ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅರಳಿಹೊಂಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಏಳೆಂಟು ಕುಟುಂಬಗಳು ಕಳೆದ ಐದಾರು ವರ್ಷಗಳಿಂದ ಉಳ್ಳವರ ದೌರ್ಜನ್ಯಕ್ಕೆ ಬಲಿಯಾಗಿ ಬಲಹೀನರಾಗಿ ಬದುಕುತ್ತಿದ್ದು, ಇದೀಗ ಹರಿಜನಕೇರಿಗೆ ಬರಬೇಕಿದ್ದ ವಿದ್ಯುತ್ ಕಂಬಗಳ ತಡೆಗೂ ಸ್ಥಳಿಯರು ಮುಂದಾಗಿದ್ದರು. ಆ ಹಿನ್ನಲೆಯಲ್ಲಿ ಮಾರ್ಚ್ 24ರಂದು ಗ್ರಾಮೀಣ ಅಭಿವೃದ್ಧಿ ಅಧಿಕಾರಿ, ಹೆಸ್ಕಾಂ ಅಧಿಕಾರಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಪರಿಶಿಷ್ಠ ಸಮುದಾಯದವರು ಮಾತನಾಡಿ, ತಮಗೆ ಉಳ್ಳವರಿಂದ ಆಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿದರು. ಸರ್ಕಾರಿ ಗಾಂವಠಾಣ ಜಾಗೆಯನ್ನು ಕ್ರಮೇಣ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಾವು ಧ್ವನಿಯೆತ್ತಲು ಹಣವಿದ್ದವರಲ್ಲ ಹಾಗೂ ಹೆಚ್ಚು ಜನಸಂಖ್ಯೆಯೂ ಇಲ್ಲ ತುಳಿತಕ್ಕೆ ಒಳಗಾದ ಸಮುದಾಯದವರು ನಾವು ಎಂದರು. ಇನ್ನು ವಿದ್ಯುತ್ ಕಂಬಗಳನ್ನು ಹಾಕಲು ತಕರಾರು ಮಾಡಿದ್ದ, ನಾಲ್ಕೈದು ಗೌಡರ ಮನೆತನದವರು ತಾವು ಜಾಗೆಯನ್ನು ದುಡ್ಡು ಕೊಟ್ಟು ಖರೀದಿ ಮಾಡಿಕೊಂಡಿದ್ದೇವೆ. ಇವರಿಗೇಕೆ ಪುಕ್ಕಟ್ಟೆಯಾಗಿ ಕೊಡಬೇಕು ಎಂದು ಮಾತಿನ ಚಕಮಕಿಗಳು ನಡೆದ ನಂತರ ಎಲ್ಲರೂ ಎಲ್ಲರೊಂದಿಗೆ ಸಹಕರಿಸಿರಿ ಎಂದು ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ತಿಳಿಹೇಳಿದಾಗ; ಎಸ್ ಸಿ ಓಣಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಅನುಮತಿಗೆ ಸಮ್ಮತಿ ನೀಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳು, ಊರಿನ ಹಿರಿಯರು, ಯುವಕರು, ಮಹಿಳೆಯರು, ಸ್ಥಳಿಯರು ಇದ್ದರು.