ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನಕ್ಕೂ ಒಳಪಡಿಸಿದ ಈ ಸಂದರ್ಭದಲ್ಲಿ ಸರ್ಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ವೇತನ ನಿಗದಿ ಮಾಡಿರುವುದು ಸಂವಿಧಾನಾತ್ಮಕವಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕ ಕಾರ್ಯಾಲಯದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಂಟು, ಹತ್ತು ಸಾವಿರ ರೂಗಳಿಗೆ ಸಮಾಜದ ಹಿತ ಕಾಯಲು ದುಡಿಯುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡಿದ್ದರೆ ಸರ್ಕಾರದ ನಡೆ ಒಪ್ಪಬಹುದಿತ್ತು. ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಸರಿನಲ್ಲಿ ತಾಲ್ಲೂಕಿಗೆ 25 ಸಾವಿರ ಹಾಗೂ ಜಿಲ್ಲಾ ಮಟ್ಟಕ್ಕೆ 40 ಸಾವಿರ ಹಾಗೂ ರಾಜ್ಯ ಮಟ್ಟದಲ್ಲಿ ಸಚಿವ ಸ್ಥಾನಮಾನ ಕಲ್ಪಿಸುವುದು ಅಸಂವಿಧಾನ ನಡೆ ಎಂದು ಕಿಡಿಕಾರಿದರು.
ಪಕ್ಷದ ಕಾರ್ಯಕರ್ತರಿಗೆ ಅವರ ಪಕ್ಷದಿಂದ ಕೆಪಿಸಿಸಿ ಮೂಲಕ ವೇತನ ನೀಡಲಿ. ಸರ್ಕಾರದ ಹಣ ಬಳಸಿರುವುದು ಸರಿಯಲ್ಲ. ಅಭಿವೃದ್ದಿ ಪೂರಕ ಸಾರ್ವಜನಿಕ ತೆರಿಗೆ ಹಣವನ್ನು ಕಾರ್ಯಕರ್ತರಿಗೆ ನೀಡಲು ಯಾವ ಹಕ್ಕು ಇಲ್ಲ. ಕೂಡಲೇ ಸರ್ಕಾರದಿಂದ ಈ ರೀತಿ ವ್ಯಯ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದ ಅವರು ಪೋನ್ ಕದ್ದಾಲಿಕೆ ಬಗ್ಗೆ ಬಗ್ಗೆ ದಿನವಿಡೀ ಚರ್ಚೆ ಮಾಡುವುದು ಸಮಯ ವ್ಯರ್ಥ. ಕಾಲೇಜು ಮಂಜೂರು ಮಾಡಲು ಮನವಿ ಮಾಡಿದರೆ ಮಕ್ಕಳ ಶಿಕ್ಷಣ ವಿಚಾರ ಬಿಟ್ಟು ಸಲ್ಲದ ರಾಜಕಾರಣ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹನಿ ಟ್ರ್ಯಾಪ್ ವಿಚಾರದಲ್ಲಿ ಬಲೆಗೆ ಬಿದ್ದವರು ಹಾಗೂ ಬಲೆ ಬೀಸಿದವರು ಅನುಭವಿಸುತ್ತಾರೆ. ಈ ಬಗ್ಗೆ ಯಾವ ಪ್ರತಿಕ್ರಿಯೆ ಬೇಕಿಲ್ಲ. ವಿಶೇಷ ತನಿಖಾ ತಂಡ ರಚನೆ ಮಾಡಿ ತನಿಖೆ ನಡೆಯಲಿ. ಅನವಶ್ಯ ಸದನದ ಸಮಯ ವ್ಯಯ ಆಗುವುದು ಸರಿಯಲ್ಲ ಎಂದ ಅವರು ಅಧಿಕೃತ ದಾಖಲೆ ಇಲ್ಲ. ಇನ್ನೂ ದೂರು ದಾಖಲಾಗಿಲ್ಲ. ಊಹಾಪೋಹ ಚರ್ಚೆ ಬೇಕಿಲ್ಲ. ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಜಪದಲ್ಲಿದೆ. ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ಜೆಡಿಎಸ್ ಸಿ.ಎಸ್.ಪುರ ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡ ಅವ್ವೇರಹಳ್ಳಿ ಕೃಷ್ಣಪ್ಪ ಇತರರು ಇದ್ದರು.