ಸಿಬ್ಬಂದಿಯೋರ್ವರಿಂದ ₹5,000 ಲಂಚ ಸ್ವೀಕರಿಸುವ ವೇಳೆ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿಎಆರ್) ಡಿವೈಎಸ್‌ಪಿಯನ್ನು ಲಂಚದ ಸಹಿತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಡಿಎಆರ್ ಡಿವೈಎಸ್‌ಪಿ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಇವರು ತಮ್ಮ ನಿವಾಸದಲ್ಲಿ ಮಾರ್ಚ್ 25ರಂದು ಸಿಬ್ಬಂದಿಯೋರ್ವರಿಂದ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕರ್ತವ್ಯಕ್ಕೆ ನಿಯೋಜನೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಡಿಎಆರ್ ಸಿಬ್ಬಂದಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಿಬ್ಬಂದಿಯು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಮಂಗಳವಾರ ತಮ್ಮ ನಿವಾಸದಲ್ಲಿ ಸಿಬ್ಬಂದಿಯಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಹಿತ ಡಿವೈಎಸ್‌ಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? 10.43 ಕೋಟಿ ಮನರೇಗಾ ದಿನಗೂಲಿಗಳ ನೋಂದಣಿ ರದ್ದು; ಬಡವರ ಬದುಕು ಕಸಿದ ಮೋದಿ ಸರ್ಕಾರ
ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧರಿ ನೇತೃತ್ವದ ಪೊಲೀಸ್ ತಂಡ ಸದರಿ ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.