ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ಕೆಲಸ ಮಾಡಿದ ಕೂಲಿಕಾರರ 6 ವಾರಗಳ ಬಾಕಿ ಕೂಲಿ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಹಾಗೂ ಕೂಲಿಕಾರರು ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ʼಜಿಲ್ಲೆಯಲ್ಲಿ ಕೆಲಸ ಮಾಡಿದ ನರೇಗಾ ಕಾರ್ಮಿಕರ ಆರು ವಾರಗಳಿಂದ ಬಾಕಿ ಉಳಿಸಿಕೊಂಡ ಹಣ ಕೂಲಿಕಾರರಿಗೆ ಕೊಡಬೇಕು. ಮನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಬಿಸಿಲು ಮತ್ತು ತಾಪಮಾನ ಹೆಚ್ಚಾಗಿದ್ದರಿಂದ ಕೆಲಸದ ಅವಧಿಯಲ್ಲಿ ರಿಯಾಯಿತಿ ಕೊಡಬೇಕು. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾದಡಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಬೇಕುʼ ಎಂದು ಆಗ್ರಹಿಸಿದರು.
ʼಮನರೇಗಾ ಕೆಲಸದ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಬೇಕು. ಜೆಜೆಎಂ ಅಡಿ ಕಳಪೆ ಕಾಮಗಾರಿ ನಡೆಸಿ ನೂರಾರು ಕೋಟಿ ಅವ್ಯವಹಾರ ಎಸಗಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಾರ್ವಜನಿಕರು ಎದುರಿಸುತ್ತಿರುವ ನೀರಿನ ಸಮಸ್ಯೆ ತಕ್ಷಣ ಇತ್ಯರ್ಥಗೊಳಿಸಬೇಕುʼ ಎಂದರು.
ʼಬೆಳೆ ಹಾನಿಯಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕೂಡಲೇ ಬೆಳೆ ಪರಿಹಾರ ಬಿಡುಗಡೆಗೊಳಿಸಿ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಪಶು ವಿಶ್ವವಿದ್ಯಾಲಯ 14ನೇ ಘಟಿಕೋತ್ಸವ : ಆದಿತ್ಯಗೆ 9, ದಕ್ಷೀತ್‌ಗೆ 6, ಎಲೆಕ್ಟ್ರಿಕಲ್ ವ್ಯಾಪಾರಿ ಮಗಳಿಗೆ 4 ಚಿನ್ನದ ಪದಕ
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ ಪ್ರಮುಖರಾದ ರಾಯಪ್ಪ ಹುರುಮುಂಜಿ, ಚಂದಪ್ಪಾ ಪೂಜಾರಿ, ಶಿವಕುಮಾರ ಸಲಗರ, ದೇವು ಬಿರಾದಾರ, ಮೌನೇಶ ನಾಲವಾರ್, ಪ್ರಕಾಶ ಜಾನೆ, ಕ್ಷೇಮಲಿಂಗ, ಶರಣಪ್ಪ, ಸಿದ್ದಮ್ಮಾ ಮುತ್ತಿಗಿ ಸೇರಿ ಹಲವರು ಪಾಲ್ಗೊಂಡಿದ್ದರು.