ಕ್ರಾಂತಿಕಾರಿ ಹೋರಾಟಗಾರ ಹುತಾತ್ಮ ಭಗತ್ ಸಿಂಗ್ ಅವರ ವಿಚಾರಧಾರೆ ಪ್ರಸ್ತುತ ಸಮಾಜಕ್ಕೆ ಆದರ್ಶವಾಗಿವೆ ಎಂದು ದೇಶಪ್ರೇಮಿ ಯುವಾಂದೋಲನ ಸಂಘಟನೆ ವಿಭಾಗೀಯ ಸಂಚಾಲಕ ಲಕ್ಷ್ಮಣ್ ಮಂಡಲಗೇರಾ ತಿಳಿಸಿದರು.
ಕಲಬುರಗಿ ನಗರದ ಜಿಡಿಎ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ದೇಶಪ್ರೇಮಿ ಯುವಾಂದೋಲನ ಸಂಘಟನೆ ಆಯೋಜಿಸಿದ್ದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮಾತನಾಡಿ, ʼದೇಶಾದ್ಯಂತ ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಅವರ ಹುತಾತ್ಮ ದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ. ಈ ಮೂವರು ಹೋರಾಟಗಾರರು ದೇಶದ ಸ್ವಾತಂತ್ರ್ಯ ಹಾಗೂ ಭವಿಷ್ಯದ ಪರಿಕಲ್ಪನೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದರುʼ ಎಂದು ಹೇಳಿದರು.

ʼದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತಾಂಡವಾಡುತ್ತಿದೆ. ಹೀಗಾಗಿ ಬಡವರಿಗೆ ಸಮರ್ಪಕ ಶಿಕ್ಷಣ, ಉದ್ಯೋಗ ಸಿಗದೆ ಯುವಜನರು ಜೀವನ ನಡೆಸಲು ಹೋರಾಟ ನಡೆಸಬೇಕಾಗಿದೆ. ಇಂತಹ ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಯುವ ಜನತೆ ಜಾತಿ, ಮತ ಬೇಧವಿಲ್ಲದೆ ದೇಶದ ಸುಸ್ಥಿರ ಭವಿಷ್ಯದ ಕಡೆಗೆ ಗಮನ ಹರಿಸಬೇಕುʼ ಎಂದರು.
ದೇಶಪ್ರೇಮಿ ಯುವಾಂದೋಲನ ಜಿಲ್ಲಾ ಸಂಚಾಲಕ ಮೈಲಾರಿ ದೊಡಮನಿ, ವಸತಿ ನಿಲಯದ ಮೇಲ್ವಿಚಾರಕ ನೀಲಕಂಟ ಸಿಂಗೆ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಬೀದರ್‌ನಲ್ಲಿ ಭಗತ್ ಸಿಂಗ್ ಹುತಾತ್ಮ ದಿನಾಚರಣೆ :
ದೇಶಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿಗಳಾಗಿದ್ದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ 94ನೇ ಹುತಾತ್ಮ ದಿನ ಬೀದರ್ ನಗರದ ಭಗತ್ ಸಿಂಗ್ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ, ಯುವ ಜನಾಂದೋಲನ ಸಂಘಟನೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇಶಪ್ರೇಮಿ ಯುವಾಂದೋಲನ ಸಂಘಟನೆಯ ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಮುಹಮ್ಮದ್ ನಿಜಾಮುದ್ದೀನ್ ಹಾಗೂ ಕರವೇ ಜಿಲ್ಲಾಧ್ಯಕ್ಷ ಅರುಣ ಕೋಡಗೆ, ಜಿಲ್ಲಾ ಉಪಾಧ್ಯಕ್ಷ ಅಮರ್ ಗಾದಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಮಡಕೆ, ಜಿಲ್ಲಾ ಕಾರ್ಯಾಧ್ಯಕ್ಷ ಪ್ರಭು ಮದರಗಿಕರ್, ಶ್ರೀಮಂತ ಸಪಾಟೆ, ಸುನೀಲ, ರಾಜು ಗಂದಗೆ, ರಾಜು ಗುಬ್ಬೆ ಮತ್ತಿತರರು ಹಾಜರಿದ್ದರು.