ಪುರಾವೆಯನ್ನು ಅಳಿಸಿ ಹಾಕಲಾಗಿದೆ. ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕುವುದು ಅಪರಾಧವೇ. ಅರೆಸುಟ್ಟ ನೋಟುಗಳು ಮತ್ತು ನೋಟುಗಳ ನಾಲ್ಕೈದು ಚೀಲಗಳನ್ನು ಎಲ್ಲಿಗೆ ಸಾಗಿಸಲಾಯಿತು? ಸಾಗಿಸಿಲ್ಲವಾದರೆ ಹೊರಗೆ ಮರಗಳಿಂದ ಉದುರಿಬಿದ್ದ ಒಣ ಎಲೆಗಳ ರಾಶಿಯಲ್ಲಿ ಅರೆಸುಟ್ಟು 15-20 ನೋಟುಗಳು ಹೇಗೆ ಸಿಕ್ಕಿವೆ?
ದೆಹಲಿಯ ಜಸ್ಟಿಸ್ ವರ್ಮ ಅವರ ಬಂಗಲೆಯಲ್ಲಿ ಪತ್ತೆಯಾಗಿರುವ ಭಾರೀ ನಗದು ಜನಸಾಮಾನ್ಯರ ಬಳಿ ಸಿಕ್ಕಿದ್ದರೆ ಏನು ಕ್ರಮ ಜರುಗುತ್ತಿತ್ತು?
ನಿಗದಿತ ಮೊತ್ತಕ್ಕಿಂತ ಹೆಚ್ಚು ನಗದು ಪತ್ತೆಯಾದರೆ, ಅದನ್ನು ಇಟ್ಟುಕೊಂಡವರು ಧನದ ಮೂಲವನ್ನು ತಿಳಿಸಬೇಕು. ವಿವರಣೆ ಸಮರ್ಪಕ ಅಲ್ಲದಿದ್ದರೆ ಕಪ್ಪು ಹಣದ ಕೇಸು ಹಾಕಲಾಗುತ್ತದೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಶುರು ಮಾಡುತ್ತವೆ.
ಎಫ್.ಐ.ಆರ್. ಹಾಕದಂತೆ ಜಡ್ಜ್ ಗಳಿಗೆ ಸಾಂವಿಧಾನಿಕ ಸುರಕ್ಷತೆ (ಇಮ್ಯೂನಿಟಿ) ಒದಗಿಸಲಾಗಿದೆಯೇ? ಹೌದು. ಆದರೆ ಜಡ್ಜುಗಳ ಸರ್ಕಾರಿ ಬಂಗಲೆಗಳಲ್ಲಿ ಭಾರೀ ಪ್ರಮಾಣ ಅರೆಸುಟ್ಟ ನಗದು ಸಿಕ್ಕರೆ, ಜಡ್ಜು ತಮ್ಮ ಮನೆಯಲ್ಲಿ ಸಾಂವಿಧಾನಿಕ ಕರ್ತವ್ಯ ನಿರ್ವಹಿಸುತ್ತಿಲ್ಲವಾದರೆ, ಲೆಕ್ಕಪತ್ರವಿಲ್ಲದ ನಗದನ್ನು ಇಟ್ಟುಕೊಳ್ಳುವುದು ನ್ಯಾಯಕ್ಕೆ ಸಂಬಂಧಿಸಿದ ಕೆಲಸವಲ್ಲ. ಸಾಂವಿಧಾನಿಕ ಸುರಕ್ಷತೆಯ ಮಾತೆಲ್ಲಿಂದ ಬಂತು?
ಪೊಲೀಸರು ಏನು ಮಾಡಬೇಕಿತ್ತು?
ನಗದು ಪತ್ತೆಯಾಗಿರುವ ಮಾಹಿತಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ನೀಡಿ, ಪಂಚನಾಮೆ ನಡೆಸಿ, ನಗದನ್ನು ಜಫ್ತು ಮಾಡಿಕೊಂಡು ಎಫ್.ಐ.ಆರ್. ದಾಖಲಿಸಿಕೊಂಡು ಆದಾಯತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಅಲ್ಲಿ ನಗದು ಯಾಕಿತ್ತು, ಈ ನಗದು ಯಾರದಾಗಿತ್ತು, ಅಲ್ಲಿಗೆ ಹೇಗೆ ತಲುಪಿತ್ತು ಎಂದು ಕಂಡು ಹಿಡಿಯಬೇಕಿತ್ತು. ಆದರೆ ಈ ಕೇಸಿನಲ್ಲಿ ದೆಹಲಿ ಪೊಲೀಸ್ ಕಮೀಷನರ್ ಅವರು ದೆಹಲಿ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯವರಿಗೆ ನಗದು ಪತ್ತೆ ಕುರಿತು 16 ತಾಸುಗಳ ಕಾಲ ತಡವಾಗಿ ಮಾಹಿತಿ ನೀಡಿದ್ದರು! ಯಾಕಿಷ್ಟು ತಡ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಮಾ. 14ರ ರಾತ್ರಿ ಹನ್ನೊಂದೂವರೆಯ ಈ ಘಟನೆ ಕುರಿತು 15 ರ ಅಪರಾಹ್ಣ 4.50ಕ್ಕೆ ಪೊಲೀಸ್ ಆಯುಕ್ತರು ಮುಖ್ಯ ನ್ಯಾಯಮೂರ್ತಿಯವರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಕಮೀಷನರ್ ಕಚೇರಿಯಿಂದ ಮುಖ್ಯ ನ್ಯಾಯಮೂರ್ತಿಯವರ ಬಂಗಲೆಗೆ ತೆವಳಿಕೊಂಡು ಹೋದರೂ ಇಷ್ಟು ಕಾಲ ಬೇಕಾಗುವುದಿಲ್ಲ.
ನೋಟುಗಳ ಪುರಾವೆ ಇದೆಯೇ?
ಪುರಾವೆಯನ್ನು ಅಳಿಸಿ ಹಾಕಲಾಗಿದೆ. ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕುವುದು ಅಪರಾಧವೇ. ಅರೆಸುಟ್ಟ ನೋಟುಗಳು ಮತ್ತು ನೋಟುಗಳ ನಾಲ್ಕೈದು ಚೀಲಗಳನ್ನು ಎಲ್ಲಿಗೆ ಸಾಗಿಸಲಾಯಿತು? ಸಾಗಿಸಿಲ್ಲವಾದರೆ ಹೊರಗೆ ಮರಗಳಿಂದ ಉದುರಿಬಿದ್ದ ಒಣ ಎಲೆಗಳ ರಾಶಿಯಲ್ಲಿ ಅರೆಸುಟ್ಟು 15-20 ನೋಟುಗಳು ಹೇಗೆ ಸಿಕ್ಕಿವೆ?
ಮೂರು ತಿಂಗಳ ಹಿಂದೆ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಶೇಖರ್ ಯಾದವ್ ಅವರು ವಿಶ್ವಹಿಂದು ಪರಿಷತ್ತಿನ ಸಮಾರಂಭದಲ್ಲಿ ಭಾಗವಹಿಸಿ ಮುಸಲ್ಮಾನರ ಕುರಿತು ಅತ್ಯಂತ ಕೀಳಾಗಿ ಮಾತನಾಡಿದ್ದರು. ದೇಶಾದ್ಯಂತ ಅವರ ಪರ ಮತ್ತು ವಿರೋಧದ ಹೇಳಿಕೆಗಳು ಹೊರಟವು. ಪದವಿಯಿಂದ ಕಿತ್ತು ಹಾಕಲು ಇವರ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ (ಇಂಪೀಚ್ ಮೆಂಟ್) ಪ್ರಸ್ತಾವ ಮಂಡಿಸಲು ಪ್ರತಿಪಕ್ಷಗಳು ಮುಂದಾಗಿದ್ದವು. ಆದರೆ ಆಡಳಿತ ಪಕ್ಷ ಶೇಖರ್ ಯಾದವ್ ಪರವಾಗಿತ್ತು. ಸಾರ್ವಜನಿಕವಾಗಿ ಕ್ಷಮಾಪಣೆ ಕೇಳುವಂತೆ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿತು. ಅವರು ಈ ನಿರ್ದೇಶನಕ್ಕೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ನ್ಯಾಯಮೂರ್ತಿಗಳಿಗೆ ನಿಗದಿ ಮಾಡಲಾಗಿರುವ ಯಾವುದೇ ಸಂಹಿತೆಯನ್ನು ತಾವು ಉಲ್ಲಂಘಿಸಿಲ್ಲ ಎಂದರು ನ್ಯಾಯಮೂರ್ತಿ ಯಾದವ್. ರಾಜೀನಾಮೆ ನೀಡಬೇಕೆಂಬ ಮಾತಿಗೂ ಅವರು ಸೊಪ್ಪು ಹಾಕಲಿಲ್ಲ.
ಈ ಹಿನ್ನೆಲೆಯಲ್ಲಿ ತಾವಾಗಿ ರಾಜೀನಾಮೆ ನೀಡದ ಹೊರತು, ಸುಪ್ರೀಮ್ ಕೋರ್ಟು- ಹೈಕೋರ್ಟ್ ಜಡ್ಜುಗಳನ್ನು ಕಿತ್ತು ಹಾಕುವ ಪ್ರಕ್ರಿಯೆ ಬಹಳ ಬಹಳ ದೀರ್ಘವೂ, ಸುತ್ತು ಬಳಸಿನದೂ ಆಗಿರುತ್ತದೆ. ಈಗಲೂ ನ್ಯಾಯಮೂರ್ತಿ ವರ್ಮ ತಾವಾಗಿ ರಾಜೀನಾಮೆ ನೀಡಿದರೆ ಸರಿ, ಇಲ್ಲವಾದರೆ ಅವರನ್ನು ಕಿತ್ತು ಹಾಕುವ ದಾರಿ ಬಲು ಬಲು ದೂರದ್ದು. ಆದರೆ ಇಂತಹ ಜಡ್ಜ್ ಗಳಿಗೆ ಕೆಲಸ ಕಾರ್ಯವನ್ನೇ ನೀಡದಿರುವ ‘ಶಿಕ್ಷೆ’ಯನ್ನು ಕೊಡಬಹುದಾಗಿದೆ.

ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಈವರೆಗೆ ಒಂದೇ ಒಂದು ‘ಇಂಪೀಚ್ ಮೆಂಟ್’ ಕೂಡ ಜರುಗಿಲ್ಲ. ತಮ್ಮ ವಿರುದ್ಧ ಇಂಪೀಚ್ಮೆಂಟ್ ಪ್ರಕ್ರಿಯೆ ಜಾರಿಯಲ್ಲಿದ್ದಾಗ ನ್ಯಾಯಮೂರ್ತಿ ಸೌಮಿತ್ರ ಸೇನ್ ರಾಜೀನಾಮೆ ನೀಡಿದ್ದರು. ವರ್ಮ ವಿರುದ್ಧ ಎಫ್.ಐ.ಆರ್. ದಾಖಲು ಕೋರಿ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಕುರಿತು ನಿರ್ದೇಶನ ನೀಡುವಂತೆ ಮ್ಯಾಥ್ಯೂಸ್ ನೆಡುಂಪಾರ ಎಂಬ ವಕೀಲರು ಕೋರಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಸಮಾಲೋಚನೆ ನಡೆಸದೆ ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನ ಯಾವುದೇ ಜಡ್ಜ್ ವಿರುದ್ಧ ಎಫ್.ಐ.ಆರ್. ದಾಖಲಿಸುವಂತಿಲ್ಲ. ಅನಗತ್ಯ ಕಾನೂನುಕ್ರಮದಿಂದ (ಪ್ರಾಸಿಕ್ಯೂಷನ್) ಕಿರುಕುಳದಿಂದ ನ್ಯಾಯಮೂರ್ತಿಗಳನ್ನು ರಕ್ಷಿಸುವುದು ಈ ನಿಯಮದ ಉದ್ದೇಶ. 1991ರ ಕೆ ವೀರಾಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಕೇಸಿನ ಸಂಬಂಧದಲ್ಲಿ ಈ ನಿರ್ದೇಶನವನ್ನು ಸುಪ್ರೀಮ್ ಕೋರ್ಟ್ ನೀಡಿತ್ತು. ರಾಜಕೀಯ ಪ್ರೇರಿತ ಕ್ಷುಲ್ಲಕ ಕೇಸುಗಳಿಂದ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಚ್ಚಾರಿತ್ರ್ಯವನ್ನು ರಕ್ಷಿಸುವುದು ಈ ಕ್ರಮದ ಉದ್ದೇಶವಾಗಿತ್ತು.
ಹೀಗಾಗಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರ ಅನುಮತಿ ಇಲ್ಲದೆ ಪೊಲೀಸರು ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿನ ಜಡ್ಜುಗಳ ವಿರುದ್ಧ ನೇರ ತನಿಖೆ ನಡೆಸುವುದು ಸಾಧ್ಯವಿಲ್ಲ. ನ್ಯಾಯಾಲಯ ನಿಂದನೆಯ ಖಡ್ಗ ಝಳಪಿಸಲಾಗುತ್ತದೆ. ಈ ಖಡ್ಗಕ್ಕೆ ಹೆದರದೆ ಇರುವವರು ವಿರಳ.
ಸುಪ್ರೀಮ್ ಕೋರ್ಟಿನ ಈ ನಿರ್ದೇಶನವು ದೇಶದ ಕಾನೂನುಗಳು ಅನ್ವಯವೇ ಆಗದಂತಹ ವಿಶೇಷಾಧಿಕಾರ ಉಳ್ಳ ವ್ಯಕ್ತಿಗಳ ವಿಶೇಷ ವರ್ಗವನ್ನೇ ಸೃಷ್ಟಿಸಿದಂತಾಗಿದೆ. ನಮ್ಮ ಬಹುಸಂಖ್ಯೆಯ ನ್ಯಾಯಮೂರ್ತಿಗಳು ಸಚ್ಚಾರಿತ್ರ್ಯ ಉಳ್ಳ ಸ್ವತಂತ್ರ ಭಾವದ, ಅಪರಾಧಗಳನ್ನು ಎಸಗದವರು. ಆದರೆ ಅಕ್ರಮವಾಗಿ ಹಣ ಪಡೆಯುತ್ತಿರುವ ಜಡ್ಜ್ ಗಳು ಸಾಕ್ಷ್ಯ ಸಮೇತಿ ಸಿಕ್ಕಿ ಬಿದ್ದಿರುವ ಪ್ರಕರಣಗಳು ನಡೆದಿವೆ. ಆದ ಕಾರಣ ಈ ಎಫ್.ಐ.ಆರ್. ಗುರಾಣಿಯ ಕುರಿತು ತೀರ್ಪು ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ನೇಮಕ ಮಾಡಿರುವ ಸಮಿತಿ ತನಿಖೆ ಆರಂಭಿಸಿದೆ. ಹಿಮಾಚಲ, ಪಂಜಾಬ್-ಹರಿಯಾಣ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಈ ಸಮಿತಿಯಲ್ಲಿದ್ದಾರೆ.
ಹೈಕೋರ್ಟ್, ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳನ್ನು ತೆಗೆದು ಹಾಕುವ, ರಾಜೀನಾಮೆ ಪಡೆಯುವ ಅಧಿಕಾರ ಸುಪ್ರೀಮ್ ಕೋರ್ಟ್ ಗೆ ಇಲ್ಲ. ಈ ಅಧಿಕಾರವನ್ನು ಸಂಸತ್ತು ತನ್ನ ಬಳಿ ಇಟ್ಟುಕೊಂಡಿದೆ. ಇಂಪೀಚ್ಮೆಂಟ್ ಪ್ರಸ್ತಾವವನ್ನು ಸೋಲಿಸುವ ಅಥವಾ ಗೆಲ್ಲಿಸುವ ಮೂಲಕ ಸಂಸತ್ತು ನಿರ್ಧರಿಸುತ್ತದೆ. ನಿರ್ದಿಷ್ಟ ನ್ಯಾಯಮೂರ್ತಿಯ ಮೇಲಿನ ಆಪಾದನೆಗಳು ತನಿಖೆಯ ನಂತರ ಸಾಬೀತಾದ ನಂತರ ಇಂಪೀಚ್ಮೆಂಟ್ ಪ್ರಸ್ತಾವ ಮಂಡಿಸುವಂತೆ ಸುಪ್ರೀಮ್ ಕೋರ್ಟು ಮಾಡುವ ಶಿಫಾರಸನ್ನು ಸಂಸತ್ತು ತಿರಸ್ಕರಿಸಿದರೆ ನ್ಯಾಯಾಂಗ ಏನೂ ಮಾಡುವಂತಿಲ್ಲ.
ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರ ಅವರು ಹಾಲಿ ರಾಜ್ಯಸಭಾ ಸದಸ್ಯರು. ನರೇಂದ್ರ ಮೋದಿಯವರ ಪಕ್ಕದಲ್ಲಿ ವೇದಿಕೆಯ ಮೇಲೆ ಕುಳಿತಿರುವುದು ನನಗೆ ಹೆಮ್ಮೆಯ ವಿಷಯ ಎಂದಿದ್ದವರು. ಬೇರೆ ಕಾರಣಗಳಿಗಾಗಿ ಅವರ ವಿರುದ್ಧದ ಇಂಪೀಚ್ಮೆಂಟ್ ಪ್ರಕ್ರಿಯೆಯನ್ನು ಆಡಳಿತ ಪಕ್ಷ ಮೊಳಕೆಯಲ್ಲೇ ಚಿವುಟಿತ್ತು.
ಇದನ್ನೂ ಓದಿ ದೆಹಲಿ ನ್ಯಾಯಮೂರ್ತಿ ಬಂಗಲೆಯ; ಭರ್ತಿ ಚೀಲಗಳ ನಗದಿಗೆ ಬೆಂಕಿ ಬಿದ್ದ ಕತೆಯೇನು?
ಇದನ್ನೂ ಓದಿ ‘ಮಹಾತ್ಮ ಗಾಂಧಿ ನೋಟುಗಳಿಗೆ ಬೆಂಕಿ ಬಿದ್ದಿದೆಯೋ ಅಣ್ಣಾ…’