ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಜೀವ ಬೆದರಿಕೆ ಹೊಂದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ತನ್ನ ಮೌನ ಮುರಿದಿದ್ದಾರೆ. “ಬದುಕು ಈಗ ಮನೆಯಿಂದ ಶೂಟಿಂಗ್, ಶೂಟಿಂಗ್‌ನಿಂದ ಮನೆ ಅಷ್ಟೇ ಆಗಿದೆ. ನಾನು ದೇವರನ್ನು ನಂಬುವವನು. ನನಗೆ ಎಷ್ಟು ಜೀವಿತಾವಧಿ ಬರೆಯಲಾಗಿದೆಯೋ ಅಷ್ಟು ಕಾಲ ಬದುಕುತ್ತೇನೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಮುಂಬೈನ ಬಾಂದ್ರಾದಲ್ಲಿರುವ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿದೆ. ಹಲವು ಬಾರಿ ಜೀವ ಬೆದರಿಕೆ ಹಾಕಲಾಗಿದೆ. ಅದಾದ ಬಳಿಕ ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮನೆಯ ಬಾಲ್ಕನಿಯಲ್ಲಿ ಗುಂಡು ತಗುಲದಂತಹ ಗಾಜನ್ನು ಹಾಕಲಾಗಿದೆ.
ಇದನ್ನು ಓದಿದ್ದೀರಾ? ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ
ಮುಂಬೈನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಖಾನ್, “ದೇವರು ಮತ್ತು ಅಲ್ಲಾ ಗಮನಿಸುತ್ತಿದ್ದಾರೆ. ಎಷ್ಟು ಜೀವಿತಾವಧಿ ಇದೆಯೋ ಅಷ್ಟು ಕಾಲ ಬದುಕುತ್ತೇನೆ ಅಷ್ಟೇ” ಎಂದಿದ್ದಾರೆ. ಹಾಗೆಯೇ ತನ್ನ ಭದ್ರತೆ ಬಗ್ಗೆಯೂ ಮಾತನಾಡಿದ್ದಾರೆ. “ಕೆಲವೊಮ್ಮೆ ಇಷ್ಟೊಂದು ಜನರು ಸುತ್ತುವರೆದಿರುವುದು ಸಮಸ್ಯೆ ಅನಿಸುತ್ತದೆ” ಎಂದು ಹೇಳಿದ್ದಾರೆ.
ಬೆದರಿಕೆ ಬಳಿಕ ಸಲ್ಮಾನ್ ಈಗ ತಮ್ಮ ಮನೆ ಮತ್ತು ಶೂಟಿಂಗ್ ಸೆಟ್‌ಗೆ ನಡುವೆ ಮಾತ್ರ ಪ್ರಯಾಣಿಸುತ್ತಿರುವುದಾಗಿ ಹೇಳಿದ್ದಾರೆ. “ನಾನು ಪತ್ರಕರ್ತರೊಂದಿಗೆ ಇದ್ದಾಗ ಯಾವುದೇ ಚಿಂತೆ ಪಡುವುದಿಲ್ಲ. ಪತ್ರಕರ್ತರು ಇಲ್ಲದಾಗ ಕಷ್ಟ ಅನಿಸುತ್ತದೆ” ಎಂದೂ ತಿಳಿಸಿದ್ದಾರೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭಾಗಿಯಾಗಿರುವ ವಿಚಾರದಲ್ಲಿ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಅವರನ್ನು ಗುರಿಯಾಗಿಸಿಕೊಂಡಿದೆ. ಈ ಪ್ರಾಣಿಯನ್ನು ಬಿಷ್ಣೋಯ್ ಸಮುದಾಯವು ಪೂಜಿಸುತ್ತದೆ.
ಮಾರ್ಚ್ 30ರಂದು ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಬಿಡುಗಡೆಯಾಗಲಿದ್ದು, ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
