ಬಿಜೆಪಿ ಶಾಸಕರು ಸದನದಲ್ಲಿ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದರಿಂದ 18 ಜನ ಶಾಸಕರನ್ನು ಅಮಾನತುಗೊಳಿಸಿರುವುದು ಸಂವಿಧಾನಾತ್ಮಕ ಕ್ರಮವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ.ರಜಾಕ್ ಉಸ್ತಾದ್ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, “ಬಿಜೆಪಿ ಶಾಸಕರುಗಳು ರಸ್ತೆಯ ಪುಡಾರಿಗಳ ರೀತಿ ಸದನದಲ್ಲಿ ವರ್ತಿಸಿರುವದು ಅಕ್ಷಮ್ಯ ಅಪರಾಧ. ಅಂತಹ ಶಾಸಕರನ್ನು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಆರು ತಿಂಗಳ ಅವಧಿಗೆ ಅಮಾನತು ಮಾಡಿರುವುದು ಸರಿಯಾದ ಕ್ರಮವಾಗಿದೆ” ಎಂದರು.
“ಬಿಜೆಪಿ ಸದಸ್ಯರ ವರ್ತನೆಗೆ ಬೇಸತ್ತು ಬಸವರಾಜ ಹೊರಟ್ಟಿಯವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅವಮಾನ. ಇತ್ತೀಚಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ 140 ಜನ ಸಂಸದರನ್ನು ಅಮಾನತು ಮಾಡಿರುವುದನ್ನು ಬಿಜೆಪಿ ಮರೆತಂತಿದೆ. ಆದರೆ ರಾಜ್ಯದ ಜನತೆ ಮರೆತಿಲ್ಲ. ಅಲ್ಲಿ ಸದಸ್ಯರು ಕೇವಲ ಪ್ರತಿಭಟನೆ ಮಾಡುತ್ತಿದ್ದರೂ ಅಮಾನತು ಮಾಡಲಾಗಿತ್ತು. ಇಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪೀಠದ ಮೇಲೆ ಹತ್ತಿ ಸಭಾಧ್ಯಕ್ಷರು ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದರು ಮತ್ತು ಕೆಲವೊಬ್ಬರು ಪೇಪರ್ ಹರಿದು ಪೀಠಕ್ಕೆ ಎಸೆಯುತ್ತಿದ್ದರು. ಇದು ಅತ್ಯಂತ ಗಂಭೀರ ವಿಷಯ ಎನ್ನುವದು ಬಿಜೆಪಿಯವರಿಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳ 1ಎ, 2ಎ ಮತ್ತು 2ಬಿ ಪ್ರವರ್ಗಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದು, ಇದರಲ್ಲಿ 2ಬಿ ಅಡಿಯಲ್ಲಿ ಬರುವ ಮುಸ್ಲಿಂರಿಗೆ ಮೀಸಲಾತಿ ನೀಡಿದ್ದು ಸಂವಿಧಾನಬಾಹಿರ ಎಂದು ಬಿಜೆಪಿ ನಾಯಕರು ದೇಶದ ಮೂಲೆ ಮೂಲೆಯಲ್ಲಿ ನಿಂತು ಬಾಯಿ ಬಡೆದುಕೊಳ್ಳುತ್ತಿರುವುದಲ್ಲದೇ, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿಯೂ ವಿರೋಧೀಸುತ್ತಿದ್ದಾರೆ. ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ ಎನ್ನುವುದು ಬಿಜೆಪಿ ಆರೋಪ. ಅದು ಸತ್ಯಕ್ಕೆ ದೂರವಾದ ವಿಷಯ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ
ಸಂವಿಧಾನದಲ್ಲಿ ಎಲ್ಲಿಯೂ ಮುಸ್ಲಿಂರಿಗೆ ಮೀಸಲಾತಿ ನೀಡಬಾರದೆಂದು ಹೇಳಿಲ್ಲ, ಸಂವಿಧಾನದ ಅನುಚ್ಛೇದ 16(4)ರಲ್ಲಿ ಸರಕಾರ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂದು ಹೇಳಿದೆ. ಅದರಲ್ಲಿ ಯಾವುದೇ ಧರ್ಮ ಅಥವಾ ಜಾತಿ ಎಂದು ಸೂಚಿಸಿಲ್ಲ. ಈ ದೇಶದಲ್ಲಿ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಸಾಕಷ್ಟು ವರದಿಗಳು ಇವೆ. ಸಂವಿಧಾನ ಹಿಂದುಳಿದ ವರ್ಗ ಮತ್ತು ಆ ಸಮುದಾಯದ ಪ್ರಾತಿನಿಧ್ಯ ಸರಕಾರದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಇರದಿದ್ದರೆ ಅಂತಹ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು” ಎಂದು ಹೇಳಿದೆ. ಸಂವಿಧಾನ ತಿಳಿಯದ ಬಿಜೆಪಿ ಇದನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದ” ಎಂದಿದ್ದಾರೆ.