ಎಚ್.ಡಿ ದೇವೇಗೌಡರ `ನೇಗಿಲ ಗೆರೆಗಳು’ ಕೃತಿ ಕುರಿತು ರಾಜಾರಾಂ ತಲ್ಲೂರ್ ಬರೆಹ

Date:

Advertisements
60-70ರ ದಶಕದ ಕರ್ನಾಟಕ ರಾಜಕೀಯದ ಒಳಸುಳಿಗಳು ಮತ್ತು ಅದನ್ನೆಲ್ಲ ಹಾದು ಕರ್ನಾಟಕದ ರಾಜಕೀಯ ಬೆಳೆದುಬಂದ ಬಗೆಗಳನ್ನು ಅರಿಯುವ ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕ ಇದು.

ದೇವೇಗೌಡರ ಸೋಷಿಯಲ್ ಕ್ಯಾಪಿಟಲ್‌ನ ಗಾತ್ರದ ಬಗ್ಗೆ ನನಗೆ ಇದ್ದ ಯಾವತ್ತೂ ಸೋಜಿಗವೊಂದು ಈ ಪುಸ್ತಕದ ಮೂಲಕ ಸ್ಪಷ್ಟ ರೂಪ ಪಡೆದುಕೊಂಡಿತು. ಮಾಜಿ ಪ್ರಧಾನಿ ದೇವೇಗೌಡರ ಬದುಕು ಮತ್ತು ದುಡಿಮೆಯ ಕುರಿತು ಪತ್ರಕರ್ತ ಸುಗತ ಅವರು ಬರೆದ Furrows in a field ಪುಸ್ತಕದ ಕನ್ನಡ ಅನುವಾದ “ನೇಗಿಲ ಗೆರೆಗಳು” ಓದಿ ಮುಗಿಸಿದೆ. ಒಂದೇ ಗುಕ್ಕಿನಲ್ಲಿ ದೇವೇಗೌಡರ ಸಂಕೀರ್ಣ ಬದುಕನ್ನು ಕಟ್ಟಿಕೊಡುವ ಕಾರಣಕ್ಕೆ ಮತ್ತು ಕಟ್ಟಿಕೊಡುವ ವಿನ್ಯಾಸದ ಕಾರಣಕ್ಕೆ ಗಮನ ಸೆಳೆಯುವ 700 ಪುಟಗಳ ಕುತೂಹಲಕರ ಪುಸ್ತಕ ಇದು.

ರಾಜಕೀಯಸ್ಥರ, ಅದರಲ್ಲೂ ಸಮಕಾಲೀನ ರಾಜಕೀಯಸ್ಥರ ಜೀವನ ಚರಿತ್ರೆ ದಾಖಲಿಸುವುದೇ ಒಂದು ಸವಾಲು. ದೇವೇಗೌಡರಂತಹ ಸಂಕೀರ್ಣ ರಾಜಕೀಯ ವ್ಯಕ್ತಿತ್ವದ ಜೀವನ ಚರಿತ್ರೆ ಎಂದಾಗ ಈ ಸವಾಲು ಇನ್ನಷ್ಟು ಗಹನವಾದದ್ದು. ದೇವೇಗೌಡರು ಎಂದ ತಕ್ಷಣ, ದೂರದಿಂದ ನೋಡುವ ನನ್ನ ತಲೆಮಾರಿನ ಕರಾವಳಿಗರಿಗೆ ಎದುರು ಮೂಡುವ ಬಿಂಬ ರಾಮಕೃಷ್ಣ ಹೆಗಡೆಯವರ ಜೊತೆ ಅವರಿಗಿದ್ದ ಜಿದ್ದಾಜಿದ್ದಿನದು. ಗೌಡರ ಮಟ್ಟಿಗೆ ಈ ಬಿಂಬ ನೆಗೆಟಿವ್ ಆಗಿದ್ದದ್ದೇ ಹೆಚ್ಚು. ಕರಾವಳಿಯಲ್ಲಿ ಜನತಾ ರಾಜಕೀಯ ಎಂದರೆ ಅಮರನಾಥ ಶೆಟ್ಟರು, ಬಂಗೇರರು, ಮೊಯಿದೀನ್ ಸಾಹೇಬ್ರು, ಜಯಪ್ರಕಾಶ ಹೆಗ್ಡೆಯವರ ವೈಯಕ್ತಿಕ ವರ್ಚಸ್ಸುಗಳೇ ಹೊರತು ಪಕ್ಷ ರಾಜಕೀಯವಾಗಲೀ, ನೀರಾವರಿ ರಾಜಕೀಯವಾಗಲೀ ಅಲ್ಲ. ಹಾಗಾಗಿ ಕರಾವಳಿಗೆ ದೇವೇಗೌಡರ ದೂರನೋಟ ಸಿಕ್ಕಿದ್ದೇ ಹೆಚ್ಚು. ಹಾಗಾಗಿ ಈ ವ್ಯಕ್ತಿಗೆ ಈವತ್ತಿಗೂ ಕುಳಿತುಣ್ಣಬಹುದಾದಷ್ಟು “ಸೋಷಿಯಲ್ ಕ್ಯಾಪಿಟಲ್” ಡೆಪಾಸಿಟ್ ಮಾಡಿಕೊಳ್ಳಲು ಸಾಧ್ಯ ಆದದ್ದು ಹೇಗೆ? ಎಂಬ ಪ್ರಶ್ನೆ ನನ್ನಲ್ಲಿತ್ತು. ಆ ಪ್ರಶ್ನೆಗೆ ಈ ಪಸ್ತಕ ಉತ್ತರಿಸಲು ಪ್ರಯತ್ನಿಸಿದೆ ಎಂಬುದು ಓದಿ ಮುಗಿದ ತಕ್ಷಣ ನನಗನ್ನಿಸಿದ್ದು.

ಹೆಗಡೆಯವರ ಜೊತೆ ಅವರಿಗಿದ್ದ ಜಿದ್ದಿನ ಕುರಿತು ಅವರ ದೃಷ್ಟಿಕೋನ, 60-70ರ ದಶಕದ ಕರ್ನಾಟಕ ರಾಜಕೀಯದ ಒಳಸುಳಿಗಳು ಮತ್ತು ಅದನ್ನೆಲ್ಲ ಹಾದು ಕರ್ನಾಟಕದ ರಾಜಕೀಯ ಬೆಳೆದುಬಂದ ಬಗೆಗಳನ್ನು ಅರಿಯುವ ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕ ಇದು.

Advertisements

ಇದನ್ನು ಓದಿದ್ದೀರಾ?: ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?

ದೇವೇಗೌಡರು ಪ್ರಧಾನಿ ಆಗುವ ಹೊತ್ತಿಗೆ ದೇಶದಲ್ಲಿ ರಾಜಕೀಯ ಅಸ್ಥಿರತೆಯ ಬಗ್ಗೆ ಇದ್ದ ವಿಮನಸ್ಕತೆಯ ಕಾರಣಕ್ಕೆ, ಯಾರೂ ಅಲ್ಲೇನಾಗುತ್ತಿದೆ (ದಿಲ್ಲಿಯಲ್ಲಿ) ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಗೌಡರಿಗೂ ಈಗಿನಂತಹ ಮಾರ್ಕೆಟಿಂಗ್ ಕೌಶಲ ಇರಲಿಲ್ಲ. ಮಾಧ್ಯಮಗಳಿಗೂ ಅದೆಲ್ಲ ಬೇಕಾಗಿರಲಿಲ್ಲ. ಹಾಗಾಗಿ, ಪಂಜಾಬಿನಲ್ಲಿ, ಈಶಾನ್ಯದ ರಾಜ್ಯಗಳಲ್ಲಿ, ಕಾಶ್ಮೀರದಲ್ಲಿ, ಗುಜರಾತಿನಲ್ಲಿ, ಬಾಂಗ್ಲಾ ದೇಶದಲ್ಲಿ ದೇವೇಗೌಡರು ಅಲ್ಪಾವಧಿಯಲ್ಲಿಯೇ ಕರ್ನಾಟಕದಷ್ಟೇ ಪರಿಚಿತರು ಹೇಗಾದರು ಎಂಬ ಬಗ್ಗೆ ನಮಗೆ ಗೊತ್ತಿದ್ದದ್ದು ತೀರಾ ಕಡಿಮೆ. ಇತ್ತೀಚೆಗೆ ಪುಸ್ತಕವೊಂದರ ಅನುವಾದದ ಕೆಲಸ ಮಾಡುತ್ತಿದ್ದಾಗ ದೇವೇಗೌಡರ ಕಾಲದಲ್ಲೂ ದೇಶದ “ಉದಾರೀಕರಣ” ಪ್ರಕ್ರಿಯೆ ಹೇಗೆ ಮುಂದುವರಿಯಿತೆಂಬ ಬಗ್ಗೆ ಓದಿ, “ಪರವಾಗಿಲ್ವೆ” ಅಂದುಕೊಂಡಿದ್ದೆ. ಈ ಪುಸ್ತಕ ಆ ಚಿತ್ರಕ್ಕೆ ಇನ್ನಷ್ಟು ಖಚಿತ ರೂಪ ಕೊಟ್ಟಿತು.

ಒಂದು ರೀತಿಯಲ್ಲಿ ಇದು ಅಪೂರ್ಣ ಜೀವನ ಚರಿತ್ರೆ. ತನ್ನ ಬದುಕಿನುದ್ದಕ್ಕೂ ಕೋಮುವಾದದ ವಿರುದ್ಧ ನಿಂತಿದ್ದವರು ದೇವೇಗೌಡರು. ಈಗ ಕೋಮುವಾದ ಕೂಡ ತನ್ನ ಆರಂಭಿಕ ಸುತ್ತು ಮುಗಿಸಿ, ದೇಶದ ಮೂಗು ಒತ್ತಿ ಬಾಯಿ ಕಳೆಸಿ, ತಾನು ಕುಡಿಸಬೇಕೆಂದು ಬಯಸಿದ್ದ ಕಹಿಗಳಲ್ಲಿ ಹಲವನ್ನು ಕುಡಿಸಿದೆ. ಗೌಡರ ಕುಟುಂಬದ ಹೊಸ ತಲೆಮಾರು ಕೋಮುವಾದದ ಜೊತೆ ಸಹಬಾಳ್ವೆಯ ರುಚಿಯನ್ನೂ ನಾಡಿಗೆ ತೋರಿಸಿದೆ. ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಂದಿನ ಲೋಕಸಭಾ ಚುನಾವಣೆಗಳ ವೇಳೆ ಗೌಡರ ನಿಲುವು ಏನಿರಬಹುದು ಎಂಬ ಕುರಿತು ನನಗೆ ಈ ಪುಸ್ತಕ ಕಟ್ಟಿಕೊಡುವ ವಿವರಗಳ ಹಿನ್ನೆಲೆಯಲ್ಲಿ ಒಂದು ಕುತೂಹಲ ಇದೆ. ಅದು ಈ ಪುಸ್ತಕದ ವಿವರಗಳ ತೂಕಕ್ಕೆ ನಿರ್ಧಾರಕ ಆಗಬಹುದು. ಕಾದು ನೋಡೋಣ.

ಪುಸ್ತಕದ ವಿವರಗಳಿಗೆ ಹೋಗುವುದಿಲ್ಲ. ಅದು ಈಗಷ್ಟೇ ಮಾರುಕಟ್ಟೆಗೆ ಬಂದಿರುವುದರಿಂದ ಆ ರಸಭಂಗ ಬೇಡ. ಆದರೆ, ಪುಸ್ತಕದ ಸಂರಚನೆಯ ಬಗ್ಗೆ ಒಂದು ಮಾತು ಹೇಳಬೇಕು. ಸಾಮಾನ್ಯವಾಗಿ ಜೀವನ ಚರಿತ್ರೆಗಳು ಸರಾಗ ಕಥೆಗಳಂತೆ ಸಾಗುತ್ತವೆಯಾದರೆ, ಈ ಪುಸ್ತಕದಲ್ಲಿ ಜೀವನ ಚರಿತ್ರೆಯ ವರದಿ ಇದೆ. ಲೇಖಕರು ಪತ್ರಕರ್ತರಾಗಿರುವುದರಿಂದ ಈ ಶೈಲಿ ಸಹಜವಾಗಿಯೇ ಪುಸ್ತಕದ ಒಳಹೊಕ್ಕಂತಿದೆ. ಚರಿತ್ರೆಯಾಗುತ್ತಿರುವ ವ್ಯಕ್ತಿ, ಅದರಲ್ಲಿ ಒಳಗೊಂಡಿರುವ ಹಲವು ವ್ಯಕ್ತಿಗಳೂ ಕೂಡ ಸಮಕಾಲೀನರಾಗಿರುವುದರಿಂದ ಅಲ್ಲಿನ ದೃಷ್ಟಿಕೋನಗಳು ಕೆಲವೊಮ್ಮೆ ವಿವಾದಾತ್ಮಕ ಆಗುವ ಸಾಧ್ಯತೆಗಳಿವೆ. ಅದಕ್ಕೆ ಮುನ್ನೆಚ್ಚರಿಕೆ ಎಂಬಂತೆ ಪ್ರತೀ ಘಟನೆಗೂ ಪ್ರತ್ಯಕ್ಷದರ್ಶಿ ಸಾಕ್ಷಿ ಅಥವಾ ಲಿಖಿತ ಪುರಾವೆ ಒದಗಿಸುತ್ತಾ ಹೋಗುವ ಸುಗತ ಅವರ ಶೈಲಿ, ಕನ್ನಡ ಜೀವನ ಚರಿತ್ರೆಗಳಿಗೆ ಹೊಸದು; ಆದರೆ ಸ್ವಾಗತಾರ್ಹ. ಕೆಲವೊಮ್ಮೆ ಈ ಶೈಲಿಯ ಕಾರಣಕ್ಕಾಗಿಯೇ ಓದು ಸ್ವಲ್ಪ ಜಟಿಲವಾದದ್ದೂ ಇದೆ.

ಮೂಲ ಇಂಗ್ಲಿಷ್ ಖರೀದಿಸಿ ಓದಬೇಕೆಂದುಕೊಂಡಿರುವಾಗಲೇ ಕನ್ನಡದಲ್ಲಿಯೇ ಲಭ್ಯವಾದ ಈ ಪುಸ್ತಕದ ಅನುವಾದಕರು ಮೂಲ ಲೇಖಕರ ಪತ್ನಿ. ಭಾಷಾಂತರ ಸೊಗಸಾಗಿದೆ. ಇಂಗ್ಲೀಷಿನ ಶೈಲಿಯನ್ನು ಹಿಡಿದಿಡುವ ಪ್ರಯತ್ನ ಕೆಲವೆಡೆ ಕನ್ನಡದ ಬೀಸಿಗೆ ಕೃತಕ ಅನ್ನಿಸುತ್ತದೆಯಾದರೂ ಸರಾಗ ಓದಿಗೆ ಅಡ್ಡಿ ಆಗುವುದಿಲ್ಲ.

ಕರ್ನಾಟಕದ ಸಮಕಾಲೀನ ರಾಜಕೀಯ ಚರಿತ್ರೆಯ ಬಗ್ಗೆ ಆಸಕ್ತರು ಓದಲೇಬೇಕಾದ ಪುಸ್ತಕ ಇದು.

ಪುಸ್ತಕಕ್ಕಾಗಿ: ಪಾರದರ್ಶಕ ಮೀಡಿಯಾ ಫೌಂಡೇಶನ್, ಪುಸ್ತಕದ ಬೆಲೆ 799 ರೂ., ಸಂಪರ್ಕ: 8310892131

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X