ವಿಜಯನಗರ ಸೇರಿ ನಾಡಿನ ಹಲವೆಡೆ ಮಳೆರಾಯ ದರ್ಶನ ನೀಡಿದ್ದಾನೆ. ಮೋಡ ಕವಿದ ವಾತಾವರಣದೊಂದಿಗೆ, ಕೆಲ ದಿನಗಳಿಂದ ಹಲವೆಡೆಗಳಲ್ಲಿ ಹನಿ ಹನಿ ಮಳೆ ಜಿನುಗುತ್ತಿದೆ. ಮಾ.22ರಿಂದ ಶುರುವಾಗಿರುವ ಮಳೆ ನಾಳೆ (ಮಾ.27) ವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು ವರದಿ ನೀಡಿದೆ.
ಮಾ.27ರವರೆಗೆ ಕೊಡಗು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬಿರುಸಿನ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಐಎಂಡಿ ಪ್ರಕಟಿಸಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬೀದರ್, ಕಲಬುರಗಿಯ ಪೂರ್ವ ಭಾಗ, ಬಾಗಲಕೋಟೆ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ಅಥವಾ ಪಟ್ಟಣಗಳಲ್ಲಿ ಸುಮಾರಾಗಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಜಯನಗರ | ಕೂಡ್ಲಿಗಿ ಬಳಿ ಶಾಲಾ ವಾಹನ ಡಿಕ್ಕಿ; ಶಿಕ್ಷಕ ಮೃತ್ಯು
ರಾಜ್ಯದಾದ್ಯಂತ ಮಾ.27 ರವರೆಗೆ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವರುಣ ಆರ್ಭಟಿಸಲಿದ್ದಾನೆ. ಗಾಳಿಯ ವೇಗ ಗಂಟೆಗೆ 30ರಿಂದ 50 ಕಿಮೀ ತಲುಪುವ ಸಾಧ್ಯತೆ ಇದೆಯಂತೆ. ಸರ್ಕಾರದ ಲೆಕ್ಕಾಚಾರದಂತೆ 2025ರ ಜೂನ್ 1 ರಿಂದ, ಸೆಪ್ಟೆಂಬರ್ 30 ಮುಂಗಾರು ಮಳೆಯ ಅವಧಿಯಾಗಿದೆ. 2025ರ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆದರೆ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ಸರಿಯಾದ ಮುಂಗಾರಿನ ಚಿತ್ರಣ ಸಿಗಲಿದೆ.