ಉತ್ತರಪ್ರದೇಶ, ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಮನೆ ತುಂಬಿಸಿಕೊಳ್ಳುವ ಹೊಸ ಸೊಸೆಗೆ ಎಲ್ಲಕ್ಕಿಂತ ಮೊದಲು ತನ್ನ ಯಜಮಾನಿಕೆ ಹಿಸ್ಸೆ ನೀಡುತ್ತಾಳೆ ಅತ್ತೆ. ತಾನು ಕೈಯಾರೆ ಬಾಚಿ ನಂತರ ತಲೆ ಮೇಲೆ ಹೊತ್ತು ಸಾಗಿಸಿ ಸ್ವಚ್ಛ ಮಾಡುವ ಪಾಯಿಖಾನೆಗಳು ಎಂಬ ಪೂರ್ವಾರ್ಜಿತ ಆಸ್ತಿಯನ್ನು ಹಂಚಿಕೊಡುತ್ತಾಳೆ. ಮಲ ಬಾಚುವ ತಗಡಿನ ಚೌಕಗಳು, ಬುಟ್ಟಿ ಹಾಗೂ ಪೊರಕೆಯನ್ನು ಕೈಗಿತ್ತು ಗರ್ವಪಡುತ್ತಾಳೆ!
ಈ ಸನಾತನ ಸಂಚಿನ ಪರದೆಯನ್ನು ಇಲ್ಲಿಯ ತನಕ ‘ಶಸ್ತ್ರಗಳು ಕತ್ತರಿಸಿಲ್ಲ, ಬೆಂಕಿಯು ಸುಟ್ಟಿಲ್ಲ, ನೀರು ತೋಯಿಸಿಲ್ಲ. . .
ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಝಾರ್ಖಂಡ್ ಹಾಗೂ ಜಮ್ಮು-ಕಾಶ್ಮೀರದ 36 ಜಿಲ್ಲೆಗಳಲ್ಲಿ ಈಗಲೂ ಒಣ ಪಾಯಿಖಾನೆಗಳಿವೆ. ಕಳೆದ ಐದು ವರ್ಷಗಳಲ್ಲಿ 419 ಮಂದಿ ಸಫಾಯಿ ಕರ್ಮಚಾರಿಗಳು ಒಳಚರಂಡಿಗಳು ಹಾಗೂ ಮಲದ ಗುಂಡಿಗಳಲ್ಲಿ ಸತ್ತಿದ್ದಾರೆ. ಇದು ಕೇವಲ ಸತ್ತಿರುವವರ ಸಂಖ್ಯೆ. ಆದರೆ ಮಲದ ಗುಂಡಿಗಳಿಂದ ಮಲವನ್ನು ಬಾಚಿ ಅದನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಸಾವಿರಾರು ಮಂದಿ ಮಹಿಳೆಯರು ಇದ್ದೂ ಸತ್ತಂತೆ ಬದುಕಿದ್ದಾರೆ. ಹೊಟ್ಟೆಪಾಡಿಗಾಗಿ ಬೇರೆ ದಾರಿ ಇಲ್ಲದೆ ವರ್ಷಗಟ್ಟಲೆ, ಪೀಳಿಗೆ ಪೀಳಿಗೆಗಳ ನಂತರವೂ ಕೈಯಾರೆ ಮಲ ಬಳಿದು ಹೊತ್ತು ಸಾಗಿಸುವ ಹತ್ತಾರು ಸಾವಿರ ಅಥವಾ ಲಕ್ಷ ಸಂಖ್ಯೆಯ ಮನುಷ್ಯ ಜೀವಿಗಳು ಅನುಭವಿಸಿಕೊಂಡು ಬಂದಿರುವ ಸಂಕಟ ಯಾರ ಊಹೆಗಾದರೂ ನಿಲುಕುವುದೇ?
ಈ ಅಧೋಲೋಕ ಮತ್ತು ಅದರ ದುರ್ದೈವಿ ಮನುಷ್ಯ ಜೀವಿಗಳು ‘ನಾಗರಿಕ’ ಜಗತ್ತಿನ ಕಣ್ಣಿಗೆ ಬೀಳದ ಅದೃಶ್ಯರು. ಆಗಾಗ ಪೊರಕೆ ಹಿಡಿದು ಫೋಟೋ ತೆಗೆಯಿಸಿಕೊಳ್ಳುವ ಪ್ರಧಾನಿ ಮತ್ತು ಅವರ ಸಂಗಾತಿಗಳು ಒಣ ಪಾಯಿಖಾನೆಯೊಂದರ ಮುಂದೆ ಸಾಂಕೇತಿಕವಾಗಿಯಾದರೂ ನಿಂತು ಫೋಟೋ ಹೊಡೆಸಿಕೊಳ್ಳಬೇಕಿತ್ತು. ಹಾರೆ ಗುದ್ದಲಿಯನ್ನು ಹಿಡಿಯಬೇಕಿತ್ತು.
ಉತ್ತರಪ್ರದೇಶ, ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಮನೆ ತುಂಬಿಸಿಕೊಳ್ಳುವ ಹೊಸ ಸೊಸೆಗೆ ಎಲ್ಲಕ್ಕಿಂತ ಮೊದಲು ತನ್ನ ಯಜಮಾನಿಕೆ ಹಿಸ್ಸೆ ನೀಡುತ್ತಾಳೆ ಅತ್ತೆ. ತಾನು ಕೈಯಾರೆ ಬಾಚಿ ನಂತರ ತಲೆ ಮೇಲೆ ಹೊತ್ತು ಸಾಗಿಸಿ ಸ್ವಚ್ಛ ಮಾಡುವ ಪಾಯಿಖಾನೆಗಳು ಎಂಬ ಪೂರ್ವಾರ್ಜಿತ ಆಸ್ತಿಯನ್ನು ಹಂಚಿಕೊಡುತ್ತಾಳೆ. ಮಲ ಬಾಚುವ ತಗಡಿನ ಚೌಕಗಳು, ಬುಟ್ಟಿ ಹಾಗೂ ಪೊರಕೆಯನ್ನು ಕೈಗಿತ್ತು ಗರ್ವಪಡುತ್ತಾಳೆ!
ತಿಂಗಳಿಗೆ ಸಾವಿರ ಎರಡು ಸಾವಿರ ರುಪಾಯಿ ಕೈಗೆ ಬಿದ್ದರೆ ಅದೇ ಭಾಗ್ಯ. ಉಳಿದಂತೆ ದಿನಬಿಟ್ಟು ದಿನ ಮಲ ಬಳಿಸಿಕೊಳ್ಳುವವರು ಎಸೆಯುವ ಹಳಸಿದ ತಂಗಳು ಕೂಳು. ಆಗಾಗ ಬಿಸುಡುವ ಹಳೆಯ ಹರಕು ಹಚ್ಚಡ. ಹಲವು ಬಗೆಯ ಚರ್ಮರೋಗಗಳು, ಕ್ಷಯರೋಗ, ತಲೆಶೂಲೆ, ನಿರಂತರ ವಾಕರಿಕೆ, ಹುಣ್ಣು ಹೊಪ್ಪಳೆಗಳು, ಇವರ ಪಾಲಿಗೆ ಮುಫತ್ತು ಬಳುವಳಿಗಳು.
ಹೆರುವ ವಯಸ್ಸಿನ ಹಲವರು ಗರ್ಭಪಾತಕ್ಕೆ ಈಡಾದ ಮತ್ತು ಅಂಗವಿಕಲ ಕೂಸುಗಳನ್ನು ಹೆಡೆದಿರುವ ಉದಾಹರಣೆಗಳು ಇವೆ. ಇದಕ್ಕೂ ಒಣ ಪಾಯಿಖಾನೆಗಳಿಗೂ ಮಲ ಬಾಚಿ ಹೊತ್ತು ಸಾಗಿಸುವುದಕ್ಕೂ ಏನು ಸಂಬಂಧ? ವಿಸರ್ಜಿಸಿದ ಮಲವನ್ನು ನೀರಿನ ಒತ್ತಡದಿಂದ ಮಲದ ಗುಂಡಿಗೆ ಕಳಿಸುವ ವ್ಯವಸ್ಥೆ ಒಣ ಪಾಯಿಖಾನೆಗಳಲ್ಲಿ ಇರುವುದಿಲ್ಲ. ಇಂಗ್ಲಿಷಿನಲ್ಲಿ ಇವುಗಳನ್ನು ‘ಡ್ರೈ ಲ್ಯಾಟರಿನ್ಸ್’ ಎಂದು ಇವುಗಳನ್ನು ಕರೆಯುತ್ತಾರೆ. ಹಳ್ಳಿಗಾಡಿನಲ್ಲಿ ಕುಡಿಯುವ ನೀರು ದೊರೆಯುವುದೇ ದುರ್ಲಭ.
ಹೀಗಾಗಿ ಒಣ ಪಾಯಿಖಾನೆಗಳಲ್ಲಿ ವಿಸರ್ಜಿಸಲಾದ ಮಲ ಕೆಳಗೆ ಶೇಖರವಾಗುತ್ತದೆ. ಹಿಂಬಾಗಿಲಿನಿಂದ ಬಂದು ಅದನ್ನು ಅಲ್ಲಿಂದ ತಗಡಿನ ಚೌಕದಿಂದ ಬಳಿದು ಬುಟ್ಟಿಗೆ ಹಾಕಿಕೊಂಡು ಹಳ್ಳಿಗಳ ಹೊರಕ್ಕೆ ಸಾಗಿಸುತ್ತಾರೆ ಮನುಷ್ಯರು. ಹೌದು, ಮನುಷ್ಯರ ಮಲವನ್ನು ಮನುಷ್ಯರೇ ಬಳಿಯುವ ‘ನರಕ ಲೋಕ’ ಈಗಲೂ ಭಾರತದ ಕಟು ವಾಸ್ತವ. ಮಲ ಬಳಿಯುವ ಮನುಷ್ಯರಲ್ಲಿ ಶೇ.99 ಮಂದಿ ಹೆಣ್ಣು ಜೀವಗಳೇ ಇವೆ.

ಮನುಷ್ಯರೇ ಮನುಷ್ಯರ ಮಲ ಬಳಿದು ಹೊತ್ತು ಸಾಗಿಸುವ ಈ ಅಮಾನುಷ ಪದ್ಧತಿ ಕೊನೆಯಾಗುವುದು ಎಂದಿಗೆ ಎಂದು ಸಫಾಯಿ ಕರ್ಮಚಾರಿ ಆಂದೋಲನ ನಿತ್ಯ ನಿಟ್ಟುಸಿರಿಟ್ಟಿದೆ. ತಾರತಮ್ಯ, ಅಸ್ಪೃಶ್ಯತೆ ಹಾಗೂ ಮಲಬಳಿಯುವ ವಿಷಚಕ್ರಕ್ಕೆ ಸಿಲುಕಿರುವ ಮನುಷ್ಯ ಜೀವಿಗಳ ನರಕ ಸಮಾನ ಬದುಕಿನ ಕುರಿತು ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತಳೆದಿವೆ ಎಂದು ಈ ಸಂಘಟನೆ ದೂರಿದೆ. ದೇಶದ ಎಲ್ಲೆಡೆಗಳಿಂದ ಸಫಾಯಿ ಕರ್ಮಚಾರಿಗಳನ್ನು ದೆಹಲಿಗೆ ಬರ ಮಾಡಿಕೊಂಡು ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆಯೊಂದನ್ನು ಸಂಘಟಿಸಿದೆ. ಇದೇ ಮಾರ್ಚ್ 24ರಂದು ನಡೆಯುತ್ತಿರುವ ಈ ಪ್ರತಿಭಟನೆಗೆ ‘ಎಲ್ಲಿಯ ತನಕ ಕೊಲ್ಲುತ್ತೀರಿ ನಮ್ಮನ್ನು?’ ಎಂದು ಹೆಸರಿಟ್ಟಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಕ್ಷೇತ್ರದಲ್ಲಿ ದೇಶ ಗಣನೀಯ ಪ್ರಗತಿ ಸಾಧಿಸಿದ್ದರೂ ಹಲವು ರಾಜ್ಯಗಳು ಈಗಲೂ ಒಣ ಪಾಯಿಖಾನೆಗಳ ಬಳಕೆ ಮುಂದುವರೆದಿದೆ. ಇವುಗಳನ್ನು ಸಫಾಯಿ ಕರ್ಮಚಾರಿ ಮಹಿಳೆಯರು ಸ್ವಚ್ಛ ಮಾಡುತ್ತಿದ್ದಾರೆ.
ನೈರ್ಮಲ್ಯದ ಮೂಲಸೌಲಭ್ಯ ಹೆಚ್ಚಳ ಮತ್ತು ಒಳಚರಂಡಿಯ ಯಾಂತ್ರೀಕೃತ ಸ್ವಚ್ಛತೆಗೆ ಸಾವಿರಾರು ಕೋಟಿ ರುಪಾಯಿಗಳನ್ನು ವಿನಿಯೋಗ ಮಾಡುತ್ತಿರುವುದಾಗಿ ಭಾರತ ಸರ್ಕಾರ ಹೇಳಿಕೊಂಡಿದೆ ದೇಶದ ಉದ್ದಗಲಗಳಲ್ಲಿ 11 ಕೋಟಿ ಶೌಚಾಲಯಗಳನ್ನು ಕಟ್ಟಿಸಿರುವುದಾಗಿ, ಈ ಉದ್ದೇಶಕ್ಕಾಗಿ 55 ಸಾವಿರ ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿರುವುದಾಗಿಯೂ ಹೇಳಿದೆ. ಸ್ವಚ್ಛ ಭಾರತ ಯೋಜನೆಯಡಿ ಒಣ ಪಾಯಿಖಾನೆಗಳನ್ನು ಮಲದ ಗುಂಡಿಗಳೊಂದಿಗೆ ಜೋಡಿಸಿದ, ನೀರು ಹರಿಸಿ ಫ್ಲಶ್ ಮಾಡುವ ಶೌಚಾಲಯಗಳನ್ನಾಗಿ ಪರಿವರ್ತಿಸಿರುವ ಉದಾಹರಣೆಗಳನ್ನೂ ನೀಡುತ್ತದೆ.
ಆದರೂ ಒಣ ಪಾಯಿಖಾನೆಗಳು ಇನ್ನೂ ಯಾಕೆ ಉಳಿದಿವೆ? ‘ಭಂಗಿ’ ಜಾತಿಗೆ ಸೇರಿದ ಮಹಿಳೆಯರಿಂದ ಮಲ ಬಾಚಿಸುವ ಮತ್ತು ಮಲ ಹೊರಿಸುವ ನೀಚತನ ಇನ್ನೂ ಯಾಕೆ ನಿರ್ಮಾಲನ ಆಗಿಲ್ಲ ಎಂಬ ಪ್ರಶ್ನೆಗೆ ಸರ್ಕಾರಗಳು ಸಮಜಾಯಿಷಿ ನೀಡಬೇಕಿದೆ. ರೇಲ್ವೆ ಹಳಿಗಳ ಮೇಲೆ ಈಗಲೂ ಮಲ ಬೀಳುತ್ತಿದೆ. ಮಲ ಸಂಗ್ರಹಿಸಿ ಆನಂತರ ಒಂದೆಡೆ ಅದನ್ನು ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಎಲ್ಲ ರೈಲು ಗಾಡಿಗಳಲ್ಲಿ ಅಳವಡಿಸುವ ಕೆಲಸ ಆದ್ಯತೆ ಮೇರೆಗೆ ನಡೆಯುತ್ತಿಲ್ಲ. ಹಳಿಗಳ ಮೇಲಿನ ಮಲವನ್ನು ಅದೇ ‘ಭಂಗಿ’ ನೀರು ಹರಿಸಿ ಸ್ವಚ್ಛ ಮಾಡುತ್ತಲಿದ್ದಾರೆ. ಕಟ್ಟಿಕೊಂಡಿರುವ ಶೌಚಾಲಯಗಳನ್ನು, ಸರಿಯಾಗಿ ಬಳಸದೆ ರಾಡಿಯೆಬ್ಬಿಸಿರುವ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿರುವವರೂ ಇದೇ ಮಹಿಳೆಯರು ಮತ್ತು ಪುರುಷರು.

ಹಳ್ಳಿ ಪ್ರದೇಶಗಳಲ್ಲಿ ಮತ್ತು ಗಣನೀಯ ಸಂಖ್ಯೆಯ ತಾಲ್ಲೂಕು ಪ್ರದೇಶಗಳಲ್ಲಿಯೂ ಚರಂಡಿ ದಡದಲ್ಲಿ ಕುಳಿತು, ಇಲ್ಲವೇ ರಸ್ತೆಯ ಪಕ್ಕ ಕುಳಿತು ಮಕ್ಕಳು ಮಾಡುವ ಮಲವಿಸರ್ಜನೆಯನ್ನು, ಹಳ್ಳಿಗಾಡಿನ ಜಾತ್ರೆ ಪರಿಷೆಗಳಲ್ಲಿ ಸೇರುವ ಭಾರೀ ಜನಸಂದಣಿ ಮಾಡುವ ಹೊಲಸನ್ನು ಯಾರು ಸ್ವಚ್ಛ ಮಾಡುತ್ತಿದ್ದಾರೆಂದು ನಗರ ಭಾರತ ಕನಿಷ್ಠ ಒಮ್ಮೆ ಯೋಚಿಸಿದ್ದಾದರೂ ಇದೆಯೇ?
ಮಲ ಬಳಿಯುವವರ ಮರುವಸತಿಯ ಸ್ವಯಂ ಉದ್ಯೋಗ ಯೋಜನೆಗೆ ‘ನಮಸ್ತೆ’ ಎಂದು 2023ರಲ್ಲಿ ಹೊಸ ಹೆಸರಿಟ್ಟಿದೆ. ‘ನ್ಯಾಷನಲ್ ಆ್ಯಕ್ಷನ್ ಫಾರ್ ಮೆಕೆನೈಸ್ಡ್ ಸ್ಯಾನಿಟೇಷನ್ ಇಕೋ ಸಿಸ್ಟಮ್’ ನ ಹ್ರಸ್ವರೂಪ (NAMASTE). ಈ ಯೋಜನೆಗೆ 97.41 ಕೋಟಿ ರುಪಾಯಿಯನ್ನು ಹಂಚಿಕೆ ಮಾಡಿದೆ. 2025-26ರ ತನಕ 34,800 ನಗರಸಭೆ- ಪಟ್ಟಣ ಪಂಚಾಯಿತಿಗಳ ಒಂದು ಲಕ್ಷ ಒಳಚರಂಡಿಗಳು ಮತ್ತು ಮಲದ ಗುಂಡಿಗಳ ಕಾರ್ಮಿಕರಿಗೆ ಪ್ರಯೋಜನವಾಗುವಂತೆ 350 ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಲಾಗಿದೆಯಂತೆ. ಆದರೂ ನಮ್ಮ ಜನ ಒಳಚರಂಡಿಗಳಲ್ಲಿ, ಮಲದ ಗುಂಡಿಗಳಲ್ಲಿ ಸಾಯುತ್ತಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಂದೋಲನ ಪ್ರಶ್ನಿಸಿದೆ. ಕಳೆದ ವಾರ ಮಾರ್ಚ್ 16ರಂದು ದೆಹಲಿ ಜಲ ಮಂಡಳಿಯ ನ್ಯೂ ಫ್ರೆಂಡ್ಸ್ ಕಾಲನಿಯ ಮ್ಯಾನ್ ಹೋಲ್ ಗೆ ಬಲವಂತವಾಗಿ ಮೂವರನ್ನು ಇಳಿಸಲಾಯಿತು. ಒಬ್ಬ ವ್ಯಕ್ತಿ ಮರಣಿಸಿದ. ಉಳಿದಿಬ್ಬರು ಸಾವು-ಬದುಕಿನ ಹೋರಾಟ ನಡೆಸಿದ್ದಾರೆ.
ಮನುಷ್ಯರಿಂದಲೇ ಮಲ ಬಳಿಸುವ ಪದ್ಧತಿಯ ಈಗಲೂ ಆಚರಣೆಯಲ್ಲಿರುವುದನ್ನು ಭಾರತ ಸರ್ಕಾರದ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಮಂತ್ರಾಲಯ ನಿರಾಕರಿಸುತ್ತಲೇ ನಡೆದಿದೆ. ದೇಶದಲ್ಲಿ ಮನುಷ್ಯರು ಮಲ ಬಳಿಯುವಿಕೆ ಇಲ್ಲವೇ ಇಲ್ಲ ಎಂದು ಸಮಾಜ ಕಲ್ಯಾಣ ಮಂತ್ರಿ ಸಂಸತ್ತಿನಲ್ಲಿ ಮತ್ತೆ ಮತ್ತೆ ಹೇಳುತ್ತಲಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಹಿಂಸಾಚಾರ ಮತ್ತೊಂದಿಲ್ಲ ಎಂದು ಮ್ಯಾಗ್ಸೇಸೇ ಪ್ರಶಸ್ತಿ ವಿಜೇತ ಹೋರಾಟಗಾರ ಬೆಜವಾಡ ವಿಲ್ಸನ್ ಹೇಳುತ್ತಾರೆ.
ಇದನ್ನೂ ಓದಿ ನೈರ್ಮಲ್ಯ ಕಾರ್ಮಿಕರ ಬಗ್ಗೆ ವಿವಾದಿತ ಮಾತು; ಯೂಟ್ಯೂಬರ್ ಮನೆಗೆ ಮಲ ಸುರಿದು ಆಕ್ರೋಶ
ಒಳಚರಂಡಿಗಳು ಮತ್ತು ಮಲದ ಗುಂಡಿಗಳಲ್ಲಿ ಸಾಯುತ್ತಿರುವ ಕಾರ್ಮಿಕರ ನಿಜ ಸಂಖ್ಯೆಯನ್ನು ಸರ್ಕಾರ ಹೇಳುವುದೇ ಇಲ್ಲ. ಇಂತಹ ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ಯಾಕಾಗಿ ನೀಡಲಾಗುತ್ತಿದೆ? ಈ ಅತ್ಯಾಚಾರ ಮತ್ತು ಹತ್ಯೆಗಳು ಎಂದಿಗೆ ನಿಲ್ಲುತ್ತವೆ? ನಮ್ಮನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತಿರುವ ಸರ್ಕಾರವು ಜಾತಿ ದೌರ್ಜನ್ಯಗಳ ಪಾತಕಿಗಳನ್ನು ರಕ್ಷಣೆಯಲ್ಲಿ ತೊಡಗಿದೆ ಎಂದು ಅವರು ಆಕ್ರೋಶ ಪ್ರಕಟಿಸುತ್ತಾರೆ.
. . . ರೇಷ್ಮೆ ಹುಳ ಗೂಡು ಕಟ್ಟುತ್ತೆ. ಆ ಹುಳಗಳ ಬೇಯಿಸಿ ಗೂಡಿನ ನೂಲನ್ನು ಮಡಿ ಬಟ್ಟೆಗಾಗಿ ಬಳಸಲಾಗುತ್ತದೆ. ನಗರದ ಮಡಿ ಸ್ವಚ್ಛತೆಗಾಗಿ ಪೌರಕಾರ್ಮಿಕರು ಬೇಯಿಸಲ್ಪಡುತ್ತಿದ್ದಾರೆ.. . . ” ಎಂಬ ದೇವನೂರ ಮಹಾದೇವರ ಮಾತು ನೂರಕ್ಕೆ ನೂರರಷ್ಟು ಅರ್ಥವತ್ತು.

ಡಿ ಉಮಾಪತಿ
ಹಿರಿಯ ಪತ್ರಕರ್ತರು