ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಎನ್ನಲಾದ ಅಲ್ಪಸಂಖ್ಯಾತ ಡೆಮಾಕ್ರಟಿಕ್ ಪಾರ್ಟಿ ನಾಯಕ (ಎಂಡಿಪಿ) ಫಾಹೀಮ್ ಖಾನ್ ಅವರ ಎರಡು ಅಂತಸ್ತಿನ ಮನೆಯನ್ನು ಸೋಮವಾರ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಈ ಕಾರ್ಯವನ್ನು ಮಾಡಿದ್ದಾರೆ. ಇನ್ನೋರ್ವ ಆರೋಪಿ ಯೂಸುಫ್ ಶೇಖ್ ಅವರ ನಿವಾಸದ ಅನಧಿಕೃತ ಭಾಗವನ್ನೂ ಕೆಡವಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗ್ಪುರ ಹಿಂಸಾಚಾರದಲ್ಲಿ ಉಂಟಾದ ನಷ್ಟವನ್ನು ಆರೋಪಿಗಳಿಂದಲೇ ವಸೂಲಿ ಮಾಡಲಾಗುವುದು. ಅವರ ಮನೆಗಳನ್ನು ಕೆಡವಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಫಾಹೀಮ್ ಖಾನ್ ಮನೆ ಕೆಡವಿದ್ದಾರೆ. ಹಾಗೆಯೇ ಮನೆ ನಿರ್ಮಿಸುವ ವೇಳೆ ನಿಯಮ ಉಲ್ಲಂಘಿಸಲಾಗಿದೆ ಎಂದು ನಾಗ್ಪುರ ನಗರಸಭೆಯು ಕೆಲ ದಿನಗಳ ಹಿಂದೆ ನೋಟಿಸ್ ನೀಡಿದೆ.
ಇದನ್ನು ಓದಿದ್ದೀರಾ? ನಾಗ್ಪುರ ಹಿಂಸಾಚಾರ | ಹಾನಿಯ ನಷ್ಟ ಗಲಭೆಕೋರರಿಂದ ವಸೂಲಿ: ಮಹಾರಾಷ್ಟ್ರ ಸಿಎಂ ಫಡ್ನವೀಸ್
ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವಿಗೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳಾದ ಬಜರಂಗದಳ, ಹಿಂದೂ ಯುವ ಸೇನೆ ಪ್ರತಿಭಟನೆಯನ್ನು ನಡೆಸಿತ್ತು. ಈ ಪ್ರತಿಭಟನೆ ವೇಳೆ ಪವಿತ್ರ ‘ಛಾದರ್’ ಸುಡಲಾಗಿದೆ ಎಂದು ವದಂತಿ ಹರಡಿದ ಬಳಿಕ ಮಾರ್ಚ್ 17ರಂದು ನಾಗ್ಪುರ ಹಿಂಸಾಚಾರ ನಡೆದಿದೆ. ಪೆಟ್ರೋಲ್ ಬಾಂಬ್ ಎಸೆಯಲಾಗಿದೆ, ಕಲ್ಲು ತೂರಾಟ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್‌ಪಿ ನಾಯಕರು ಸೇರಿದಂತೆ ನೂರಾರು ಜನರನ್ನು ಬಂಧಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ಫಾಹೀಮ್ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಈ ಬುಲ್ಡೋಜರ್ ನೀತಿಯು ಕಾನೂನುಬಾಹಿರವೆಂದು ಹೇಳಿತ್ತು. ಆದರೂ ಕೂಡಾ ಫಡ್ನವೀಸ್ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿದ್ದಾರೆ. ಸಿಂಧುದುರ್ಗ್ ಜಿಲ್ಲೆಯ ಕಿತಾಬುಲ್ಲಾ ಹಮಿದುಲ್ಲಾ ಖಾನ್ ಪುತ್ರ ಪಾಕಿಸ್ತಾನ- ಭಾರತ ಪಂದ್ಯದ ವೇಳೆ ಭಾರತ ವಿರೋಧಿ ಘೋಷಣೆ ಕೂಗಿದ ಆರೋಪವಿದೆ. ಈ ಬೆನ್ನಲ್ಲೇ ಖಾನ್ ಮನೆಯನ್ನು ನೆಲಸಮ ಮಾಡಲಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇದನ್ನು ಓದಿದ್ದೀರಾ? ನಾಗ್ಪುರ ಹಿಂಸಾಚಾರ | ವಿಎಚ್‌ಪಿ, ಬಜರಂಗ ದಳದ ಮುಖಂಡರೂ ಸೇರಿ 78 ಮಂದಿ ಬಂಧನ
ಉತ್ತರ ಪ್ರದೇಶದ ಈ ಬುಲ್ಡೋಜರ್ ನೀತಿಯನ್ನು ಮಹಾರಾಷ್ಟ್ರ ಬಹಳ ವೇಗವಾಗಿ ಚಾಲ್ತಿಗೆ ತರುತ್ತಿದೆ. ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಬಿದ್ದರೆ ಸಾಕು ಅವರ ಮನೆ ಧ್ವಂಸ ಖಂಡಿತ. ಅದರಲ್ಲೂ ಪ್ರಕರಣದ ಆರೋಪಿ ಅಲ್ಪಸಂಖ್ಯಾತರಾದರೆ ಅವರ ಆಸ್ತಿ ಮೇಲೆ ಬುಲ್ಡೋಜರ್ ಓಡುವುದು ಖಚಿತ. ಅದಕ್ಕೆ ಸ್ಪಷ್ಟ ಉದಾಹರಣೆ ನಾಗ್ಪುರ ಹಿಂಸಾಚಾರ. ಬಂಧಿತ ಆರೋಪಿಗಳಲ್ಲಿ ವಿಎಚ್‌ಪಿ, ಹಿಂದೂ ಯುವ ಸೇನೆ ನಾಯಕರು ಕೂಡಾ ಇದ್ದರು. ಆದರೆ ಕೆಡವಿದ್ದು ಆರೋಪಿ ಫಾಹೀಮ್ ಮನೆಯನ್ನು ಮಾತ್ರ. ಭಾರತ- ಪಾಕಿಸ್ತಾನ ಪಂದ್ಯದ ವೇಳೆ ಭಾರತದ ವಿರುದ್ಧ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿ 14 ವರ್ಷದ ಬಾಲಕನ ಪೋಷಕರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಈಗ ಶಿಂದೆಯನ್ನು ಟೀಕಿಸಿದ ಬೆನ್ನಲ್ಲೇ ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಮ್ರಾಗೆ ಸೇರಿದ ಕಟ್ಟಡವನ್ನು ಅಕ್ರಮವೆಂದು ಹೇಳಿ ಕೆಡವಲಾಗಿದೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಿಮ್ಮತ್ತಿಲ್ಲದಂತಾಗಿದೆ. ಅಕ್ರಮ ಕಟ್ಟಡ ಎಂಬ ಹಣೆಪಟ್ಟಿ ಕಟ್ಟಿ ತಮ್ಮ ವಿರೋಧಿಗಳನ್ನು ಮಟ್ಟ ಹಾಕುವ ಹೇಯ ಕೃತ್ಯಕ್ಕೆ ಮಹಾರಾಷ್ಟ್ರ ಸರ್ಕಾರ ಇಳಿದಿದೆ.
ನಾಗ್ಪುರ ಹಿಂಸಾಚಾರ ನಡೆದ ಬಳಿಕ ಮಹಾರಾಷ್ಟ್ರ ಸರ್ಕಾರ ಕೈಗೊಂಡ ಕ್ರಮ ಖಂಡನೀಯ. ಯಾವುದೇ ಪ್ರಕರಣದ ಆರೋಪಿಯಾಗಿರಲಿ, ಮನೆ, ಆಸ್ತಿ ನಾಶಗೊಳಿಸಿ ಇಡೀ ಕುಟುಂಬವನ್ನು ಬೀದಿಗೆ ತರುವುದು ಮಾನವೀಯ ನೆಲೆಗಟ್ಟಿನಲ್ಲಿ ಸರಿಯಲ್ಲ. ಅದರಲ್ಲೂ ಹೈಕೋರ್ಟ್ ತಡೆಯಾಜ್ಞೆ ಆದೇಶ ಬರುವುದಕ್ಕೂ ಮುನ್ನವೇ ಮನೆ ನಾಶ ಪಡಿಸಿರುವುದು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ಮುಸ್ಲಿಂ ದ್ವೇಷದ ಪ್ರತೀಕ. ಜೊತೆಗೆ ನ್ಯಾಯಾಂಗ ನಿಂದನೆ ಕೂಡಾ ಹೌದು. ಕಳೆದ ನವೆಂಬರ್‌ನಲ್ಲಿಯೇ ಈ ಬುಲ್ಡೋಜರ್ ನೀತಿಯನ್ನು ಸುಪ್ರೀಂ ಕೋರ್ಟ್ ಖಂಡಿಸಿತ್ತು. ಇಂತಹ ಕ್ರಮಗಳು ಕಾನೂನುಬಾಹಿರ ಎಂದು ಹೇಳಿತ್ತು.
