- ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಹೆಸರುವಾಸಿ ಕಂಪನಿ
- ಕಾರು ತಯಾರಿಕಾ ಘಟಕ ಆರಂಭಿಸಿದರೆ ಎಲ್ಲ ರೀತಿಯ ಸಹಕಾರ ಲಭ್ಯ
ವಿಶ್ವ ಖ್ಯಾತಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸಿದರೆ ಅದಕ್ಕೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿರುವ ಟೆಸ್ಲಾ ಕಂಪನಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಿ ಎಂದು ಎಂ ಬಿ ಪಾಟೀಲ್ ಆಹ್ವಾನ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಂ ಬಿ ಪಾಟೀಲ್ ಟೆಸ್ಲಾ ಕಂಪನಿಯು ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟಪಡುವುದಾದರೆ ಕರ್ನಾಟಕ ರಾಜ್ಯವು ಅದಕ್ಕೆ ಸೂಕ್ತ ತಾಣವಾಗಿದೆ ಎಂದವರು ಹೇಳಿಕೊಂಡಿದ್ದಾರೆ.
ಅಮೆರಿಕಾ ಮೂಲಕ ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನದ ಉತ್ಪನ್ನಗಳನ್ನು ತಯಾರಿಸುತ್ತದೆ. ಜೊತೆಗೆ ಸ್ಪೇಸ್- ಎಕ್ಸ್ ಕಂಪನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ.
ಇಂತಹ ಪ್ರತಿಷ್ಠಿತ ಕಂಪನಿ ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೂ ಅದಕ್ಕೆ ಸಹಕಾರ ಕೊಡಲಾಗುವುದು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಉತ್ಸುಕರಾಗಿದ್ದಾರೆ ಎಂದು ಪಾಟೀಲ್ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭ: ಮೋದಿಗೆ ಧನ್ಯವಾದ ಅರ್ಪಿಸಿದ ತೇಜಸ್ವಿ ಸೂರ್ಯ
ಕರ್ನಾಟಕ ರಾಜ್ಯವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಹೀಗಾಗಿ, ಟೆಸ್ಲಾ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬಹುದೆನ್ನುವುದು ಸಚಿವರ ಸಲಹೆ.
ಅಂದಹಾಗೆ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇದೇ ಭೇಟಿಯನ್ನು ಉಲ್ಲೇಖಿಸಿ ರಾಜ್ಯದ ಬೃಹತ್ ಕೈಗಾರಿಕಾ ಸಚಿವರು ಟೆಸ್ಲಾಗೆ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದಾರೆ.