ಮಲ್ಪೆ ಮೀನುಪೇಟೆ ಪ್ರಕರಣ-2: ಬಡವರ ಬದುಕು ಹಿಂಡುವ ಹಿಂದುತ್ವ

Date:

Advertisements
ಬಡವರ ವಿರುದ್ದ ಸಹಬಂಧುಗಳಾದ ಬಡವರನ್ನೇ ಎತ್ತಿಕಟ್ಟಿ ತನ್ನ ಅಧಿಕಾರಸ್ಥಿಕೆ ಗಟ್ಟಿಗೊಳಿಸುವ ಫ್ಯಾಸಿಸ್ಟ್ ರಾಜಕೀಯದ ಭಯಾನಕ ವರಸೆ ಮಲ್ಪೆ ಮೀನುಪೇಟೆ ಪ್ರಕರಣದಿಂದ ಮೇಲೆದ್ದು ಬಂದಿದೆ. ಕರಾವಳಿಯುದ್ದಕ್ಕೂ ಕಣ್ಣಿಗೆ ರಾಚುತ್ತಿದೆ...

ಇಟಲಿಯ ಸಮಾಜವಾದಿ ರಾಜಕಾರಣಿ ಹಾಗೂ ಪ್ರಸಿದ್ಧ ಲೇಖಕ ಇನ್ಯಾತ್ಸಿಯೊ ಸಿಲೊನೆ, ಮುಸ್ಸಲೋನಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವನ್ನು ಪ್ರತಿರೋಧಿಸಿ ಸ್ವದೇಶದಿಂದ ಗಡಿಪಾರಾದವನು. 1933ರಲ್ಲಿ ಆತ ಬರೆದ ‘ಫೋಂತಮಾರ’ ಎಂಬ ಕಾದಂಬರಿಯು, ಇಟಲಿಯ ಫ್ಯಾಸಿಸಮ್ಮಿನ ಸ್ವರೂಪವನ್ನು ದರ್ಶನ ಮಾಡಿಸುವಂತಹ ಕೃತಿ ಆಗಿದೆ.

ಆ ಕಾಲದ ಇಟಲಿಯಲ್ಲಿ, ದೇಶದ ದಕ್ಷಿಣ ಭಾಗವು ಊಳಿಗಮಾನ್ಯ ಅಧಿಕಾರಸ್ಥಿಕೆಯ ಕೃಷಿ ಪದ್ಧತಿ ಸಮಾಜವಾಗಿದ್ದರೆ, ಉತ್ತರ ಇಟಲಿಯು ಉನ್ನತ ಕೈಗಾರಿಕೆಗಳನ್ನುಳ್ಳ ಬಂಡವಾಳಶಾಹಿ ಅಧಿಕಾರಸ್ಥಿಕೆಯ ಸಮಾಜವಾಗಿತ್ತು. ದಕ್ಷಿಣದ ಸಣ್ಣ ರೈತರು, ಗೇಣಿದಾರರು ಹಾಗೂ ಕೃಷಿ ಕೂಲಿಗಾರರು ಆಧುನಿಕ ಶಿಕ್ಷಣವಿಲ್ಲದ, ಎಷ್ಟು ದುಡಿದರೂ ಹೊಟ್ಟೆ ಬಟ್ಟೆಗಾಗದ ಬಡವರು; ಅವರ ಅಳಲನ್ನು ಜಮೀನ್ದಾರರು, ಧರ್ಮಗುರುಗಳು ನಿಷ್ಕರುಣೆಯಿಂದ ನಿರ್ಲಕ್ಷಿಸಿ ಅವರ ಬೆವರಿನ ದುಡಿಮೆಯಿಂದ ತಮ್ಮ ಸಿರಿ ಸಂಚಯದಲ್ಲಿ ತೊಡಗಿದವರು. ಉತ್ತರದ ಕೈಗಾರಿಕಾ ನಗರಗಳಲ್ಲಿ ಬಂಡವಾಳಶಾಹಿ ಒಡೆಯರು ಕಾರ್ಮಿಕರನ್ನು ಶೋಷಿಸಿ ತಮ್ಮ ಆಸ್ತಿ ಸಂಚಯದಲ್ಲಿ ನಿರತರಾದವರು. ಉತ್ತರದ ನಗರಗಳ ಕಾರ್ಮಿಕರು ತಮ್ಮ ವರ್ಗಪ್ರಜ್ಞೆಯಿಂದ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡು ಬಂಡವಾಳಶಾಹಿ ಮಾಲೀಕರ ವಿರುದ್ಧ ಪ್ರಬಲ ಹೋರಾಟಕ್ಕೆ ಸನ್ನದ್ಧರಾದ ಹೊತ್ತಲ್ಲಿ, ದಕ್ಷಿಣದ ಬಡಜನ ಬವಣೆ ತಾಳಲಾರದೆ ಉದ್ಯೋಗ ಅರಸಿ ಉತ್ತರ ನಗರಗಳಿಗೆ ವಲಸೆ ಬರತೊಡಗುವರು. ಹಾಗೆ ವಲಸೆ ಬಂದ ಬಡ ಜನರಿಗೆ ಯಾವ ಮಾನವಂತ ಉದ್ಯೋಗವೂ ದಕ್ಕುತ್ತಿರಲಿಲ್ಲ; ಅವರಿಗೆ ಮುಕ್ತವಾಗಿ ದೊರೆಯುತ್ತಿದ್ದ ಒಂದೇ ಉದ್ಯೋಗವೆಂದರೆ, ಸಂಘಟಿತ ಕಾರ್ಮಿಕ ಸಂಘಗಳನ್ನು ಒಳಹೊಕ್ಕು ಒಡೆಯುವ, ಕಾರ್ಮಿಕ ಮುಂದಾಳುಗಳನ್ನು ಪತ್ತೆಹಚ್ಚಿ ಕೊಲೆ ಮಾಡುವ ಹಂತಕರ ಕೆಲಸ. ಉಳಿವಿಗಾಗಿ ದಕ್ಷಿಣದ ಕಾರ್ಮಿಕರು ಆ ಕೆಲಸದಲ್ಲಿ ತೊಡಗುವರು; ಇವರಂತೆ ಕೈಗಾರಿಕಾ ಕಾರ್ಮಿಕರಾಗುವ ಕುಶಲತೆ ಇಲ್ಲದ ನಗರ ಪ್ರದೇಶಗಳ ಬಡವರೂ ಈ ಹಂತಕ ಪಡೆ ಸೇರಿ ಹೊಟ್ಟೆ ಹೊರೆದುಕೊಳ್ಳುವರು. ಕಾರ್ಮಿಕ ಸಂಘಟನೆಗಳ ಜೊತೆ ಯಾವ ನಂಟೂ ಇಲ್ಲದ, ತಮ್ಮ ಬದುಕಿನ ಸ್ಥಿತಿಗತಿಗೆ ಯಾರು ಕಾರಣವೆಂಬ ಅರಿವಿರದ ಬಡಜನರನ್ನು ಮುಸ್ಸಲೋನಿ ತನ್ನ ಫ್ಯಾಸಿಸ್ಟ್ ಪಡೆಯ ಕಾಲಾಳುಗಳನ್ನಾಗಿ ಸಂಘಟಿಸಿ (ಅವರನ್ನು ಬ್ಲಾಕ್ ಶರ್ಟ್ಸ್ ಪಡೆ ಎನ್ನುವರು) ತನ್ನ ದುಂಡಾವರ್ತಿ ಚಟುವಟಿಕೆಗಳನ್ನು ಬೆಳೆಸಿ ಫ್ಯಾಸಿಸ್ಟ್ ಸರ್ವಾಧಿಕಾರ ಸ್ಥಾಪಿಸಿದನು.

ಇನ್ಯಾತ್ಸಿಯೊ ಸಿಲೊನೆಯ ‘ಫೊಂತಮಾರ’ ಅಂತಹ ಒಂದು ಕಾಲ್ಪನಿಕ ಹಳ್ಳಿ. ಆ ಹಳ್ಳಿಯ ಬಡಜನರ ಬವಣೆ ಹಾಗೂ ವಲಸಿಗರಾಗಿ ತಮ್ಮ ದೈನೇಸಿ ಸ್ಥಿತಿಗೆ ಕಾರಣರಾದ ಅಧಿಕಾರಸ್ಥರ ಕಾಲಾಳುಗಳಾಗಿ, ತಮ್ಮ ವಿಮೋಚನೆಯ ನಿಜ ಬಂಧುಗಳಾದ ಕಾರ್ಮಿಕರನ್ನು ಕೊಲ್ಲುವ ಕಾಯಕ ನಿರತರಾಗುವ ಕ್ರೌರ್ಯವನ್ನು ‘ಫೊಂತಮಾರ’ ಕಾದಂಬರಿ ನಿರೂಪಿಸುತ್ತದೆ. ಬಡವರ ವಿರುದ್ದ ಸಹಬಂಧುಗಳಾದ ಬಡವರನ್ನೇ ಎತ್ತಿಕಟ್ಟಿ ತನ್ನ ಅಧಿಕಾರಸ್ಥಿಕೆ ಗಟ್ಟಿಗೊಳಿಸುವ ಫ್ಯಾಸಿಸ್ಟ್ ರಾಜಕೀಯದ ಭಯಾನಕ ವರಸೆಗಳನ್ನು ‘ಫೊಂತಮಾರ’ದ ಹಾಗೆ ತೋರಿದ ಸಾಹಿತ್ಯ ಕೃತಿಗಳು ಅಪರೂಪ.

Advertisements
ಮಲ್ಪೆ3 1

ಕರಾವಳಿಯ ಊರುಗಳು ಇಂದು ಅಂತಹ ‘ಫೊಂತಮಾರ’ಗಳಾಗಿರುವ ಬಗೆ ಅರ್ಥವಾದರೆ, ಹಿಂದುತ್ವವಾದಿ ರಾಜಕೀಯ ಸ್ವರೂಪವು ಅರ್ಥವಾಗುತ್ತದೆ. ಮಾರ್ಚ್ 18ರಂದು ಮಲ್ಪೆಯ ಮೀನುಗಾರಿಕೆ ಬಂದರಿನಲ್ಲಿ ಘಟ್ಟದಾಚೆಗಿಂದ ಹೊಟ್ಟೆಪಾಡಿಗೆ ವಲಸೆ ಬಂದ ದಲಿತ ಮಹಿಳೆಯ ಮೇಲೆ, ಅವರಿಗಿಂತ ಹೆಚ್ಚೇನೂ ಸ್ಥಿತಿವಂತರಲ್ಲದ ಮೀನುಗಾರ ಮಹಿಳೆಯರು ಹಲ್ಲೆ ನಡೆಸಿದ ವಿದ್ಯಮಾನದ ವಿವರಗಳನ್ನು ಮೊದಲ ಭಾಗದಲ್ಲಿ ನಿರೂಪಿಸಲಾಗಿತ್ತು. ಆ ನಂತರ ಘಟನೆಗಳು ಅನಾವರಣ ಮಾಡಿರುವ ಕರಾವಳಿಯ ‘ಫೊಂತಮಾರ’ ಲಕ್ಷಣವನ್ನು ಸ್ವಲ್ಪ ನೋಡಬಹುದು.

ಇದನ್ನು ಓದಿದ್ದೀರಾ?: ದೆಹಲಿ ನ್ಯಾಯಮೂರ್ತಿ ಬಂಗಲೆಯಲ್ಲಿ ಭರ್ತಿ ಚೀಲಗಳ ನಗದಿಗೆ ಬೆಂಕಿ ಬಿದ್ದ ಕತೆಯೇನು?

ಸಮುದ್ರಕ್ಕಿಳಿದು ಮೀನು ಹಿಡಿದು, ಮಾರಾಟಕ್ಕೆ ಪೇಟೆಗೆ ಸಾಗಿಸಿ, ಮಾರಾಟ ಮಾಡುವ ಕಾಯಕದಲ್ಲಿ ಅನೇಕ ಜಾತಿ-ಮತಗಳ ಜನರು ಭಾಗಿಯಾಗಿರುತ್ತಾರೆ. ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕವಾಗಿ ಈ ಕಾಯಕದಲ್ಲಿ ತೊಡಗಿರುವವರು ಕರಾವಳಿಯ ಮೊಗವೀರರು. ಆದರೆ, ಈಗ ಯಾಂತ್ರಿಕೃತ ಬೋಟುಗಳು, ಆಳ ಸಮುದ್ರ ಮೀನುಗಾರಿಕೆ ಮಾಡುವ ಉದ್ಯಮಪತಿಗಳೂ ಮೀನು ಸಂಗ್ರಹ ವ್ಯವಹಾರದಲ್ಲಿ ತೊಡಗಿದ್ದಾರೆ. ಸಮುದ್ರಕ್ಕಿಳಿದು ಮೀನು ಸಂಗ್ರಹಿಸುವವರು ಮೊಗವೀರರು, ದಡಕ್ಕೆ ತಂದ ಮೀನುಗಳನ್ನು ಸಗಟಾಗಿ ಖರೀದಿಸುವವರು ಮುಸ್ಲಿಮರು ಹಾಗೂ ಅವರಿಂದ ಬಿಡಿ ಮಾರಾಟಕ್ಕೆ ಖರೀದಿಸಿ ಮಾರುಕಟ್ಟೆಯಲ್ಲಿ ಮಾರುವವರು ಮೊಗವೀರ ಮಹಿಳೆಯರು ಎನ್ನುವ ಮೀನುಗಾರಿಕೆ ವ್ಯವಹಾರದ ಸಮೀಕರಣವಿತ್ತು. ಈ ಸಮೀಕರಣವನ್ನು ಅನುಸರಿಸಿ, ಮುಸ್ಲಿಮರು ಹಾಗೂ ಮೊಗವೀರ ಸಮುದಾಯದ ಮಧ್ಯೆ ವೈಷಮ್ಯ ಹುಟ್ಟು ಹಾಕುವ ಕೆಲಸವನ್ನು ಸಂಘಪರಿವಾರವು ಯೋಜಿತವಾಗಿ ದಶಕಗಳ ಕಾಲ ನಡೆಸಿತು; ಆ ಮೂಲಕ ಮೊಗವೀರ ಸಮುದಾಯವನ್ನು ತನ್ನ ಹಿಂದುತ್ವವಾದಿ ರಾಜಕೀಯ ಕಾಲಾಳುಗಳನ್ನಾಗಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದೆ. ಅಂತಾಗಿ ಇಂದು ಮೊಗವೀರ ಸಮುದಾಯದ ಮೇಲೆ ಹಿಂದುತ್ವವಾದ ಅಧಿಕಾರ ಸ್ಥಾಪಿಸಿದೆ.

ಇವತ್ತಿನ ಕಾಲದಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ಮೊಗವೀರರ ಪಾಲು ಹೆಚ್ಚಿದ್ದರೂ, ದೈಹಿಕ ಹೊರೆಯ ಕೆಲಸಗಳಿಗೆ ರಾಜ್ಯದ ಘಟ್ಟದಾಚೆಯಿಂದ ಹಾಗೂ ಹೊರ ರಾಜ್ಯಗಳಿಂದ ಬಂದ ವಲಸಿಗರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹಲವು ಸಾರಿ, ಮೀನು ವ್ಯಾಪಾರದಲ್ಲಿ ಬೇರೆ ಸಮುದಾಯಗಳು ನಿರತವಾದಾಗ, ಮೊಗವೀರರು ತಮ್ಮ ಕಸುಬಿಗೆ ಸ್ಪರ್ಧೆ ಆದೀತೆಂದು ಸಮುದಾಯದ ಹೊರಗಿನವರ ಜೊತೆ ಜಗಳ ತೆಗೆಯುವುದು ಹಾಗೂ ವ್ಯಾಪಾರಕ್ಕೆ ಇಳಿಯದಂತೆ ಒತ್ತಡ ಹೇರುವುದು ಜಿಲ್ಲೆಯಾದ್ಯಂತ ನಡೆದಿರುವ ಉದಾಹರಣೆಗಳಿವೆ. ಕಸುಬಿನ ಜ್ಞಾನವಿರುವವರ ಪ್ರಕಾರ ಸಂಗ್ರಹಿತ ಮೀನುಗಳನ್ನು ಹಡಗುಗಳಿಂದ ಮಾರುಕಟ್ಟೆಗೆ ಸಾಗಿಸುವ ವೇಳೆ ಎರಡು ಬಗೆಯ ಅಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ: 1) ಸಗಟು ಸರಕನ್ನೇ ಬಂದರಿನ ತೂಕ ಹಾಗೂ ವಿತರಣಾ ಮಾರುಕಟ್ಟೆಗೆ ಬರದಂತೆ ನೋಡಿಕೊಂಡು ಬಿಡಿ ವ್ಯಾಪಾರಕ್ಕೆ ಮಾರಾಟ ಮಾಡುವುದು ದೊಡ್ಡದಾದ ಪರಿಚಿತ ಅಕ್ರಮ. 2) ಹಡಗಿನಿಂದ ಮಾರುಕಟ್ಟೆಗೆ ಸಾಗಿಸುವಾಗ, ಕೆಲವು ಬುಟ್ಟಿಗಳನ್ನು ಬಚ್ಚಿಟ್ಟು ಕೂಲಿಯವರು ಚಿಲ್ಲರೆ ಮಾರಾಟ ಮಾಡುವುದು ಅಥವಾ ಸ್ವಂತದ ಹೊಟ್ಟೆಪಾಡಿಗೆ ಒಯ್ಯುವುದು ಎರಡನೇ ಬಗೆಯ ಪರಿಚಿತ ಅಕ್ರಮ. ಎರಡೂ ಬಗೆಯ ಅಕ್ರಮಗಳೂ ಸಮುದ್ರಕ್ಕಿಳಿದು ಮೀನು ಸಂಗ್ರಹಿಸಿ ತಂದು ಮಾರಾಟಕ್ಕೆ ಬಂದರು ಮಾರುಕಟ್ಟೆಗೆ ತಲುಪಿಸುವ ಮೀನುಗಾರರಿಗೆ ನಷ್ಟದ ಬಾಬತ್ತೇ ಸರಿ. ಮೊದಲ ಬಗೆಯ ಅಕ್ರಮವು ಕಾಲದಂಧೆಯಾಗಿದ್ದು ಮೀನುಗಾರರಿಗೆ ಭಾರಿ ನಷ್ಟವನ್ನು ಉಂಟು ಮಾಡುವಂತಹುದು; ಎರಡನೇಯದು ಎಲ್ಲ ಬಗೆಯ ಸಗಟು ಆಹಾರ ಪದಾರ್ಥ ಸಾಗಣಿಕೆಯಲ್ಲಿ ಭಾರ ಹೊರುವ ಕೂಲಿಗಾರರು ಮಾಡುವ ಹೊಟ್ಟೆಪಾಡಿನ ಅಕ್ರಮ. ಎರಡೂ ಗುಣ-ಪ್ರಮಾಣದಲ್ಲಿ ಭಿನ್ನವಾಗಿದ್ದರೂ, ಮೀನುಗಾರರ ಜೇಬಿಗೆ ಕತ್ತರಿ ಬೀಳುವುದರಿಂದ, ಅವರ ಆಕ್ರೋಶಕ್ಕೆ ಕಾರಣವಿದೆ.

ಲೌಕಿಕ ಕಾಯಕದಲ್ಲಿ ಈ ಬಗೆಯ ಲೌಕಿಕ ಅಕ್ರಮಗಳನ್ನು ಮೀನುಗಾರರು ಸಂಘಟಿತವಾಗಿ ನಿವಾರಿಸಿಕೊಳ್ಳುವುದು ನ್ಯಾಯಯುತವೇ. ಆದರೆ, ಆ ನ್ಯಾಯಿಕ ಆಚರಣೆಗಳು ಸಾಂವಿಧಾನಿಕ ನ್ಯಾಯಿಕ ಚೌಕಟ್ಟಿನೊಳಗೆ ಇರದಿದ್ದರೆ, ಅದು ಬಲವಾದ ಅಧಿಕಾರಸ್ಥರ ದುಂಡಾವರ್ತಿ ನಡಾವಳಿಗಳ ಕಾರಾಸ್ಥಾನವಾಗುತ್ತದೆ. ಮೀನುಗಾರರ ಸಂಘವು ಇಂತಹ ಅಕ್ರಮಗಳ ನಿಯಂತ್ರಣದಲ್ಲಿ ಮಧ್ಯಸ್ಥಿಕೆ ವಹಿಸುವುದು ಅಪರಾಧವಲ್ಲ; ಪರಸ್ಪರರ ಸ್ಥಿತಿಯನ್ನು ಅರ್ಥ ಮಾಡಿಸುವ, ಹೊಟ್ಟೆಪಾಡಿಗೆ ಮಾಡುವ ಅಕ್ರಮ ಕೆಲಸಗಳ ಬಗ್ಗೆ ತಿಳಿದು ಅವುಗಳಿಗೆ ತಮ್ಮ ಮಿತಿಯಲ್ಲಿ ಪರಿಹಾರ ಹುಡುಕಿಕೊಳ್ಳುವ, ದೌರ್ಜನ್ಯ ದಬ್ಬಾಳಿಕೆಗಳಿಗೆ ಕೈ ಹಾಕದ ಹಾಗೆ ದುಡಿಮೆಗಾರರ ಸಂಘಗಳು ಮಧ್ಯಸ್ಥ ಕೆ ವಹಿಸಿ ಗೌರವ ಸೌಹಾರ್ದ ವಾತಾವರಣ ರೂಢಿಸುವುದು ಸಾಧ್ಯವಿದೆ; ಇದು ದೇಶದ ಸಂವಿಧಾನವು ನಾಗರಿಕರಿಂದ ಬಯಸುವ ನಡವಳಿಕೆ ಕೂಡ ಆಗಿದೆ.

ಆದರೆ ಮಲ್ಪೆ ಮೀನುಗಾರರ ಸಂಘದ ಮಧ್ಯಸ್ಥಿಕೆಯ ವಿಧಾನವು ‘ತಾನೇ ಆರೋಪಿಸಿ, ತಾನೇ ಶಿಕ್ಷಿಸುವ’ ದುಂಡಾವರ್ತಿ ನಡುವಳಿಕೆಯಾಗಿದ್ದರೆ, ಅದು ಸಂವಿಧಾನಿಕ ಕಾನೂನಿಗೆ ವ್ಯತಿರಿಕ್ತವೂ ಮತ್ತು ಶಿಕ್ಷಾರ್ಹ ಅಪರಾಧವೂ ಆಗಿರುತ್ತದೆ. ಬಹುಪಾಲು ಮೀನುಗಾರರು ಶ್ರಮದಾಯಕ ಕೆಲಸ ಮಾಡಿ ಹೊಟ್ಟೆ ಬಟ್ಟೆ ಹೊಂದಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಇರುವವರು ಸರಿ. ಆದರೆ ಮಲ್ಪೆ ಪ್ರಕರಣದಲ್ಲಿ ಮೀನುಗಾರರ ಸಂಘದ ನಡುವಳಿಕೆ ಗಮನಿಸಿದರೆ, ಅದು ‘ಹಿಂದುತ್ವವಾದಿ ಸಂವಿಧಾನ ದುಂಡಾವರ್ತಿ’ಯ ನ್ಯಾಯ ವ್ಯವಸ್ಥೆಗೆ ತೆತ್ತುಕೊಂಡಿರುವುದು ವಿಧಿತವಾಗಿಯೇ ಇದೆ.

ಮಾರ್ಚ್ 18ರಂದು ಕಾನೂನುಬಾಹಿರವಾದ ಹಲ್ಲೆ ನಡೆದ ನಂತರದಲ್ಲಿ, ಮೀನುಗಾರರ ಸಂಘವು ಮಧ್ಯಪ್ರವೇಶಿಸಿದೆ; ಹಲ್ಲೆಗೊಳಗಾದ ಮಹಿಳೆಯು ‘ಕಳ್ಳತನದ ಅಪರಾಧ ಎಸಗಿದ್ದಾಳೆ’ ಹಾಗೂ ಹಲ್ಲೆ ಮಾಡಿದವರು ‘ಆದ ನಷ್ಟದ ಸಿಟ್ಟಿಂದ’ ನೀಡಬೇಕಾದ ಶಿಕ್ಷೆ ನೀಡಿದ್ದಾರೆ ಎಂಬ ಸಂಘದ ತೀರ್ಮಾನವೇ, ಅದರ ದುಂಡಾವರ್ತಿ ನ್ಯಾಯ ವಿಧಾನದ ಪರ ಪಕ್ಷಪಾತಿ ಎನ್ನುವುದನ್ನು ತೋರುತ್ತದೆ. ಇತ್ತೀಚಿಗೆ ಸಾರ್ವಜನಿಕವಾಗಿ ನಡೆದ ಹಲ್ಲೆಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವುದು ಸಾಮಾನ್ಯವಾಗಿದೆ, ರೂಢಿ ವ್ಯಾಪಕವಾಗಿದೆ. ಈ ಕಾರಣಕ್ಕೆ ಇರಬೇಕು, ಮಲ್ಪೆ ಪೊಲೀಸು ಠಾಣೆಗೆ ಎರಡೂ ಕಡೆಯವರನ್ನೂ ಕರೆದುಕೊಂಡು ಹೋಗಿ ಇಬ್ಬರಿಂದಲೂ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು, ಅದಕ್ಕೆ ಠಾಣಾಧಿಕಾರಿಯಿಂದ ಹಿಂಬರಹ ಬರೆಸಿಕೊಂಡು ‘ರಾಜಿ ಪಂಚಾಯ್ತಿಕೆಯಲ್ಲಿ ಕೇಸು ಬಗೆಹರಿಸುವ’ ವಿಧಾನವನ್ನು ಮೀನುಗಾರರ ಸಂಘವು ಅನುಸರಿಸಿದೆ! ‘ಆನೆ ಕದ್ದರೂ ಕಳುವೆ, ಅಡಕೆ ಕದ್ದರೂ ಕಳುವೆ’ ಎಂಬ ರೂಢಿಗತ ನಂಬಿಕೆಯನ್ನು ಸಾಂವಿಧಾನಿಕ ಕಾನೂನು ಒಪ್ಪುತ್ತದೆ; ಆದರೆ ಕಾನೂನು ಕಳುವು ನಡೆದಿದ್ದರ ಬಗ್ಗೆ ಸಾಕ್ಷ್ಯಾಧಾರ ಕೇಳುತ್ತದೆ; ಕಳುವುಗಳ ಸನ್ನಿವೇಶವನ್ನು ಪರಿಶೀಲಿಸುತ್ತದೆ; ದೂರುದಾರರು ಹಾಗೂ ಆರೋಪಿಗಳ ವಾದವನ್ನು ಕೇಳುತ್ತದೆ; ಕಳುವು ನಡೆದಿದೆ ಎಂದು ಸಾಬೀತು ಪಡಿಸಿಕೊಂಡ ನಂತರ ಕಳುವಿನ ಗುಣ, ಪ್ರಮಾಣ, ಪರಿಣಾಮಗಳನ್ನೂ ಪರಿಶೀಲಿಸುತ್ತದೆ; ನಂತರ ತಕ್ಕುದಾದ ಪ್ರಮಾಣದ ಶಿಕ್ಷೆಯನ್ನು ಘೋಷಿಸುತ್ತದೆ. ಇಲ್ಲಿ ಪೊಲೀಸು ಠಾಣೆಯ ಕೆಲಸ ದೂರು ದಾಖಲಿಸಿಕೊಳ್ಳುವುದು, ಕಾನೂನಿನ ಕ್ರಮ ಅಗತ್ಯವಿದ್ದರೆ ಆರೋಪಿಗಳನ್ನು ಬಂಧಿಸುವುದು ಮಾತ್ರವಾಗಿರುತ್ತದೆ. ವಾದ-ಪ್ರತಿವಾದಗಳನ್ನು ಪರಿಶೀಲಿಸಿ ತಕ್ಕ ಶಿಕ್ಷೆ ವಿಧಿಸುವುದು ನ್ಯಾಯಾಲಯದ ಕೆಲಸ.

ಮಲ್ಪೆ 2

ಆದರೆ ಮೀನುಗಾರರ ಸಂಘಕ್ಕೆ ಈ ನ್ಯಾಯ ಕ್ರಮ ಒಪ್ಪಿತವಲ್ಲ; ಹಲ್ಲೆ ನಡೆಸಿದವರು ಹಲ್ಲೆಗೊಳಗಾದವರನ್ನು ತಪ್ಪಿತಸ್ಥರು ಎಂದು ನಿರ್ಣಯಿಸಿ, ತಪ್ಪಿನ ಸ್ವರೂಪ, ಪ್ರಮಾಣವನ್ನು ನಿರ್ಧರಿಸಿ, ನೀಡಬೇಕಾದ ಶಿಕ್ಷೆಯನ್ನು ತಮಗೆ ಸರಿಕಂಡಂತೆ ನೀಡುವುದನ್ನು ಸಂಘವು ಸರಿಯಾದ ಕ್ರಮವೆಂದು ಭಾವಿಸುತ್ತದೆ. ಆದರೆ ಸಂಘಕ್ಕೆ ದೇಶದಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬ ವಾಸ್ತವದ ಅರಿವಿದೆ ಹಾಗೂ ಅದು ತನ್ನ ಕ್ರಮ ಕೈಗೊಳ್ಳಬಹುದಾದ ಸಾಧ್ಯತೆಯ ಅರಿವೂ ಇದೆ. ಮುಂಜಾಗ್ರತ ಕ್ರಮವಾಗಿ, ತನ್ನ ಪ್ರಭಾವ ಬೀರಬಹುದಾದ ಕಾನೂನಿನ ತಳ ಹಂತದಲ್ಲಿ, ಸಾಂವಿಧಾನಿಕ ಕಾನೂನಿಗೆ ವಿರುದ್ಧವಾಗಿಯಾದರೂ ಸರಿ, ಪ್ರಕರಣ ಮುಕ್ತಾಯ ಮಾಡುವ ಜಾಣ್ಮೆಯೂ ಸಂಘಕ್ಕೆ ಇದೆ. ಆದರೆ, ಚಿತ್ರೀಕರಣಗೊಂಡ ದೃಶ್ಯಗಳ ಪರಿಣಾಮವನ್ನು ಸಂಘ ಊಹಿಸಿದಂತಿಲ್ಲ. ಅದು ರಾಜ್ಯಡಳಿತದ ಮೇಲು ಹಂತದವರೆಗೂ ತಲುಪಿ, ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂಬ ಆದೇಶವು ಜಿಲ್ಲಾ ಕಾನೂನು ವ್ಯವಸ್ಥೆಗೆ ಬಂದ ನಂತರ, ಮಲ್ಪೆ ಠಾಣೆಯಲ್ಲಿ ನಡೆದ ಅಕ್ರಮ ನ್ಯಾಯ ತೀರ್ಮಾನವು ಬಿದ್ದು ಹೋಗಿದೆ. ಇಷ್ಟಾದ ನಂತರ ಮೀನುಗಾರರ ಸಂಘವು ತನ್ನ ನೈಜ ‘ಹಿಂದುತ್ವವಾದಿ ರಾಜಕೀಯ’ ವರಸೆಗಳನ್ನು ಪ್ರಾರಂಭಿಸಿದೆ; ಸಂಘದ ಅಧಿಕಾರ ಸೂತ್ರ ಹಿಡಿದಿರುವ ಹಿಂದುತ್ವವಾದಿ ನಾಯಕರ ಮಾರ್ಗದರ್ಶನದಲ್ಲಿ, ‘ಹಲ್ಲೆ ನಡೆಸಿದವರು ಅನ್ಯಾಯಕ್ಕೆ ತುತ್ತಾಗಿರುವ ಅಮಾಯಕ ಬಡ ಮೀನುಗಾರರು; ರಾಜ್ಯಾಡಳಿತವು ಅನ್ಯಾಯಯುತವಾಗಿ ಅವರನ್ನು ಶಿಕ್ಷಿಸುವ ಕೃತ್ಯ ಎಸಗಿದೆ; ಇಡಿ ವಿದ್ಯಮಾನಕ್ಕೆ ರಾಜ್ಯಾಡಳಿತವೇ ಹೊಣೆ’ ಎಂಬ ಪ್ರಚಾರಕ್ಕೆ ಸಂಘವು ಇಳಿದಿದೆ. ಇದೆಲ್ಲ, ಸಂಘವು ಹೊರಡಿಸಿದ ಸಾರ್ವಜನಿಕ ಹೇಳಿಕೆ ಹಾಗೂ ಮಾರ್ಚ್ 22ರಂದು ನಡೆಸಿದ ಪ್ರತಿಭಟನಾ ಸಭೆಯ ನಡಾವಳಿಗಳಲ್ಲಿ ನಿಚ್ಚಳವಾಗಿ ಕಂಡು ಬಂದಿದೆ.

ಇದನ್ನು ಓದಿದ್ದೀರಾ?: ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ

ಮಾರ್ಚ್ 22ರಂದು ನಡೆದ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಹಿಂದುತ್ವವಾದಿ ರಾಜಕೀಯ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇಡೀ ಸಭೆಯ ದನಿಯು ಹಿಂದುತ್ವವಾದಿ ಪೌರುಷ ಪ್ರದರ್ಶನವಾಗುತ್ತದೆ ಎಂಬುದರಲ್ಲಿ ಯಾರಿಗಾದರೂ ಸಂದೇಹವಿದ್ದರೆ, ಅದನ್ನೂ ರಾಜಾರೋಷವಾಗಿಯೇ ತೊಡೆದು ಹಾಕಲಾಯಿತು. ವೇದಿಕೆಯ ಕಲಾಪಗಳ ಮುಖ್ಯಾಂಶ ಗಮನಿಸಿ:

1) ಪ್ರಮೋದ್ ಮಧ್ವರಾಜ್ ದೊಡ್ಡ ಮೀನು ಕೈಗಾರಿಕೋದ್ಯಮಿ. ಕಾಂಗ್ರೆಸ್ ಪಕ್ಷದಿಂದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಯಾಬಿನೆಟ್ ಸಚಿವರೂ ಆಗಿದ್ದವರು. 2018ರಲ್ಲಿ ಶಾಸನಸಭೆ ಚುನಾವಣೆಯಲ್ಲಿ ಸೋತ ನಂತರ, 2022ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದವರು. ಆ ಪಕ್ಷದಲ್ಲಿ ಯಾವ ಅಧಿಕಾರ ಸ್ಥಾನವೂ ಇದುವರೆಗೆ ಅವರಿಗೆ ದೊರೆತಿಲ್ಲ. ಇಂಥಾ ವ್ಯಕ್ತಿಯು 22ರ ಸಭೆಯಲ್ಲಿ, ಹಲ್ಲೆ ವಿದ್ಯಮಾನದ ಬಗ್ಗೆ ಗಮನ ಹರಿಸಿ ಶೀಘ್ರ ಕಾನೂನು ಕ್ರಮ ಜರುಗಿಸುವಂತೆ ಆದೇಶ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಹರಿಹಾಯ್ದರು; ಕಟ್ಟುನಿಟ್ಟಾಗಿ ಕಾನೂನುಕ್ರಮ ಜರುಗಿಸಿದ ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿಯವರನ್ನು ಏಕವಚನದಲ್ಲಿ ವ್ಯಕ್ತಿಗತ ನಿಂದನೆ ಮಾಡಿದರು ಮತ್ತು ಜಿಲ್ಲೆಯಲ್ಲಿ ಇರಗೊಡುವುದಿಲ್ಲವೆಂಬ ಬೆದರಿಕೆ ಒಡ್ಡಿದರು. ಸಂವಿಧಾನಬದ್ದವಾಗಿ ಶಾಸಕ, ಸಚಿವರಾಗಿ ಅಧಿಕಾರ ಅನುಭವಿಸಿದ ಈ ವ್ಯಕ್ತಿಯು ‘ನಿಮ್ಮ ಮನೆಯಲ್ಲಿ‌ ಕಳ್ಳತನವಾದರೆ ಪೊಲೀಸರು ಬರುವವರೆಗೆ ಕಾಯುತ್ತೀರಾ! ಕಟ್ಟಿ ಹಾಕಬೇಕು. ಹಾಗೇ ಮಾಡಿದ್ದಾರೆ! ಕಟ್ಟಿ ಹಾಕಿದ್ದು ಒಬ್ಬ ಕಳ್ಳಿಯನ್ನು! ಅದು ತಪ್ಪಾ! ಆಕೆಗೆ ಏನು ಮಾಡಿದ್ದಾರೆ! ಕೆನೆಗೆ ಹೊಡೆದಿದ್ದಾರೆ ಅಷ್ಟೇ! ಏನು ಚಾಕುವಿನಿಂದ ಕೊಯ್ದಿದ್ದಾರಾ! ತಲವಾರಿಂದ ಕಡಿದಿದ್ದಾರಾ! ಅನ್ಯಾಯಗಳಿಂದ ನೊಂದ ಬಡ ಮೀನುಗಾರರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ಹಾಕಿ ಬೆದರಿಸುತ್ತೀರಾ! ನಾವು ಇದನ್ನು ಸಹಿಸುವುದಿಲ್ಲ!’ ಎಂದು ನೆರೆದ ಜನರನ್ನು ಉದ್ರೇಕಿಸುವ ಉತ್ಸಾಹದಲ್ಲಿ ಮಾತನಾಡಿದರು.

2) ಮಾಜಿ ಶಾಸಕ ರಘುಪತಿ ಭಟ್ಟ ಹಾಗೂ ಹಾಲಿ ಶಾಸಕ ಯಶಪಾಲ ಸುವರ್ಣ ಅವರುಗಳೂ ಇಡಿ ಪ್ರಕರಣವನ್ನು ರಾಜ್ಯದಲ್ಲಿ ಅಧಿಕಾರವಿರುವ ಕಾಂಗ್ರೆಸ್ ಪಕ್ಷವು ಮೀನುಗಾರರ ಮೇಲೆ ದಬ್ಬಾಳಿಕೆ ಕ್ರಮವಾಗಿ ಉಪಯೋಗಿಸುತ್ತಿದೆ ಎಂದು ಆರೋಪಿಸಿದರು.

3) ಕಾಂಗ್ರೆಸ್ಸಿನ ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ಸ್ವತಃ ಮೊಗವೀರ ಸಮುದಾಯಕ್ಕೆ ಸೇರಿದವರು. ಅವರು, ವೇದಿಕೆಯನ್ನು ರಾಜಕೀಯಕ್ಕೆ ನೆಪವಾಗಿಸಿಕೊಳ್ಳಕೂಡದು; ಕಾನೂನುರೀತ್ಯಾ ಶಾಂತಿಯುತ ನ್ಯಾಯ ಕ್ರಮಕ್ಕೆ ಆಗ್ರಹಿಸೋಣ ಎಂದಾಕ್ಷಣವೇ, ಸಭೆಯಲ್ಲಿದ್ದ ಗುಂಪೊಂದು ಆಕ್ರಮಣಶೀಲವಾಗಿ ವೇದಿಕೆಯ ಕಡೆ ನುಗ್ಗಿ ಗಲಭೆ ಎಬ್ಬಿಸಿತು; ಇವರನ್ನೆಲ್ಲ ಯಾಕೆ ಕರೆದಿದ್ದೀರಿ, ಒದ್ದೋಡಿಸಿ ಎಂದು ಬೊಬ್ಬೆ ಹಾಕಿದರು.

4) ಮಾರ್ಚ್ 19ರಂದು ದ.ಸಂ.ಸ.(ಅಂಬೇಡ್ಕರ್ ವಾದ)ದ ಜಿಲ್ಲಾ ಸಂಚಾಲಕ ಮಂಜುನಾಥ್ ಗಿಳಿಯಾರು, ಮೈಸೂರು ವಿಭಾಗ ಸಂಚಾಲಕ ಶ್ಯಾಮರಾಜ ಬಿರ್ತಿ ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ಇವರುಗಳು ಮಲ್ಪೆ ಠಾಣೆಗೆ ಹೋಗಿ ಪ್ರಕರಣದ ಕುರಿತು ವಿಚಾರಿಸಿದ್ದರು. ಸೂಕ್ತ ಕಾನೂನಿನ ಅನ್ವಯ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದರು. 22ರ ಪ್ರತಿಭಟನೆಯಲ್ಲಿ ಹಿಂದುತ್ವವಾದಿ ಸಂಘಟನೆಯ ನಾಯಕರೊಬ್ಬರು ಈ ಮೂವರ ಹೆಸರೆತ್ತಿ ಹಾರಿ ಹಾಯ್ದರು; ಎಷ್ಟುದ್ದ ದೂರು ಕೊಡ್ತಿರೋ ಕೊಡಿ ನೋಡ್ಕೋತೇವೆ ಎಂದು ಬೆದರಿಕೆ ಹಾಕಿದರು. ಮತ್ತೊಬ್ಬ ನಾಯಕರು (ಹಿಂದಿನ ಭಾಗದಲ್ಲಿ ವಿವರಿಸಿರುವ) ಗಂಗೊಳ್ಳಿ ಪ್ರಕರಣ ನೆನಪಿಸಿ, ಅಂದಿನಂತೇ ಈಗಲೂ ಹೆದ್ದಾರಿಯಲ್ಲಿ ಸಾವಿರಾರು ಜನ ಸೇರಿಸಿ ಬಂಧಿತರನ್ನು ಬಿಡುಗಡೆಗೊಳಿಸಿ ತೋರಿಸುತ್ತೇವೆ ಎಂದರು.

ಮಲ್ಪೆ1 1

ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ, ಮೀನುಗಾರರ ಸಮಸ್ಯೆಗಳಿಗೆ ಪರಿಹಾರೋಪಾಯಗಳಿಗೆ ಸಭೆಯ ನಡಾವಳಿಗಳಿಗೆ ಯಾವ ಆಸಕ್ತಿಯೂ ಇರಲಿಲ್ಲ. ಕೊನೆಗೆ ಅವರಿಟ್ಟ ಒಂದು ಬೇಡಿಕೆ: ಹಲ್ಲೆಯ ಆರೋಪಿಗಳನ್ನು 18 ರಂದು ನಡೆದ ‘ರಾಜಿ ಪಂಚಾಯ್ತಿಕೆ’ ಮಾನ್ಯ ಮಾಡಿ ಬಿಡುಗಡೆಗೊಳಿಸಿ ಎಂಬುದು! ಎರಡನೇ ಬೇಡಿಕೆ: ಇನ್ನು ಮುಂದೆ ಮಲ್ಪೆ ಬಂದರು ಪ್ರದೇಶದಲ್ಲಿ ಏನೇ ನಡೆದರೂ ಅಲ್ಲಿ ಪೊಲೀಸರು ಪ್ರವೇಶಿಸಕೂಡದು; ಮೀನುಗಾರರ ಸಂಘವೇ ಎಲ್ಲ ನ್ಯಾಯ ನಿರ್ಣಯ ಮಾಡಿ ಪರಿಹಾರ ನೀಡುತ್ತದೆ!! ಹಿಂದುತ್ವವಾದದ ಹಿಡಿತದಲ್ಲಿರುವ ಮೀನುಗಾರರ ಸಂಘಕ್ಕೆ ಹಲ್ಲೆಗೆ ಒಳಗಾದ ಮಹಿಳೆಯು ಅನುಭವಿಸುತ್ತಿರುವ ಅವಮಾನ ನೋವುಗಳ ಬಗ್ಗೆ ಕಿಂಚಿತ್ತು ಕಾಳಜಿ ಇದ್ದಂತೆ ಇಲ್ಲ; ಹಲ್ಲೆ ನಡೆಸಿದ್ದು ಸಾಮಾನ್ಯ ಅಪರಾಧವಲ್ಲ ಎಂಬ ವಿವೇಕವಾಗಲೀ, ಆದುದ್ದರ ಬಗ್ಗೆ ಪಶ್ಚಾತ್ತಾಪವಾಗಲೀ ಒಂದಿನಿತೂ ವ್ಯಕ್ತವಾಗಲಿಲ್ಲ. ಪದೇ ಪದೇ ಹೇಳಿದ್ದು: ಮಹಿಳೆ ಕಳ್ಳಿ; ಹಲ್ಲೆಯು ಕ್ಷಣಿಕ ಕೋಪದ ಸಾಮಾನ್ಯ ಕೃತ್ಯ; ಮಹಿಳೆಯೇ ತಪ್ಪು ಒಪ್ಪಿಕೊಂಡು ರಾಜಿಗೆ ಸಿದ್ಧವಿರುವಾಗ ‘ಹೊರಗಿನವರು’ ಯಾಕೆ ಬಂದು ‘ಶಾಂತಿ ಕದಡುತ್ತೀರಿ’!
ಹಲ್ಲೆ ನಡೆದ ಮಹಿಳೆಯ ಮೇಲೆ ದೂರು ವಾಪಸು ಪಡೆಯುವಂತೆ ಬೆದರಿಕೆ ಒತ್ತಡ ಇದೆ; ಅವರಿಗೆ ಭದ್ರತೆ ಒದಗಿಸಿ ಎಂದು ಉಡುಪಿ ಜಿಲ್ಲೆ ಸಾಮಾಜಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿಯವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಯುವ ಸಂಘಟನೆಯ ನಾಯಕ ಗಿರೀಶ್ ಪತ್ರಿಕಾಗೋಷ್ಟಿ ನಡೆಸಿ, ಪ್ರಮೋದ್ ಮಧ್ವರಾಜ್ ಬಂಧನಕ್ಕೆ ಹಾಗೂ ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆದರೆ, ಮಾರ್ಚ್ 24ರಂದು ಶಾಸಕ ಯಶಪಾಲ್ ಸುವರ್ಣ ‘ರಾಷ್ಟ್ರೀಯ ಘೋರ್ ಮಾಳವ್’ ಎಂಬ ಬಂಜಾರ ಸಂಘಟನೆಯವರನ್ನು ಮುಂದಿಟ್ಟುಕೊಂಡು, ಹಲ್ಲೆಗೊಳಗಾದ ಮಹಿಳೆಯಿಂದ ‘ದಾಖಲಾಗಿರುವ ಎಲ್ಲ ದೂರುಗಳನ್ನು ಹಿಂಪಡೆಯಿರಿ. ನಾವು ಪರಸ್ಪರ ಶಾಂತಿ ಸೌಹಾರ್ದದಿಂದ ಬದುಕುತ್ತಿದ್ದೇವೆ.’ ಎಂಬ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದಾರೆ. ಮಲ್ಪೆಯಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರಿಂದ ಎಲ್ಲರ ಗುಣಗಾನ ಮಾಡಿಸಿ ‘ನಮಗೆ ಯಾರಿಂದಲೂ ತೊಂದರೆ ಆಗಿಲ್ಲ. ನಮ್ಮ ಸಮುದಾಯದ ಧಾರ್ಮಿಕ ಕಾರ್ಯಗಳಿಗೆ ಎಲ್ಲರೂ ಬೆಂಬಲ ನೀಡಿ ಗೌರವಿಸುತ್ತಾರೆ. ನಮಗೆ ಕೆಲಸ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ. ದಯವಿಟ್ಟು ಸಣ್ಣ ಘಟನೆಯನ್ನು ದೊಡ್ಡದು ಮಾಡಿ ನಮ್ಮ ಬದುಕು ಹಾಳು ಮಾಡಬೇಡಿ…’ ಎಂಬ ವಿಡಿಯೋ ಬೈಟ್ಸ್ ಕೂಡ ಕೊಡಿಸಲಾಗಿದೆ.

ಇದನ್ನು ಓದಿದ್ದೀರಾ?: ಮಲದ ಗುಂಡಿಗಳಲ್ಲಿ ಮುಳುಗಿದ ಮನಸುಗಳು; ಮಲ ಬಾಚಿ ಹೊರುವುದು ಏಕೆ ಇಂದಿಗೂ ಜೀವಂತ?

ಹಲ್ಲೆಗೊಳಗಾದ ಮಹಿಳೆಯಾಗಲೀ, ಬಡ ವಲಸಿಗ ಸಮುದಾಯವಾಗಲೀ, ಧನಬಲ, ತೋಳ್ಬಲ ಪ್ರದರ್ಶಿಸುವ ಹಿಂದುತ್ವವಾದಿ ದುಂಡಾವರ್ತಿ ರಾಜಕೀಯದ ಎದಿರು ಧೈರ್ಯದಿಂದ ನಿಲ್ಲಬೇಕು ಎಂದು ಆಶಿಸುವುದು ನಮ್ಮ ಪೆದ್ದುತನ. ಮೀನುಗಾರ ಸಮುದಾಯದ ನಡುವೆ ಕೆಲಸ ಮಾಡಿ ಅವರ ವಿಶ್ವಾಸ ಬೆಂಬಲ ಹೊಂದಿರುವ ಬೇರೆ ಸಂಘಟನೆ ಇಲ್ಲ; ವಲಸೆ ಕಾರ್ಮಿಕರನ್ನು ಸಂಘಟಿಸಿ ಅವರ ನ್ಯಾಯ ಹಕ್ಕುಗಳ ಹೋರಾಟಕ್ಕೆ ಬೆನ್ನೆಲುಬಾಗಬಲ್ಲ ದುಡಿವವರ ಸಂಘಟನೆಯು ಬಹಳ ದುರ್ಬಲವಾಗಿದೆ. ಇಂತಹ ಸನ್ನಿವೇಶದಲ್ಲಿ ಬಡ ಮೀನುಗಾರ ಸಮುದಾಯ, ವಲಸಿಗ ಕೂಲಿ ಕಾರ್ಮಿಕ ಸಮುದಾಯಗಳ ಶ್ರಮದಿಂದ ಸಂಪತ್ತು ಸಂಚಯಿಸುವ ಹಿಂದುತ್ವವಾದಿ ನಾಯಕರು, ತಮ್ಮ ಅಧಿಕಾರಸ್ಥಿಕೆ ಸಡಿಲಾಗದಂತೆ ಇಡಿ ಬದುಕು, ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದಾರೆ. ಬಿಕ್ಕಟ್ಟು ಬಂದಾಗ ಒಂದು ಸಮುದಾಯದ ಬಡವರನ್ನು ಮತ್ತೊಂದು ಬಡವರ ವಿರುದ್ಧ ಎತ್ತಿಕಟ್ಟಿ, ತಮ್ಮ ಅಧಿಕಾರಸ್ಥಿಕೆ ಬಿಗಿಯಾಗಿರುವಂತೆ ಯತ್ನಿಸಬಲ್ಲರು. ಅವಕಾಶವಿದ್ದಾಗ ಬಡವರನ್ನೆಲ್ಲ ತನ್ನ ಕಾಲಾಳುಗಳಾಗಿ ಒಗ್ಗೂಡಿಸಿ ತಾವು ಯಾರನ್ನು ಶತ್ರುವೆಂದು ಪರಿಗಣಿಸುವರೋ ಅವರ ಮೇಲೆ ಹರಿಬಿಡಬಲ್ಲರು.

ಮಲ್ಪೆಯ ವಿದ್ಯಮಾನವು ಹಿಂದುತ್ವವಾದಿ ರಾಜಕೀಯದ ಇಂತಹ ವರಸೆಯನ್ನು ಖಂಡಿತ ಅನಾವರಣಗೊಳಿಸಿದೆ.

paniraj
ಕೆ. ಫಣಿರಾಜ್
+ posts

ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೆ. ಫಣಿರಾಜ್
ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

3 COMMENTS

  1. ನಿನ್ನಂಥ ಮನುಷ್ಯರಿಂದಲೇ, ಪ್ರತಿಯೊಂದಕ್ಕೂ ಹಿಂದುತ್ವ ತಂದು, ಬೆಲೆ ಬೇಯಿಸಿಕೊಳ್ಳುವುದು. ನಿಮ್ಮಂಥವರವು ಯಾಕೆ ಹಿಂದೂ ಆಗಿ ಹುಟ್ಟುತಿರೋ ಗೊತ್ತಿಲ್ಲ. ಏ ಘಟನೆ ಯಾವ ಅಯಾಮದಲ್ಲಿ, ಹುಟ್ಟಿತು. ವಿಮರ್ಶೆ ಮಾಡುವುದಿಲ್ಲ. ಒಟ್ಟು ನಿಮಗೆ, ಹಿಂದುತ್ವ ಎಳೆದು ತಂದು ದೊಡ್ಡ ಮನುಷ್ಯ ಎಂದು ಹೇಳಿಕೊಳ್ಳಬೇಕು. ಒಮ್ಮೆ ಸರಿಯಾಗಿ ನೋಡಿ ನಿಮ್ಮ ಸುತ್ತೇ, ಹಿಂದೂವಿಂದ ಯಾರಿಗೂ ಅಪಾಯವಿಲ್ಲ. ಮುಂದಿನ ಜನ್ಮದಲ್ಲಿ ಭಾರತದಲ್ಲಿ ಹುಟ್ಟಬೇಡಿ ದಯವಿಟ್ಟು.

    • ಅಂತೂ ಎಲ್ಲದರಲ್ಲೂ ಹಿಂದುತ್ವವನ್ನು ಎಳೆದು ತರದಿದ್ದರೆ ನಿಮಗೆ ನೆಮ್ಮದಿ ಇಲ್ಲ. ಇನ್ನೂ ಕೆಲವು ತತ್ವಗಳು ಇದ್ದವಲ್ಲಾ ಅದರ ಬಗ್ಗೆನೂ ಬರೆರಿ

  2. ಲೇ ನಾಯಿ ಮನೆಯಲ್ಲಿ ಬಿದ್ದು ಕೊಳ್ಳು ವುದು ಬಿಟ್ಟು ಯಾಕೆ ನಮ್ಮ ಸುದ್ದಿಗೆ ಬರ್ತೀಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X