ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
“ಮ್ಲೇಚ್ಛಳೊಡನೆ ನನ್ನ ದೇವ! ಇದೇನು ದೃಶ್ಯ? ಯೋಚನೆಗಳಿಂದ ನನ್ನ ತಲೆ ಕೆಟ್ಟು ಹೋಗಿದೆಯೋ? ಪುನಃ ಅದೇ ದೃಶ್ಯ! ದೇವ ಇದೇನು? ನಿನಗೆ ಶ್ರೀದೇವಿ ಇರಲಿಲ್ಲವೇ? ಭೂದೇವಿ ಇರಲಿಲ್ಲವೇ?- ಮ್ಲೇಚ್ಛಳು! ಆದರೂ ಇವಳ ಮುಖದಲ್ಲಿ ಎಂತಹ ಕಳೆಯಿದೆ. ನಾನು ಕಂಡಿದ್ದ ಲಕ್ಷ್ಮೀದೇವಿಯ ಮುಖವೇ ಇವಳದೂ! ಅದು ಉಡುಪೋ ಮ್ಲೇಚ್ಛರಮಣಿಯರು ಧರಿಸುವಂತಹದು. ವಿಚಿತ್ರ!
“ಹಾ! ಛಳಿ! ಛಳಿ! ದೇವಾ! ನೀನೇನೋ ನವಾಬನಂದಿನಿಯ ಹಾಸಿಗೆಯಲ್ಲಿ ನವಾಬನಂತೆ ಮಲಗಿರುವೆ. ಇಲ್ಲಿ ಸಹಿಸಲಸಾಧ್ಯವಾದ ಛಳಿ. ಇದೇನು ಈ ದೃಶ್ಯ! ನನ್ನ ದೇವ ಬೆತ್ತಲೇ! ‘ನನ್ನನ್ನು ನೋಡು’ ಎನ್ನುತ್ತಿದ್ದೀಯಾ, ದೊರೆ? ಇಂದು ಈ ಉತ್ತರೀಯವನ್ನು ಹೊದೆದುಕೋ. ‘ಸುಮ್ಮನೆ ನಾನು ಅದನ್ನು ಹೊದೆಯುವೆನೇ?’ ಎನ್ನುತ್ತೀಯಾ?
”ಇನ್ನೂ ಸೊಗಸಿನ ದೃಶ್ಯವಿದು. ಎಷ್ಟು ವರ್ಷಗಳಿಂದ ಅಲ್ಲಿ ನೆಲೆಸಿರುವೆ, ಸ್ವಾಮಿ? ನಿನ್ನ ಮೇಲೆ ಬೆಟ್ಟದಂತೆ ಬೆಳೆದಿರುವ ಹುತ್ತ. ಇಲ್ಲಿಯೂ ಫಣಿಶಯನ ನೀನು! ಹುತ್ತದ ಮೇಲೆ ನಿನ್ನ ಅನನ್ಯಭಕ್ತೆ-ತುಲಸಿ! ಗಿಡವೆಷ್ಟು ಸೊಗಸಾಗಿ ಬೆಳೆದಿದೆ! ಏನು ತುಲಸಿ, ‘ಮಾನವನು ನನ್ನನ್ನು ಮುಟ್ಟಿದರೆ ಹೀಗೆ ಬೆಳೆಯುತ್ತಿರಲಿಲ್ಲ; ನಾನೇ ದೇವನಿಗೆ ಆತ್ಮ ಸಮರ್ಪಣೆ ಮಾಡಿದ್ದೇನೆ; ಆದುದರಿಂದಲೇ ಹೀಗಿದ್ದೇನೆ’ ಎನ್ನುತ್ತಿದ್ದೀಯಾ?
“ಇದೇನು! ಈ ಕಪಿಲಧೇನುವು ತನ್ನಷ್ಟಕ್ಕೆ ತಾನೇ ಈ ಹುತ್ತದ ಮೇಲೆ ಹಾಲು ಸುರಿಸಿ ಹೋಗುತ್ತಿದೆ? ಇದ ಅದರ ದೇವನ ಸೇವೆ. ನೀನೇ ಧನ್ಯ ಗೋಮಾತೆ!”
“ದೇವಾ! ನಿನಗೆ ಎಲ್ಲೆಲ್ಲಿಯೂ ಸೇವಕರು. ನಾನು ಪಾಪಿ! ನನ್ನ ಸುಖವನ್ನು ಬಯಸಿ ನಿನ್ನನ್ನು ದೂರಿದೆ; ಕ್ಷಮಿಸು. ನಿನಗೆ ಸರಿಯಾದ ನೆಲೆ ಸಿಕ್ಕುವವರೆಗೂ ನಾನು ನನ್ನ ಸುಖವನ್ನು ಬಯಸೆನು. ನನಗೆ ಇರುವ ಸುಖತಾನೆ ಏನು ದೊರೆ! ಅಲ್ಲಿ ಆ ಕರಿಕಾಳ ಚೋಳ-ಆ ವೈಷ್ಣವ ದ್ವೇಷಿ- ನನ್ನನ್ನು ತನ್ನ ರಾಜ್ಯದಿಂದ ಓಡಿಸಿದ… ಹೋಗಲಿ ಆ ಮಾತು. ನಿನ್ನನ್ನು ಒಂದು ಸ್ಥಳದಲ್ಲಿ ನೆಲೆಗೊಳಿಸಬೇಕು. ಹೇಗೆ? ನಾನು ಕಡು ಬಡವ. ಅಹುದು! ಎಲ್ಲರೂ ಜಾತಿಯಿಂದ ಬೇರೆ ಇಟ್ಟಿರುವ ಹೊಯಿಸಳರ ಬಿಟ್ಟಿದೇವನಿರುವನು- ಎಂದು ನೀನು ಹಿಂದೆ ಹೇಳಿದ್ದುದು ಸರಿಯಾಗಿ ನೆನಪಿದೆ. ಅವನನ್ನು ನಿನ್ನ ಮಾತಿನಂತೆಯೇ ವೈಷ್ಣವನನ್ನಾಗಿ ಮಾಡಲೋಸುಗವೇ ಹೊರಟೆ; ಈ ಬೆಟ್ಟದ ಬಳಿ ಬರುವಲ್ಲಿ ಕತ್ತಲಾದುದರಿಂದ ಈ ಶಿಥಿಲ ದೇವಾಲಯದಲ್ಲಿ ಮಲಗಿದೆ. ಸರಿ, ಅದೇ ಕಡೆಯ ಮಾರ್ಗ. ಅವನನ್ನು ವೈಷ್ಣವನನ್ನಾಗಿ ಮಾಡುತ್ತೇನೆ; ಅವನ ಸಹಾಯದಿಂದ ನಿನ್ನ ಸೇವೆಯನ್ನು ಮನಸ್ಸಿಗೆ ತೃಪ್ತಿಯಾಗುವ ತನಕ ಮಾಡುತ್ತೇನೆ. ಏನು, ದೇವ ಕಣ್ಮರೆಯಾದ! ಇದೇನು ಈ ಕಾಂತಿ! ಕಣ್ಣು ಚುಚ್ಚುತ್ತಿರುವ ಸೂರ್ಯರಶ್ಮಿ?” ಎನ್ನುತ್ತಾ ಮಲಗಿದ್ದ ರಾಮಾನುಜಾಚಾರ್ಯರು ಕಣ್ಣುಗಳನ್ನುಜ್ಜಿಕೊಳ್ಳುತ್ತಾ ಎದ್ದು ಕುಳಿತು, ಆಗತಾನೆ ಉದಯಿಸಿ ತನ್ನ ಕದಿರುಗಳನ್ನು ಎಲ್ಲೆಲ್ಲಿಯೂ ಎರಚುತ್ತಿದ್ದ ಪ್ರಭಾಕರನಿಗೆ ನಮಸ್ಕಾರವನ್ನು ಮಾಡಿ ಬಲಗಡೆಗೆ ತಿರುಗಿದರು.
ನಿರ್ಜನವಾದ ಅರಣ್ಯ, ಅಲ್ಲಲ್ಲಿ ಕಿಲಕಿಲಧ್ವನಿ ಮಾಡುತ್ತಿದ್ದ ಪಕ್ಷಿಗಳ ನಿನಾದವಲ್ಲದೆ ಮತ್ತೆ ಯಾವ ಶಬ್ದವೂ ಇಲ್ಲ. ಆಚಾರ್ಯರು ಮಲಗಿದ್ದ ದೇವಾಲಯದ ಮುಂದಿದ್ದ ದೊಡ್ಡ ಹುತ್ತವನ್ನು ಕಂಡು, ‘ನಾನು ಕಂಡದ್ದು ಕನಸನ್ನೋ ಇಲ್ಲವೇ ದೇವನ ನೈಜಸ್ಥಿತಿಯನ್ನೋ! ಹುತ್ತದ ಮೇಲೆ ಪುಷ್ಕಳವಾಗಿ ಬೆಳೆದಿರುವ ತುಳಸಿಯ ಗಿಡ! ಹೀಗೆ ಹುಲುಸಾಗಿ ಬೆಳೆದಿರುವ ತುಳಸಿಯ ಗಿಡವನ್ನು ನನ್ನ ಜೀವನದಲ್ಲಿ ನಾನೆಲ್ಲಿಯೂ ನೋಡಿಲ್ಲ! ಹುತ್ತದ ಬಳಿಗೆ ಗೋವೊಂದು ಬರುತ್ತಿದೆ. ಅದರದು ಏನು ಸೊಗಸಾದ ಕಪಿಲವರ್ಣ. ನಾನು ಕನಸಿನಲ್ಲಿ ಕಂಡ ಗೋವೇ ಇದು! ಆಶ್ಚರ್ಯ!’ ಎನ್ನುತ್ತಾ ಹುತ್ತದ ಕಡೆಯೇ ದೃಷ್ಟಿಸಿ ನೋಡಿದರು. ಗೋವು ಹುತ್ತದ ಮಗ್ಗುಲಿಗೆ ಬಂದು, ಅದರ ಮೇಲೆ ಹಾಲು ಸುರಿಸಿ ಹೊರಟುಹೋಯಿತು. “ದೇವಾ! ನಿನ್ನ ಮಾಯೆ ಊಹಿಸಲಸಾಧ್ಯ. ನಿನ್ನ ಭೃತ್ಯನಾದ ನನ್ನಿಂದ ಸೇವೆಮಾಡಿಸಿಕೊಳ್ಳಲು ಮೊದಲೇ ನನಗೆ ಆಜ್ಞೆ ಮಾಡಿದೆ. ನಾನು ಪುಣ್ಯವಂತ, ದೇವಾ!” ಎನ್ನುತ್ತ ಹುತ್ತಕ್ಕೆ ತಾವು ಕುಳಿತಲ್ಲಿಯೇ ನಮಸ್ಕಾರಮಾಡಿ, ಆಮೇಲೆ ಕೆಳಗೆ ಹಾಸಿಕೊಂಡಿದ್ದ ಉತ್ತರೀಯವನ್ನು ಮೈಮೇಲೆ ಹಾಕಿಕೊಂಡು, ಹುತ್ತದ ಬಳಿಗೆ ಬಂದು ಕೈಜೋಡಿಸಿಕೊಂಡು ನಿಂತರು.
ಭುಜದ ಮೇಲೆ ನೇಗಿಲುಗಳನ್ನು ಹೊತ್ತುಕೊಂಡು, ಕೈಯಲ್ಲಿ ಗುದ್ದಲಿ ಹಾರಿಗಳನ್ನು ಎತ್ತಿಕೊಂಡು, ಎತ್ತುಗಳೊಡನೆ ಹೊಲ ಉಳಲು ಹುತ್ತದ ಬಳಿಯಲ್ಲಿದ್ದ ದಾರಿಯಲ್ಲಿ ಆದಿಕರ್ಣಾಟಕರಿಬ್ಬರು ಬರುತ್ತಿದ್ದರು. ”ಅಯ್ಯಾ ಇಲ್ಲಿ ಸ್ವಲ್ಪ ಬನ್ನಿ” ಎಂದು ಆಚಾರ್ಯರು ನಮ್ರಭಾವದಿಂದ ಅವರನ್ನು ಕರೆದರು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಆದಿಕರ್ಣಾಟಕರಿಬ್ಬರೂ ಆಚಾರ್ಯರ ಮುಖವನ್ನು ದೃಷ್ಟಿಸಿ ನೋಡಿದರು. ”ಈರಾ, ಅವರ ಮುಖದಲ್ಲಿ ಏನು ಕಳೆ ಇದೆಯೋ!” ಎಂದು ಮುದುಕನು ತನ್ನ ಜತೆಯಲ್ಲಿದ್ದ ಹರೆಯದ ಮಗನಿಗೆ ಹೇಳಿದನು. “ಹೌದಪ್ಪ; ಸ್ವಾಮಿಗಳ ಕಳೆ ಇದೆ” ಎಂದು ಆಚಾರ್ಯರ ಕಡೆ ನೋಡುತ್ತಾ, ಏನನ್ನೋ ಯೋಚಿಸುತ್ತಾ ಈರನು ಉತ್ತರ ಕೊಟ್ಟನು. ಇಬ್ಬರೂ ಆಚಾರ್ಯರ ಬಳಿ ಬಂದರು; ಅವರನ್ನು ನಮಸ್ಕರಿಸಿದರು.
“ಅಜ್ಜಪ್ಪ, ನಿನ್ನ ಹೆಸರೇನು? ಈತ ಯಾರು?” ಎಂದು ಆಚಾರ್ಯರೇ ಮೊದಲು ಕೇಳಿದರು.
”ಸ್ವಾಮಿ ಮರಿಯ ಎಂದು ನನ್ನ ಕರೀತಾರೆ, ಈತ ನನ್ನ ಮಗ ಈರ” ಎಂದು ಮುದುಕನು ಹೇಳಿದನು. ಅವರಿಬ್ಬರೂ ಆಚಾರ್ಯರಿಂದ ಸ್ವಲ್ಪ ದೂರ ಸರಿದರು.
“ಇರಲಿ ಬನ್ನಿರಪ್ಪ ಹತ್ತಿರಕ್ಕೆ.”
“ಸ್ವಾಮಿ, ನಾವು ಪಂಚಮರು. ಬುದ್ದೀ, ನಿಮ್ಮನ್ನು ನೋಡಿದರೆ ಬ್ರಾಹ್ಮಣರಂತಿದ್ದೀರಿ” ಎಂದು ಮರಿಯ ಭಕ್ತಿಭಾವದಿಂದ ಹೇಳಿದನು.
‘ಪಂಚಮನಾದರೂ ಎಂತಹ ಆಚಾರಪ್ರಿಯನಿವನು!’ ಎಂದುಕೊಂಡು, “ಮುದುಕಪ್ಪ, ಈ ಹುತ್ತದ ಬಳಿ ಎಂತಹ ಆಶ್ಚರ್ಯ!” ಎಂದು ಆಚಾರ್ಯರು ಹೇಳಿದರು.
”ಹೌದು ಬುದ್ದೀ; ನನ್ನ ಬೂದುಬಣ್ಣದ ಹಸು ನಿತ್ಯ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ಬೆಳಿಗ್ಗೆ ಅಷ್ಟು ಹೊತ್ತಿಗೇನೇ ಹೋಗುತ್ತಿತ್ತು. ಪುನಃ ಅದು ಮನೆಗೆ ಬಂದಾಗ ಹಾಲು ಕೊಡುತ್ತಲೇ ಇರಲಿಲ್ಲ. ಹೀಗೆ ನಿತ್ಯವೂ ಅದು ಹೋಗಲು ಏನು ಕಾರಣ- ಎಂದು ತಿಳಿಯೋಕೆ ಅದರ ಹಿಂದೆ ಒಂದು ದಿನ ಹೋದೆ. ಅದು ಈ ಹುತ್ತದ ಹತ್ತಿರಕ್ಕೆ ಬಂದು, ಇದರ ಮೇಲೆ ಹಾಲು ಸುರಿಸಿತು. ಅದರ ಕೆಲಸವನ್ನು ನೋಡಿ, ‘ನೀನೂ ದೇವನ ಸೇವಕ’ ಎಂದುಕೊಂಡು ಅದನ್ನು ಅಂದಿನಿಂದ ಕಟ್ಟಿಹಾಕೋದನ್ನು ಬಿಟ್ಟುಬಿಟ್ಟೆ. ‘ಈ ಹುತ್ತದಲ್ಲಿ ದೇವರಿದೆ. ಹಿಂದೆ ತುರುಕರ ದೊರೆಯೊಬ್ಬ ಬಂದು ದೇವಸ್ಥಾನ ಕೆಡವಿ, ಕಂಚಿನ ದೇವರನ್ನು ಎತ್ತಿಕೊಂಡು ಹೋದ, ಮೂರ್ತಿಯ ಚೆಂದಾನ ನೋಡಿ, ಒಡೆಯಲು ಮನಸ್ಸು ಬಾರದೆ ಕಲ್ಲ ದೇವರನ್ನು ಹಾಗೆಯೇ ಬಿಸಾಡಿ ಬಿಟ್ಟನಂತೆ. ಅದೇ ಈ ಹುತ್ತದಲ್ಲಿದೆ’ ಎಂದು ನಮ್ಮ ತಾತಂದಿರು ಹಿಂದೆ ಹೇಳುತ್ತಿದ್ದರು, ಬುದ್ದೀ” ಎಂದು ಮರಿಯ ಹೇಳಿದನು.
“ನೀವೆಲ್ಲಾ ಸ್ವಲ್ಪ ಸಹಾಯ ಮಾಡಿದರೆ ಈಗ ಹಾಳಾಗಿರುವ ಈ ದೇವಸ್ಥಾನವನ್ನು ಕಟ್ಟಿಸಿ, ದೇವನನ್ನು ಪ್ರತಿಷ್ಠೆ ಮಾಡುತ್ತೇನೆ.”
”ನಾನು ಎಷ್ಟು ಸಹಾಯ ಮಾಡಿದರೆ ತಾನೆ ಏನು ಬುದ್ದೀ; ದೇವಸ್ಥಾನದ ಪ್ರಾಕಾರಕ್ಕೆ ಬರೋದಕ್ಕೂ ನಮಗೆ ಯೋಗ್ಯತೆ ಇಲ್ಲ!” ಎಂದು ಒಂದು ತರದ ನಿರಾಶೆಯಿಂದ ಮರಿಯ ಹೇಳಿದನು.
”ಯೋಗ್ಯತೆ ಇಲ್ಲದೆ ಏನು ಮರಿಯ! ಉತ್ಸವ ಕಾಲದಲ್ಲಿ ಮೂರು ದಿನವಾದರೂ ನೀವೆಲ್ಲಾ ದೇವಸ್ಥಾನದೊಳಕ್ಕೆ ಬರುವಂತೆ ಮಾಡುತ್ತೇನೆ. ನೀವೆಲ್ಲಾ ವಿಷ್ಣುಭಕ್ತರೇ ಅಲ್ಲವೇ? ಎಲ್ಲರ ಹೃದಯದಲ್ಲಿಯೂ ಇರುವ ದೇವ ಒಬ್ಬನೇ.”
“ನನ್ನೊಡೆಯಾ! ಬ್ರಾಹ್ಮಣರಲ್ಲೆಲ್ಲಾ ನಮ್ಮ ಜನಾನ ನೋಡಿ ನೀವೊಬ್ಬರೇ ಹೀಗೆ ಹೇಳಿದ್ದು, ನಮ್ಮ ಜನಕ್ಕೆಲ್ಲಾ ಹೇಳ್ತೀನಿ; ಏನು ಕೆಲಸ ಮಾಡಬೇಕಾದರೂ ನಾವು ಸಿದ್ಧರಾಗಿದ್ದೇವೆ” ಎಂದು ನಮ್ರ ರೀತಿಯಿಂದ ಕೂಡಿದ ಪೂಜ್ಯಭಾವದಿಂದ ಮರಿಯ ಹೇಳಿದನು.
“ನಾನು ಇಂದು ಹಳೇಬೀಡಿಗೆ ಹೋಗಿ ದೊರೆಯನ್ನು ನೋಡಿಬರುತ್ತೇನೆ. ನನ್ನ ಕನಸಿನಲ್ಲಿ ದೇವ ‘ನಾನು ಇಲ್ಲಿ ಇದ್ದೇನೆ’ ಎಂದು ಹೇಳಿದ್ದಾನೆ. ಇದೂ ಅಲ್ಲದೆ ನಿಮ್ಮ ಅಜ್ಜಂದಿರು ‘ಇಲ್ಲಿ ವಿಗ್ರಹವಿದೆಯೆಂದು ಹೇಳುತ್ತಿದ್ದರು’ ಎಂದು ನೀನೂ ಹೇಳುತ್ತೀಯೆ. ಆದುದರಿಂದ ಈ ಹುತ್ತದಲ್ಲಿ ದೇವರಿದ್ದೇ ಇದೆ. ಇದನ್ನು ಆಗೆದು ವಿಗ್ರಹವನ್ನು ತೆಗೆದಿಟ್ಟಿರಿ. ದೊರೆಯ ಸಹಾಯದಿಂದ ದೇವಾಲಯವನ್ನು ಕಟ್ಟಿಸುತ್ತೇನೆ.”
“ದೇವರು ಸೇವೆಯನ್ನು ಯಾರು ಯಾರಿಂದ ಹೇಗೆ ಹೇಗೆ ಮಾಡಿಸಿಕೊಳ್ಳುತ್ತಾನೋ ಬುದ್ಧೀ.”
“ನಾಳೆ ಶ್ರೀರಾಮನವಮಿ, ಒಳ್ಳೆಯ ದಿನ. ಆದುದರಿಂದ ನಾಳೆಯೇ ಈ ಹುತ್ತವನ್ನು ಅಗೆದು ದೇವನನ್ನು ತೆಗೆದಿಡಿ ಮರಿಯಾ.”
“ಆಗಲಿ ಬುದ್ಧಿ. ನಮ್ಮ ಜನಾನೆಲ್ಲ ನಾಳೆ ಕರ್ಕೊಂಡು ಬಂದು ಸ್ವಾಮೀನ ಎತ್ತಿಡುತ್ತೇವೆ” ಎಂದು ಮರಿಯ ಹೇಳಿ, ಆಚಾರ್ಯರನ್ನು ನಮಸ್ಕರಿಸಿ, ತನ್ನ ಮಗನೊಡನೆ ಹೊಲ ಉಳಲು ಹೋದನು.
2
ಹನ್ನೆರಡನೆಯ ಶತಮಾನದ ಆದಿಭಾಗ. ಭಾರತಕ್ಕೆಲ್ಲಾ ಒಬ್ಬ ಸಾರ್ವಭೌಮನಿಲ್ಲದ ಕಾಲ. ಎಲ್ಲೆಲ್ಲಿಯೂ ದಂಗೆಗಳು. ಪ್ರತಿಯೊಂದು ಪ್ರಾಂತ್ಯವೂ ಸ್ವತಂತ್ರರಾಜ್ಯ. ಅಲ್ಲಲ್ಲಿ ಒಬ್ಬರೊಡನೊಬ್ಬರು ಹೋರಾಡುತ್ತಿದ್ದ ಸಣ್ಣಪುಟ್ಟ ರಾಜರು. ಇಂತಹ ಕಾಲದಲ್ಲಿಯೂ ಘಜನಿ, ಪಂಜಾಬ್ ಮತ್ತು ದೆಹಲಿ ಇವುಗಳನ್ನು ಘಜನಿ ಮಹಮೂದನ ಮೊಮ್ಮಗ ಅಹಮ್ಮದ್‌ಷಹನು ಆಳುತ್ತಿದ್ದನು. ಘಜನಿ ಮಹಮೂದನು ಭಾರತವನ್ನು ಜಯಿಸಿ, ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದುದು ಪಂಜಾಬ್ ಮತ್ತು ದೆಹಲಿ ಮಾತ್ರ.
ಅಹಮ್ಮದ್‌ಷಹನು ಪ್ರಕೃತಿಪ್ರೇಮಿ; ರಾಜಋಷಿ. ಘಜನಿಯಲ್ಲಿ ತನ್ನ ಪ್ರತಿನಿಧಿಯಾಗಿ ತನ್ನ ತಪ್ಪು ಅದಿಲ್‌ಷಹನನ್ನಿಟ್ಟಿದ್ದನು. ತನ್ನ ಪ್ರಕೃತಿ ಪ್ರೇಮವನ್ನು ಈಡೇರಿಸಿಕೊಳ್ಳಲೋಸುಗವೇ ಆತನು ದೆಹಲಿಯಲ್ಲಿ ನಿಂತು ತನ್ನ ಅರಮನೆಯನ್ನು ದೆಹಲಿಯಲ್ಲಿ ನಿಂತನು. ತನ್ನ ಅರಮನೆಯನ್ನು ದೆಹಲಿಯಲ್ಲಿ ಯಮುನಾತೀರದಲ್ಲಿ ಕಟ್ಟಿಸಿದ್ದನು. ಅರಮನೆಯ ಹಿಂಭಾಗದಲ್ಲಿಯೇ ಯಮುನೆಯ ಸೋಪಾನಗಳು. ಆ ಮೆಟ್ಟಿಲುಗಳ ಪಕ್ಕದಲ್ಲಿ, ಅರಮನೆಯ ಹಿಂದೆ ಹರಿಯುತ್ತಿದ್ದ ಯಮುನೆಯ ಬಲ ದಡದ ಮೇಲೆಯೇ ರಾಜೋದ್ಯಾನ. ಅರಮನೆಯ ಹಿಂಭಾಗದಲ್ಲಿದ್ದ ಚಂದ್ರಮಹಲೇ ಪಾದಷಹನ ಏಕಮಾತ್ರ ಪುತ್ರಿಯಾದ ಮಮ್ತಾಜಳದು. ಅದರಲ್ಲಿ ಆಕೆ, ಆಕೆಯ ಸೋದರಮಾವನ ಮಗಳು ನೂರ್ ಬೇಗಂ, ಮತ್ತು ಪಾದಷಹನ ಹಿಂದೂ ಮಂತ್ರಿಯ ಮಗಳೂ ಮಮ್ತಾಜಳ ಸಖಿಯೂ ಆದ ಸುಭದ್ರೆ, ಇವರು ವಾಸವಾಗಿರುತ್ತಿದ್ದರು.
ಚೈತ್ರಮಾಸದ ಹುಣ್ಣಿಮೆಯ ಸಾಯಂಕಾಲ ಮಮ್ತಾಜಳೂ ಆಕೆಯ ಇಬ್ಬರು ಗೆಳತಿಯರೂ ಯಮುನೆಯ ಮೆಟ್ಟಿಲುಗಳ ಮೇಲೆ ಕುಳಿತು, ಯಮುನೆಯ ನೀರಿನಲ್ಲಿ ಕಾಲುಗಳನ್ನಿಟ್ಟುಕೊಂಡು ಕೈಗಳಿಂದ ನೀರನ್ನು ಎರಚುತ್ತಲಿದ್ದರು. ಸೂರ್ಯನು ಆಗತಾನೆ ಮುಳುಗುತ್ತಿದ್ದನು. ಆತನ ಕೆಂಗದಿರುಗಳು ತೆರೆತೆರೆಗಳಿಂದ ಹರಿಯುತ್ತಿದ್ದ ಯಮುನೆಯ ಪ್ರವಾಹದ ಮೇಲೆ ಬಿದ್ದು, ವಿವಿಧ ರೂಪಗಳಿಂದ ಮೆರೆಯುತ್ತಿದ್ದುವು. ದಡಗಳ ಮೇಲಿದ್ದ ಮರಗಳಲ್ಲಿ ಪಕ್ಷಿಗಳ ಇಂಚರವು ಕೇಳಿಸುತ್ತಿತ್ತು. ಈ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಿದ್ದ ಎಲ್ಲರೂ ಮೌನವಾಗಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮಮ್ತಾಜಳೇ, “ಭದ್ರಾ! ನಿನ್ನೆ ಒಂದು ಕನಸನ್ನು ಕಂಡೆ” ಎಂದು ನಸುನಗೆಯಿಂದ ಹೇಳಿದಳು.
“ಯಾವುದೇ ಅದು?” ಎಂದು ಸಖಿಯರಿಬ್ಬರೂ ಕೇಳಿದರು.
”ಅದನ್ನು ಕೇಳಿ ನೀವಾರೂ ನಗಕೂಡದು.”
“ಇಲ್ಲ; ಹೇಳು ತಾಜ್. ನಿನ್ನ ಸೋದರಿಯರೇ ನಾವೆಂದು ತಿಳಿ” ಎಂದು ಸುಭದ್ರೆ ಹೇಳಿದಳು.

“ಭದ್ರಾ! ಹಿಂದುಗಳಲ್ಲೆಲ್ಲಾ ನಿನ್ನನ್ನು ನಾನು ಬಹಳ ಮೆಚ್ಚಿದ್ದೇನೆ. ಅದೇನೋ ನೋಡು, ನನ್ನ ತಾಯಿಯಲ್ಲಿಯೂ ಇಲ್ಲದ ಪ್ರೇಮ ನನಗೆ ನಿನ್ನ ಮೇಲಿದೆ. ನನ್ನ ಆಸೆಗಳನ್ನೆಲ್ಲಾ ಈಡೇರಿಸುವುದರಲ್ಲಿ ನೀನು ಮೊದಲನೆಯವಳು. ಏನು ಸೊಗಸಾಗಿ ನನ್ನ ಚೆಲುವನನ್ನು ಸಿಂಗರಿಸುವೆಯೇ ನೀನು! ಆತ ನನ್ನ ಎರಡನೆಯ ಹೃದಯ. ನೂರ್, ನನ್ನ ಚೆಲುವ, ನೀವಿಬ್ಬರು ಇಷ್ಟು ಮಾತ್ರ ನನ್ನೊಡನಿದ್ದರೆ ನನಗೆ ಈ ಪ್ರಪಂಚದಲ್ಲಿ ಮತ್ತೇನೂ ಬೇಡ.”
“ನಮ್ಮ ಮೂವರಿಗಿಂತ ಇನ್ನೂ ಪ್ರೇಮವನ್ನು ಹೊಂದುವವನು ಬಂದಿದ್ದಾನೆ. ಅವನ ಜತೆಯಲ್ಲಿದ್ದಾಗ ಈ ಮಾತನ್ನು ನೀನು ಹೇಳಿದರೆ ಸರಿ! ಆಗ ನಿನ್ನ ಪ್ರೇಮ ನಮ್ಮಗಳ ಮೇಲೆ ಸ್ಥಿರವಾದುದೆಂದು ನಾವು ಒಪ್ಪುತ್ತೇವೆ” ಎಂದು ನೂರ್‌ಬೇಗಂ ಹಾಸ್ಯಧ್ವನಿಯಿಂದ ಹೇಳಿದಳು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
“ಯಾರೆ ಅದು ಹೊಸದಾಗಿ ಬಂದಿರುವವರು?” ಎಂದು ಸುಭದ್ರೆ ನಡುವೆ ಮಾತು ಹಾಕಿದಳು.
“ನಿನಗೆ ಗೊತ್ತಿಲ್ಲವೇನೇ? ತಾಜ್, ನೀನು ಭದ್ರೆಗೆ ಅದನ್ನು ಹೇಳಲಿಲ್ಲವೇ?”
”ನೋಡಿದೆಯಾ ತಾಜ್! ನನ್ನಲ್ಲಿಯೂ ಮರೆಮಾಚಿದೀ” ಎಂದು ಸುಭದ್ರೆ ತಾಜಳ ಮುಖವನ್ನು ದೃಷ್ಟಿಸುತ್ತಾ ಹೇಳಿದಳು.
“ಅದು ಅಷ್ಟೇನೂ ವಿಶೇಷವಾದ ಸಮಾಚಾರವಲ್ಲ ಭದ್ರಾ. ನೂರ್ ಎಲ್ಲಾ ಹೇಳುತ್ತಾಳೆ ಕೇಳು.”
“ಬೆಳಗ್ಗೆ ತುರ್ಕಿ ದೇಶದ ಸುಲ್ತಾನ್ ಬಂದಿದ್ದನೇ!”
“ಅವನಿಗೆ ಪಾದಷಹರು ಏನು ಏನು ಹೇಳಿದರು?”
“ಪಾದಷಹರು ಮಮ್ಮೂನ ಕೇಳಿದರು. ‘ನಾನು ಯಾರನ್ನೂ ಮದುವೆಯಾಗುವುದಿಲ್ಲ ಈಗ’ ಎಂದು ಕಣ್ಣೀರು ಸುರಿಸುತ್ತಾ ಇವಳು ತಂದೆಗೆ ಹೇಳಿದಳು. ‘ನನ್ನ ಮಗಳಿಗೆ ಇನ್ನೂ ಒಂದು ವರ್ಷ ಮದುವೆ ಮಾಡುವುದಿಲ್ಲ’ ಎಂದು ಪಾದಷಹರು ಸುಲ್ತಾನನಿಗೆ ಹೇಳಿದರು.”
“ಇಷ್ಟೇನೆ! ಅವನಂತಹರು ಎಷ್ಟು ಜನ ಬಂದು ಈ ವೇಳೆಗೆ ನಮ್ಮ ಮಮ್ಮೂನ ಕೇಳಿ ಹೋದರೋ! ಆ ಮಾತು ಹೋಗಲಿ! ನಿನ್ನ ಕನಸೇನು, ಅದನ್ನೇ ಬಿಟ್ಟೆಯಲ್ಲ, ತಾಜ್!” ಎಂದು ಸುಭದ್ರೆ ಹೇಳಿದಳು.
“ಅದನ್ನು ಕೇಳಿ ನೀವು ನಗುತ್ತೀರಿ” ಎಂದು ದನಿ ತೆಗೆದು ತಾಜ್ ಹೇಳಿದಳು.
”ಇಲ್ಲ ಹೇಳೆ ಅಂದರೆ” ಎಂದು ನೂರ್ ಬೇಗಂ ಓರೆಗಣ್ಣಿನಿಂದ ಮಮ್ತಾಜಳನ್ನು ನೋಡುತ್ತಾ ಹೇಳಿದಳು.
“ಒಂದು ದಿನ ರಾತ್ರಿ ನಾನೊಬ್ಬಳೇ ಈ ಮೆಟ್ಟಿಲುಗಳ ಮೇಲೆ ಕುಳಿತಿದ್ದೇನೆ. ಯಮುನೆಯ ಹರಿಯುವ ಧ್ವನಿಯಲ್ಲದೆ ಮತ್ತೆ ಯಾವ ಶಬ್ದವೂ ಇಲ್ಲ. ಪೂರ್ಣಚಂದ್ರನು ಪ್ರಕೃತಿಯನ್ನೆಲ್ಲಾ ತನ್ನ ಅಮೃತ ಕಿರಣಗಳಿಂದ ತುಂಬಿದ್ದ. ನಾನು ತಲೆ ಬಗ್ಗಿಸಿಕೊಂಡೇ ಎರಡೂ ಕೈಗಳಿಂದ ನೀರನ್ನು ಯಮುನೆಯಲ್ಲಿ ಚೆಲ್ಲುತ್ತಾ, ಉದ್ಭವಿಸುವ ಅಲೆಗಳನ್ನು ನೋಡುತ್ತಿದ್ದೆ. ಆಗ ಹಿಂದಿನಿಂದ ಬಂದು ಯಾರೋ ನನ್ನ ಕಣ್ಣು ಮುಚ್ಚಿದರು. ‘ಭದ್ರೇ! ಭದ್ರೇ! ಕಣ್ಣು ಬಿಡೆ!’ ಎಂದೆ. ಉತ್ತರವೇ ಇಲ್ಲ. ‘ನೂರ್! ನೂರ್! ನಿನಗಲ್ಲವೇನೆ ಹೇಳುವುದು. ಕೈ ತೆಗೆಯೇ’ ಎಂದು ಕೂಗಿದೆ. ಆಗ ನಗುವ ಧ್ವನಿಯಿಂದ ನನ್ನ ಚೆಲುವ, ‘ನಾನೆ ಮಮ್ಮು- ಅಯ್ಯೋ ಮುಗ್ಧೆ. ಕೈ ಮುಟ್ಟಿದೊಡನೆಯೇ ನನ್ನನ್ನು ತಿಳಿಯಲಾಗಲಿಲ್ಲವೇ?’ ಎಂದು ನಸುನಗೆಯಿಂದ ಹೇಳಿದ. ನಾನು ತಲೆಯೆತ್ತಿ ಆತನ ಕಡೆಗೆ ನೋಡಿದೆ. ಏನು ಉಡುಪಿನ ವೈಚಿತ್ರ್ಯ! ಆತ ತಿಳಿಹಳದಿಯ ಚೀನಾಂಬರವನ್ನು ಉಟ್ಟಿದ್ದ; ನಡುವಿಗೆ ಹಸುರು ರೇಷ್ಮೆಯ ವಸ್ತ್ರವನ್ನು ಬಿಗಿದಿದ್ದ. ಭುಜದ ಮೇಲೆ ರಕ್ತಾಂಬರ ಒಪ್ಪುತ್ತಿತ್ತು. ನವಿಲು ಗರಿಯಿಂದ ಕೂಡಿದ್ದ ತಲೆಯ ಮುಡಿಗೆ. ಕೈಯಲ್ಲಿ ಚಿನ್ನದ ಕೊಳಲು; ಕಾಲಲ್ಲಿ ಬಂಗಾರದ ಗೆಜ್ಜೆ. ‘ಮಮ್ಮು, ನನ್ನ ನೀನು ಎಂದಾದರೂ ಹೀಗೆ ಸಿಂಗರಿಸಿದ್ದೆಯಾ?’ ಎಂದು ಕೇಳಿದ. ‘ಇಲ್ಲ; ನಾಳೆ ಸಿಂಗರಿಸುತ್ತೇನೆ’ ಎಂದು ಉತ್ತರ ಕೊಟ್ಟೆ. ‘ನೋಡು ನೀನೂ ಬೇರೆತರದ ಉಡುಪನ್ನು ಹಾಕಿಕೊಳ್ಳಬೇಕು’ ಎಂದು ನಸುನಗೆಯಿಂದ ನುಡಿದ. ‘ಹೇಗಿರಬೇಕು ಹೇಳು?’ ಎಂದು ನಾನೂ ನಸುನಗೆಯಿಂದ ಕೇಳಿದೆ. ‘ಕಾಶ್ಮೀರದ ಗುಲಾಬಿಯ ಸೂಕ್ಷಾಂಬರವನ್ನುಡು. ಮೇಘವರ್ಣದ ರೌಕೆಯನ್ನು ತೊಡು. ಕಿವಿಯಲ್ಲಿ ಓಲೆಗಳಿರಲಿ. ಗಂಟು ಹಾಕಿದ ತಲೆಯಲ್ಲಿ ಮಲ್ಲಿಗೆಯ ಹೂವನ್ನು ಮುಡಿದುಕೋ. ಇವೆಲ್ಲದರ ಮೇಲೂ ನಿನ್ನ ಜರತಾರಿಯ ಬುರುಕಿ ಬರಲಿ’ ಎಂದು ಹೇಳಿದ. ‘ಹಾಗೆಯೇ ಮಾಡುತ್ತೇನೆ’ ಎಂದೆ. ‘ನಾಳೆ ರಾತ್ರಿ ದರ್ಶನ ಕೊಡಲು ಬರುತ್ತೇನೆ. ನಾನು ಹೇಳಿದ್ದು ನೆನಪಿದೆಯೋ?’ ಎಂದು ನಗುತ್ತಾ ಹೇಳಿ ಕಣ್ಮರೆಯಾದ” ಎಂದು ಮಮ್ತಾಜಳು ಹೇಳಿ, “ಭದ್ರೆ! ಭದ್ರೆ! ನನ್ನ ದೇವ ಹೇಳಿದಂತೆ ನನ್ನನ್ನೂ ಮತ್ತು ನನ್ನ ಚೆಲುವನನ್ನೂ ಸಿಂಗರಿಸು. ದೇವ ನಿನಗೆ ಸಿಂಗರಿಸುವ ವಿದ್ಯೆ ಕಲಿಸಿದ್ದಾನೆ. ಬೆಳಗಿನಲ್ಲಿಯೇ ಇದನ್ನು ನಿನಗೆ ಹೇಳಬೇಕೆಂದಿದ್ದೆ. ಆದುದರಿಂದಲೇ ನಿಮ್ಮ ಮನೆಗೆ ಹೇಳಿ ಕಳುಹಿಸಿದ್ದೆ. ‘ಈ ದಿನ ಶುಕ್ರವಾರ, ಮನೆಯಲ್ಲಿ ಬಹಳ ಕೆಲಸವಿದೆ. ಸಾಯಂಕಾಲಕ್ಕೆ ಕಳುಹಿಸುತ್ತೇನೆ’ ಎಂದು ನಿಮ್ಮ ತಾಯಿ ಹೇಳಿಕಳುಹಿಸಿದಳು. ನನಗೆ ಸಿಂಗರಿಸುವುದಾಗಲಿ ಸಿಂಗರಿಸಿಕೊಳ್ಳುವುದಾಗಲಿ ಬರುವುದಿಲ್ಲ ಎಂದು ಒಂದು ತೆರದ ದೈನ್ಯದಿಂದ ಮಮ್ತಾಜ್ ಹೇಳಿದಳು.
“ನಿನ್ನ ರೂಪಿನ ಮುಂದೆ ಯಾವ ಸಿಂಗಾರ ತಾನೆ ಬೇಕು, ತಾಜ್! ನಾನು ಗಂಡಸಾಗಿದ್ದರೆ…” ಎಂದು ಸುಭದ್ರೆ ಮಮ್‌ತಾಜಳನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿದಳು.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
“ಆಗ ನಿನ್ನನ್ನು ನಾನು ಮದುವೆಯಾಗುತ್ತಿದ್ದೆನೇ ಭದ್ರೆ!” ಎಂದು ನೂರ್‌ಬೇಗಂ ನಸುನಗೆಯಿಂದ ನುಡಿದಳು.
“ಭದ್ರಾ! ಆಗಲೇ ರಾತ್ರಿಯಾಗುತ್ತಾ ಬಂದಿತು. ಇನ್ನು ಸ್ನಾನ ಮಾಡಿ ಹೋಗೋಣ. ನಮ್ಮ ತಾಯಿ ತನ್ನನ್ನು ಬಂದು ನೋಡ ಹೇಳಿರುವಳು. ನಾನು, ನೂರ್ ಅರಮನೆಗೆ ಹೋಗಿ ಒಂಬತ್ತು ಗಂಟೆಗೆ ಚಂದ್ರಮಹಲಿಗೆ ಬರುತ್ತೇವೆ. ಅಷ್ಟರವೇಳೆಗೆ ನೀನು ಚೆಲುವನನ್ನು ಸಿಂಗರಿಸಿರಬೇಕು.”
“ಇದೇನು ಇವಳು ಸುಮ್ಮನೆ ಹೀಗೆಲ್ಲಾ ಹೇಳುತ್ತಿದ್ದಾಳೆ! ದೇವ ಇವಳ ಬಳಿ ಬರುವನೇ? ತನ್ನನ್ನ ಮಹಮದೀಯ ರಾಧೆಯಂತೆ ಸಿಂಗರಿಸಬೇಕಂತೆ!… ನನಗೆ ಯಾಕೆ ಆ ಯೋಚನೆ, ದೇವಾ! ನಿನ್ನ ಮಾಯೆ ಏನೋ ನಂಬಿದವರಾರು? ಎಂತಹ ಸುಲ್ತಾನನು ಬಂದರೂ ವರಿಸೆನೆನ್ನುತ್ತಾಳೆ. ನಿನ್ನ ವಿಗ್ರಹವನ್ನು ಒಂದು ನಿಮಿಷವು ಬಿಟ್ಟಿರಳು,” ಎಂದು ಯೋಚಿಸುತ್ತಾ ಸುಭದ್ರೆ ನೀರಿನಲ್ಲಿಳಿದಳು.
“ಏನು ಭದ್ರಾ! ನೀನೇನೂ ಉತ್ತರ ಕೊಡಲೇ ಇಲ್ಲ. ನಾಳೆ ಅಮೃತಮಹಲಿಗೆ ಹೋಗಬೇಕೆಂದು ನಿನ್ನೆ ನೀನು ಹೇಳಿದ್ದೆ. ನೋಡು ಈ ಹೊತ್ತು ನೀನು ನನ್ನ ಮನೋಭೀಷ್ಟವನ್ನು ಪೂರೈಸಿದರೆ ನಿನ್ನ ಇಷ್ಟದಂತೆಯೇ ನಾಳೆ ಬೆಳಗಿನಲ್ಲಿ ಅಮೃತಮಹಲಿಗೆ ಹೋಗಿ, ನಾಳಿದ್ದು ಇಲ್ಲಿಗೆ ಹಿಂತಿರುಗೋಣ.”
“ನಾಳೆ ರಾತ್ರಿ ನಿನ್ನ ಚೆಲುವನನ್ನೇನು ಮಾಡುತ್ತೀ?” ಎಂದು ನೂರ್ ಬೇಗಂ ಮಮ್ತಾಜಳನ್ನು ನಸುನಗೆಯಿಂದ ಕೇಳಿದಳು. ”ಹೂಂ, ನೂರ್ ಹೇಳುವುದೂ ನಿಜ” ಎಂದು ಸುಭದ್ರೆಯೂ ಹೇಳಿದಳು.
”ಆತನಿಗೆ ಈ ರಾತ್ರಿ ಹೇಳುತ್ತೇನೆ, ‘ಈ ಹೊತ್ತು ನಿನ್ನ ಮನಸ್ಸನ್ನು ತೃಪ್ತಿಪಡಿಸಿದೆ. ನಾಳೆ ನನ್ನ ಗೆಳತಿಯ ಇಷ್ಟಾರ್ಥವನ್ನು ಪೂರೈಸಬೇಕು. ಆದುದರಿಂದ ನನ್ನನ್ನು ಕ್ಷಮಿಸು’ ಎನ್ನುತ್ತೇನೆ.”
‘ಮುಗ್ಧ ಹುಡುಗಿ! ದೇವನು ಇವಳೊಡನೆ ಮಾತನಾಡುವನೇ!’ ಎಂದುಕೊಂಡು, ”ಆಗಲಿ ಮಮ್ಮು, ನೀನು ಬರುವ ವೇಳೆಗೆ ಚೆಲುವನನ್ನು ಸಿಂಗರಿಸಿಡುತ್ತೇನೆ” ಎಂದು ಸುಭದ್ರೆ ಹೇಳಿದಳು.
“ಅಷ್ಟೇ ಅಲ್ಲ ಭದ್ರಾ; ನಾನು ಬಂದ ಮೇಲೆ ನನಗೂ ಅಲಂಕಾರ ಮಾಡಬೇಕು.”
“ಆಗಬಹುದು” ಎಂದು ಸುಭದ್ರೆ ಹೇಳಿದಳು.
ಸ್ನಾನ ಪೂರೈಸಿದ ಮೇಲೆ ಮೂವರೂ ಅರಮನೆಯ ಹತ್ತಿರ ಬಂದರು. ಮಮ್ತಾಜ್ ಮತ್ತು ನೂರ್ ಬೇಗಂ ಅರಮನೆಯೊಳಕ್ಕೆ ಹೋದರು. ಸುಭದ್ರೆ ಚೆಲುವದೇವನನ್ನು ಸಿಂಗರಿಸಲು ಚಂದ್ರಮಹಲಿಗೆ ಬಂದಳು.
3
ರಾತ್ರಿ ಒಂಬತ್ತು ಗಂಟೆಯಾಯಿತು. ಸುಭದ್ರೆ ಚೆಲುವನನ್ನೂ ಮಮ್ತಾಜಳ ಕೊಠಡಿಯನ್ನೂ ಸಿಂಗರಿಸಿ, ನವಾಬನಂದಿನಿಯ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದಳು; ಸ್ವಲ್ಪ ಹೊತ್ತಾದ ಮೇಲೆ ಮಮ್ತಾಜಳು ನೂರ್ ಬೇಗಂಳೊಡನೆ ತನ್ನ ಕೊಠಡಿಗೆ ಬಂದು, ಅದನ್ನು ನೋಡಿ “ಭಲೆ! ಸುಭದ್ರಾ! ಅಲಂಕಾರ ಮಾಡುವುದರಲ್ಲಿ ನಿನಗೆ ಮೊದಲ ಬಹುಮಾನ ಕೊಡಬೇಕು” ಎಂದಳು.
“ನಿನ್ನ ಗಂಡ ಇದನ್ನು ಮೆಚ್ಚಿ ನಿನಗೆ ಮೊದಲ ಬಹುಮಾನ ಕೊಟ್ಟರೆ, ಆಮೇಲೆ ನನಗೆ ಇದಕ್ಕೆ ಎರಡನೆಯ ಬಹುಮಾನ ಕೊಡು” ಎಂದು ನಗುತ್ತಾ ಸುಭದ್ರೆ ಉತ್ತರ ಕೊಟ್ಟಳು.
“ಗಂಡ ಯಾರೆ? ಈ ದಿನ ಬೆಳಿಗ್ಗೆ ಬಂದಿದ್ದ ಸುಲ್ತಾನನೇ?” ಎಂದು ನೂರ್ ಬೇಗಂ ನಡುವೆ ಮಾತು ಹಾಕಿದಳು.
“ಇನ್ನು ಯಾರ ಹೆಸರನ್ನು ನಿನ್ನ ಬಳಿ ಎತ್ತಬೇಕು. ತಾಜ್? ಚೆಲುವನ ಹೆಸರು ನಿನ್ನ ಕಿವಿಗೆ ಚೆಲುವಾಗಿ ಬೀಳುತ್ತದೆಯೋ?” ಎಂದು ಸುಭದ್ರೆ ನಸುಗನೆಯಿಂದ ಹೇಳಿದಳು.
“ಏನೇ ಸುಭದ್ರಾ, ನೀನು ನನ್ನನ್ನು ತಮಾಷೆ ಮಾಡುತ್ತೀ. ನಿಮಗೂ ಕಾಲ!” ಎಂದು ಸುಭದ್ರೆಯನ್ನು ಓರೆಗಣ್ಣಿನಿಂದ ನೋಡುತ್ತಾ ಹೇಳಿ, “ಅದೇನೋ ನೋಡೆ; ಆ ‘ಚೆಲುವ’ ಎನ್ನುವ ಹೆಸರು ನನ್ನ ಕಿವಿಗೆ ಬಿದ್ದೊಡನೆಯೇ ಎದೆಯೆಲ್ಲಾ ಜುಂಮೆನ್ನುತ್ತದೆ” ಎಂದು ಮಮ್ತಾಜ್ ಹೇಳಿದಳು.
“ಹಾಗಾದರೆ ಅವನು ಪಕ್ಕದಲ್ಲಿಯೇ ಇರುವಲ್ಲಿ?” ಎಂದು ಸುಭದ್ರೆ ಹೇಳುತ್ತಾ ನಕ್ಕಳು.
ಮಮ್ತಾಜಳೂ ಮುಖದಲ್ಲಿ ಮುಗುಳುನಗೆ ಸೂಸಿ, “ಎಲ್ಲಿ ಭದ್ರಾ ನನ್ನ ಚೆಲುವನನ್ನು ತೆಗೆ” ಎಂದಳು.
“ನನ್ನ…ದೊಂದು… ಬಯಕೆ… ತಾಜ್” ಎಂದು ಸುಭದ್ರೆ ರಾಗ ತೆಗೆದು ಹೇಳಿದಳು.
“ನಿನ್ನ ಬಯಕೆ ಏನೇ ಇರಲಿ ಭದ್ರಾ! ಅದನ್ನು ಈಡೇರಿಸಿಕೊಡುತ್ತೇನೆ.”
“ನಿನ್ನನ್ನು ಅಲಂಕರಿಸಿದ ಮೇಲೆ ಚೆಲುವನ ಬಳಿ ನಿನ್ನನ್ನು ಕುಳ್ಳಿರಿಸುತ್ತೇನೆ. ಅಷ್ಟರವರೆಗೂ ಮಂಚದ ಪರದೆಯನ್ನು ತೆರೆಯಬೇಡ. ಚೆಲುವನನ್ನು ಸಿಂಗರಿಸಿ ಮಂಚದ ಮೇಲೆ ಕುಳ್ಳಿರಿಸಿದ್ದೇನೆ.”
”ಹಾಗಾದರೆ ಹಾಗೆಯೇ ಮಾಡು” ಎಂದು ಮಮ್ತಾಜಳು ಹೇಳಿದಳು.
ಸುಭದ್ರೆ ನೂರ್ ಬೇಗಂ ಇಬ್ಬರೂ ಸೇರಿ, ಮಮ್ತಾಜಳನ್ನು ಅವಳ ಚೆಲುವನ ಇಷ್ಟದಂತೆಯೇ ಸಿಂಗರಿಸಿದರು. ಆಮೇಲೆ ಸುಭದ್ರೆ ಮಂಚದ ಪರದೆ ತೆಗೆದು “ಇನ್ನು ಚೆಲುವನ ಬಳಿ ಕುಳಿತುಕೊಳ್ಳಬಹುದು. ತಾಜ್” ಎಂದು ನಸುನಗೆಯಿಂದ ಹೇಳಿದಳು.
ಹಾಸಿಗೆಯೆಲ್ಲಾ ಮಲ್ಲಿಗೆ, ಸಂಪಿಗೆ, ಜಾಜಿ, ಗುಲಾಬಿ ಮೊದಲಾದ ಹೂಗಳಿಂದ ತುಂಬಿ ಹೋಗಿದ್ದಿತು. ಆ ಹೂಗಳ ಮೇಲೆ ಕಾಶ್ಮೀರದ ರತ್ನಕಂಬಳಿಯೊಂದನ್ನು ಹಾಸಲಾಗಿದ್ದಿತು. ಕೊಠಡಿಯಲ್ಲಿ ಎಲ್ಲಿ ನೋಡಿದರೂ ಅರೇಬಿಯಾದ ಅತ್ತರುಗಳ, ಮತ್ತು ಹತ್ತಿಸಿದ್ದ ಊದುಬತ್ತಿಗಳ ಸುವಾಸನೆ! ಸುಲ್ತಾನನ ಮಗಳ ಕೊಠಡಿ, ಕೇಳಬೇಕೆ! ಆಕೆ ಹೇಗೆ ನೆನೆದರೆ ಅದು ಹಾಗಾಗುತ್ತೆ!
ಮಮ್‌ತಾಜಳು ಮರುಮಾತನಾಡದೆ ಹಾಸಿಗೆಯ ಮೇಲಿದ್ದ ಚೆಲುವನ ಬಳಿ ಕುಳಿತಳು. ಸುಭದ್ರೆ ಆಗ ಅವಳ ಮುಖವನ್ನು ನೋಡಿ ನಕ್ಕಳು. “ನೂರ್, ಅಲಮಾರಿನಲ್ಲಿ ಆರತಿ ಮಾಡಿಟ್ಟಿದ್ದೇನೆ ತೆಗೆದುಕೊಂಡು ಬಾ!” ಎಂದು ಸುಭದ್ರೆ ನೂರ್‌ಬೇಗಂಗೆ ಹೇಳಿದಳು. ನೂರ್ ಬೇಗಂ ಅಲಮಾರಿನಲ್ಲಿದ್ದ ಚಿನ್ನದ ತಟ್ಟೆಯಲ್ಲಿ ಮಾಡಿಟ್ಟ ಆರತಿಯನ್ನು ತಂದಳು. ಸುಭದ್ರೆಯು ಚೆಲುವ ಮತ್ತು ಮಮ್ತಾಜ್ ಇಬ್ಬರಿಗೂ ಎರಡು ಹೂಮಾಲೆಗಳನ್ನು ಹಾಕಿದಳು. ನೂರ್ ಮತ್ತು ಸುಭದ್ರೆ ದಂಪತಿಗಳಿಗೆ ಆರತಿಯನ್ನು ಬೆಳಗಿದರು.
ಆಗ ನೂರ್ ಬೇಗಂ ”ಏನು ಸುಭದ್ರಾ, ಗಂಡ ಹೆಂಡತಿಗಿಂತ ಚಿಕ್ಕವ!” ಎಂದು ನಸುನಗೆಯಿಂದ ತಲೆಯಲ್ಲಾಡಿಸುತ್ತಾ ಹೇಳಿದಳು.
”ಹೌದು; ನಾನು ನಿನಗೆ ಹಿಂದೆ ಹೇಳಿರಲಿಲ್ಲವೇ ನಮ್ಮ ಕೃಷ್ಣ ರಾಧೆಗಿಂತ ಚಿಕ್ಕವ ಎಂದು.”
“ನೆನಪಿಗೆ ಬಂತು! ನೆನಪಿಗೆ ಬಂತು! ಹಾಗಾದರೆ ಚೆಲುವ ಕೃಷ್ಣ; ತಾಜ್ ರಾಧೆ; ನೀನು ಸುಭದ್ರಾ!”
“ತಮಾಷೆ ಮಾಡಬೇಡ ಸುಮ್ಮನಿರೆ! ನೀನು ಸದಾ ಹುಡುಗಿಯೇ!” ಎಂದು ಮಮ್ತಾಜಳು ನಸುನಗೆಯಿಂದ ನೂರ್‌ಬೇಗಂಗೆ ಹೇಳಿ, ಚೆಲುವ ಮೂರ್ತಿಯನ್ನು ಅಪ್ಪಿ ಮುದ್ದಿಟ್ಟಳು!
”ಏನೇ ಭದ್ರಾ! ಆ ವಿಗ್ರಹವನ್ನು ಕಂಡರೇನೆ ಹಾಗೆ ಪ್ರಾಣ ಬಿಡುತ್ತಾಳೆ” ಎಂದು ನೂರ್ ಬೇಗಂ ಹೇಳಿದಳು.
”ಅಹುದು” ಎಂದು ಸುಭದ್ರೆ ಯೋಚಿಸುತ್ತಾ ಹೇಳಿ, ”ಇನ್ನು ನಾವು ಬರುತ್ತೇವೆ, ತಾಜ್. ನಿನ್ನ ಚೆಲುವನನ್ನು ನಾಳೆ ಬಿಟ್ಟಿರಲು ಅಪ್ಪಣೆ ಕೇಳು. ಬೆಳಗಿನಲ್ಲಿಯೇ ನಾವೆಲ್ಲಾ ಅಮೃತಮಹಲಿಗೆ ಹೋಗಬೇಕು” ಎಂದಳು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
“ಆ ಕಲ್ಲನ್ನೇನೇ ಕೇಳೋದು!” ಎಂದು ನೂರ್ ಬೇಗಂ ನಗುತ್ತಾ ಹೇಳಿದಳು.
”ಆಗಲಿ ಭದ್ರಾ” ಎಂದು ಮಮ್ತಾಜಳು ಸುಭದ್ರೆಗೆ ನಸುನಗೆಯಿಂದ ಹೇಳಿದಳು.
4
ಮಾರನೆಯ ದಿನ ಸೂರ್ಯೋದಯವಾಗಿ ಸ್ವಲ್ಪ ಹೊತ್ತಾಗಿತ್ತು. ಅರಮನೆಯ ತನ್ನ ಬೈಠಕ್ ಖಾನೆಯಲ್ಲಿ, ನವಾಬ್ ಅಹಮದ್ ಷಹನು ಕೆನ್ನೆಯಮೇಲೆ ಕೈಯಿಟ್ಟುಕೊಂಡು, ತಲೆಬಗ್ಗಿಸಿಕೊಂಡು ಯೋಚಿಸುತ್ತಾ ಕುಳಿತಿದ್ದನು. ಆಗ ಅವನ ವಜೀರ ಆಲಂಷಹನು ಅಲ್ಲಿಗೆ ಬಂದು, “ಪಾದಷಹ! ಸುಲ್ತಾನರು ಇಂದು ತುರ್ಕಿಗೆ ಪ್ರಯಾಣ ಬೆಳೆಸಿದರು” ಎಂದನು.
“ಹೂಂ!” ಎಂದು ತಲೆಯನ್ನು ಮೇಲಕ್ಕೆತ್ತಿ, ವಜೀರನ ಮುಖವನ್ನು ನೋಡಿ, ಪಕ್ಕದಲ್ಲಿದ್ದ ಆಸನವನ್ನು ವಜೀರನಿಗೆ ಕುಳಿತುಕೊಳ್ಳೆಂದು ಪಾದಷಹನು ತೋರಿಸಿದನು. ವಜೀರನು ಕುಳಿತು, “ಪಾದಷಹ! ಸುಮ್ಮನೆ ಯೋಚನೆ ಮಾಡಿ ಪ್ರಯೋಜನವೇನು? ನಿಮ್ಮ ಮಗಳಿಗೆ ಎಂದು ಮನಸ್ಸು ಬರುತ್ತದೆಯೋ ಅಂದು ಮದುವೆ ಮಾಡಿಕೊಳ್ಳಲಿ” ಎಂದನು.

“ಹಾಗಲ್ಲ ಆಲಂಷಹ; ತುರ್ಕಿಯ ಸುಲ್ತಾನ! ಅವನಂತಹ ಐಶ್ವರ್ಯವಂತ, ರೂಪವಂತ, ವಿದ್ಯಾವಂತ, ಬಲವಂತ ಈ ಪ್ರಪಂಚದಲ್ಲಿಯೇ ಇಲ್ಲ. ಅಂತಹವನು ನನ್ನಂಥ ದೀನನ ಮಗಳನ್ನು ಕೇಳಲು ಬಂದರೆ ಆಕೆ ಕೊಡುವ ಉತ್ತರವೇನು? ಮುಖ್ಯ ನಮಗೆ ಸುಲ್ತಾನನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಪುಣ್ಯ ಇಲ್ಲ. ಸುಲ್ತಾನ ರೂಪವಂತ ಎಂದು ತಾಜಳಿಗೆ ಹೇಳಿದರೆ ನನ್ನ ಕೈಹಿಡಿಯುವವನು ಅವನಿಗಿಂತ ರೂಪವಂತ, ಅವನಿಗಿಂತ ಐಶ್ವರ್ಯವಂತ, ಬಲವಂತ ಎನ್ನುತ್ತಾಳೆ. ಯಾರೋ ಆತ ಆ ಅಲ್ಲಾನೇ ಬಲ್ಲ!” ಎಂದು ನಿಟ್ಟುಸಿರನ್ನು ಬಿಡುತ್ತಾ ಪಾದಷಹನು ಹೇಳಿದನು. ವಜೀರನು ಯಾವ ಉತ್ತರವನ್ನೂ ಕೊಡದೆ ಸುಮ್ಮನಿದ್ದನು.
“ನೋಡು ಆಲಂಷಹ, ನಮ್ಮಜ್ಜ ಈ ದೇಶದ ಎಲ್ಲಾ ವಿಗ್ರಹಗಳನ್ನೂ ಕೊಳ್ಳೆ ಹೊಡೆದು ತಂದನಷ್ಟೆ. ಅವುಗಳಲ್ಲಿ ಒಂದನ್ನು ತನ್ನ ಚಿಕ್ಕಂದಿನಲ್ಲಿ ತಾಜ್ ಆಟದ ಗೊಂಬೆಗಾಗಿ ಕೇಳಿ ತೆಗೆದುಕೊಂಡಳು. ಅದರ ಹೆಸರೇನು? ಓ! ನೆನಪಿಗೆ ಬಂತು; ಚೆಲುವನಂತೆ! ಅದರ ಹೆಸರು ಅನ್ವರ್ಥನಾಮ, ಆಲಂಷಹ! ಅದು ಎಷ್ಟು ಸುಂದರವಾದ ವಿಗ್ರಹ! ಏನು ಕಳೆ ಇದೆ ಅದರ ಮುಖದಲ್ಲಿ! ಯಾವುದನ್ನೂ ಲಕ್ಷಿಸದೆ ವಿಗ್ರಹಗಳನ್ನೆಲ್ಲಾ ಛೇದಿಸಿದ ನಮ್ಮಜ್ಜ ಮಹಮೂದಷಹನ ಹೃದಯವನ್ನು ಸಹ ಕರಗಿಸಿ ತನ್ನ ಪಾಡು ಗಟ್ಟಿಯಾಗುವಂತೆ ಮಾಡಿಕೊಂಡಿದೆ ಆ ವಿಗ್ರಹ! ಅದೊಂದಿದ್ದರೆ ತಾಜಳಿಗೆ ಸಾಕು. ವಯಸ್ಸಾದ ಹುಡುಗಿ. ಅನ್ಯಾಯವಾಗಿ ಯೌವನವನ್ನು ಮರಳುಗಾಡಿನಲ್ಲಿ ಬಿದ್ದ ಮಳೆಯಂತೆ ಕಳೆಯುತ್ತಿದ್ದಾಳೆ” ಎಂದು ಪಾದಷಹನು ಹೇಳಿದನು.
ಆಗ ಆಳೊಬ್ಬನು ಒಂದು ಮೊಳಕಾಲೂರಿ ಪಾದಷಹನನ್ನು ನಮಸ್ಕರಿಸಿ, “ಪಾದಷಹ, ದಕ್ಷಿಣ ದೇಶದಿಂದ ಬ್ರಾಹ್ಮಣನೊಬ್ಬನು ತಮ್ಮನ್ನು ನೋಡಬೇಕೆಂದು ಬಂದಿದ್ದಾನೆ” ಎಂದು ಹೇಳಿದನು.
“ಈಗ ನೋಡಲಾಗುವುದಿಲ್ಲ ಎಂದು ಆತನಿಗೆ ಹೇಳು.”
“ಅಪ್ಪಣೆ ಖಾವಂದ್” ಎಂದು ಪುನಃ ಪಾದಷಹನನ್ನು ನಮಸ್ಕರಿಸಿ ಆಳು ಹೊರಟುಹೋದನು.
”ಪಾದಷಹ! ಈ ದಿನ ಘಜ್ಜಿಯಿಂದ ಕಾಗದ ಬಂದಿದೆ” ಎಂದು ವಜೀರನು ಹೇಳಿದನು.
“ಏನೆಂದು?”
”ಅಲ್ಲಿ ಗಲಭೆ ಬಹಳವಂತೆ. ನಿಮ್ಮ ತಮ್ಮಂದಿರು ನಿಮ್ಮನ್ನು ಸೈನ್ಯ ಸಮೇತ ತಕ್ಷಣ ಬರ ಹೇಳಿದ್ದಾರೆ.”
“ತಕ್ಷಣ ಹೋಗಬೇಕಾದ್ದು ನಮ್ಮ ಕರ್ತವ್ಯ. ಆಗಲಿ ಮಧ್ಯಾಹ್ನ ಸೈನ್ಯದೊಡನೆ ಘಜನಿಗೆ ಹೊರಡೋಣ, ಆಲಂಷಹ.”
“ಆಗಬಹುದು. ಖಾವಂದ್.”
ಆಗ ಪುನಃ ಅದೇ ಆಳು ಪ್ರವೇಶಿಸಿ ಪಾದಷಹನನ್ನು ನಮಸ್ಕರಿಸಿ ದೈನ್ಯದಿಂದ ”ಖಾವಂದ್! ‘ಅವರೊಡನೆ ಒಂದು ನಿಮಿಷ ಮಾತನಾಡಿ ಹೊರಟು ಹೋಗುತ್ತೇನೆ. ಅವರಿಗೆ ನನ್ನ ಸಲಾಂಗಳನ್ನು ಹೇಳಿ, ದಕ್ಷಿಣ ದೇಶದಿಂದ ಬಂದಿದ್ದೇನೆಂದು ಹೇಳು’ ಎಂದು ಬ್ರಾಹ್ಮಣನು ನನ್ನನ್ನು ಪೀಡಿಸಿದನು, ಪಾದಷಹ.”
‘ನಾವೂ ಇಂದು ಘಜನಿಗೆ ಹೊರಟುಹೋಗುತ್ತೇವೆ’ ಎಂದುಕೊಂಡು, “ಆಗಲಿ ಆತನನ್ನು ಬರಹೇಳು” ಎಂದು ಆಳಿಗೆ ಪಾದಷಹನು ಹೇಳಿದನು.
ಸ್ವಲ್ಪ ಹೊತ್ತಾದ ಮೇಲೆ ಆಳು ಬ್ರಾಹ್ಮಣನನ್ನು ಕರೆದುಕೊಂಡು ಪಾದಷಹನ ಮುಂದೆ ಬಿಟ್ಟು ನೆಲಮುಟ್ಟಿ ಸಲಾಂ ಮಾಡಿ ಹಿಂಜರಿದನು.
ಪಾದಷಹನು ಬ್ರಾಹ್ಮಣನ ಮುಖವನ್ನು ದೃಷ್ಟಿಸಿ ನೋಡಿ, “ಈತನ ಮುಖದಲ್ಲಿ ಏನು ಕಳೆ ಇದೆ, ಆಲಂಷಹ!” ಎಂದು ಹೇಳಿ, ”ನಿಮ್ಮ ಹೆಸರೇನು?” ಎಂದು ಬ್ರಾಹ್ಮಣನನ್ನು ಕೇಳಿದನು.
”ಪಾದಷಹ! ದೀರ್ಘ ಆಯುಷ್ಯವಂತನಾಗಿರು. ನನ್ನನ್ನು ರಾಮಾನುಜ ಎಂದು ಕರೆಯುವರು.”
”ರಾಮಾನುಜ- ಕಿವಿಗಿಂಪಾದ ಒಳ್ಳೆಯ ಹೆಸರು! ನನ್ನಿಂದೇನಾಗಬೇಕು?”
”ನನ್ನ ದೇವಮೂರ್ತಿ ನಿಮ್ಮ ಬಳಿ ಇದೆ. ಇದನ್ನು ದಯಪಾಲಿಸಬೇಕು, ಪಾದಷಹ!”
”ಪಕ್ಕದ ಕೊಠಡಿಯಲ್ಲಿ ವಿಗ್ರಹಗಳೆಲ್ಲಾ ಬಿದ್ದಿವೆ. ನಿಮ್ಮ ದೇವರಾವುದೋ ಅದನ್ನು ತೆಗೆದುಕೊಂಡು ಹೋಗಿ. ಅಲಂಷಹ! ಇವರನ್ನು ಪಕ್ಕದ ಕೊಠಡಿಗೆ ಕರೆದುಕೊಂಡು ಹೋಗಿ ವಿಗ್ರಹಗಳನ್ನು ತೋರಿಸಿ.”
“ಅಪ್ಪಣೆ ಖಾವಂದ್” ಎಂದು ಆಲಂಷಹನು ಪಾದಷಹನಿಗೆ ಹೇಳಿ, ರಾಮಾನುಜಾಚಾರ್ಯರೊಡನೆ ಪಕ್ಕದ ಕೊಠಡಿಗೆ ಹೋದನು. ಆಚಾರ್ಯರು ಆ ಕೊಠಡಿಯಲ್ಲಿ ಸ್ವಲ್ಪ ಹೊತ್ತು ನಿಂತು, ವಿಗ್ರಹಗಳ ಕಡೆಗೊಮ್ಮೆ ತಮ್ಮ ದೃಷ್ಟಿಯನ್ನು ಬೀರಿ, ಕೆಲವು ಸ್ತೋತ್ರಗಳನ್ನು ಹೇಳಿ, “ವಜೀರ್ ಸಾಹೇಬ್ ! ಇಲ್ಲಿ ನನ್ನ ವಿಗ್ರಹವಿಲ್ಲ!” ಎಂದರು.
ಅವರಿಬ್ಬರೂ ಪುನಃ ಪಾದಷಹನ ಬಳಿಗೆ ಬಂದರು. ವಜೀರನು ಅಲ್ಲಿ ವಿಗ್ರಹವಿಲ್ಲವೆಂದು ಪಾದಷಹನಿಗೆ ತಿಳಿಸಿದನು. ”ಅಂದರೆ ನಮ್ಮಲ್ಲಿ ಆ ವಿಗ್ರಹವಿಲ್ಲ” ಎಂದು ಪಾದಷಹನು ಆಚಾರ್ಯರಿಗೆ ಹೇಳಿದನು.
ಆಚಾರ್ಯರು ಸ್ವಲ್ಪ ಹೊತ್ತು ಯೋಚಿಸಿ, “ಪಾದಷಹ! ಅದು ನಿಮ್ಮ ಮಗಳ ಬಳಿ ಇದೆ” ಎಂದು ನಿಧಾನವಾಗಿ ನಮ್ರಭಾವದಿಂದ ಪಾದಷಹನಿಗೆ ಹೇಳಿದರು.
“ನಿಮಗೆ ಹೇಗೆ ಗೊತ್ತು?” ಎಂದು ಪಾದಷಹನು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಆಚಾರ್ಯರನ್ನು ದುರುಗುಟ್ಟಿಕೊಂಡು ನೋಡುತ್ತಾ ಹೇಳಿದನು.
“ಖಾವಂದ್! ಬಡವನ ಮೇಲೆ ಕೋಪ ಬೇಡ. ನನ್ನ ದೇವ ಕನಸಿನಲ್ಲಿ ಬಂದು ತಾನು ನಿಮ್ಮ ಮಗಳ ಬಳಿ ಇರುವುದಾಗಿ ಹೇಳಿದ.”
“ಹಾಗೋ! ಏನು ನಿಮ್ಮ ವಿಗ್ರಹದ ಹೆಸರು ?… ಹಾಳು ಮರೆತೇಹೋಗುತ್ತೆ… ಹೋ ಚೆಲುವ ಎಂದೋ?”
”ಹೌದು ಪಾದಷಹ! ಅದು ನನ್ನ ಶಲ್ವಪುಳ್ಳೆ.”
‘ಏನು ವಿಗ್ರಹಕ್ಕೆ ಜೀವವಿದೆಯೇ? ಈತನ ಕನಸಿನಲ್ಲಿ ಅದು ಹೇಗೆ ಬಂದು ಹೇಳಿತು? ನನ್ನ ಮಗಳು ಅದನ್ನು ಅಷ್ಟು ಪ್ರೀತಿಸಲು ಕಾರಣವೇನು? ಅವಳ ಗಂಡ ಅದೇನೋ? ಆ ಕಂಚು? ಏನಾದರೂ ಆಗಿರಲಿ ಅದು. ಆ ಹಾಳು ತೊಲಗಿ ಹೋದರೆ ನನ್ನ ಮಗಳ ಮನಸ್ಸು ಸರಿಯಾದ ಸ್ಥಿತಿಗೆ ಬಂದು, ಆಕೆ ಸುಲ್ತಾನನನ್ನು ವರಿಸಬಹುದು. ಪೀಡೆ ನನ್ನ ಮನೆಯನ್ನು ಬಿಟ್ಟು ತೊಲಗಿ ಹೋಗಲಿ’ ಎಂದುಕೊಂಡು, ”ಬನ್ನಿ, ನಿಮ್ಮ ವಿಗ್ರಹವನ್ನು ಕೊಡುತ್ತೇನೆ” ಎಂದು ಆಚಾರ್ಯರಿಗೆ ಪಾದಷಹನು ಹೇಳಿದನು.
ಮೂವರೂ ಚಂದ್ರಮಹಲಿನಲ್ಲಿದ್ದ ಮಮ್‌ತಾಜಳ ಕೊಠಡಿಯ ಬಳಿ ಬಂದರು. ಆಗ ಪಾದಷಹನು “ತಾಜ್ ಎಲ್ಲಿ?” ಎಂದು ಕೊಠಡಿಯ ಬಳಿ ನಿಂತಿದ್ದ ದಾಸಿಯನ್ನು ಕೇಳಿದನು.
“ಅವರು ತಮ್ಮ ಗೆಳತಿಯರೊಡನೆ ಅಮೃತಮಹಲಿಗೆ ಹೋಗಿದ್ದಾರೆ ಖಾವಂದ್” ಎಂದು ದಾಸಿಯು ಹೇಳಿದಳು.
“ಊ! ಬಾಗಿಲು ತೆರೆ.”
“ಯಾರನ್ನೂ…. ನಾನು ಬರುವವರೆಗೂ ಬಿಡಬೇಡ ಎಂದು ಅಪ್ಪಣೆ ಕೊಟ್ಟಿದ್ದಾರೆ. ಪಾದಷಹ.”
“ಏನು ನನ್ನನ್ನೂ!”
“ನಿಮ್ಮನ್ನೂ ಸಹ, ಖಾವಂದ್.”
“ಬಾಗಿಲು ತೆರೆಯುವೆಯೋ ಇಲ್ಲವೋ” ಎಂದು ಪಾದಷಹನು ಕಣ್ಣುಗಳಿಂದ ಕಿಡಿಗಳನ್ನು ಸುರಿಸುತ್ತಾ ಕೇಳಿದನು.
ದಾಸಿಯ ನಡುಗುವ ಕೈಯಿಂದ ಬೀಗದ ಕೈಯ ಗೊಂಚಲು ನೆಲದ ಮೇಲೆ ಬಿತ್ತು. ಪಾದಷಹನೇ ಅದನ್ನು ಎತ್ತಿಕೊಂಡು ಬಾಗಿಲನ್ನು ತೆಗೆದನು. ಪಾದಷಹ, ಆಲಂಷಹ ಮತ್ತು ಆಚಾರ್ಯರು ಮಮ್ತಾಜಳ ಕೊಠಡಿಯೊಳಹೊಕ್ಕರು. “ಈ ಕೊಠಡಿಯು ಎಷ್ಟು ಸೊಗಸಾಗಿ ಸಿಂಗರಿಸಲ್ಪಟ್ಟಿದೆ!” ಎಂದು ಆಲಂಷಹನು ನುಡಿದನು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
“ಅವಳ ಗಂಟೇನು ಹೋಗಬೇಕು; ಸಂಪಾದಿಸಲು ಅವರಪ್ಪನಿದ್ದಾನಲ್ಲಾ!” ಎಂದು ಪಾದಷಹನು ಒಂದು ತೆರದ ರೋಷದಿಂದ ಹೇಳಿ, “ಎಲ್ಲಿ ನಿಮ್ಮ ದೇವರಿದ್ದರೆ ತೆಗೆದುಕೊಳ್ಳಿ” ಎಂದು ರಾಮಾನುಜಾಚಾರ್ಯರಿಗೆ ಹೇಳಿದನು.

ಆಚಾರ್ಯರು ಅಲ್ಲಿದ್ದ ಹಾಸಿಗೆಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಎದ್ದು ಕುಳಿತು, ಎರಡು ಕೈಗಳನ್ನೂ ಜೋಡಿಸಿ, ಚೆಲುವಸ್ವಾಮಿಯ ಸ್ತೋತ್ರವನ್ನು ಹಾಡಿದರು. ಮಂಚದ ತೆರೆಯನ್ನು ತಳ್ಳಿ ಹದಿನಾರು ವರ್ಷದ ಸುಂದರ ಬಾಲಕನು ನೆಗಿಯುತ್ತಾ ಬಂದು ಆಚಾರ್ಯರ ತೊಡೆಯ ಮೇಲೆ ಕುಳಿತನು. ಬಾಲಕನ ಕಾಲಿನ ಗೆಜ್ಜೆಗಳನ್ನೂ, ಸೊಗಸಿನ ಉಡುಪನ್ನೂ ನೋಡಿ, ಆಚಾರ್ಯರು ಸಂತೋಷದ ಸಾಗರದಲ್ಲಿ ಮುಳುಗಿ, ಆತನ ತಲೆಯನ್ನು ಪುತ್ರಪ್ರೇಮದಿಂದ ಆಘ್ರಾಣಿಸುತ್ತಾ “ನನ್ನ ಶಲ್ವಪುಳ್ಳೆ! ನನ್ನ ಶಲ್ವಪುಳ್ಳೆ!!” ಎಂದು ಅಪ್ಪಿಕೊಂಡು ಮುದ್ದಿಟ್ಟರು. ಈ ದೃಶ್ಯವನ್ನು ಕಣ್ಣಾರೆ ನೋಡುತ್ತಿದ್ದ ಪಾದಷಹನೂ ಆಲಂಷಹನೂ ಸ್ತಂಭೀಭೂತರಾದರು. ”ಸತ್ಯವಂತನಾದ ಭಕ್ತನೀತ!” ಎಂದು ಪಾದಷಹನು ಆಲಂಷಹನಿಗೆ ಹೇಳಿ, “ಆಲಂಷಹ! ಈತನಿಗೆ ಬೇಕಾದ ಎಲ್ಲಾ ಪ್ರಯಾಣ ಸನ್ನಾಹಗಳನ್ನೂ ಮಾಡಿಕೊಡು. ನಮ್ಮ ಭಂಡಾರದಲ್ಲಿ ಕಾಲು ಭಾಗವನ್ನು ಇವನಿಗೆ ಕೊಟ್ಟು ಕಳುಹಿಸು, ಸೈನ್ಯದೊಡನೆ ಮಧ್ಯಾಹ್ನ ಬರಬೇಕು, ಆಲಂಷಹ, ಘಜನಿಗೆ ಹೋಗೋಣ” ಎಂದನು.
“ಅಪ್ಪಣೆ ಖಾವಂದ್” ಎಂದು ಆಲಂಷಹನು ಹೇಳಿದನು.
5
ಆಚಾರ್ಯರು ಚೆಲುವಮೂರ್ತಿಯನ್ನು ತೆಗೆದುಕೊಂಡು ಹೋದ ಎರಡನೆಯ ದಿನ ಬೆಳಗಿನಲ್ಲಿ ಅಮೃತಮಹಲಿನ ಉದ್ಯಾನದ ಹಾಸುಗಲ್ಲಿನ ಮೇಲೆ ಮಮ್ತಾಜಳು ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಸುಭದ್ರಾ ನೂರ್ ಬೇಗಂ ಬಳಿಗೆ ಬಂದು, “ಮಮ್ಮು, ಯಾಕೆ ಹೀಗೆ ಯೋಚಿಸುತ್ತಿದ್ದೀಯೆ? ಈ ದಿನ ಸಂಜೆಯೇ ಚಂದ್ರ ಮಹಲಿಗೆ ಹೊರಟುಬಿಡೋಣ” ಎಂದರು.
”ಭದ್ರಾ ನಿನ್ನೆಯೇ ಹೋಗಿದ್ದರೆ ಚೆನ್ನಾಗಿತ್ತು” ಎಂದು ಒಂದು ತರದ ನಿರಾಶೆಯಿಂದ ಮಮ್ತಾಜಳು ಹೇಳಿದಳು.
”ಹೌದು; ನನ್ನಿಂದ ನೀನೂ ಇಲ್ಲಿ ನಿಂತೆ. ಅದೇನೋ ನಿಮ್ಮೊಡನೆ ಈ ಸ್ಥಳಕ್ಕೆ ಬಂದರೆ ನನಗೆ ಮತ್ತೇನೂ ಬೇಡವಾಗುವುದು. ಇಲ್ಲಿಯ ಪ್ರಕೃತಿಯ ಸೌಂದರ್ಯ-ವಿಶಾಲವಾಗಿ ನಿಧಾನವಾಗಿ ಹರಿಯುವ ಯಮುನೆ, ಇಲ್ಲಿನ ಸೊಗಸಾದ ರಾಜೋದ್ಯಾನ ಇವೆಲ್ಲಾ- ನನ್ನ ಮನಸ್ಸನ್ನಾಕರ್ಷಿಸಿವೆ. ಈ ಸ್ಥಳದಲ್ಲಿಯೇ ಯಾವಾಗಲೂ ಇರೋಣವೆನ್ನಿಸುತ್ತೆ. ತಾಜ್! ಅದಕ್ಕಾಗಿಯೇ ನನಗಾಗಿ ಇನ್ನೊಂದು ದಿನವಿರೆಂದು ನಿನ್ನೆ ನಿನ್ನನ್ನು ಕೇಳಿಕೊಂಡದ್ದು.”
“ಅವಳ ಗಂಡನನ್ನು ಪಾಪ ಒಂದು ದಿನ ಕೂಡ ಅವಳು ಬಿಟ್ಟಿರಲಾರಳೆ” ಎಂದು ನೂರ್ ಬೇಗಂ ಹಾಸ್ಯ ಧ್ವನಿಯಿಂದ ಹೇಳಿದಳು.
ಮಮ್ತಾಜಳು ನೂರ್‌ಬೇಗಂಳನ್ನು ದುರದುರನೆ ನೋಡಿದಳು. ಸ್ವಲ್ಪ ಹೊತ್ತಾದ ಮೇಲೆ, “ನೂರ್ ನಿನಗೆ ಪರಿಹಾಸ್ಯ; ನನಗೆ ಪ್ರಾಣಸಂಕಟ. ಹೌದು; ಆತನೇ ನನ್ನಿನಿಯ; ನಾವೆಲ್ಲಾ ಆತನ ಭೋಗ ವಸ್ತುಗಳೇ. ಅಂತಹವನನ್ನು ಬಿಟ್ಟಿರುವುದು ಹೇಗೆ? ಇನ್ನಾದರೂ ಸುಮ್ಮನಿರುವೆಯಾ?” ಎಂದು ಒಂದು ತೆರೆದ ದರ್ಪದಿಂದ ಕೂಡಿದ ಕೋಪದಿಂದ ಹೇಳಿದಳು.
“ತಾಜ್, ಯಾಕೆ ಹಾಗೆ ಚಿಂತಿಸುವೆ; ನಿನ್ನ ದೇವ ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಸುಭದ್ರೆ ಸಮಾಧಾನಪಡಿಸಲು ಹೇಳಿದಳು.
”ಭದ್ರಾ! ನಿನಗೆ ಆತನ ಗುಣ ಗೊತ್ತಿಲ್ಲ, ಭಕ್ತರಿಗೆ ತನ್ನನ್ನೇ ಧಾರೆ ಎರೆದುಕೊಂಡು, ಇನಿಯಳನ್ನು ಬಿಟ್ಟು ಹೋಗುವ ಗುಣ ಆತನದು.”
‘ಎಳೆಯ ಹದಿನೇಳು ವರ್ಷದ ಮಹಮದೀಯ ಹುಡುಗಿಯಾದರೂ ನುರಿತ ಹಿಂದೂ ವೇದಾಂತಿಯಂತೆ ಇವಳು ಮಾತನಾಡುವಳು!’ ಎಂದುಕೊಂಡು, “ತಾಜ್, ರಾತ್ರಿ ಆತನೇನಾದರೂ ಹೇಳಿದನೇ?” ಎಂದು ಸುಭದ್ರೆ ಕೇಳಿದಳು.
“ಊ ಸುಭದ್ರಾ! ‘ತಾಜ್! ನಿನ್ನ ಹತ್ತಿರ ನಾನು ಬಹಳ ದಿನಗಳಿಂದ ಇದ್ದೇನೆ. ಭಕ್ತರೆಲ್ಲಾ ಬಂದು ತಮ್ಮ ಬಳಿ ಇರಬೇಕೆಂದು ನನ್ನನ್ನು ಕೇಳುತ್ತಿದ್ದಾರೆ. ಪ್ರತಿಯೊಬ್ಬರ ಇಷ್ಟಾರ್ಥವನ್ನೂ ಈಡೇರಿಸುವುದು ನನ್ನ ಕರ್ತವ್ಯ. ನನ್ನ ಪ್ರಿಯ ಭಕ್ತ… ತಂದೆ… ಆಚಾರ್ಯ…ನಾದ ಈ ಬ್ರಾಹ್ಮಣನೊಡನೆ ದಕ್ಷಿಣದೇಶದ ಪುಣ್ಯಭೂಮಿಯೊಂದಕ್ಕೆ ಹೋಗುತ್ತೇನೆ. ನನ್ನ ಮೇಲೆ ನಿನಗೆ ಪ್ರೇಮವಿದ್ದರೆ, ನೈಜವಾದ ಪ್ರೀತಿ ಇದ್ದರೆ ಬಂದು ನನ್ನನ್ನು ಅಲ್ಲಿ ನೋಡು’ ಎಂದು ಹೇಳಿದನು.”
ಇದನ್ನು ಓದಿದ್ದೀರಾ?: ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ
”ಏನು! ‘ಪ್ರೀತಿ ಇದ್ದರೆ ಬಂದು ನೋಡು!’ ನಿನ್ನ ತಪಿಸುತ್ತಿರುವ ಹೃದಯವೇದನೆ ಆತನಿಗೆ ಗೊತ್ತಿಲ್ಲವೇ?” ಎಂದು ಸುಭದ್ರೆ ಮಮ್ತಾಜಳಿಗೆ ಹೇಳಿ, ‘ಇವಳಾಡುವುದೆಲ್ಲಾ ನಂಬಬಾರದ ಸುಸಂಬದ್ಧವಾದ ಮಾತುಗಳಾಗಿವೆ. ದೇವರೇ ಬಲ್ಲ!’ ಎಂದುಕೊಂಡು, “ಸುಮ್ಮನೆ ಚಿಂತಿಸಬೇಡ ತಾಜ್; ಖಂಡಿತವಾಗಿಯೂ ನೀನು ಆತನನ್ನು ಚಂದ್ರ ಮಹಲಿನಲ್ಲಿ ನೋಡುವೆ” ಎಂದಳು.
ಆ ದಿನ ಸಂಜೆಯೇ ಅವರು ಮೂವರೂ ಚಂದ್ರಮಹಲ ಬಳಿಗೆ ಬಂದರು. “ತಾಜ್! ನಾವಿಬ್ಬರೂ ಮನೆಗೆ ಹೋಗಿ ನಾಳೆ ಬಂದು ನೋಡುತ್ತೇವೆ” ಎಂದು ನೂರ್‌ಬೇಗಂ ಹೇಳಿದಳು.
”ಹೌದು; ನಿಮ್ಮ ತಾಯಿತಂದೆಗಳು ನಿಮಗಾಗಿ ಎದುರುನೋಡುತ್ತಿರುವರು. ಹೋಗಿ ಬನ್ನಿ, ಭದ್ರ, ನಾಳೆ ಬೆಳಿಗ್ಗೆ ಅಷ್ಟು ಹೊತ್ತಿಗೇನೇ ಬರಬೇಕು. ನೂರ್! ಮರೆಯದೆ ನಾಳೆ ಬಾ.”
“ಆಗಲಿ” ಎಂದು ಹೇಳಿ, ನೂರ್ ಬೇಗಂ ಮತ್ತು ಸುಭದ್ರೆ ಹೊರಟುಹೋದರು.
ಮಮ್ತಾಜಳು ತನ್ನ ಕೊಠಡಿಯ ಬಳಿಗೆ ಬಂದಳು. ತೆರೆದಿರುವ ಕೊಠಡಿಯ ಬಾಗಿಲನ್ನು ನೋಡಿ ಅವಳ ಎದೆ ಝಲ್ಲೆಂದಿತು. ನೋಡಿದಳು, ದಾಸಿಯು ಅಲ್ಲಿರಲಿಲ್ಲ. ಕೊಠಡಿಯೊಳಕ್ಕೆ ಓಡಿ ಬಂದು, ಮಂಚದ ಮುಖ ಪರದೆಯನ್ನು ಎಳೆದು ನೋಡಿದಳು. ತನ್ನ ಚೆಲುವ ಮೂರ್ತಿ ಅಲ್ಲಿರಲಿಲ್ಲ! “ಅಯ್ಯೋ! ಚೆಲುವಾ ನನ್ನನ್ನು ಬಿಟ್ಟು ಹೋದೆಯಾ! ನಾನು ಪಾಪಿ; ನಿನ್ನ ಬಿಟ್ಟು ಏಕೆ ಎರಡು ದಿನ ನಿಂತೆ!” ಎಂದು ಮಂಚದ ಮೇಲೆ ಹೊರಳಾಡುತ್ತಾ ರೋದಿಸಿದಳು.
ಆ ವೇಳೆಗೆ ದಾಸಿಯು ಅಲ್ಲಿಗೆ ಬಂದಳು. “ಯಾರೆ ಕೊಠಡಿಯೊಳಕ್ಕೆ ಬಂದಿದ್ದವರು?” ಎಂದು ಮಮ್ತಾಜಳು ಕಣ್ಣುಗಳಿಂದ ನೀರು ಸುರಿಸುತ್ತಾ ಗದ್ಗದ ಸ್ವರದಿಂದ ದಾಸಿಯನ್ನು ಕೇಳಿದಳು.
”ಪಾದಷಹರು, ಜಹಾಪನಾ! ಅವರು ವಿಗ್ರಹವನ್ನು ಬ್ರಾಹ್ಮಣನೊಬ್ಬನಿಗೆ ಕೊಟ್ಟರು” ಎಂದು ನಡುಗುವ ಧ್ವನಿಯಿಂದ ದಾಸಿಯು ಮಮ್ತಾಜಳಿಗೆ ಹೇಳಿದಳು.
“ಹೂ! ಆ ಬ್ರಾಹ್ಮಣನ ಊರಾವುದು ಬಲ್ಲೆಯಾ?”
“ಮೇಲುಕೋಟೆ ಎಂದು ಆತ ಹೇಳಿದಂತೆ ನೆನಪು.”
‘ಹೌದು; ಆ ಹೆಸರು ನನ್ನ ಕಿವಿಯ ಮೇಲೆ ಹಿಂದೆ ಒಮ್ಮೆ ಬಿದ್ದಿದೆ!’ ಎಂದುಕೊಂಡು, “ನೀನು ಹೋಗು” ಎಂದು ದಾಸಿಗೆ ಹೇಳಿದಳು. ದಾಸಿಯು ನವಾಬನಂದಿನಿಯನ್ನು ನಮಸ್ಕರಿಸಿ ಹೊರಟು ಹೋದಳು.
“ದೇವಾ! ನೀನು ಹೇಳಿದ ಪ್ರತಿಮಾತನ್ನೂ ನಿಜವಾಗಿಯೂ ತಕ್ಷಣ ಮಾಡುವೆಯಲ್ಲಾ! ನನ್ನ ತಂದೆತಾಯಿಗಳು ನನಗೆ ಶತ್ರುಗಳು… ಸುಮ್ಮನೆ ದುಃಖಿಸಿ ಫಲವೇನು ?… ಇಗೋ ನಿನ್ನಲ್ಲಿಗೆ ಬರುವೆನು” ಎಂದು ಸರನೆ ಪಕ್ಕದ ಕೊಠಡಿಯೊಳಕ್ಕೆ ಹೋಗಿ, ಅಲ್ಲಿದ್ದ ಕತ್ತಿಯೊಂದನ್ನು ಒರೆಯಿಂದ ತೆಗೆದು, ಅದನ್ನೇ ದೃಷ್ಟಿಸಿ ಸ್ವಲ್ಪಹೊತ್ತು ನೋಡಿ, ಏನನ್ನೋ ಯೋಚಿಸುತ್ತಾ, ”ನಿನ್ನನ್ನು ಹೀಗೆ ಸೇರಿದರೆ ನನ್ನನ್ನು ಮೆಚ್ಚಲಾರೆ. ನಿನ್ನ ಮೂರ್ತಿಯನ್ನು ಮನದಣಿಯೇ ನೋಡಿಯೇ ನಿನ್ನಲ್ಲಿಗೆ ಶಾಶ್ವತವಾಗಿ ಬರುವೆನು. ನೀನಲ್ಲದೆ ಮತ್ತಾರು ನನಗೆ ಬೇಕಾದವರು, ದೊರೆ!” ಎಂದುಕೊಂಡು ಕತ್ತಿಯನ್ನು ಅಲ್ಲಿಯೇ ಬಿಸಾಟು, ಹುಚ್ಚಳಂತೆ ತನ್ನಲ್ಲಿ ತಾನೇ ಏನೇನೋ ಅಂದುಕೊಳ್ಳುತ್ತಾ, ನೆಟ್ಟಗೆ ಕುದುರೆಯ ಲಾಯಕ್ಕೆ ಬಂದಳು. ಕುದುರೆಗಳನ್ನು ಒಂದೊಂದನ್ನಾಗಿ ಮೊದಲಿನಿಂದ ನೋಡಿದಳು. ತನಗೆ ಬೇಕಾದುದು ಕಣ್ಣಿಗೆ ಬೀಳದಿರಲು, ಕಣ್ಣೀರು ಸುರಿಸುತ್ತಾ, ಗದ್ಗದ ಸ್ವರದಿಂದಲೇ “ಷಂಷೀರ್! ಷಂಷೀರ್!!” ಎಂದು ಕೂಗಿದಳು. ಲಾಯದ ಕೊನೆಯಲ್ಲಿದ ಬಿಳಿಯ ಕುದುರೆಯೊಂದು ಕಟ್ಟಿದ ಹಗ್ಗವನ್ನೂ ಸಹ ಕಿತ್ತುಕೊಂಡು ಒಡತಿಯ ಬಳಿ ದಾಸನಂತೆ ಬಂದು ನಿಂತಿತು. ಅವಳ ಕಣ್ಣೀರನ್ನು ನೋಡಿ ಅದೂ ತಲೆ ಬಗ್ಗಿಸಿಕೊಂಡಿತು.
ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ
ಶ್ವೇತವರ್ಣದ ಅರಬ್ಬಿ ಟಾಕಣವದು. ನವಾಬನಂದಿನಿಯ ಪ್ರೇಮದ ಅಶ್ವ. ಅದು ಭಾರತವನ್ನೆಲ್ಲಾ ಸುತ್ತಿತ್ತೆಂದು ಹೇಳಬಹುದು. ಮಮ್ತಾಜಳಿಗೆ ಅದೇ ಎರಡನೆಯ ಪ್ರಾಣ. ಮೊದಲ ಆಹಾರವನ್ನು ಅವಳು ಚೆಲುವಸ್ವಾಮಿಗೆ ಅರ್ಪಿಸುತ್ತಿದ್ದಳು. ಆಮೇಲೆ ಷಂಷೀರಿಗೆ ತಿಂಡಿ ತೀರ್ಥಗಳನ್ನಿಡುತ್ತಿದ್ದಳು. ಇವೆಲ್ಲ ಆದಮೇಲೆಯೇ! ಆಕೆ ಊಟ ಮಾಡುತ್ತಿದ್ದುದು. ಅವಳು ಅದರ ಬೆನ್ನು ತಟ್ಟುತ್ತಾ “ಷಂಷೀರ್! ನೀನು ನನ್ನ ದುಃಖವನ್ನರಿಯೆ, ಈಗಲೋ ರಾತ್ರಿ. ಕಂದಾ! ನನ್ನ ಮನಸ್ಸನ್ನು ತೃಪ್ತಿಪಡಿಸು; ನನ್ನ ದೊರೆಯ ಬಳಿಗೆ ನನ್ನನ್ನು ಕರೆದೊಯ್ಯು” ಎಂದು ಕಣ್ಣೀರು ಸುರಿಸುತ್ತಾ ಹೇಳಿ, ಲಾಯದಿಂದ ಅದರೊಡನೆ ಹೊರಗೆ ಬಂದು, ಅದರ ಮೇಲೆ ಕುಳಿತು, ”ಷಂಪೀರ್! ಮೇಲುಕೋಟೆ!!” ಎಂದು ಮಮ್ತಾಜಳು ಹೇಳಿದಳು.

ಸೂರ್ಯನ ಬೆಳಕಿನಲ್ಲಿ ರಾಜಮಾರ್ಗದಲ್ಲಿ ಹೋಗುತ್ತಿದ್ದಂತೆಯೇ ಆ ಕುದುರೆಯು ಕತ್ತಲೆಯಲ್ಲಿಯೂ ಹೋಗುತ್ತಿತ್ತು. ಅದನ್ನು ನೋಡಿದರೆ ತನ್ನರಸಿಯ ಆತ್ಮವೂ ತನ್ನ ಆತ್ಮವೂ ಒಂದೇ; ಅವಳ ದುಃಖವೇ ತನ್ನ ದುಃಖಿ ಎನ್ನುವಂತಿತ್ತು.
6
ಇಂದು ಮೇಲುಕೋಟೆಯಲ್ಲಿ ಚೆಲುವಸ್ವಾಮಿಗೆ ಕುಂಭಾಭಿಷೇಕ. ಶ್ರೀವೈಷ್ಣವರೆಲ್ಲಾ ಯಾದವಾದ್ರಿಯ ಮೇಲಿರುವ- ನೂತನವಾಗಿ ವಿಷ್ಣುವರ್ಧನ ಮಹಾರಾಜನಿಂದ ಕಟ್ಟಿಸಲ್ಪಟ್ಟ ದೇವಾಲಯದಲ್ಲಿ ನೆರೆದಿದ್ದರು. ಜೈನ ಬಿಟ್ಟಿದೇವನು- ರಾಮಾನುಜಾಚಾರ್ಯರ ಪ್ರೇರಣೆಯಿಂದ ವೈಷ್ಣವ ವಿಷ್ಣುವರ್ಧನನಾಗಿದ್ದ ಆ ಹೊಯಿಸಳರ ಮಹಾರಾಜನು- ಪರಿವಾರದೊಡನೆ ಈ ನೂತನ ದೇವಾಲಯಕ್ಕೆ ಬಂದಿದ್ದನು. ದಕ್ಷಿಣದೇಶದ ಶ್ರೀವೈಷ್ಣವರೆಲ್ಲಾ ನೆರೆದಿದ್ದರು. ಮರಿಯ ಮೊದಲಾದ ಆದಿಕರ್ಣಾಟಕರೂ ನಾಮಧಾರಣೆ ಮಾಡಿಕೊಂಡು ಅಂದು ಶ್ರೀವೈಷ್ಣವರ ಜತೆಯಲ್ಲಿ ಶ್ರೀವೈಷ್ಣವರಾಗಿದ್ದರು. ದೇವಾಲಯದಲ್ಲಿ ಎಲ್ಲೆಲ್ಲಿ ನೋಡಿದರೂ ವಾದ್ಯಗಳ ರವ, ವೇದಘೋಷ ಮತ್ತು ಸಂಗೀತ!
ಮಧ್ಯಾಹ್ನ ಹನ್ನೆರಡು ಗಂಟೆಗೆ ಮಹಾಮಂಗಳಾರತಿ. ”ಮಹಾಮಂಗಳಾರತಿ ಆಗಬಹುದೇ ಮಹಾಪ್ರಭು” ಎಂದು ಆರ್ಚಕರು ದೇವನ ಬಳಿ ಕೈಜೋಡಿಸಿ ನಿಂತಿದ್ದ ವಿಷ್ಣುವರ್ಧನ ಮಹಾರಾಜನನ್ನು ಕೇಳಿದರು. ಮಹಾರಾಜನು ತನ್ನ ಬಳಿ ಇದ್ದ ಆಚಾರ್ಯರ ಮುಖವನ್ನು ನೋಡುತ್ತಾ, “ಗುರುಗಳು ಉತ್ತರ ಕೊಡಬೇಕು” ಎಂದು ಹೇಳಿದರು.
”ಆಗಬಹುದು ಅರ್ಚಕರೇ” ಎಂದು ಆಚಾರ್ಯರು ಹೇಳಿದರು.
ಅರ್ಚಕರು ದೇವನನ್ನು ಮಂಗಳಾರತಿಯಿಂದ ಬೆಳಗುತ್ತಿದ್ದರು. ದೇವನೆದುರಿಗೆ ನಿಂತು ಕೈಮುಗಿಯುತ್ತಿದ್ದ ಎಲ್ಲರೂ ಇದ್ದಕ್ಕಿದ್ದಂತೆಯೇ ಆರ್ತ ಧ್ವನಿಯೊಂದನ್ನು ಕೇಳಿ, ದೇವಾಲಯದ ಮುಂದೆ ತಿರುಗಿದರು. ”ನನ್ನ ದೊರೆ! ಚೆಲುವಾ!!” ಎಂದು ಕುದುರೆಯ ಮೇಲಿದ್ದಂತೆಯೇ ಕೈ ಮುಗಿಯುತ್ತಾ, “ನಿನ್ನಿಷ್ಟದಂತೆಯೇ ದಾಸಿ ಬಂದಿದ್ದೇನೆ. ದೊರೆ! ನಿನ್ನ ಪಾದಗಳಿಗೆ ಸೇರಿಸಿಕೋ!” ಎಂದು ಹೇಳುತ್ತಾ ದೊಪ್ಪನೆ ಕುದುರೆಯ ಮೇಲಿನಿಂದ ಕೆಳಗೆ ಬಿದ್ದ ಸ್ತ್ರೀಮೂರ್ತಿಯನ್ನು ಎಲ್ಲರೂ ಕಂಡರು. ರಮಣಿಯು ನೆಲದಮೇಲೆ ಬಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಅವಳ ಅಶ್ವವೂ ನೆಲದ ಮೇಲೆ ಬಿದ್ದಿತು!
ಆಚಾರ್ಯರು ಅನನ್ಯ ಭಕ್ತಿಯಿಂದ ದೇವನನ್ನು ನೋಡುತ್ತಿದ್ದಂತೆಯೇ ಪ್ರಜ್ವಲಿಸುವ ಮಿಂಚಿನ ಕಾಂತಿಯೊಂದು ಬಂದು ದೇವನಲ್ಲಿ ಸೇರಿ ಆತನಲ್ಲಿ ಮೊದಲಿದ್ದ ಕಳೆಯನ್ನು ಇಮ್ಮಡಿ ಮಾಡಿದುದನ್ನು ನೋಡಿ, ದೇವಸ್ಥಾನದ ಮುಂದೆ ತಮ್ಮ ಕಟಾಕ್ಷವನ್ನು ಬೀರಿದರು.
ದೇವನಿಗೆ ಮಹಾಮಂಗಳಾರತಿಯಾಯಿತು. ವೈಷ್ಣವರಲ್ಲಿ ಕೆಲವರು ಕೆಳಗೆ ಬಿದ್ದಿದ್ದ ರಮಣಿಯ ಬಳಿಗೆ ಬಂದರು. ಅವಳನ್ನು ನೋಡಿದ ಅವರಲ್ಲಿ ಕೆಲವರು “ಮ್ಲೇಚ್ಛರವಳು! ದೂರ ಹೋಗಿರಿ! ಇನ್ನು ಸ್ನಾನ ಮಾಡಬೇಕು!” ಎಂದರು.
ಆಚಾರ್ಯರು ಅವಳ ಬಳಿಗೆ ಬಂದು, ಸ್ವಲ್ಪಹೊತ್ತು ಮೌನವಾಗಿ ದೃಷ್ಟಿಸಿ ನೋಡಿ, ಯೋಚಿಸುತ್ತಾ ಅವಳನ್ನು ಮುಟ್ಟಿ ನೋಡಿದರು. ಅವಳ ಆತ್ಯನು ಅವಳ ದೇಹವನ್ನು ಬಿಟ್ಟಿದ್ದನು. ಅವರು ಕುದುರೆಯನ್ನೂ ಮುಟ್ಟಿ ನೋಡಿದರು. ಅದೂ ತನ್ನ ಒಡತಿಯ ಗತಿಯನ್ನೇ ಹೊಂದಿತ್ತು. ಗತಿಸಿದ ರಮಣಿಯನ್ನು ಸುಮ್ಮನೆ ದೃಷ್ಟಿಸಿ ನೋಡಿ, ನಾನು ಕನಸಿನಲ್ಲಿ ಕಂಡ ದೇವನ ನಾಚ್ಚಿಯಾರ್! (ತಮಿಳಿನಲ್ಲಿ ನಾಚ್ಚಿಯಾರ್ ಎಂದರೆ ದೇವನ ಪತ್ನಿ) ಆ ಬೀಬಿ!! ಸುಲ್ತಾನನ ಮಗಳು!’ ಎಂದುಕೊಂಡು, “ತಾಯಿ! ದೇವನರಸಿ ನೀನೇ ಪುಣ್ಯವಂತಳು” ಎಂದು ಆ ಶವಕ್ಕೆ ಕೈಮುಗಿದರು.
ಎಲ್ಲೆಲ್ಲಿಯೂ ಮೌನ. “ಮರಿಯಾ!” ಎಂದು ಆಚಾರ್ಯರು ಗದ್ಗದ ಸ್ವರದಿಂದ ಕೂಗಿದರು. ಆದಿಕರ್ಣಾಟಕರ ಮುಂದಾಳು- ಮರಿಯ ಆಚಾರ್ಯರ ಮುಂದೆ ಬಂದು ನಿಂತನು. ”ಮರಿಯಾ, ಈ ದೇವಾಲಯದ ಮುಂದಿರುವ ಮೂಲೆಯಲ್ಲಿ ಈಕೆಗಾಗಿ ಗೋರಿ ಮಾಡಬೇಕು” ಎಂದು ಆಚಾರ್ಯರು ಹೇಳಿದರು. “ಆಗಬಹುದು ಗುರುಗಳೇ” ಎಂದು ಹೇಳಿ ಮರಿಯ ಹೊರಟುಹೋದನು.
ಶ್ರೀವೈಷ್ಣವರಲ್ಲಿ ಕೆಲವರು ಆಚಾರ್ಯರ ಮಾತನ್ನು ಕೇಳಿದೊಡನೆಯೇ ಒಬ್ಬರ ಮುಖವನ್ನೊಬ್ಬರು ಅಸಮಾಧಾನದೃಷ್ಟಿಯಿಂದ ನೋಡಿದರು. ‘ಮ್ಲೇಚ್ಛರವಳಾದುದರಿಂದ ಇವಳು ದೇವನ ಬಳಿ ಹೊಳಲ್ಪಡಲು ಅರ್ಹಳಲ್ಲವೆಂಬುದು ಇವರ ಭಾವನೆ. ಈಕೆ ದೇವನಲ್ಲಿ ಸೇರಿರುವಳೆಂದು ಇವರಿಗೇನು ಗೊತ್ತು! ಆಗಲಿ. ಇವರ ಮನವನ್ನು ತಾನೆ ಏಕೆ ನೋಯಿಸಬೇಕು? ದೈವದ ಹೃದಯವನ್ನರಿಯದ ಮೂಢರಿವರು! ನನ್ನ ಮತ ಅಭಿವೃದ್ಧಿಯಾಗಬೇಕು. ಇನ್ನೂ ಅದು ಶೈಶವಾವಸ್ಥೆಯಲ್ಲಿದೆ. ಆದುದರಿಂದ ಈ ಶ್ರೀವೈಷ್ಣವರನ್ನು ಅಸಮಾಧಾನಪಡಿಸುವುದು ತರವಲ್ಲ’ ಎಂದುಕೊಂಡು, ದೇವನಿಗೆ ಕೈ ಮುಗಿಯುತ್ತಾ, ‘ಸ್ವಾಮೀ! ನಮ್ಮನ್ನು ಕ್ಷಮಿಸು. ನಾವೆಲ್ಲಾ ಮೂಢರು. ಎಷ್ಟಾದರೂ ಈಕೆ ನಿನ್ನ ನಾಚ್ಚಿಯಾರ್. ಈ ಜೀವವಿಲ್ಲದ ದೇಹವನ್ನು ಎಲ್ಲಿಟ್ಟರೆ ತಾನೆ ಏನು; ಆತ್ಮವೇನೋ ನಿನ್ನಲ್ಲಿ ಐಕ್ಯವಾಗಿದೆ. ನಮ್ಮನ್ನು ಕ್ಷಮಿಸು, ಭಕ್ತವತ್ಸಲಾ!’ ಎಂದು ಕಣ್ಣೀರು ಸುರಿಸುತ್ತಾ ಮನವರಿಕೆ ಮಾಡಿ, “ಮರಿಯಾ!” ಎಂದು ದೈನ್ಯದಿಂದ ಮತ್ತೊಮ್ಮೆ ಕೂಗಿದರು.
ಹಾರೆಗುದ್ದಲಿಗಳೊಡನೆ ಆಗತಾನೆ ಮನೆಯಿಂದ ಬಂದ ಮರಿಯ, ”ಏನು ಗುರುಗಳೇ?” ಎಂದು ಕೇಳಿದನು.
“ಮರಿಯಾ, ಇಲ್ಲಿ ಬೇಡ. ಬೆಟ್ಟದ ಬುಡದಲ್ಲಿರುವ ಆ ಎರಡು ಗುಡ್ಡಗಳ ನಡುವೆ ಇರುವ ಭೂಮಿಯಲ್ಲಿ ಈ ಎರಡು ಶವಗಳನ್ನೂ ಹೂಳಲು ಸಿದ್ಧಪಡಿಸು.”
“ನಾವೂ ಮರಿಯನೊಡನೆ ಹೋಗುತ್ತೇವೆ ಗುರುಗಳೇ” ಎಂದು ವೈಷ್ಣವರಲ್ಲಿ ಕೆಲವರು ಹೇಳಿದರು. ಆಚಾರ್ಯರು ದೈನ್ಯದೃಷ್ಟಿಯನ್ನು ಅವರ ಕಡೆ ಬೀರಿದರು. ಅವರೆಲ್ಲಾ ಮರಿಯನೊಡನೆ ಹೋದರು.
ಸಂಜೆ ಸೂರ್ಯಾಸ್ತದ ಸಮಯ. ಮಮ್ತಾಜಳ- ಇನ್ನು ಮೇಲೆ ಆಚಾರ್ಯರಿಟ್ಟ ‘ಬೀಬೀ ನಾಚ್ಚಿಯಾರ್’ ಎನ್ನುವ ಹೆಸರಿನಿಂದಲೇ ಅವಳ ಹೆಸರನ್ನು ಹೇಳೋಣ-ಕಳೇಬರವನ್ನು ಹೂಳಲು ಮಾಡಿಟ್ಟ ಗೋರಿಯ ಬಳಿಗೆ ಎಲ್ಲರೂ ಬಂದರು. ಮೊದಲು ಬೀಬೀ ನಾಚ್ಚಿಯಾರಳ ದೇಹವನ್ನು ಗೋರಿಯಲ್ಲಿಟ್ಟು, ಅವಳ ಬಳಿ ಅವಳ ನೆಚ್ಚಿನ ಷಂಷೀರನ್ನಿಟ್ಟರು. ಮೊದಲ ಹಿಡಿಯ ಮಣ್ಣನ್ನು ಆಚಾರ್ಯರೇ ಕಣ್ಣೀರು ಸುರಿಸುತ್ತಾ ಹೆಣಗಳ ಮೇಲೆ ಎರಚಿದರು. ಮಣ್ಣಿನಿಂದ ಹೆಣಗಳ ಮುಖಗಳೆಲ್ಲಾ ಮುಚ್ಚಲ್ಪಟ್ಟವು. ಸೂರ್ಯನೂ ಮುಳುಗಿದ; ಜಗವೆಲ್ಲಾ ಕತ್ತಲೆಯಿಂದ ತುಂಬಿತು!
7
ಮಾಘ ಮಾಸದ ಶುಕ್ಲ ಚತುರ್ದಶಿಯ ರಾತ್ರಿ ಸುಮಾರು ಹತ್ತು ಗಂಟೆ ಇರಬಹುದು. ಚಂದ್ರನ ತಂಗದಿರುಗಳಿಂದ ತೊಯ್ದ ಜಗವೆಲ್ಲಾ ಶಾಂತಿಸಾಗರದಲ್ಲಿ ಮುಳುಗಿತ್ತು. ಯಾದವಗಿರಿಯ ತಪ್ಪಲಲ್ಲಿ ಯಾವುದೋ ಗೋರಿಯೊಂದನ್ನು ಹುಡುಕುತ್ತಾ ಅಶಾಂತತೆಯಿಂದ ಎರಡು ವ್ಯಕ್ತಿಗಳು ಸುಳಿದಾಡುತ್ತಿದ್ದುವು. ಆ ವ್ಯಕ್ತಿಗಳು ಮುಂದೆ ಮುಂದೆ ಬರುತ್ತಿದ್ದವು. ಅವುಗಳಲ್ಲಿ ಕಿಂಕಾಪಿನ ಬಟ್ಟೆಯೊಂದರಿಂದ ಮುಚ್ಚಲ್ಪಟ್ಟಿದ್ದ ಚಿನ್ನದ ತಟ್ಟೆಯೊಂದನ್ನು ಹಿಡಿದುಕೊಂಡಿದ್ದ ವ್ಯಕ್ತಿಯು “ಪಾದಷಹ! ಪಾದಷಹ!! ಇಲ್ಲಿದೆ!!!” ಎಂದು ನಿಧಾನವಾಗಿ ಹೇಳಿತು.
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
“ಹೂ, ಆಲಂಷಹ!” ಎಂದು ಗದ್ಗದಸ್ವರದಿಂದ ಬಾದಷಹರು ಹೇಳಿ, ಮಗಳ- ದೇವಪತ್ನಿಯ-ಗೋರಿಯ ಬಳಿಗೆ ಬಂದು, ಮೊಳಕಾಲೂರಿ ಗೋರಿಗೆ ನಮಸ್ಕಾರ ಮಾಡುತ್ತಾ, “ಕಂದಾ! ಅಳಿದ ತಂದೆಗಾಗಿ ಮಗಳು ದೇವನಲ್ಲಿ ಮೊರೆಯಿಡುವುದನ್ನು ಕೇಳಿದ್ದೇನೆ. ತಾಯಿಯ ಗೋರಿಯ ಬಳಿ ಮಗಳು ಬಂದು ಪೂಜಿಸುವುದನ್ನು ನೋಡಿದ್ದೇನೆ. ಗುರುವಿನ ಬೂದಿಯನ್ನು ಹೂಗಳಿಂದ ನಿತ್ಯವೂ ಅಲಂಕರಿಸಿ ಅದರ ಮೇಲೆ ಕಣ್ಣೀರು ಸುರಿಸುವ ಶಿಷ್ಯರನ್ನು ಅರಿತಿದ್ದೇನೆ. ಇನಿಯನ ಶವದ ಬಳಿ ಹೊರಳಾಡುತ್ತಾ ರೋದನ ಮಾಡುವ ಇನಿಯಳನ್ನು ಕಂಡಿದ್ದೇನೆ. ಆದರೆ… ಆದರೆ… ಮಗಳ ಗೋರಿಯ ಬಳಿ ಮೊಳಕಾಲೂರಿ, ಕಣ್ಣೀರು ಸುರಿಸುವ ತಂದೆಯನ್ನು ಕಂಡಿಲ್ಲ; ಕೇಳಿಲ್ಲ. ಇನ್ನುಮುಂದೆ ಕೇಳುವುದೂ ಇಲ್ಲ. ಮಗೂ ನಾನು ಪಾಪಿ. ನಿನ್ನ ಮತ್ತು ನಿನ್ನ ಇನಿಯನ ಗುಣಗಳನ್ನರಿಯದೆ ಹೋದೆ. ಕಾಫರ್ ನಾನು! ನಿನ್ನಿನಿಯನನ್ನು ಹೆರರಿಗೆ ಕೊಟ್ಟೆ. ಪ್ರೇಮದ ನಲ್ಲನನ್ನು ಬಿಟ್ಟು ನೀನು ಹೇಗೆ ತಾನೆ ಇರುವೆ? ಮಗೂ! ಆದುದರಿಂದಲೇ ನಿನ್ನ ಕೆಲಸವನ್ನು ನೀನು ಮಾಡಿದೆ! ನಾನು ಪರಮ ಪಾತಕಿ. ಪ್ರಪಂಚದ ಭೋಗಕ್ಕೆ ಆಸೆಪಟ್ಟು, ನಿನ್ನನ್ನು ಸಾರ್ವಭೌಮಳನ್ನಾಗಿ ಮಾಡುವ ಆಸೆಯಿಂದ ಹಾಗೆ ಮಾಡಿದೆ. ಕಂದಾ! ನೀನು ಜಗದ ಸಾರ್ವಭೌಮಳು” ಎಂದು ಕಣ್ಣೀರನ್ನೊರಸಿಕೊಂಡು, “ಮಗಳೇ! ನಿನ್ನನ್ನು ಮಗಳೆಂದು ನಮಸ್ಕರಿಸುತ್ತಿಲ್ಲ; ದೇವರ ಪತ್ನಿ ಎಂದು ನಮಸ್ಕರಿಸುತ್ತಿದ್ದೇನೆ. ನಮ್ಮ ಪೂರ್ವ ಜನ್ಮದ ಪುಣ್ಯವಶದಿಂದ ನಮ್ಮ ಅಪವಿತ್ರವಾದ ಮನೆಯಲ್ಲಿ ಹುಟ್ಟಿ ನಮ್ಮನ್ನು ಪಾವನರನ್ನಾಗಿ ಮಾಡಿದೆ; ದೇವನ ದರುಶನವನ್ನು ನನಗೆ ಕೊಡಿಸಿದೆ. ಮಮ್ತಾಜ್! ಏಳು! ಏಳು!! ಎಲ್ಲಿ ಒಂದು ಮುದ್ದು ಮಾತನ್ನಾಡು. ನಿನಗಾಗಿ ಹಂಬಲಿಸುತ್ತಿರುವ ತಾಯಿಗೊಂದು ಮುತ್ತನ್ನು ಕೊಡು. ಏಳು, ನೋಡಲ್ಲಿ ಸುಭದ್ರಾ… ನೂರ್ ಬೇಗಂ.. ನಾನು ಹುಚ್ಚ! ಕಾಡಿನ ರೋದನ ನನ್ನದು! ನನ್ನ ತಪ್ಪನ್ನು ಕ್ಷಮಿಸು ಕಂದಾ! ನನ್ನ ಕಡೆಯ ಮುತ್ತು” ಎಂದು ಗೋರಿಯನ್ನು ಚುಂಬಿಸಿ ತಟ್ಟೆಯಲ್ಲಿದ್ದ ಹೂವಿನ ಹಾರವನ್ನು ತೆಗೆದು, ಅದನ್ನು ಗೋರಿಗೆ ಹಾಕಿ, “ತಾಜ್! ಇದು ನನ್ನ ಪ್ರೇಮದ ಬಹುಮಾನ. ಕಂದಾ! ದೇವನರಸಿಯಾದ ನಿನಗಿತ್ತ ಉಡುಗೊರೆ” ಎಂದು ಕಣ್ಣೀರು ಸುರಿಸುತ್ತಾ ಎದ್ದು ನಿಂತನು.

ಗೋರಿಯ ಪಕ್ಕದಲ್ಲಿ ಎಳೆದಳಿರುಗಳಿಂದಲೂ ಹೂ ಕಾಯಿಗಳಿಂದಲೂ ತುಂಬಿದ್ದ ಮಾಮರದ ಮೇಲಿನಿಂದ ‘ಕೂ!’ ಎಂದು ಕೋಗಿಲೆಯು ಕೂಗಿತು.
ತನ್ನ ಇನಿಯ ಚೆಲುವ ಸ್ವಾಮಿಗಾಗಿ ಮಡಿದ ಬೀಬೀ ನಾಚ್ಚಿಯಾರಳ ಗೋರಿಯನ್ನು ನೋಡಿದ ಮಾನವರೆಲ್ಲಾ ಮರುಗುವರು. ಆ ಗೋರಿಯನ್ನು ನೋಡಿ ಮರುಗುವವರು ಮಾನವರೊಬ್ಬರೇ ಅಲ್ಲ. ಆ ಗೋರಿಯ ಸುತ್ತಮುತ್ತಲೂ ಅನೇಕ ಮಾವಿನ ಮರಗಳಿವೆ. ಎಲ್ಲಾ ಕಡೆಯ ಮರಗಳಲ್ಲಿಯೂ ಹಣ್ಣೆಲೆಗಳು ಬೀಳುತ್ತಿದ್ದರೆ ಅವುಗಳಲ್ಲಿ ಚಿಗುರು ಆಗತಾನೆ ಬಿಡುತ್ತದೆ. ಶಿಶಿರದಲ್ಲಿಯೇ ಮಾವಿನಕಾಯಿ ಮತ್ತು ಹಣ್ಣುಗಳು ಆ ಮರಗಳಲ್ಲಿ ಸಿಕ್ಕುತ್ತವೆ. ಎಲ್ಲೆಲ್ಲಿಯೂ ವಸಂತನ ಪ್ರಭಾವವಿರುವಲ್ಲಿ ಅಲ್ಲಿ ಶಿಶಿರವು ಬರುತ್ತದೆ! ಹೀಚಿನಲ್ಲಿಯೇ ಹಣ್ಣಾದ, ಹಣ್ಣಾಗುವ ಕಾಲದಲ್ಲಿ ದೇವನಲ್ಲಿ ಐಕ್ಯಳಾದ, ತಮ್ಮ ಒಡತಿಯ ಬಾಳಿನಂತೆಯೇ ಅವುಗಳ ಜೀವನವೂ ಆಗಿದೆ!
ಕೋಗಿಲೆಯ ಇಂಚರವನ್ನು ಕೇಳಿದ ಪಾದಷಹನ ಎದೆ ಉಬ್ಬಿತು. “ಮಗಳೇ! ನನ್ನ ಪ್ರಾರ್ಥನೆ ದೇವನಿಗೆ ಕೇಳಿಸಿತು!” ಎನ್ನುತ್ತಾ ಸುರಿಯುತ್ತಿದ್ದ ಕಣ್ಣೀರನ್ನೊರಸಿಕೊಂಡನು.
8
ಧನುರ್ಮಾಸದ ಒಂದು ಪ್ರಾತಃಕಾಲ. ಅಷ್ಟು ಹೊತ್ತಿಗೇ ರಾಮಾನುಜಾಚಾರ್ಯರು ಎದ್ದು, “ದೇವಾ! ಮೊನ್ನೆ ರಾತ್ರಿ ನೀನು ಆಜ್ಞೆ ಮಾಡಿದ್ದಂತೆಯೇ ಬೀಬೀ ನಾಚ್ಚಿಯಾರಳ ಸ್ವರ್ಣ ಪ್ರತಿಮೆಯನ್ನು ಮಾಡಿಸಿ ತಂದಿದ್ದೇನೆ. ಇದೇ ಸುದಿನ. ಇದನ್ನು ನಿನ್ನ ಅಡಿಯಲ್ಲಿಟ್ಟು, ನಿನ್ನ ಹಿಂದಿನ ಅಪ್ಪಣೆಯಂತೆಯೇ ಮೊದಲ ಪೂಜೆಯನ್ನು ದಾನಾಗ್ರೇಸರ ಸಾರ್ವಭೌಮನಾದ ಬಲಿಚಕ್ರವರ್ತಿಗೂ, ಎರಡನೆಯ ಪೂಜೆ ನಿನ್ನರಸಿ ಬೀಬೀ ನಾಚ್ಚಿಯಾರಳಿಗೂ, ಅನಂತರ ನಿನಗೂ ಪೂಜೆಯನ್ನು ಮಾಡಿಸುತ್ತೇನೆ ಮತ್ತು ಮಾಡುತ್ತೇನೆ” ಎಂದು ದೇವನಿಗೆ ಕೈಮುಗಿಯುತ್ತಾ ಹೇಳಿ, ಬೀಬೀ ನಾಚ್ಚಿಯಾರಳ ಸ್ವರ್ಣಪ್ರತಿಮೆಯನ್ನು ಮೂಲಮೂರ್ತಿಯ ಅಡಿಯ ಬಳಿ ಪ್ರತಿಷ್ಠೆ ಮಾಡಿದರು.
ಪೂಜೆಯಾದ ಮೇಲೆ ಅರ್ಚಕರು ದೇವನನ್ನು ಮಂಗಳಾರತಿಯಿಂದ ಬೆಳಗಿದರು. ಆಚಾರ್ಯರ ಮುಗಿದಿದ್ದೆ ಕೈಯಿಂದಲೇ, ದೇವನ ಮತ್ತು ಬೀಬೀ ನಾಚ್ಚಿಯಾರಳ ಮುಖಗಳನ್ನು ನೋಡುತ್ತಾ ಉಕ್ಕಿದ ಭಕ್ತಿಯಿಂದ ಬರುತ್ತಿದ್ದ ಎಳೆನಗೆಯ ಪ್ರವಾಹವನ್ನು ಮುಖದಲ್ಲಿ ಸೂಚಿಸಿದರು. ಎಲ್ಲೆಲ್ಲೂ ಬೆಳಕು ಬಂದಿತು. ಜಗವೆಲ್ಲಾ ಬಾಲಾರ್ಕನ ಜ್ಯೋತಿಯಿಂದ ಬೆಳಗಲ್ಪಟ್ಟಿತು!
(ಮೇಲುಕೋಟೆಯ ಸ್ಥಳಪುರಾಣದ ಆಧಾರದಿಂದ ಬರೆದ ಕತೆಯಿದು. ಮೇಲುಕೋಟೆಯ ಬೆಟ್ಟದ ಬುಡದಲ್ಲಿ ಬೀಬೀ ನಾಚ್ಚಿಯಾರಳ ಗೋರಿ ಇದೆ. ಈಗಲೂ ಆ ದೇವಸ್ಥಾನದಲ್ಲಿ ದೇವನಿಗಾಗಲು ಮುನ್ನವೇ, ಆತನ ಪಾದದ ಬಳಿ ಇರುವ ಬೀಬೀ ನಾಚ್ಚಿಯಾರಳ ವಿಗ್ರಹಕ್ಕೆ ಪೂಜೆಯಾಗುತ್ತದೆ. ವೈರಮುಡಿಯ ಉತ್ಸವ ಕಾಲದಲ್ಲಿ ಆದಿಕರ್ಣಾಟಕರನ್ನು ರಾಮಾನುಜಾಚಾರ್ಯರ ಮಾತಿನಂತೆಯೇ ಮೂರು ದಿನ ದೇವಸ್ಥಾನದೊಳಕ್ಕೆ ಬಿಡುತ್ತಾರೆ. ರೈಸ್ ಸಾಹೇಬರೂ ಮೈಸೂರು ಗೆಜೆಟರಿನಲ್ಲಿ ಈ ಸ್ಥಳದ ಪುರಾಣವನ್ನು ಬರೆದಿದ್ದಾರೆ.)
(ಕೃಪೆ: ಮಲ್ಲಿಗೆ ಮಾಸಪತ್ರಿಕೆ, ‘ಪುಷ್ಪಮಾಲೆ’ ಮನೋಹರ ಗ್ರಂಥಮಾಲೆ, ಧಾರವಾಡ, 1939)

‘ಶ್ರೀ ಸ್ವಾಮಿ’ಯವರ ‘ಬೀಬೀ ನಾಚ್ಚಿಯಾರ್’
1930ರ ಸುಮಾರಿಗೆ ಕಥೆ ಬರೆದು ಬೆಳಕಿಗೆ ಬಂದವರಲ್ಲಿ ದಿ. ‘ಶ್ರೀ ಸ್ವಾಮಿ’ (ರಂಗಸ್ವಾಮಿ ಅಯ್ಯಂಗಾರ್ಯ: 1911-1980) ಅವರ ಹೆಸರು ಸಾಕಷ್ಟು ಗಮನ ಸೆಳೆದಿದೆ. ಆ ಕಾಲಕ್ಕೆ ಅವರ ಕಥೆಗಳು “ಜಯಕರ್ನಾಟಕ”, “ಕಥಾಂಜಲಿ”, “ಪ್ರಬುದ್ಧ ಕರ್ಣಾಟಕ”ಗಳಲ್ಲಿ ಪ್ರಕಟವಾದವು. ನಂತರ ಹನ್ನೊಂದು ಕಥೆಗಳ “ಪುಷ್ಪಮಾಲೆ” (1936) ಮತ್ತು ಏಳು ಕಥೆಗಳ “ಮೋಡಗಳು” (1942) ಎಂಬ ಎರಡು ಸಂಕಲನಗಳು ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ ಮೊದಲ ಸಂಕಲನ ಪುನರ್ಮುದ್ರಣವನ್ನೂ ಕಂಡಿದೆ (1943). ಈಗ ಈ ಎರಡು ಸಂಕಲನಗಳೂ ಲಭ್ಯವಿಲ್ಲ. ‘ಪುಷ್ಪಮಾಲೆ’ಯಲ್ಲಿ ಸೇರಿರುವ ‘ಬೀಬೀ ನಾಚ್ಚಿಯಾರ್’ ಕಥೆ ಮೊದಲು “ಜಯಕರ್ನಾಟಕ” (1933)ದಲ್ಲೂ ನಂತರ ಜಯಕರ್ನಾಟಕ ಗ್ರಂಥಮಾಲೆಯ “ಕೆಲವು ನೀಳತೆಗಳು” (1935) ಎಂಬ ಸಂಕಲನದಲ್ಲೂ ಆಯ್ಕೆಯಾಗಿತ್ತು. ಈಚೆಗೆ “ನಡೆದು ಬಂದ ದಾರಿ”ಯ ಎರಡನೇ ಸಂಪುಟದಲ್ಲಿ ಅವರದೊಂದು ಕಥೆ ಪ್ರಕಟವಾಗಿದೆಯಾದರೂ ಎರಡನೆಯ ಸಂಕಲನದ ನಂತರ ಅವರು ಕಥೆ ಬರೆಯುವುದನ್ನು ನಿಲ್ಲಿಸಿದಂತೆ ಕಾಣುತ್ತದೆ. ವಿಮರ್ಶಕರಲ್ಲಿ ಕುರ್ತಕೋಟಿ (”ಯುಗಧರ್ಮ ಹಾಗೂ ಸಾಹಿತ್ಯದರ್ಶನ”, ಪುಟ: 149), ಮುಗಳಿ (”ಕನ್ನಡ ಸಾಹಿತ್ಯದ ಇತಿಹಾಸ,” ಪುಟ: 143), ತ.ಸು. ಶಾಮರಾವ್ (“ಬೇವು ಬೆಲ್ಲ”, ಪುಟ: 27), ವರದರಾಜರಾವ್ (“ಕನ್ನಡ ಸಾಹಿತ್ಯ ಸಮೀಕ್ಷೆ”, ಪುಟ: 29) ಮೊದಲಾದವರು ಅವರ ಕಥೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ಅವರ ಕಥೆಗಳ ಸುಕುಮಾರತೆ, ಪಾತ್ರಸೃಷ್ಟಿಯ ಮೃದುತ್ವ, ಸರಳ ನಿರೂಪಣೆ, ವಸ್ತುವಿನ ನಾವೀನ್ಯ ವಿಶೇಷ ಗಮನ ಸೆಳೆದಿವೆ.
‘ಶ್ರೀ ಸ್ವಾಮಿ’ಯವರ ಕಥೆಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಪುರಾಣ, ಐತಿಹ್ಯಗಳನ್ನು ಆಧರಿಸಿ ಬರೆದ ಅದ್ಭುತ ರಮ್ಯ ಕತೆಗಳ ಒಂದು ಗುಂಪಾದರೆ, ವಾಸ್ತವಿಕ ಕತೆಗಳದು ಇನ್ನೊಂದು ಗುಂಪು. ಎರಡನೆಯ ಗುಂಪಿನಲ್ಲಿ ‘ನಂಜಮ್ಮ’ದಂಥ ಒಳ್ಳೆಯ ಕಥೆಗಳನ್ನು ಎತ್ತಿ ತೋರಿಸಬಹುದಾದರೂ, ಅವರ ಕತೆಗಾರಿಕೆಯ ವೈಶಿಷ್ಟ್ಯವಿರುವುದು ಮೊದಲ ಗುಂಪಿನ ಕತೆಗಳಲ್ಲಿ, ‘ಬೀಬೀ ನಾಚ್ಚಿಯಾರ್’, ‘ಆಲಂಗಿರಿ’, ‘ಮಾಯಾ’ ಮೊದಲಾದ ಕಥೆಗಳು ಈ ಗುಂಪಿಗೆ ಸೇರುತ್ತವೆ. ವಾಸ್ತವತಾವಾದವೇ ಸಾಹಿತ್ಯದಲ್ಲಿ ಆಳುವ ತತ್ವವಾಗಿದ್ದ ಕಾಲದಲ್ಲಿ ಈ ಬಗೆಯ ಕತೆಗಳು ಹುಟ್ಟಿದ್ದೇ ಒಂದು ವಿಶೇಷ. ಇದರ ಮೇಲೆ, ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಹುಟ್ಟಿದ ಇಂಥ ಬರವಣಿಗೆಯನ್ನು ವಿಮರ್ಶಕರು ಮೆಚ್ಚಿದ್ದು ಇನ್ನೂ ಒಂದು ವಿಶೇಷ.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
ಈ ಕಥೆಗಳಲ್ಲಿ ಸ್ಥಳಪುರಾಣ, ಕಾಲ್ಪನಿಕ ಐತಿಹ್ಯ, ಪವಾಡ, ಇತಿಹಾಸಗಳು ಎಗ್ಗಿಲ್ಲದೆ ಸೇರಿಕೊಂಡಿವೆ. ಇವುಗಳನ್ನು ಬಳಸಿಕೊಳ್ಳುವಾಗ ಕತೆಗಾರರಿಗೆ ಯಾವುದೇ ರೀತಿಯ ಸಂಕೋಚವಾಗಲಿ, ಅಳುಕಾಗಲಿ ಕಾಡಿಲ್ಲ. ಓದುಗರಿಗೆ ಇಂಥ ಘಟನೆಗಳು ಎಷ್ಟರಮಟ್ಟಿಗೆ ಸ್ವೀಕಾರಾರ್ಹವಾದಾವು ಎಂಬ ಹಿಂಜರಿಕೆಯೂ ಅವರಿಗೆ ಬಂದಿಲ್ಲ. ಬರೆಯುವ ವಸ್ತುವಿನಲ್ಲಿ ಸಂಪೂರ್ಣ ನಂಬಿಕೆಯನ್ನಿರಿಸಿಕೊಂಡು ತೊಡಗಿಸಿಕೊಳ್ಳುವ ಮುಗ್ಧ ಶ್ರದ್ಧೆ ಈ ಬರವಣಿಗೆ ಯಲ್ಲಿ ಕಾಣುತ್ತದೆ.
ಹಾಗೆಂದು ಈ ಕತೆಗಳನ್ನು ಅಪ್ರಬುದ್ದ ಕಲ್ಪನೆಯ ಅಸಹಜ ಕಂತೆಗಳೆಂದು ನಿರಾಕರಿಸಲೂ ಆಗುವುದಿಲ್ಲ. ಒಂದು ಬಗೆಯ ಅದ್ಭುತ ರಮ್ಯ ವಾತಾವರಣವನ್ನು ನಿರ್ಮಿಸಿ, ಅದಕ್ಕೆ ತಕ್ಕದಾದ ಶೈಲಿಯನ್ನು ರೂಪಿಸಿಕೊಳ್ಳುವ ಮೂಲಕ ‘ಶ್ರೀ ಸ್ವಾಮಿ’ಯವರು ಈ ಕಥೆಗಳನ್ನು ಭಾರತೀಯ ಸಾಹಿತ್ಯದಲ್ಲಿ ಹಿಂದಿನಿಂದಲೂ ಸ್ವೀಕೃತವಾಗಿರುವ ಅದ್ಭುತರಮ್ಮ ಕಥೆಗಳ ಸಾಹಿತ್ಯಪರಂಪರೆಯೊಂದಕ್ಕೆ ಜೋಡಿಸಿಬಿಡುತ್ತಾರೆ. ಈ ಕಥೆಗಳನ್ನು ಓದುತ್ತಿದ್ದಂತೆ ಬಾಣಭಟ್ಟನ ‘ಕಾದಂಬರಿ’ಯ, ಗಳಗನಾಥ-ವೆಂಕಟಾಚಾರ್ಯರ ಕಾದಂಬರಿಗಳ ಅದ್ಭುತರಮ್ಯ ಲೋಕಕ್ಕೆ ಹೋದಂತಾಗುತ್ತದೆ. ಇದು ಆಕಸ್ಮಿಕವೇನೂ ಅಲ್ಲ. ಪವಾಡ ಇತ್ಯಾದಿಗಳ ಬಗ್ಗೆ ನಮಗಿರುವ ತೀವ್ರ ಅಪನಂಬಿಕೆಯಿಂದ ಈ ಕತೆಗಳನ್ನು ಓದುತ್ತಿದ್ದಂತೆ, ಅದ್ಭುತರಮ್ಮ ಕಥನ ಶೈಲಿಯ ಸಾಹಿತ್ಯ ಸಂಪ್ರದಾಯವನ್ನು ನೆನಪಿಸುವ ಮೂಲಕ ಕತೆಗಾರರು ನಮ್ಮ ಅಪನಂಬಿಕೆಯನ್ನು ಹತ್ತಿಕ್ಕುವಂತೆ ಮಾಡುತ್ತಾರೆ.
‘ಬೀಬೀ ನಾಚ್ಚಿಯಾರ್’ ಈ ಶೈಲಿಯಲ್ಲಿ ರಚಿತವಾಗಿರುವ ಒಂದು ವಿಶಿಷ್ಟ ಕತೆ. ಮೇಲುಕೋಟೆಯ ಸ್ಥಳಪುರಾಣದ ಆಧಾರದಿಂದ ಬರೆದ ಕತೆಯಿದು. ಐತಿಹಾಸಿಕ ವ್ಯಕ್ತಿಗಳ ಜೊತೆಗೆ ಪುರಾಣದ ಅಂಶಗಳೂ, ಜಾನಪದ ಅಂಶಗಳೂ ಕತೆಯಲ್ಲಿ ಸೇರಿಕೊಂಡಿವೆ. ಆದರೆ ಇತಿಹಾಸ ಹಾಗೂ ಪುರಾಣಗಳನ್ನು ವಿಂಗಡಿಸಿ ನೋಡುವ ವಾಸ್ತವವಾದದ ದೃಷ್ಟಿಕೋನ ಇಲ್ಲಿ ಇಲ್ಲ. ಪುರಾಣದ ಪವಾಡದ ಅಂಶಗಳನ್ನು ಕೂಡ ಕತೆಗಾರರು ಶ್ರದ್ದೆಯ ಒಪ್ಪಿಗೆಯಿಂದ ತನ್ಮಯರಾಗಿಯೇ ಚಿತ್ರಿಸಿದ್ದಾರೆ. ಆ ಮೂಲಕ ಧರ್ಮದ ಕಟ್ಟಳೆಗಳನ್ನು ಮೀರಿದ ದೈವಿಕಪ್ರೇಮವನ್ನು ಎತ್ತಿತೋರಿಸುವುದು ಕತೆಗಾರರ ಉದ್ದೇಶವಾಗಿದೆ. ಪವಾಡಗಳನ್ನು ಬಿಟ್ಟರೂ, ವಾಸ್ತವಿಕ ದೃಷ್ಟಿಕೋನದಿಂದ ನೋಡಿದಾಗ ನಂಬಲು ಕಷ್ಟವಾದ ಕೆಲವು ವಿವರಗಳು ಕಥೆಯಲ್ಲಿವೆ. ಮುಸ್ಲಿಂ ಚಕ್ರವರ್ತಿಯ ಧರ್ಮ ಸಹಿಷ್ಣುತೆ, ಮಮ್‌ತಾಜಳಿಗೆ ಹಿಂದೂ ಮೂರ್ತಿಯಲ್ಲಿ ಹುಟ್ಟುವ ಅಕಾರಣ ಪ್ರೀತಿ, ಅರಬ್ಬಿ ಕುದುರೆಯ ನೇರ ಪಯಣ, ತುರುಕರ ದಾಳಿಯಲ್ಲಿ ಕಿತ್ತು ತಂದಾಗ ಸುಮ್ಮನಿದ್ದ ಚೆಲುವರಾಯ ನಂತರ ಪವಾಡಗಳ ಮೂಲಕ ಪ್ರತಿಷ್ಠಾಪನೆಗಾಗಿ ಇಚ್ಛಿಸುವುದು, ಹರಿಜನರು ದೇವಾಲಯವನ್ನು ಪ್ರವೇಶಿಸುವದಕ್ಕೆ ಜನರನ್ನು ಒಪ್ಪಿಸಲು ಯಾವ ತೊಂದರೆಯೂ ಆಗದ ರಾಮಾನುಜರಿಗೆ ಮಮತಾಜಳ ಗೋರಿಯನ್ನು ದೇವಾಲಯದ ಆವರಣದಲ್ಲಿ ಮಾಡಿಸಲು ಜನರಿಂದ ವಿರೋಧ ಬರುವದು, ಇತ್ಯಾದಿ ವಿವರಗಳು ನಂಬಲು ಸುಲಭವಾಗುವಂತೆ ಕಥೆಯಲ್ಲಿ ಚಿತ್ರಿತವಾಗಿಲ್ಲ. ಜಾನಪದ ರೀತಿಯ ಅದ್ಭುತರಮ್ಯ ಕಥನ ಸಂಪ್ರದಾಯದಲ್ಲಿ ವಿವರಗಳನ್ನು ಕೇವಲ ವಾಸ್ತವಿಕತೆಯ ಮಾನದಂಡದಿಂದ ಅಳೆಯಲಿಕ್ಕಾಗುವುದಿಲ್ಲವೆಂಬುದೇನೋ ನಿಜ. ಆದರೆ ಅಂಥ ವಿವರಗಳು ಮಾನವ ಸ್ವಭಾವಧರ್ಮಕ್ಕೆ, ಕಥೆಯ ಆಂತರಿಕ ತರ್ಕಕ್ಕೆ ವಿರೋಧವಾಗಿರಬಾರದು.
ಈ ಶತಮಾನದ ಆರಂಭದಲ್ಲಿ ಕನ್ನಡದಲ್ಲಿ ಈ ಶೈಲಿಯ ಹಲವಾರು ಕಾದಂಬರಿಗಳು ಬಂದವು. ಗಳಗನಾಥರ ಕಾದಂಬರಿಗಳಲ್ಲಿ ಪವಾಡಗಳು ಇರದಿದ್ದರೂ ಅದ್ಭುತರಮ್ಯತೆಯ ಜಾನಪದ ಅಂಶಗಳು ಸಾಕಷ್ಟಿವೆ. ಆದರೆ ಈ ಶೈಲಿಯಲ್ಲಿ ಸಣ್ಣಕತೆಗಳು ಮಾತ್ರ ಬಂದಿಲ್ಲವೆಂದೇ ಹೇಳಬೇಕು. ಆನಂದಕಂದರ ಜಾನಪದ ಐತಿಹ್ಯಗಳನ್ನು ಕುರಿತ ಕತೆಗಳಿಗೆ ವಾಸ್ತವಿಕ ಚೌಕಟ್ಟಿದೆ, ಆ ಚೌಕಟ್ಟಿನ ಮೂಲಕ ಐತಿಹ್ಯವನ್ನು ಬೇರ್ಪಡಿಸುವ ಪ್ರಜ್ಞೆಯಿದೆ. ಅಂತೆಯೇ ಅವರ ಕತೆಗಳನ್ನು ಗಳಗನಾಥರ ಸಂಪ್ರದಾಯಕ್ಕೆ ಜೋಡಿಸಲು ಆಗುವುದಿಲ್ಲ. ಈ ಕಾರಣದಿಂದಾಗಿಯೇ ‘ಶ್ರೀಸ್ವಾಮಿ’ಯವರ ಈ ಪ್ರಯೋಗಗಳು ಕುತೂಹಲಕರವಾಗಿ ಕಾಣುತ್ತವೆ. ನಂತರವೂ ಈ ಬಗೆಯ ಬರವಣಿಗೆ ಮುಂದುವರಿಯಲಿಲ್ಲವಾಗಿ ಈ ಕಥೆಗಳು ಇಂದಿಗೂ ವಿಶಿಷ್ಟವಾಗಿ ಉಳಿದಿವೆ. ಈ ದೃಷ್ಟಿಯಿಂದ ‘ಬೀಬೀ ನಾಚ್ಚಿಯಾರ್’ ಒಂದು ಅಪರೂಪದ ಉದಾಹರಣೆಯಾಗಿದೆ.
ಆದರೂ ಇಂದಿನ ಅಭಿರುಚಿಯಲ್ಲಿ ತರಬೇತಾದ ಓದುಗರಿಗೆ ಇಂಥ ಕಥೆಗಳು ಮೆಚ್ಚಿಗೆಯಾಗುವದು ಸ್ವಲ್ಪ ಕಷ್ಟದ ಸಂಗತಿಯೇ. ಧಾರ್ಮಿಕ ಶ್ರದ್ಧೆ, ಪವಾಡಗಳಲ್ಲಿಯ ನಂಬಿಕೆ, ಸಂಪ್ರದಾಯಮಾನ್ಯತೆ ಮೊದಲಾದ ಲೇಖಕ ಧೋರಣೆಗಳನ್ನು ಒಪ್ಪುವುದು ಕೂಡ ಕಷ್ಟವಾಗುತ್ತದೆ. ಅಲ್ಲದೆ ಇಲ್ಲಿ ಪವಾಡಗಳನ್ನು ಪ್ರತಿಮಾನಿಷ್ಠವಾಗಿ ಬಳಸಿಲ್ಲವೆಂಬುದೂ ಒಂದು ತೊಂದರೆಯಾಗಿದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)