ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ಮೀಸಲಾತಿ ಕುರಿತ ಹೇಳಿಕೆಗಳ ಕುರಿತು ಸದನವನ್ನು ದಿಕ್ಕುತಪ್ಪಿಸಿದ್ದಾರೆ ಎಂದು ಆರೋಪಿಸಿ ಸಭಾನಾಯಕ ಜೆ ಪಿ ನಡ್ಡಾ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಜೈರಾಮ್ ರಮೇಶ್ ಅವರು ರಾಜ್ಯಸಭೆಯಲ್ಲಿ ಕಾರ್ಯವಿಧಾನ ಮತ್ತು ನಡವಳಿಕೆಗಳ ನಿಯಮ 188 ರ ಅಡಿ ಈ ಇಬ್ಬರು ನಾಯಕರ ವಿರುದ್ಧ ಎರಡು ಪ್ರತ್ಯೇಕ ನೋಟಿಸ್ ನೀಡಿದ್ದಾರೆ.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರಿಗೆ ಸಲ್ಲಿಸಿದ ನೋಟಿಸ್‌ನಲ್ಲಿ, ಮಾರ್ಚ್ 24 ರಂದು ರಾಜ್ಯಸಭೆಯು ಸಭೆ ಸೇರಿದ ಕೆಲ ಸಮಯದ ನಂತರ, ರಿಜಿಜು ಅವರು, ಶಿವಕುಮಾರ್ ಅವರ ಹೇಳಿಕೆಯನ್ನು ತಿರುಚುವ ಮೂಲಕ ಸದನವನ್ನು ದಾರಿತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೇಲಂಗಿ ಕಳಚದೇ ಪಟ್ಟಣಂತಿಟ್ಟ ದೇಗುಲ ಪ್ರವೇಶ; ಕೇರಳದ ಪದ್ಧತಿ ವಿರುದ್ಧ ವಿನೂತನ ಪ್ರತಿಭಟನೆ
ಜೆ ಪಿ ನಡ್ಡಾ ಅವರ ಆರೋಪಗಳು ಸಂಪೂರ್ಣವಾಗಿ ಸುಳ್ಳು, ವಾಸ್ತವಿಕ ಆಧಾರಗಳ ಕೊರತೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ದೂಷಿಸುವ ಪೂರ್ವಯೋಜಿತ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ. ಈ ಆರೋಪಗಳು ವಾಸ್ತವದಿಂದ ಕೂಡಿಲ್ಲ, ಸಚಿವರ ಹೇಳಿಕೆಗಳನ್ನು ತಿರುಚಿ ಸದನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಇದು ಸದನದ ಉಲ್ಲಂಘನೆಯಾಗಿದೆ ಎಂದು ಜೈರಾಮ್ ರಮೇಶ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಖುದ್ದು ಶಿವಕುಮಾರ್ ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ರಿಜಿಜು ಅವರು ತಿರುಚಿದ ಹೇಳಿಕೆ ನೀಡಿ ಸದನದ ದಿಕ್ಕು ತಪ್ಪಿಸಿದ್ದಾರೆ. ಹೀಗಾಗಿ ಇದು ಹಕ್ಕುಚ್ಯುತಿಗೆ ಅರ್ಹವಾದ ಪ್ರಕರಣ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಮುಸ್ಲಿಮರಿಗೆ ಮೀಸಲಾತಿ ನೀಡಲು ನಮ್ಮ ಪಕ್ಷ ಸಂವಿದಾನವನ್ನು ಬದಲಿಸಲಿದೆ ಎಂದು ಸಾಂವಿಧಾನಿಕ ಹುದ್ದೆ ಹೊಂದಿರುವ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ರಿಜಿಜು ಅವರು ರಾಜ್ಯಸಭೆಯಲ್ಲಿ ಹೇಳಿದ್ದರು.
ಡಿ ಕೆ ಶಿವಕುಮಾರ್ ಹೇಳಿದ್ದೇನು?
ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್, ನಾನು ಧರ್ಮದಲ್ಲಿ ನಂಬಿಕೆ ಇಟ್ಟವನಲ್ಲ. ಮಾನವೀಯತೆಯಲ್ಲಿ ನಂಬಿಕೆ ಇಟ್ಟವನು. ಮಾನವ ಧರ್ಮವೇ ಶ್ರೇಷ್ಠ ಎಂದು ನಂಬಿದವನು’ ಎಂದು ಶಿವಕುಮಾರ್ ಹೇಳುತ್ತಾರೆ. ಆಗ, ಸರ್ಕಾರಿ ಗುತ್ತಿಗೆ ಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಅಗತ್ಯ ಏನಿತ್ತು? ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂಬ ಟೀಕೆ ಇದೆಯಲ್ಲ ಎನ್ನುವ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಹೌದು, ನಾನು ಅದನ್ನು ಒಪ್ಪುತ್ತೇನೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದನ್ನು ನೋಡೋಣ. ನಾವು ಏನೋ ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂಬುದು ನನಗೆ ಗೊತ್ತು. ಒಳ್ಳೆಯ ದಿನ ಬರಲಿದೆ. ಸಾಕಷ್ಟು ಬದಲಾವಣೆ ಆಗಲಿದೆ. ಸಂವಿಧಾನದಲ್ಲಿ ಬದಲಾವಣೆ ಆಗಲಿದೆ. ನ್ಯಾಯಾಲಯಗಳ ಕೆಲವೊಂದು ತೀರ್ಪುಗಳು ಸಂವಿಧಾನದ ಪರಿಷ್ಕರಣೆ ಮಾಡಿವೆ’ ಎಂದು ಹೇಳಿದ್ದರು.