ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿಶ್ವಕರ್ಮ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 18 ಶ್ರಮಿಕ ವರ್ಗದವರಿಂದ ಲಕ್ಷಗಟ್ಟಲೆ ಅರ್ಜಿಗಳನ್ನು ಸ್ವೀಕರಿಸಿ, ಪ್ರಾರಂಭದ ದಿನಗಳಲ್ಲಿ ತರಬೇತಿ ಪಡೆದ ಸದಸ್ಯರಿಗೆ (ಫಲಾನುಭವಿಗಳಿಗೆ) ತರಬೇತಿ ಭತ್ಯೆಯನ್ನು ಅವರವರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಆದರೆ, ಇತ್ತೀಚಿಗೆ ಸುಮಾರು ಮೂರು ತಿಂಗಳಿನಿಂದ ತರಬೇತಿ ಪಡೆದವರಿಗೆ ಯಾವುದೇ ಭತ್ಯೆ ಜಮೆಯಾಗುತ್ತಿಲ್ಲ ಮಾತ್ರವಲ್ಲದೆ, ಪ್ರತಿ ಫಲಾನುಭವಿಗೆ ಉಚಿತವಾಗಿ ರೂ.15,000/-ಮೌಲ್ಯದ ಟೂಲ್ ಕಿಟ್‌ನ್ನು ನೀಡುವ ಭರವಸೆ ನೀಡಿದ್ದರು. ಕೆಲವು ತರಬೇತಿ ಕೇಂದ್ರಗಳ ಸದಸ್ಯರಿಗೆ ಟೂಲ್ ಕಿಟ್ ಬಂದ ಬಗ್ಗೆ ಮಾಹಿತಿ ದೊರೆತಿದೆ. ಆದರೆ, ಇದುವರೆಗೆ ನಮ್ಮ ಸಂಘದ ಯಾವುದೇ ಫಲಾನುಭವಿಗೂ ಟೂಲ್ ಕಿಟ್ ಬಂದಿರುವುದಿಲ್ಲ ಎಂದು ತಿಳಿಸಿದಾಗ ನಮ್ಮ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ.

ಇಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗವು, ಜಿಲ್ಲಾಧಿಕಾರಿಗೆ ಮತ್ತು ಉಡುಪಿ ಶಾಸಕರಿಗೆ ಮನವಿ ಸಲ್ಲಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡರು.
ಕರ್ನಾಟಕ ಸೇಟ್ ಟೈಲರ್ಸ್ ಅಸೋಸಿಯೇಶನ್ ಎಂಬ ರಾಜ್ಯ ಮಟ್ಟದ ನೋಂದಾಯಿತ ಸಂಘದ ಸದಸ್ಯರಾದ ನಾವು ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಬಹಳಷ್ಟು ತೊಂದರೆ ಅನುಭವಿಸಿದ್ದೇವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಈ ಸಮಸ್ಯೆಯಾಗುತ್ತಿರುವ ಬಗ್ಗೆ ಸಂಘದ ಪದಾಧಿಕಾರಿಗಳಾದ ನಾವು ಸದಸ್ಯರಿಗೆ ಯಾವ ರೀತಿಯಿಂದ ಸಮಜಾಯಿಷಿ ನೀಡಲಿ? ನಮ್ಮಂತಹ ಬಡ ಶ್ರಮಿಕ ವರ್ಗದವರಿಗೆ ಆಗುತ್ತಿರುವ ತೊಂದರೆಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
