ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಬೀದರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಲಾಯಿತು.
ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಚಕೋರ ಎಂಬುದು ಬೆಳದಿಂಗಳನ್ನು ಸೇವಿಸಿ ಬದುಕುವ ಒಂದು ಬಗೆಯ ಪೌರಾಣಿಕ ಪಕ್ಷಿ. ಚಕೋರ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿಯೂ ನಡೆಯಬೇಕು. ಇಂದಿನ ಯುವಕರು ನಿರಂತರವಾಗಿ ಓದು-ಬರಹಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಸಾಹಿತ್ಯಿಕ ವೇದಿಕೆಗಳಲ್ಲಿ ಉಪನ್ಯಾಸಗಳನ್ನು ನೀಡಬೇಕುʼ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಚಂದ್ರಕಲಾ ಬಿದರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼರಾಜ್ಯ ಸರ್ಕಾರ ಅಷ್ಟೇ ಅಲ್ಲದೆ ಅನೇಕ ಸಂಘ- ಸಂಸ್ಥೆಗಳು ಕನ್ನಡಕ್ಕಾಗಿ ಶ್ರಮಿಸುತ್ತಿವೆ. ನಾಡಿನ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಯಾವುದೇ ಒಂದು ಭಾಷೆ ಕಳೆದುಕೊಳ್ಳುವುದು ಎಂದರೆ ಇಡೀ ಸಂಸ್ಕೃತಿ ಕಳೆದುಕೊಂಡಂತೆ. ಎರಡು ಸಾವಿರ ವರ್ಷಗಳ ದಾಖಲಾತ್ಮಕ ಇತಿಹಾಸ ಹೊಂದಿರುವ ಕನ್ನಡ ಬೆಳೆಸಬೇಕಿದೆʼ ಎಂದರು.
ಯುವ ಸಾಹಿತಿ ಸ್ನೇಹಲತಾ ಗೌನಳ್ಳಿ ಮಾತನಾಡಿ, ʼಆದಿಕವಿ ಪಂಪನ ಲೌಕಿಕ ಕೃತಿ ವಿಕ್ರಮಾರ್ಜುನ ವಿಜಯದ ಕುರಿತು ‘ವ್ಯಾಸರ ಮಹಾಭಾರತವನ್ನು ಪಂಪನ ಭಾರತದೊಂದಿಗೆ ಸಮೀಕರಿಸಿ, ಮಾನವನ ಆದರ್ಶ ಮೌಲ್ಯಗಳ ಕುರಿತು ಬಗ್ಗೆ ವಿಶೇಷ ಉಪನ್ಯಾಸʼ ನೀಡಿದರು.
ಹಿರಿಯ ಸಾಹಿತಿ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ʼವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದಬೇಕು, ಓದು ವ್ಯಕ್ತಿತ್ವವನ್ನು ಬೆಳೆಸುವುದು ಮತ್ತು ಸಾಮಾಜದಲ್ಲಿ ತಲೆಯೆತ್ತಿ ಬದುಕಲು ಸಹಕಾರಿಯಾಗುತ್ತದೆʼ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ,ʼಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಕಾವ್ಯ ಕಮ್ಮಟ, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ, ಎಲೆಮರೆಯ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಲಾಗುವುದುʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬ್ಯಾಸಕಿ ಬಂತಂದ್ರೆ ಈ ತಾಲೂಕಿನ್ಯಾಗ ಹಿಂಗ್ಯಾಕ್ ನೀರಿಗೆ ಬರ?
ಕಾಲೇಜು ಪ್ರಾಚಾರ್ಯರಾದ ಜಯಶ್ರೀ ಪ್ರಭಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿಗಳಾದ ಎಸ್.ಎಂ.ಜನವಾಡ್ಕರ್, ಹಿರಿಯ ಕಲಾವಿದ ಶುಭುಲಿಂಗ ವಾಲ್ದೊಡಿ, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕ ಅಜಿತ್.ಎನ್. ನೇಳಗಿ, ಕಾಶಿನಾಥ್ ಪಾಟೀಲ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ, ಬೋಧಕರು ಉಪಸ್ಥಿತರಿದ್ದರು. ವಾಣಿಶ್ರೀ ಪ್ರಾರ್ಥಿಸಿದರು, ಪ್ರಿಯಾಂಕಾ ಸ್ವಾಗತ ಗೀತೆ ನಡೆಸಿಕೊಟ್ಟರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಅಲ್ಲೂರೆ ಸ್ವಾಗತಿಸಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕಿ ಡಾ.ಮಕ್ತುಂಬಿ ಎಂ. ವಂದಿಸಿದರು. ದೀಲಿಪಕುಮಾರ ಮೋಘಾ ನಿರೂಪಿಸಿದರು.