ಕಳೆದ ಮೂರು ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಮುಂಗಾರು ಮಳೆಯಾಗುತ್ತಿದೆ. ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ಮರಗಳು ಉರುಳಿಬಿದ್ದಿವೆ. ಭಾನುವಾರ ಮತ್ತು ಸೋಮವಾರ ಕೂಡ ಹಾಸನ, ಕೊಡಗು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಇನ್ನೂ, ಐದು ದಿನಗಳ ಕಾಲ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೇಸಿಗೆ ಬಿಸಿಲಿನ ನಡುವೆಯೇ ಅವಧಿ ಪೂರ್ವ ಮಳೆ ಆರಂಭವಾಗಿದೆ. ಈಶಾನ್ಯ ಭಾರತದಲ್ಲಿ ವಾಯುಭಾರ ಕುಸಿದಿದ್ದರಿಂದ ಮಳೆಯಾಗುತ್ತಿದೆ. ಮುಂದಿನ ಭಾನುವಾರದವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಸೋಮವಾರ ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕುಗಳಲ್ಲಿಯೂ ಬಿರುಗಾಳಿ ಬೀಸಿದ್ದು, ಉತ್ತಮ ಮಳೆಯಾಗಿದೆ.
ಈ ವರದಿ ಓದಿದ್ದೀರಾ?: ಹನಿಟ್ರ್ಯಾಪ್ | 17 ಶಾಸಕರ ಸಿ.ಡಿ ಪ್ರಕರಣ ಸಿಬಿಐಗೆ ಬಿಜೆಪಿ ಏಕೆ ಕೊಡಲಿಲ್ಲ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೇಸಿಗೆಯಲ್ಲಿ ಬೆವರಿಳಿಸುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಮಳೆಯಾಗಿದ್ದು, ವಾತಾವರಣವನ್ನು ತಣ್ಣಗೆ ಮಾಡಿದೆ. ಬೇಸಿಗೆಯ ಬಿಸಿಗೆ ತಂಪೆರೆದಿದೆ. ವಿಜಯಪುರದ ಬಬಲೇಶ್ವರ ತಾಲೂಕಿನ ಸಂಗಾಪುರದಲ್ಲಿ ಆಲಿಕಲ್ಲು ಮಳೆಯಾಗಿದೆ. ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ಗುಡುಗು, ಜೋರುಗಾಳಿಯೊಂದಿಗೆ ಮಳೆಯಾಗಿದೆ.