ನೂತನ ಹುಲಸೂರ ತಾಲ್ಲೂಕಿನ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಹುಲಸೂರ ತಾಲ್ಲೂಕು ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ನೇತ್ರತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಹುಲಸೂರ ತಾಲ್ಲೂಕು ರಚನೆ ಹೋರಾಟ ಸಮಿತಿ ಕರೆ ನೀಡಿದ ಹೋರಾಟಕ್ಕೆ ಪಟ್ಟಣದ ವ್ಯಾಪರಸ್ಥರು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದರು. ಬೆಳ್ಳಿಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟು ಮುಚ್ಚಿ ಪ್ರತಿಭಟನೆಗೆ ಬೆಂಬಲಿಸಿದ ಪರಿಣಾಮ ಬಂದ್ ಭಾಗಶಃ ಯಶಸ್ವಿಯಾಗಿದೆ.
ಪಟ್ಟಣದ ಇಸಾಂಪಲ್ಲಿ ಭವಾನಿ ಮಾತಾ ಮಂದಿರದಿಂದ ಬೆಳಿಗ್ಗೆ 10.30 ರಿಂದ ಆರಂಭವಾದ ಮೆರವಣಿಗೆ ವೀರಭದ್ರೇಶ್ವರ ಮಂದಿರ, ಗುರು ಬಸವೇಶ್ವರ ಸಂಸ್ಥಾನ ಮಠ, ಗಾಂಧೀಜಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿವರೆಗೆ ನಡೆಯಿತು.

ಬಿಸಿಲಿನ ಅಬ್ಬರದ ನಡುವೆ ಸೇರಿದ ಹೋರಾಟಗಾರರು, ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಬ್ಯಾಂಡ್, ಭಜನೆ, ವಾದ್ಯ ತಂಡದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ʼಎಂ.ಬಿ.ಪ್ರಕಾಶ ವರದಿ ಜಾರಿ ಆಗಲೇಬೇಕುʼ ಸೇರಿದಂತೆ ಹುಲಸೂರ ತಾಲ್ಲೂಕಿನ ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.
ತಹಸೀಲ್ ಕಚೇರಿ ಎದುರಿನ ಮುಖ್ಯರಸ್ತೆ ಮೇಲೆ ಕುಳಿತ ಪ್ರತಿಭಟನಾಕಾರರು ಮಧ್ಯಾಹ್ನ 1 ಗಂಟೆವರೆಗೆ ಮುಖ್ಯರಸ್ತೆ ತಡೆದು ಧರಣಿ ನಡೆಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್, ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ ಮಾತನಾಡಿ, ʼಹುಲಸೂರ ತಾಲ್ಲೂಕಿನ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಂ.ಜಿ.ರಾಜೋಳೆ ನೇತ್ರತ್ವದಲ್ಲಿ ನಡೆಯುತ್ತಿರುವ ನ್ಯಾಯಾಯುತ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕಿದೆ. ಬದುಕಿನುದ್ದಕ್ಕೂ ಹುಲಸೂರ ತಾಲೂಕು ರಚನೆಗಾಗಿ ಹೋರಾಟ ನಡೆಸಿದ ರಾಜೋಳೆ ಅವರು ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಹಿಂಪಡೆದು ಈ ಹೋರಾಟ ಮುಂದುವರೆಸಿ, ಇದಕ್ಕೆ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆʼ ಎಂದು ಹೇಳಿದರು.
ʼಭಾಲ್ಕಿ ತಾಲ್ಲೂಕಿನ 16 ಹಳ್ಳಿಗಳು ಹುಲಸೂರ ತಾಲ್ಲೂಕಿಗೆ ಸೇರ್ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇಚ್ಚಾಶಕ್ತಿ ತೋರಬೇಕು. ಈ 16 ಹಳ್ಳಿಗಳು ಭಾಲ್ಕಿ ಮತಕ್ಷೇತ್ರದಲ್ಲೇ ಇರಲಿ, ಆದರೆ ಹುಲಸೂರ ತಾಲ್ಲೂಕಿಗೆ ಸೇರಬೇಕು. ಇಲ್ಲದಿದ್ದರೆ ಈ ಹೋರಾಟದ ಸ್ವರೂಪ ತೀವ್ರವಾಗಲಿದೆʼ ಎಂದು ಎಚ್ಚರಿಕೆ ನೀಡಿದರು.

ಹುಲಸೂರ ತಾಲೂಕಾ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಮಾತನಾಡಿ, ʼನೂತನ ಹುಲಸೂರ ತಾಲೂಕಾ ರಚನೆಯಾಗಿ ಎಂಟು ವರ್ಷ ಕಳೆಯುತ್ತಿದ್ದರೂ ತಾಲ್ಲೂಕಿನ ಬೇಡಿಕೆ ಈಡೇರಿಸಲು ಸರ್ಕಾರ ಇಚ್ಚಾಶಕ್ತಿ ತೋರುತ್ತಿಲ್ಲ. ಎಂ.ಬಿ.ಪ್ರಕಾಶ ಆಯೋಗದ ವರದಿಯಂತೆ ಒಟ್ಟು 20 ಗ್ರಾಮ ಪಂಚಾಯಿತಿ ಹಾಗೂ 62 ಹಳ್ಳಿಗಳು ಹುಲಸೂರು ತಾಲ್ಲೂಕಿಗೆ ಸೇರಿಸಬೇಕು. ಹುಲಸೂರ ತಾಲ್ಲೂಕಿಗೆ ಈಗಾಗಲೇ ಸೇರ್ಪಡೆಯಾದ ಭಾಲ್ಕಿ ತಾಲ್ಲೂಕಿನ 16 ಹಳ್ಳಿಗಳು ಹುಲಸೂರ ತಾಲ್ಲೂಕಿಗೆ ಸೇರಿಸಿ ಪಹಣಿ ಪತ್ರಿಕೆಯಲ್ಲಿ ನಮೂದಿಸಿ ತಕ್ಷಣ ಜಾರಿಗೊಳಿಸಬೇಕು. ಹುಲಸೂರ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಮಿನಿ ವಿಧಾನಸೌಧ, ತಾಲೂಕಾ ನ್ಯಾಯಾಲಯ ಸೇರಿದಂತೆ ತಾಲೂಕಾ ಆಡಳಿತದ ಎಲ್ಲ ಕಚೇರಿಗಳು ಆರಂಭಿಸಬೇಕುʼ ಎಂದು ಒತ್ತಾಯಿಸಿದರು.
ʼಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂ.ಬಿ.ಪ್ರಕಾಶ ಆಯೋಗ ವರದಿ ಸಿದ್ಧಪಡಿಸಲಾಗಿತ್ತು. ಆದರೆ ಇಲ್ಲಿವರೆಗೆ ನೂತನ ಹುಲಸೂರ ತಾಲ್ಲೂಕಿನಲ್ಲಿ 18 ಹಳ್ಳಿಗಳು ಮಾತ್ರ ಇವೆ. ಹೀಗಾಗಿ ಯಾರದೇ ಒತ್ತಡಕ್ಕೆ ಮಣಿಯದೆ ಸರ್ಕಾರ ಕೂಡಲೇ ನೂತನ ತಾಲ್ಲೂಕಿಗೆ ಆಯೋಗದ ವರದಿಯಂತೆ ಹಳ್ಳಿಗಳ ಸೇರ್ಪಡೆ ಮಾಡಿದರೆ ಈ ಭಾಗದ ಅನೇಕ ಗ್ರಾಮಗಳ ಜನರಿಗೆ ಅನುಕೂಲ ಆಗುತ್ತದೆʼ ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ʼಹುಲಸೂರ ತಾಲೂಕಾ ರಚನೆ ಸಮಿತಿಯ 2 ದಶಕಗಳ ಪ್ರತಿಫಲವಾಗಿ ಅಂದಿನ ಸಿಎಂ ಜಗದೀಶ ಶೆಟ್ಟರ್ ಅವಧಿಯಲ್ಲಿ ನೂತನ ತಾಲ್ಲೂಕು ಘೋಷಣೆಯಾಗಿದೆ. ಭಾಲ್ಕಿ ತಾಲ್ಲೂಕಿನ 16 ಹಳ್ಳಿಗಳು ಹುಲಸೂರ ತಾಲ್ಲೂಕಿನಲ್ಲಿ ಸೇರ್ಪಡೆಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಅವರು ತಡೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಹುಲಸೂರ ತಾಲ್ಲೂಕು ಸಮಿತಿಯ ಬೇಡಿಕೆ ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂ.ಜಿ.ರಾಜೋಳೆ ಅವರು ಮುನ್ಸೂಚನೆ ನೀಡಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಕನಿಷ್ಠ ಸೌಜನ್ಯಕ್ಕಾಗಿ ಮಾತನಾಡಿಸದೇ ಇರುವುದು ಖೇದಕರʼ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅನೀಲ ಭುಸಾರೆ ಮಾತನಾಡಿ, ʼಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೂತನ ಹುಲಸೂರ ತಾಲ್ಲೂಕಿನ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಬಸವ ಕೇಂದ್ರ ತಾಲ್ಲೂಕಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ʼಮಹಾರಾಷ್ಟ್ರ ಗಡಿಯೊಂದಿಗೆ ಹಂಚಿಕೊಂಡಿರುವ ಹುಲಸೂರ ತಾಲ್ಲೂಕಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸೇರಿದಂತೆ ಈ ಭಾಗದ ಜನರ ಸರ್ವಾಗೀಣ ಅಭಿವೃದ್ಧಿಗಾಗಿ ಅವಿರತ ಹೋರಾಟದ ಫಲವಾಗಿ ನೂತನ ತಾಲ್ಲೂಕು ಘೋಷಣೆಯಾಗಿದೆ. ಆದರೆ ಪರಿಪೂರ್ಣ ತಾಲೂಕಿನ ಬೇಡಿಕೆ ಈಡೇರಿಸಲು ಇಚ್ಚಾಶಕ್ತಿ ತೋರದಿರುವುದು ದುರಂತ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದುʼ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧೀರ ಕಾಡಾದಿ, ನಾಗನಾಥ ಬಗದುರೆ ಹಾಗೂ ಮುಖಂಡರಾದ ಶಬ್ಬಿರ ಪಾಷಾ ಮುಜಾವೀರ್, ರೂಪಾವತಿ ಜಾಧವ, ನಾಗೇಶ ಮೇತ್ರೆ ಮಾತನಾಡಿದರು.
ಪ್ರಮುಖರಾದ ಪ್ರವೀಣ್ ಕಾಡಾದಿ, ಚಂದ್ರಕಾಂತ ಡೆಟ್ನೆ, ಸೋಮನಾಥ ನಂದಗೆ, ಅರವಿಂದ ಹರಪಲ್ಲೆ, ನವನಾಥ ಪಾಟೀಲ್, ರಾಜಕುಮಾರ್ ತೊಂಡಾರೆ, ಸಂತೋಷ ಗಾಯಕವಾಡ, ಅಶೀಫ್ ಸಿಲಾರ್, ದತ್ತಾ ಮೋರೆ, ಗುಲಾಂ ಶೇಖ್, ಮಯೂರ್ ಬಿರಾದರ್, ಅಶೋಕ ಪಾಟೀಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ಬೇಡಿಕೆ ಈಡೇರದಿದ್ದರೆ ಮಾ.24 ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಸ್ತೆತಡೆ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಲಸೂರ ತಾಲ್ಲೂಕಾ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಎಚ್ಚರಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆಯು ಕೂಡಲೇ ಅವರನ್ನು ಸಂಪರ್ಕಿಸಿ ಆತ್ಮಹತ್ಯೆ ನಿರ್ಧಾರ ಕೈಬಿಡುವಂತೆ ಮನವರಿಕೆ ಮಾಡಿದ್ದರು. ʼಹಿರಿಯ ಪೊಲೀಸ್ ಅಧಿಕಾರಿಗಳ ಮನವಿಯಂತೆ ಆತ್ಮಹತ್ಯೆ ನಿರ್ಧಾರ ಹಿಂಪಡೆದಿರುವೆʼ ಎಂದು ರಾಜೋಳೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ವಿನಾಶ: ಆರ್‌ಎಸ್‌ಎಸ್ ಬೂಟಾಟಿಕೆಗೆ ಮಿತಿ ಇಲ್ಲವೇ?
ಹುಮನಾಬಾದ್ ಡಿವೈಎಸ್‌ಪಿ ಜೆ.ಎಸ್.ನ್ಯಾಮೆಗೌಡ, ಸಿಪಿಐಗಳಾದ ಅಲಿಸಾಬ್, ಗುರು ಪಾಟೀಲ್, ಕೃಷ್ಣಕುಮಾರ್, ಶ್ರೀನಿವಾಸ ಅಲ್ಲಾಪುರೆ ನೇತ್ರತ್ವದಲ್ಲಿ 12 ಪಿಎಸ್‌ಐ ತಂಡದ ಸುಮಾರು ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬೆಳಿಗ್ಗೆಯಿಂದಲೇ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.