ನಾರಾಯಣಪುರದ ಬಸವಸಾಗರ ಜಲಾಶಯದಿಂದ ಏ.10ರವರೆಗೆ ನಿರಂತರವಾಗಿ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಮಾನವ ಸರಪಳಿ ರಚಿಸಿ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತದಲ್ಲಿ ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಯಿತು.
ಸಂಯುಕ್ತ ಹೋರಾಟ ಸಮಿತಿಯ ನೂರಾರು ಪದಾಧಿಕಾರಿಗಳು ರಸ್ತೆ ತಡೆದು ಕಾಲುವೆಗೆ ನೀರು ಹರಿಸುವಂತೆ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಯಾದಗಿರಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ನಾರಾಯಣಪೂರ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಹುಣಸಗಿ, ಸುರಪುರ,ಶಹಾಪುರ ಹಾಗೂ ವಡಗೇರಾ ತಾಲೂಕುಗಳಿವೆ. ಈ ಭಾಗದ ರೈತರು ಬೆಳೆದ ಶೇಂಗಾ, ಸಜ್ಜಿ, ಸೂರ್ಯಕಾಂತಿ, ಭತ್ತ ಸೇರಿದಂತೆ ಇತರೆ ಬೆಳೆ ಎರಡ್ಮೂರು ವಾರಗಳಲ್ಲಿ ಕೈಗೆ ಬರುತ್ತವೆ. ಕಾಲುವೆಗೆ ನಿರಂತರವಾಗಿ ಕಾಲುವೆಗೆ ನೀರು ಹರಿಸದಿದ್ದರೆ ಯಾವುದೇ ಬೆಳೆ ಕೈಗೆ ಬರಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪ್ರತಿ ಎಕರೆಗೆ ಸುಮಾರು 50 ಸಾವಿರ ಖರ್ಚು ಮಾಡಿದ್ದಾರೆ. ನೀರು ಬಿಡದಿದ್ದರೆ ರೈತರ ಬೆಳೆಗಳು ಸಂಪೂರ್ಣ ಒಣಗುತ್ತವೆ. ಇದರಿಂದ ರೈತ ಆರ್ಥಿಕ ಸಂಕಷ್ಟ ಅನುಭವಿಸುತ್ತಾನೆ. ಕಾಲುವೆಗೆ ನೀರು ಹರಿಸದಿದ್ದರೆ ಎಲ್ಲ ಕಡೆಗಳಲ್ಲಿ ಚಳವಳಿಗಳು ಬಿರುಸುಗೊಳ್ಳುತ್ತವೆ. ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಆಗುತ್ತದೆʼ ಎಂದು ಎಚ್ಚರಿಸಿದರು.
ʼನೀರಾವರಿ ಇಲಾಖೆಯ ಅಧಿಕಾರಿಗಳು ಆಲಮಟ್ಟಿ ಮತ್ತು ನಾರಾಯಣಪೂರ ಡ್ಯಾಂಗಳಲ್ಲಿ ಸಾಕಷ್ಟು ನೀರಿದ್ದು ಅದೆಷ್ಟೋ ಟಿಎಂಸಿ ನೀರು ನದಿಗೆ ಹೋಗಿದೆ. ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ರೈತ ಸಂಘಟನೆಯ ಪ್ರತಿನಿಧಿಗಳ ಸಲಹೆ ಪಡೆಯದೆ ಅವೈಜ್ಞಾನಿಕವಾದ ತೀರ್ಮಾನದಿಂದ ತೆಲಂಗಾಣಕ್ಕೆ ನೀರು ಬಿಟ್ಟಿರುವುದರಿಂದ ಈಗ ರೈತರ ಬೆಳೆಗಳಿಗೆ ನೀರು ಕೊಡಲು ಹಿಂಜರಿಯುತ್ತಿರುವುದು ಸರಿಯಾದ ಕ್ರಮವಲ್ಲʼ ಎಂದು ದೂರಿದರು.
ಸಿಪಿಐ(ಎಂ) ಮುಖಂಡ ಚನ್ನಪ್ಪ ಆನೆಗುಂದಿ ಮಾತನಾಡಿ, ʼಜಲಾಶಯದಲ್ಲಿ ನೀರಿದ್ದರೂ ಸಹ ಮರೆಮಾಚುವ ಕೆಲಸ ನಡೆದಿದೆ. ತೆಲಂಗಾಣಕ್ಕೆ ರಾತೋರಾತ್ರಿ 2 ಟಿಎಂಸಿ ನೀರು ಹರಿಸಿದ್ದು ಇದಕ್ಕೆ ನಿದರ್ಶನ. ನೀರು ಹರಿಸದಿದ್ದರೆ ಕೇವಲ ರೈತರು ಮಾತ್ರ ನಷ್ಟ ಅನುಭವಿಸುವುದಿಲ್ಲ ಗೊಬ್ಬರ, ಕ್ರಿಮಿನಾಶಕ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾರೆ. ಲಕ್ಷಾಂತರ ಟನ್ ಅಕ್ಕಿ ಉತ್ಪಾದನೆ ನಿಂತು ಹೋಗುತ್ತದೆ’ ಎಂದರು.
ʼಸರ್ಕಾರ ಕೂಡಲೇ ರೈತರಿಗೆ ಎದುರಾದ ಸಂಕಷ್ಟ ನಿವಾರಣೆಗೆ ಮುಂದಾಗಿ ಅಗತ್ಯಕ್ಕೆ ಬೇಕಾಗಿರುವ ಕುಡಿಯುವ ನೀರು ಬಿಟ್ಟು ಉಳಿದ 4.5 ಟಿಎಂಸಿ ಹೆಚ್ಚುವರಿ ನೀರು ಹಾಗೂ ಕೊಯ್ಕಾ ಡ್ಯಾಂನಿಂದ 4 ಟಿಎಂಸಿ ಸೇರಿ ಏಪ್ರಿಲ್10ರವರೆಗೆ ನೀರು ಹರಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಪಶು ವಿಶ್ವವಿದ್ಯಾಲಯ 14ನೇ ಘಟಿಕೋತ್ಸವ : ಆದಿತ್ಯಗೆ 9, ದಕ್ಷೀತ್‌ಗೆ 6, ಎಲೆಕ್ಟ್ರಿಕಲ್ ವ್ಯಾಪಾರಿ ಮಗಳಿಗೆ 4 ಚಿನ್ನದ ಪದಕ
ರೈತ ಸಂಘದ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನ ಪಾಟೀಲ, ಸೇರಿದಂತೆ ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ, ಮುದ್ದಣ್ಣ ಅಮ್ಮಾಪುರ್, ದೇವಿಂದ್ರಪ್ಪ ಪತ್ತಾರ, ಬುಚ್ಚಪ್ಪ ನಾಯಕ, ಮಲ್ಕಣ್ಣಾ ಚಿಂತಿ, ಭೀಮಣ್ಣ ಪಟ್ಟೆದಾರ, ಬಸವರಾಜ ದೊಡ್ಡಮನಿ, ರಾಮಯ್ಯ ಆಲ್ದಾಳ, ಮಲ್ಲಣ್ಣ ಹುಬ್ಬಳ್ಳಿ, ವೀರಭದ್ರಪ್ಪ ತಳವಾರಗೇರಾ, ಭೀಮಾ ನಾಯಕ್, ಸೋಮಶೇಖರ್, ಧರ್ಮಣ್ಣಾ ದೊರಿ, ಚನ್ನಪ್ಪ, ಶಾಂತಪ್ಪ, ಮಾನಪ್ಪಗೌಡಾ, ಸಿದ್ದಪ್ಪ ಕುಂಬಾರಪೇಟ, ರವಿಕುಮಾರ್, ಪ್ರಕಾಶ, ಮಲ್ಲಪ್ಪ ಕುಂಬಾರಪೇಟ, ಶಿವಲಿಂಗಪ್ಪ ಎಮ್, ರಾಮಣ್ಣ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ರವಿಚಂದ್ರನ ಬೊಮ್ಮನಹಳ್ಳಿ, ರಾಜ್ಯ ಹಣಮಂತ ನಾಯಕ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
