ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSS) ಅಡಿಯಲ್ಲಿ ದೇಶಾದ್ಯಂತ 81.35 ಕೋಟಿ ಫಲಾನುಭವಿಗಳಿಗೆ ಆಹಾರ ಒದಗಿಸುವ ಗುರಿ ಇದೆ. ಆದಾಗ್ಯೂ, 80.56 ಕೋಟಿ ಫಲಾನುಭವಿಗಳನ್ನು ರಾಜ್ಯಗಳು ಗುರುತಿಸಿವೆ. ಇನ್ನೂ, ಸುಮಾರು 79 ಲಕ್ಷ ಫಲಾನುಭವಿಗಳು ಪಡಿತರ ಯೋಜನೆಯಡಿ ಉಚಿತ ಆಹಾರ ಧಾನ್ಯಗಳನ್ನು ಪಡೆಯಲಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ‘ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಲು ಮತ್ತು ಅವರಿಗೆ ಪಡಿತರ ದೊರೆಯುವಂತೆ ಮಾಡಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ, “ಫಲಾನುಭವಿಗಳನ್ನು ಗುರುತಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ” ಎಂದು ಹೇಳಿದ್ದಾರೆ.
“ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು (NFSA) ಗ್ರಾಮೀಣ ಜನಸಂಖ್ಯೆಯ 75% ಮತ್ತು ನಗರ ಜನಸಂಖ್ಯೆಯ 50% ಜನರನ್ನು ಪಡಿತರ ವ್ಯವಸ್ಥೆಯ ವ್ಯಾಪ್ತಿಗೆ ತರಲು ಅವಕಾಶ ನೀಡುತ್ತದೆ. 2011ರ ಜನಗಣತಿಯ ಪ್ರಕಾರ 81.35 ಕೋಟಿ ಜನರು ಪಡಿತರ ವ್ಯಾಪ್ತಿಗೆ ಬರುತ್ತಾರೆ. ಆದಾಗ್ಯೂ, ಈವರೆಗೆ 80.56 ಕೋಟಿ ಫಲಾನುಭವಿಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗುರುತಿಸಿವೆ. 79 ಲಕ್ಷ ಜನರನ್ನು ಇನ್ನೂ ಉಚಿತ ಪಡಿತರ ವ್ಯವಸ್ಥೆಯ ವ್ಯಾಪ್ತಿಗೆ ತರಬೇಕಾಗಿದೆ” ಎಂದು ಹೇಳಿದ್ದಾರೆ.
“ಫಲಾನುಭವಿಗಳನ್ನು ಗುರುತಿಸುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಪ್ರಕ್ರಿಯೆಯಾಗಿದೆ. ಇದರಲ್ಲಿ ಅನರ್ಹ/ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದು, ಸಾವು – ವಲಸೆ ಇತ್ಯಾದಿಗಳ ಕಾರಣದಿಂದಾಗಿ ಹೊರಗಿಡುವುದು ಹಾಗೂ ಪಡಿತರ ವ್ಯವಸ್ಥೆಯಿಂದ ಹೊರಗುಳಿದ ಅರ್ಹ ಕುಟುಂಬಗಳನ್ನು ಸೇರಿಸುವುದು ರಾಜ್ಯಗಳ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಆಹಾರದ ಸ್ವಾತಂತ್ರ್ಯವನ್ನು ಮನ್ನಿಸದ ಸಮಾಜದಲ್ಲಿ ಅರ್ಥಪೂರ್ಣ ಡೆಮಾಕ್ರಸಿಯಿದೆ ಎನ್ನಲಾಗದು
ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, “ಸಚಿವರ ಉತ್ತರಂತೆ ಉಚಿತ ಪಡಿತರವನ್ನು ಪಡೆಯಲು ಅರ್ಹರಾಗಿರುವ ಸುಮಾರು 80 ಲಕ್ಷ ಭಾರತೀಯರು ಇನ್ನೂ ಪಡಿತರವನ್ನು ಪಡೆಯಲಾಗುತ್ತಿಲ್ಲ. ಉದ್ದೇಶಿತ ಮತ್ತು ಗುರುತಿಸಲಾದ ಫಲಾನುಭವಿಗಳ ನಡುವಿನ ಈ ಅಂತರವನ್ನು ಹೇಗೆ ನಿಭಾಯಿಸಲಾಗುತ್ತದೆ” ಎಂದು ಕೇಳಿದರು.
ಅಲ್ಲದೆ, “2021ರ ಜನಗಣತಿ ಇನ್ನೂ ನಡೆಯದ ಕಾರಣ, ಪ್ರಸ್ತುತ ಸಂದರ್ಭದಲ್ಲಿ ಪಡಿತರ ವಂಚಿತರಾಗಿರುವ ನಿಖರ ಜನಸಂಖ್ಯೆ ಇನ್ನೂ ಹೆಚ್ಚಿದೆ. NFSA ಅಡಿಯಲ್ಲಿ ಅರ್ಹರಾಗಿರುವ ಸುಮಾರು 14 ಕೋಟಿ ಭಾರತೀಯರು ಪರಿತರವನ್ನು ಪಡೆಯುತ್ತಿಲ್ಲ. ಇದು ಸ್ಪಷ್ಟವಾಗಿ ತಿಳಿಸಬೇಕಾದರೆ 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಇನ್ನೂ ನಡೆದಿಲ್ಲ. ಯಾವಾಗ ನಡೆಯುತ್ತದೆ” ಎಂದು ರಮೇಶ್ ಪ್ರಶ್ನಿಸಿದರು.
“ಸರಿಯಾದ ಫಲಾನುಭವಿಗಳನ್ನು ಹುಡುಕುವುದು ರಾಜ್ಯ ಸರ್ಕಾರದ ಕೆಲಸ. ನಾವು ರಾಜ್ಯ ಸರ್ಕಾರಕ್ಕೆ ಮತ್ತೆ ಮತ್ತೆ ನೆನಪಿಸುತ್ತಿದ್ದೇವೆ” ಎಂದು ಹೇಳಿದ ಸಚಿವ ಜೋಶಿ, ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕಿ, ಸುಮ್ಮನಾಗಿದ್ದಾರೆ.