ಹಾಲಿದ ದರ ಏರಿಕೆಯಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಇದೀಗ, ಮತ್ತೆ ದರ ಹಚ್ಚಳದ ಚರ್ಚೆ ನಡೆಯುತ್ತಿವೆ. ಹಾಲಿನ ದರದಲ್ಲಿ 3ರಿಂದ 5 ರೂ.ಗೆ ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆದಿದ್ದು 3 ರೂ. ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಹಾಲು ಮಹಾ ಮಂಡಳಿಯು ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹಾಗೂ ಅಧಿಕಾರಿಗಳು ಸಭೆ ನಡೆಸಿದ್ದಾರೆ. 5 ರೂ. ಬದಲಿಗೆ 3 ರೂ. ಹೆಚ್ಚಳಕ್ಕೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ದರ ಏರಿಕೆ ವಿಚಾರ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ, ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಸಂಪುಟ ಸಭೆಯು ದರ ಏರಿಕೆಗೆ ಸಮ್ಮತಿಸಿದರೆ, ಪ್ರತಿ ಲೀಟರ್ ಹಾಲಿಗೆ 3 ರೂ. ಏರಿಕೆ ಆಗಲಿದೆ ಎಂದು ಹೇಳಲಾಗಿದೆ.
“ಹಾಲು ಒಕ್ಕೂಟಗಳು ಮತ್ತು ಹಾಲು ಉತ್ಪಾದಕರ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಲಾಗಿದೆ. ಸಭೆಯಲ್ಲಿ ದರ ಏರಿಕೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಾರೆ” ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಬದಲಾದ ಬಳಿಕ ಎರಡು ಬಾರಿ ಹಾಲಿನ ದರ ಏರಿಕೆ ಮಾಡಲಾಗಿದೆ. 2023ರ ಆಗಸ್ಟ್‌ನಲ್ಲಿ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಲಾಗಿತ್ತು. ಆನಂತರ, 2024ರ ಜೂನ್ 26ರಲ್ಲಿ ಲೀಟರ್ ಹಾಲಿಗೆ 2 ರೂ. ಹೆಚ್ಚಿಸಿ, 50 ಎಂಎಲ್ ಹೆಚ್ಚುವರಿ ಹಾಲು ವಿತರಿಸಲಾಗುತ್ತಿತ್ತು. ಇದೀಗ, ಮತ್ತೊಮ್ಮೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ.