ಬೀದರ್ ಜಿಲ್ಲೆಯ ಹುಲಸೂರು ತಾಲ್ಲೂಕಿನ ಗಡಿಗೌಡಗಾಂವ್‍ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹ 90 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ದೂರಿದೆ.
ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಕಲಬುರಗಿಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ʼನಿರ್ಮಿತಿ ಕೇಂದ್ರದಿಂದ ಮಣ್ಣು ಅಗೆಯದೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳಪೆ ಕಾಮಗಾರಿಯಲ್ಲಿ ನಿರ್ಮಿತಿ ಕೇಂದ್ರದ ಎಂಜಿನಿಯರ್ ಶೇಖ ಅಮೀರ್ ಅವರು ಶಾಮೀಲಾಗಿದ್ದಾರೆ. ಕಾಮಗಾರಿಯಲ್ಲಿ ಕೇವಲ ವ್ಯವಸ್ಥಾಪಕರನ್ನು ಬಲಿ ಪಶು ಮಾಡಲಾಗಿದೆʼ ಎಂದು ಆಪಾದಿಸಿದರು.
ʼಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದಿಂದ ನಡೆಯುವ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ. ಕೇಂದ್ರದವರು ನಕಲಿ ಕಾಮಗಾರಿಗಳ ಜನಕರಾಗಿದ್ದಾರೆ. ಔರಾದ್ (ಬಿ) ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಬೀದರ್‍ನ ಚಿಕ್ಕಪೇಟೆಯ ಇವಿಎಂ ವೇರ್ ಹೌಸ್, ಬಸವಕಲ್ಯಾಣದ ರೈತ ಭವನಗಳು ಕಳಪೆ ಕಾಮಗಾರಿಗೆ ನಿದರ್ಶನವಾಗಿವೆ. ಕೇಂದ್ರದಲ್ಲಿ ಹಗರಣ ನಡೆಯುತ್ತಿದ್ದರೂ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲʼ ಎಂದು ದೂರಿದರು.
ಕೂಡಲೇ ತಂಡ ರಚಿಸಿ ನಿರ್ಮಿತಿ ಕೇಂದ್ರ ಕಾಮಗಾರಿಗಳ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬ್ಯಾಸಕಿ ಬಂತಂದ್ರೆ ಈ ತಾಲೂಕಿನ್ಯಾಗ ಹಿಂಗ್ಯಾಕ್ ನೀರಿಗೆ ಬರ?
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಬೀದರ್ ತಾಲ್ಲೂಕು ಅಧ್ಯಕ್ಷ ಅನಿಲ್ ರಾಜಗೀರಾ, ಬೀದರ್ ನಗರ ಘಟಕದ ಅಧ್ಯಕ್ಷ ಸಂತೋಷ ಪಾಟೀಲ, ಕೃಷ್ಣ ತೆಲಂಗ್ ಇದ್ದರು.