ಸಾಮಾನ್ಯ ಜನರು ಉದ್ಯೋಗವನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಪಿಡುಗಾಗಿರುವ ನಿರುದ್ಯೋಗವನ್ನು ನಿವಾರಿಸುವುದರಿಂದ ಸೌಹಾರ್ದ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಜನಪದ ವಿದ್ವಾಂಸ, ಸಾಹಿಗಳಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಚಳುವಳಿಯ ಧ್ರುವತಾರೆ ಭಗತ್ ಸಿಂಗ್ ಅವರ 94ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಮುನ್ನೂರು ಯುವಕ ಮಂಡಲದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಯುವಜನತೆಯನ್ನು ಕಾಡುತ್ತಿದೆ. ನಿರುದ್ಯೋಗವನ್ನು ಕಾರ್ಪೊರೇಟ್ ವಲಯ ಪ್ರೋತ್ಸಾಹಿಸುತ್ತಾ ಬರುತ್ತಿದೆ. ಜೊತೆಗೆ ಕೋಮುವಾದಿ ಶಕ್ತಿಗಳು ಇದರ ದುರ್ಲಾಭವನ್ನು ಪಡೆಯುತ್ತಿವೆ. ನಿರುದ್ಯೋಗದಿಂದ ಹತಾಶರಾದ ಯುವಜನರಲ್ಲಿ ಜಾತಿ ಧರ್ಮದ ಅಮಲನ್ನೇರಿಸಿ ಕೋಮುದ್ವೇಷವನ್ನು ಹಬ್ಬಿಸಲು ಪ್ರಚೋದನೆ ನೀಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಲಭಿಸುವಂತಾದರೆ ಮಾತ್ರವೇ ಸೌಹಾರ್ದ ಭಾರತವನ್ನು ನಿರ್ಮಿಸಲು ಸಾಧ್ಯವಿದೆ” ಎಂದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, “ನಿಜವಾದ ದೇಶಪ್ರೇಮ ಅಂದರೆ ದೇಶಕ್ಕಾಗಿ ಶ್ರಮ ಪಡುವುದು, ದುಡಿಯುವುದು. ಸಾರ್ವಜನಿಕ ವಲಯ ಆರೋಗ್ಯ, ಶಿಕ್ಷಣ, ಉದ್ಯೋಗದ ಕಡೆ ಗಮನ ಹರಿಸಬೇಕಾಗಿದೆ. ಆದರೆ, ಸರ್ಕಾರ ಇದೆಲ್ಲವನ್ನು ಖಾಸಗಿ ವಲಯಕ್ಕೆ ಕೊಡುತ್ತಿದೆ. ಸಾರ್ವಜನಿಕ ವಲಯ ಎಲ್ಲವನ್ನು ಕಳಚಿಕೊಳ್ಳುತ್ತಾ ಇದೆ. ಬಂಡವಾಳಶಾಹಿ ವ್ಯವಸ್ಥೆ ಎಲ್ಲವನ್ನು ನಿಯಂತ್ರಣ ಮಾಡ್ತಾ ಇದೆ. ಈ ವ್ಯವಸ್ಥೆ ಬದಲಾಗಬೇಕು. ಯುವಜನತೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.
ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡುತ್ತಾ, “ಆರ್ಥಿಕ ಸ್ವಾತಂತ್ರ್ಯ ಇಲ್ಲದೆ ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಬೇಕಾದ ಕೇಂದ್ರ ರಾಜ್ಯ ಸರಕಾರಗಳು ಸದಾ ಕಾರ್ಪೊರೇಟ್ ಪರ ಮಂತ್ರಗಳನ್ನು ಜಪಿಸುವ ಮೂಲಕ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟಿವೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಳ್ಳಾಲ | ಮೀನು ಸಂಸ್ಕರಣಾ ಘಟಕಗಳಲ್ಲಿ ಕಲ್ಲಿದ್ದಲು ಬಳಸದಂತೆ ಜಿಲ್ಲಾಧಿಕಾರಿಗೆ ಡಿವೈಎಫ್‌ಐ ಮನವಿ
ಕಾರ್ಯಕ್ರಮದಲ್ಲಿ ಯುವಜನ ನಾಯಕ ರಿಜ್ವಾನ್ ಹರೇಕಳ, ರೈತ ಚಳುವಳಿಯ ಹಿರಿಯ ನಾಯಕ ಕ್ರಷ್ಣಪ್ಪ ಸಾಲ್ಯಾನ್, ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ, ಕಾರ್ಮಿಕ ನಾಯಕ ಜನಾರ್ಧನ ಕುತ್ತಾರ್, ಮುನ್ನೂರು ಪಂಚಾಯತ್ ಸದಸ್ಯ ಗಣೇಶ್ ಅಡ್ಯಾಂತಾಯ, ಮುನ್ನೂರು ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ರೈತ ನಾಯಕ ಶೇಖರ್ ಕುಂದರ್, ಯುವ ನಾಯಕರಾದ ಸುನಿಲ್ ತೇವುಲ, ಮಿಥುನ್ ರಾಜ್, ದೀಕ್ಷಿತ್, ಪ್ರಥ್ವಿರಾಜ್, ರಜಾಕ್ ಮುಡಿಪು, ಕಾರ್ಮಿಕ ಮುಖಂಡರಾದ ಚಂದ್ರಹಾಸ ಪಿಲಾರ್, ರೋಹಿದಾಸ್ ತೊಕ್ಕೋಟ್ಟು, ಮಹಿಳಾ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ಬೇಬಿ,ನಳಿನಾಕ್ಷಿ ಶೆಟ್ಟಿ, ಪದ್ಮಾವತಿ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.