ಬಸವಾದಿ ಶರಣರ ತತ್ವ ಪ್ರಸಾರಕ್ಕಾಗಿ ಬೀದರ್ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಬಸವ ತತ್ವದ ಕುರಿತ ಚಿಂತನ- ಮಂಥನದ ʼವಚನ ಮಂಟಪ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಜಗದ್ಗುರು ಮಾತೆ ಮಹಾದೇವಿ ಸಂಸ್ಮರಣೆ ಕಾರ್ಯಕ್ರಮ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ತತ್ವಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಬಸವ ಜಯಂತಿಯ ನಂತರ ನಗರದಲ್ಲಿ ಮಹಾಸಭಾದಿಂದ ಪ್ರಕಟಿಸಲಾದ ʼವಚನ ದರ್ಶನ ಮಿಥ್ಯ ವರ್ಸಸ್ ಸತ್ಯʼ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗುವುದುʼ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ʼ21ನೇ ಶತಮಾನದಲ್ಲಿ ಕರ್ನಾಟಕದಾದ್ಯಂತ ಬಸವ ತತ್ವವನ್ನು ಪ್ರಭಾವಶಾಲಿಯಾಗಿ ಬೆಳೆಸಿದ್ದ ಶ್ರೇಯ ಜಗದ್ಗುರು ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆʼ ಎಂದರು.
ʼಮಾತಾಜಿ ಅವರು ಬಸವ ತತ್ವ ಪ್ರಚಾರಕ್ಕೆ ಹೊಸ ಆಯಾಮ ನೀಡಿದ್ದರು. ಅವರಿಂದ ಪ್ರೇರಣೆ ಪಡೆದ ಅನೇಕರು ಇಂದು ಬಸವ ತತ್ವ ಪ್ರಚಾರಕರಾಗಿದ್ದಾರೆ. ಇಂದು ಎಲ್ಲ ಬಸವ ಪರ ಸಂಘಟನೆಗಳು ಒಂದಾಗಿ, ಒಮ್ಮನಸ್ಸಿನಿಂದ ಬಸವಣ್ಣನವರ ತೇರು ಎಳೆಯಬೇಕಾಗಿದೆʼ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಬಸವಣ್ಣನವರು ಲಿಂಗಾಯತ ಧರ್ಮದ ಗುರು ಎಂದು ಹೆಚ್ಚು ಪ್ರಚಾರ ಮಾಡಿದ ಕೀರ್ತಿ ಮಾತೆ ಮಹಾದೇವಿ ಅವರದ್ದಾಗಿದೆ. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆʼ ಎಂದು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಮಹಾಸಭಾ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಸಿದ್ದಯ್ಯ ಕಾವಡಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಖಜಾಂಚಿ ವೀರಭದ್ರಪ್ಪ ಬುಯ್ಯಾ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ತೊಂಡಾರೆ, ವಕೀಲ ಗಂಗಶೆಟ್ಟಿ ಪಾಟೀಲ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಆನಂದ ದೇವಪ್ಪ, ಬಸವರಾಜ ಭತಮುರ್ಗೆ, ಬಸವರಾಜ ಪಾಟೀಲ ಹಾರೂರಗೇರಿ, ಬಾಬುರಾವ್ ದಾನಿ, ಕಂಟೆಪ್ಪ ಗಂದಿಗುಡಿ, ಸುವರ್ಣಾ ಧನ್ನೂರ, ನೀಲಮ್ಮ ರೂಗನ್, ಸಂಜುಕುಮಾರ ಪಾಟೀಲ, ಗಣೇಶ ಬಿರಾದಾರ, ರವಿ ಪಾಪಡೆ, ಮಲ್ಲಿಕಾರ್ಜುನ ಪಂಚಾಕ್ಷರಿ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಪಶು ವಿಶ್ವವಿದ್ಯಾಲಯ 14ನೇ ಘಟಿಕೋತ್ಸವ : ಆದಿತ್ಯಗೆ 9, ದಕ್ಷೀತ್‌ಗೆ 6, ಎಲೆಕ್ಟ್ರಿಕಲ್ ವ್ಯಾಪಾರಿ ಮಗಳಿಗೆ 4 ಚಿನ್ನದ ಪದಕ
ಲಕ್ಷ್ಮಿ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಜಯದೇವಿ ಯದಲಾಪುರೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಸುರೇಶ ಸ್ವಾಮಿ ವಂದಿಸಿದರು.