ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗಮಧ್ಯ ಆ್ಯಂಬುಲೆನ್ಸ್ ಚಕ್ರ ಬ್ಲಾಸ್ಟ್ ಆಗಿದ್ದು, ಈ ವೇಳೆ ಸ್ಥಳೀಯ ಯುವಕರು ಚಕ್ರ ಬದಲಿಸಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ ಮಾನವೀಯತೆ ಮೆರೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಲ್ಲನಹೊಳೆ-ತೊರೆಕೋಲಮ್ಮನಹಳ್ಳಿ ಗ್ರಾಮಗಳ ನಡುವೆ ಬೈಕ್ ಹಾಗೂ ಬೊಲೆರೊ ನಡುವೆ ಅಪಘಾತ ಸಂಭವಿಸಿತ್ತು.
ದಾವಣಗೆರೆ ಕಡೆಯಿಂದ ಕಲ್ಯಾಣದುರ್ಗಕ್ಕೆ ಹೋಗುತ್ತಿದ್ದ ಬೊಲೆರೊ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಬೈಕ್ ಸವಾರ ಮಾರುತಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಗಾಯಗಳಾಗಿದ್ದ ಬೈಕ್ ಸವಾರ ಮಾರುತಿಯನ್ನು ಕೊಂಡೊಯ್ಯುತ್ತಿರುವ ವೇಳೆ ಆ್ಯಂಬುಲೆನ್ಸ್ ಚಕ್ರ ಬ್ಲಾಸ್ಟ್ ಆಗಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಈ ವೇಳೆ ಆಸ್ಪತ್ರೆಗೆ ಹೋಗಲಾರದೇ ಗಾಯಾಳು ನರಳಾಡುತ್ತಿರುವುದನ್ನು ಕಂಡ ಚಿಕ್ಕಮಲ್ಲನಹೊಳೆ ಗ್ರಾಮದ ಯುವಕರು ಸಹಾಯಕ್ಕೆ ಧಾವಿಸಿದ್ದು, ಕೂಡಲೇ ಯುವಕರು ಆ್ಯಂಬುಲೆನ್ಸ್ ಚಕ್ರವನ್ನು ಬದಲಾಯಿಸಿ ಆಸ್ಪತ್ರೆಗೆ ಸಾಗಿಸಲು ಸಹಕಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನವಜಾತ ಶಿಶುವನ್ನು ಬಿಸಾಡಿದ್ದ ಪ್ರಕರಣ; ಪ್ರೇಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು
ಗ್ರಾಮಸ್ಥರ ಸಹಾಯದಿಂದ ಗಾಯಾಳು ಮಾರುತಿಯನ್ನು ಜಗಳೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಮಲ್ಲನಹೊಳೆ ಗ್ರಾಮದ ಯುವಕರ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಘಟನೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.