- ಹಣ ಮಾಡುವ ದಂಧೆಗೆ ಇಳಿದಿರುವುದರಿಂದಾಗಿ ಈ ರೀತಿಯ ನೂರಾರು ಅಚಾತುರ್ಯ
- ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು
ರಾಜ್ಯ ರಾಜಧಾನಿ ಬೆಂಗಳೂರಿನ ಮಾಂಟೆಸರಿವೊಂದರಲ್ಲಿ ಚಿಕ್ಕ ಮಗುವನ್ನು ದೊಡ್ಡ ಮಗು ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ, ಮಾಂಟೇಸರಿ ಮಾಲೀಕರು ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ನೇಮಿಸದೆ ಕೇವಲ ವ್ಯಾಪಾರಿ ದೃಷ್ಟಿಯಿಂದ ಹಣ ಮಾಡುವ ದಂದೆಗೆ ಇಳಿದಿರುವುದರಿಂದಾಗಿ ಈ ರೀತಿಯ ನೂರಾರು ಅಚಾತುರ್ಯಗಳು ನಡೆಯುತ್ತಿದೆ ಎಂದು ಆಪ್‌ನ ರಾಜ್ಯ ಕಾರ್ಯಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಂತಹ ವಾಣಿಜ್ಯ ನಗರಿಯಲ್ಲಿ ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸಲು, ಸಂಸಾರಗಳನ್ನು ಸರಿದೂಗಿಸಿಕೊಂಡು ಹೋಗಲು ದಂಪತಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತಮ್ಮ ಮಕ್ಕಳನ್ನು ಮಾಂಟೇಸರಿಗಳಲ್ಲಿ ಅಥವಾ ಡೇ ಕೇರ್ ಸೆಂಟರ್‌ಗಳಲ್ಲಿ ಬಿಟ್ಟು ಹೋಗುವಂತಹ ಅನಿವಾರ್ಯತೆ ಇದೆ ಎಂದರು.
ಕೂಡಲೇ ರಾಜ್ಯ ಸರ್ಕಾರವು ಇವುಗಳ ಮೇಲೆ ನಿಗಾವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಮೂಲಕ ಅವುಗಳ ಮೇಲೆ ಅಂಕುಶ ಹಾಕಬೇಕು. ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಸರ್ಕಾರ ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡಿ, ಎನ್ ಸಿ ಇ ಆರ್ ಟಿ ಈಗಾಗಲೇ 2013ರಲ್ಲಿ ವರದಿಯನ್ನು ನೀಡಿ 2016ರ ಒಳಗೆ ಅನುಷ್ಠಾನಗೊಳಿಸಬೇಕೆಂದು ಹೇಳಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ವರದಿಯ ಮಾರ್ಗಸೂಚಿಯ ಅನುಷ್ಠಾನವನ್ನು ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಸಮಿತಿಯ ಯಾವುದೇ ಮಾನದಂಡಗಳನ್ನು ಮಾಂಟೇಸರಿಗಳು ಪಾಲಿಸದೆ ಹಣ ಮಾಡುವ ದಂದೆಯಲ್ಲಿ ನಿರತರಾಗಿದ್ದಾರೆ. ಕೂಡಲೇ ಶಿಕ್ಷಣ ಸಚಿವರು ಇತ್ತ ಕಡೆ ಗಮನಹರಿಸಬೇಕು ಹಾಗೂ ಕಮಿಷನ್ ನೇಮಕ ಆಗಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಿ ಎಂದ ಬಿಬಿಎಚ್ಎ
ಪಕ್ಷದ ಕಾರ್ಯದರ್ಶಿ ಸುಷ್ಮಾ ವೀರ್ ಮಾತನಾಡಿ, ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು. ದೇಶದ ಭವಿಷ್ಯದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿ ಸರ್ಕಾರವು ಕೂಡಲೇ ಈ ಖಾಸಗಿ ಮಾಂಟೆಸರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೆಹಲಿಯ ಆಪ್ ಸರ್ಕಾರವು ನಡೆಸುತ್ತಿರುವ ಮಾಂಟೆಸರಿಗಳನ್ನು ಅಲ್ಲಿಗೆ ಹೋಗಿ ವೀಕ್ಷಿಸಿ ಅದೇ ರೀತಿಯ ಶಾಲೆಗಳನ್ನು ರಾಜ್ಯದಲ್ಲಿಯೂ ಸಹ ತೆರೆಯಬೇಕು” ಎಂದು ಒತ್ತಾಯಿಸಿದರು.