ವಿದ್ಯುತ್ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಹೊಸನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ 40 ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವುದರಿಂದ ವಿದ್ಯುತ್ ಸಮಸ್ಯೆ ಸುಧಾರಿಸಿದೆ. ವಿಶೇಷವಾಗಿ ಹೊಸನಗರ ತಾಲೂಕಿನ ವಿದ್ಯುತ್ ಸಮಸ್ಯೆ ನೀಗಿಸಲು ಮೊದಲ ಆದ್ಯೆತೆ ನೀಡಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ತಾಲೂಕಿನ ಅಮೃತ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಕೇಂದ್ರ ಸ್ಥಾಪನೆಗೆ ಚಾಲನೆ ದೊರೆಯಲಿದೆ. ಹರಿದ್ರಾವತಿ ನೂತನ ಕೇಂದ್ರ ಅಂತಿಮ ಹಂತದಲ್ಲಿದೆ. ಮುಂದಿನ ವರ್ಷ ವಿದ್ಯುತ್ ಸಮಸ್ಯೆ ಬಹುತೇಕ ಇಲ್ಲದಂತಾಗಲಿದೆ. ಆದರೆ ಹಲವು ಕಡೆ ಅನಧಿಕೃತವಾಗಿ ಕೃಷಿ ಪಂಪ್‌ಗಳನ್ನು ಅಳವಡಿಸಿಕೊಂಡು ದಿನವಿಡೀ ನೀರನ್ನು ಹಾಯಿಸುತ್ತಿದ್ದಾರೆ. ಏಕಕಾಲಕ್ಕೆ ಪಂಪ್ ಚಾಲನೆ ಮಾಡುವುದರಿಂದ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಬಗ್ಗೆ ಯಾವ ರೀತಿ ಕ್ರಮ ವಹಿಸಿದ್ದೀರಿ” ಎಂದು ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು. ಜತೆಗೆ ರೈತರು ಪಾಳಿಯ ಮೇಲೆ ವಿದ್ಯುತ್ ಪಂಪ್ ಬಳಕೆೆ ಮಾಡಲು ಪ್ರೇರೇಪಿಸುವಂತೆ ಪಿಡಿಒಗಳಿಗೆ ತಿಳಿಸಿದರು.
“ಈ ಬಾರಿ ಬೇಸಿಗೆ ಧಗೆ ಹೆಚ್ಚಿದ್ದು, ನೀರಿನ ಮೂಲಗಳು ನಿರೀಕ್ಷೆಗೂ ಮುಂಚಿತವಾಗಿ ಬರಿದಾಗುವ ಲಕ್ಷಣಗಳು ಕಾಣುತ್ತಿವೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಬೇಕು. ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಇಷ್ಟರಲ್ಲಿ ಮಳೆ ಬಂದಿದ್ದರೆ ಸಮಸ್ಯೆ ಅಷ್ಟೇನೂ ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ. ಆದರೆ ಈವರೆಗೂ ಮಳೆ ಸುರಿಯದ ಹಿನ್ನೆಲೆಯಲ್ಲಿ ನೀರು ಹಾಗೂ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ” ಎಂದು ಹೇಳಿದರು.
“ಕ್ಷೇತ್ರ ವ್ಯಾಪ್ತಿಯಲ್ಲಿ 40 ಹೊಸ ಪರಿವರ್ತಕಗಳನ್ನು ಇತ್ತೀಚೆಗಷ್ಟೇ ಅಳವಡಿಸಿದ್ದು, ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗಿದೆ” ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತ್ಯೇಕವಾಗಿ ಮಾಹಿತಿ ಪಡೆದರು ಮತ್ತು ಜೆಜೆಎಂ ಕಾಮಗಾರಿಗಳ ಪ್ರಗತಿ ಕುರಿತು ಎಂಜಿನಿಯರ್‌ಗಳಿಂದ ಮಾಹಿತಿ ಪಡೆದ ಅವರು, ಅಗತ್ಯವಿರುವೆಡೆ ಕೊಳವೆಬಾವಿ ಕೊರೆಸಲು ಕ್ರಮ ವಹಿಸುವಂತೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? 10.43 ಕೋಟಿ ಮನರೇಗಾ ದಿನಗೂಲಿಗಳ ನೋಂದಣಿ ರದ್ದು; ಬಡವರ ಬದುಕು ಕಸಿದ ಮೋದಿ ಸರ್ಕಾರ
ಮಳೆ ಅಥವಾ ನೈಸರ್ಗಿಕ ವಿಕೋಪ ಉಂಟಾದಲ್ಲಿ ಕೂಡಲೇ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ತಹಶೀಲ್ದಾರ್ ಎಚ್ ಜೆ ರಶ್ಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸಹಾಯಕ ನಿರ್ದೇಶಕ ಪವನ್‌ಕುಮಾರ್, ನರೇಗಾ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್ ಹೊಸನಗರ ತಾಲೂಕಿನ ಎಲ್ಲ ಪಿಡಿಒಗಳು ಸೇರಿದಂತೆ ಕಂದಾಯ, ಪಂಚಾಯತ್‌ರಾಜ್ ಮತ್ತಿತರರ ಇಲಾಖೆಗಳ ಅಧಿಕಾರಿಗಳು ಇದ್ದರು.