ಹಿಂದೆ ಪ್ರಕಟಿಸಿದ್ದ ‘ಟಿಪ್ಪು ನಿಜಕನಸುಗಳು’ ಕೃತಿ ನೆನಪಿರಬಹುದು. ಟಿಪ್ಪು ಸುಲ್ತಾನರ ಬಗ್ಗೆ ಹಸಿಹಸಿ ಸುಳ್ಳುಗಳನ್ನು ಬರೆದಿದ್ದ ಅಡ್ಡಂಡ ಕಾರ್ಯಪ್ಪನವರು, ಆ ಕೃತಿಯ ಮೂಲಕ ಜಾತಿಜಾತಿಗಳ ನಡುವೆ ಸಂಘರ್ಷವನ್ನು ಸೃಷ್ಟಿಸಲು ಯತ್ನಿಸಿದ್ದರು. ”ಟಿಪ್ಪುವಿನ ವಿರುದ್ಧ ಕೊಡವರು, ಕೇರಳದ ನಾಯರ್‌ಗಳು, ಮರಾಠರು ನಿಂತಿದ್ದರು. ಚಿತ್ರದುರ್ಗದ ನಾಯಕರೂ ಹೈದರ್ ಮತ್ತು ಟಿಪ್ಪುವಿನ ಶತ್ರುಗಳಾಗಿದ್ದರು. ಒಕ್ಕಲಿಗರಾದ ಉರಿಗೌಡ, ನಂಜೇಗೌಡ ಎಂಬವರು ಯದುವಂಶದ ಉಳಿವಿಗಾಗಿ ಟಿಪ್ಪುವಿಗೆ ಗುಂಡಿಟ್ಟು ಕೊಂದರು. ಏಳುನೂರು ಅಯ್ಯಂಗಾರಿ ಬ್ರಾಹ್ಮಣರನ್ನು ದೀಪಾವಳಿಯಂದು ಟಿಪ್ಪು ಹತ್ಯೆ ಮಾಡಿದ್ದ”- ಹೀಗೆ ಸರಣಿ ನಕಲಿ ಇತಿಹಾಸವನ್ನು ಸೃಷ್ಟಿಸಿದ್ದ ಕೀರ್ತಿ ಸಂಘಪರಿವಾರಕ್ಕೆ ಸಲ್ಲುತ್ತದೆ.

ಇಡೀ ನಾಟಕದ ಪ್ರತಿ ದೃಶ್ಯದಲ್ಲೂ ಒಂದೊಂದು ಅಜೆಂಡಾವನ್ನು ತುರುಕಲಾಗಿತ್ತು. ಮುಸ್ಲಿಮರ ವಿರುದ್ಧ ಹಿಂದೂ ಧರ್ಮದಲ್ಲಿನ ಜಾತಿಗಳನ್ನು ಎತ್ತಿಕಟ್ಟಿ, ಆ ಮೂಲಕ ತನ್ನ ಹಿಡನ್ ಅಜೆಂಡಾವನ್ನು ಜಾರಿಗೊಳಿಸುವ ಸಂಘಪರಿವಾರದ ಹುನ್ನಾರದ ಭಾಗವೇ ಈ ಕೃತಿ ಎಂದು ಸ್ಪಷ್ಟವಾಗಿ ಕಾಣಿಸುತ್ತಿತ್ತು. “ಸೂಕ್ಷ್ಮವಾಗಿ ಗಮನಿಸಿದರೆ, ಸಂಘಪರಿವಾರದ ರಾಜಕಾರಣವು ಜಾತಿ ಐಡೆಂಟಿಟಿಗಳನ್ನು ಹೇಗೆ ತನ್ನೊಳಗೆ ಎಳೆದುಕೊಳ್ಳಲು ಯತ್ನಿಸುತ್ತದೆ, ಜಾತಿ ಅಸ್ಮಿತೆಗಳ ಎದುರಿಗೆ ಕಲ್ಪಿತ ಇಸ್ಲಾಮಿಕ್ ಸ್ಟೇಟ್ ಥಿಯರಿಯನ್ನು ನಿಲ್ಲಿಸಿ ಹೇಗೆ ವೋಟ್‌ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನಿಸುತ್ತದೆ ಎಂಬುದನ್ನು ಈ ಕೃತಿಯ ಮೂಲಕ ಗುರುತಿಸಬಹುದು” ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕರ್ನಾಟಕಕ್ಕೆ ಶಾಸನಸಭೆಯಿಂದ ಅಪಮಾನ; ನೈತಿಕ ಹೊಣೆ ಯಾರದ್ದು?

ಆರ್‌ಎಸ್‌ಎಸ್‌ನ ವಿದರ್ಭ ಸರಸಂಘಚಾಲಕ ಶ್ರೀಧರ ಗಾಡ್ಗೆ, ”ಜಾತಿ ಗಣತಿ ಬೇಡ, ಅದರ ಅವಶ್ಯಕತೆ ಇಲ್ಲ” ಎಂದು ಹೇಳಿಕೆ ನೀಡಿದ್ದರು. ಜಾತಿಯ ಅಸಮಾನತೆ, ತಾರತಮ್ಯ, ಪ್ರಾತಿನಿಧ್ಯದ ಕೊರತೆ- ಇತ್ಯಾದಿ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಲು ಜಾತಿ ಗಣತಿ ಅಗತ್ಯವಿದೆ. ಆದರೆ ಈ ತರತಮಗಳನ್ನು ಯಥಾಸ್ಥಿತಿಯಲ್ಲೇ ಇಡುವುದು ಆರ್‌ಎಸ್‌ಎಸ್‌ ಉದ್ದೇಶವಾಗಿರುವಂತೆ ತೋರುತ್ತದೆ.

ಸಂಘಪರಿವಾರದ ಅಜೆಂಡಾಗಳನ್ನು ಪ್ರತಿಪಾದಿಸುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಂತರ್ಜಾತಿ ವಿವಾಹಗಳನ್ನು ಕಟುವಾಗಿ ವಿರೋಧಿಸಿ ಹೇಳಿಕೆ ಕೊಟ್ಟಿದ್ದರು. ”ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಲಿ ರಚಿಸಬೇಕು” ಎಂದಿದ್ದರು ಸ್ವಾಮೀಜಿ. ಇದೇ ಪೇಜಾವರರು, ಬ್ರಾಹ್ಮಣೇತರರು ಅರ್ಚಕರಾಗುವುದನ್ನು ವಿರೋಧಿಸಿದ್ದರು. ಇಂತಹ ಹೇಳಿಕೆಗಳು ಸಂಘಪರಿವಾರದ ಸಿದ್ಧಾಂತಗಳನ್ನು ಪ್ರತಿಪಾದಿಸುವುದಿಲ್ಲ ಎಂದು ಎಂದಾದರೂ ಆರ್‌ಎಸ್‌ಎಸ್ ಹೇಳುವುದುಂಟೆ? ಜಾತಿ ಸಮಾವೇಶಗಳನ್ನು ಬಲಾಢ್ಯ ಸಮುದಾಯಗಳು ಹಮ್ಮಿಕೊಂಡಾಗ, ಇದೇ ಸಂಘಪರಿವಾರದ ನಾಯಕರು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದೇಕೆ?

ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಸಮರ್ಪಿಸಲಾಯಿತು. ಇದಾದ ಕೇವಲ ನಾಲ್ಕು ದಿನಗಳ ನಂತರ ಅಂದರೆ, 1949ರ ನವೆಂಬರ್ 30ರಂದು ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಸಂವಿಧಾನದ ವಿರುದ್ಧ ತುಚ್ಛವಾಗಿ ಬರೆಯಲಾಗಿತ್ತು. ”ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು. ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ಟೀಕಿಸಿತ್ತು ಆರ್ಗನೈಸರ್.

ಜಾತಿ ವ್ಯವಸ್ಥೆಯನ್ನು ಚಲನೆ ಇಲ್ಲದ ಸ್ಥಿತಿಗೆ ತೆಗೆದುಕೊಂಡು ಹೋಗಿದ್ದೇ ‘ಮನುಸ್ಮೃತಿ’ ಎಂದು ವಿಶ್ಲೇಷಿಸಿದ್ದರು ಡಾ.ಅಂಬೇಡ್ಕರ್. ಯಥಾಸ್ಥಿತಿ ವರ್ಣವ್ಯವಸ್ಥೆಗೆ ಬೇಕಾದ ಎಲ್ಲ ಕಾನೂನುಗಳನ್ನು ಮನುಸ್ಮೃತಿ ಒಳಗೊಂಡಿದೆ. ಅಂತರ್ ವರ್ಣೀಯ ವಿವಾಹಗಳನ್ನು ನಿಷೇಧಿಸಿದೆ. ಸ್ತ್ರೀಯರ ಮೇಲೆ ನಿರ್ಬಂಧಗಳನ್ನು ಹೇರಿದೆ. ಶೂದ್ರರು ಗುಲಾಮಗಿರಿ ಮಾಡಲಷ್ಟೇ ಎನ್ನುತ್ತದೆ. ಆದರೆ ಮನುಸ್ಮೃತಿಯ ಅಂಶಗಳು ನಮ್ಮ ಸಂವಿಧಾನದಲ್ಲಿ ಇಲ್ಲ ಎಂದು ಆರ್‌ಎಸ್‌ಎಸ್ ಬಡಬಡಾಯಿಸಿತ್ತು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸದನದಲ್ಲಿ ಹನಿಟ್ರ್ಯಾಪ್‌ ಸದ್ದು; ತಾವು ಅನೈತಿಕರೆಂದು ಸಾರಿಕೊಂಡರೇ ನಾಯಕರು?

ಜಾತಿ ವಿನಾಶಕ್ಕೆ ಬೇಕಾದ ಮಾರ್ಗವನ್ನು ಡಾ.ಅಂಬೇಡ್ಕರ್ ಸೂಚಿಸಿದ್ದರು. ಆದರೆ ಇದರ ವಿರುದ್ಧ ಆರ್‌.ಎಸ್‌.ಎಸ್.ನ ಸರಸಂಘಚಾಲಕ ಎಂ.ಎಸ್. ಗೋಳ್ವಾಲ್ಕರ್ ಕಿಡಿಕಾರಿದ್ದಾರೆ. 1962ರ ನವೆಂಬರ್ 26ರಂದು ಆರ್ಗನೈಸರ್ ಪತ್ರಿಕೆಯಲ್ಲಿ ಬರೆಯುತ್ತಾ, ”ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ” ಎಂದು ಘೋಷಿಸಿದ್ದರು ಗೋಳ್ವಾಲ್ಕರ್.

ಇಂತಹ ಹಿನ್ನೆಲೆಯ ಸಂಘಪರಿವಾರವು ಇಂದು ಜಾತಿ ವಿನಾಶದ ಬಗ್ಗೆ ಮಾತನಾಡುತ್ತಿರುವುದೇ ಬೂಟಾಟಿಕೆಯ ಪರಮಾವಧಿ. ಒಂದು ಕಡೆ ಜಾತಿ ವ್ಯವಸ್ಥೆಯನ್ನು ಪೋಷಿಸುವ ಎಲ್ಲ ಕಸರತ್ತುಗಳನ್ನು ಮಾಡುತ್ತಲೇ, ಅದೇ ಸಂದರ್ಭದಲ್ಲಿ ಮತ್ತೊಂದು ಕಡೆ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎನ್ನುತ್ತಾರೆ. ಇವರ ಕಾಳಜಿ ನಿಜವೇ ಆಗಿದ್ದರೆ, ತಮ್ಮ ಹಿಂದಿನ ನಿಲುವುಗಳನ್ನು ಬದಲಿಸಿಕೊಂಡಿರುವುದಾದರೆ, ಸಾಮೂಹಿಕ ಅಂತರ್ಜಾತಿ ವಿವಾಹಗಳಿಗೆ ಕರೆ ನೀಡಲಿ. ಅಂತರ್ಜಾತಿ ವಿವಾಹಗಳ ವಿರುದ್ಧ ಮಾತನಾಡುವ ಸ್ವಾಮೀಜಿಗಳ ವಿರುದ್ಧ ಹೇಳಿಕೆಗಳನ್ನು ನೀಡಲಿ. ಇಲ್ಲವಾದರೆ ಆರ್‌ಎಸ್‌ಎಸ್‌ನವರದ್ದು ಬೂಟಾಟಿಕೆಯ ಮತ್ತೊಂದು ವರಸೆಯಾಗುತ್ತದೆಯಷ್ಟೇ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X