ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕುಟುಕಿ ಹಾಸ್ಯ ಮಾಡಿದ್ದ ಆರೋಪದ ಮೇಲೆ ಸ್ಟ್ಯಾಂಡ್-ಅಪ್ ಕಮೆಡಿಯನ್ ಕುನಾಲ್ ಕಾಮ್ರಾ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ, ಕಾಮ್ರಾ ಅವರಿಗೆ ಎರಡನೇ ಸಮನ್ಸ್ ನೀಡಿದ್ದಾರೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ನೀಡಿದ ದೂರಿನ ಮೇರೆಗೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಗಾಗಿ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ 2ನೇ ಸಮನ್ಸ್ ನೀಡಿದ್ದಾರೆ.
ಪೊಲೀಸರು ಮಂಗಳವಾರ ಕಾಮ್ರಾ ಅವರಿಗೆ ಮೊದಲ ಸಮನ್ಸ್ ನೀಡಿದ್ದರು. ಕಾಮ್ರಾ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ, ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಶಿವಸೇನಾ (ಶಿಂಧೆ ಬಣ) ಕಾರ್ಯಕರ್ತರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಮುಂಬೈಗೆ ಬಂದು, ವಿಚಾರಣೆಗೆ ಹಾಜರಾಗಲು ಒಂದು ವಾರದ ಸಮಯ ನೀಡಬೇಕೆಂದು ಕಾಮ್ರಾ ಕೇಳಿದ್ದರು.
ಆದಾಗ್ಯೂ, ಕಾರ್ಮಾ ಅವರ ಮನವಿಗೆ ಸ್ಪಂದಿಸದ ಪೊಲೀಸರು, ಇದೀಗ 2ನೇ ಸಮನ್ಸ್ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ;
ಇತ್ತೀಚೆಗೆ, ಮುಂಬೈನ ಸ್ಟುಡಿಯೋವೊಂದರಲ್ಲಿ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಶಿವಸೇನೆಯ ಮುಖ್ಯಸ್ಥ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಹಾಸ್ಯ ಮಾಡಿದ್ದ ಕಾಮ್ರಾ, “ಉಪಮುಖ್ಯಮಂತ್ರಿಗಳು 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸಿದ, ಶಿವಸೇನೆ ಮತ್ತು ಎನ್‌ಸಿಪಿಯ ವಿಭಜಿಸಲು ಕಾರಣವಾಗಿದ್ದರು” ಎಂಬುದನ್ನು ಇಟ್ಟುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದರು. ಅವರೊಬ್ಬ ದ್ರೋಹಿ ಎಂದು ಜರಿದಿದ್ದರು. ಅವರ ಹಾಸ್ಯವು ಮಹಾರಾಷ್ಟ್ರದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತ್ತು.
ಅವರ ಹಾಸ್ಯದ ವಿಡಿಯೋ ಬಿಡುಗಡೆಯಾದ ಬಳಿಕ, ಭಾನುವಾರ ರಾತ್ರಿ, ಶಿವಸೇನೆ ಕಾರ್ಯಕರ್ತರು ಕಮ್ರಾ ಅವರು ಕಾರ್ಯಕ್ರಮ ನಡೆಸಿದ್ದ ಖಾರ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ಗೆ ನುಗ್ಗಿ ದಾಂಧಲೆ ನಡೆಸಿದ್ದರು. ಶಿವಸೇನೆ ಶಾಸಕ ಮುರ್ಜಿ ಪಟೇಲ್ ಅವರು ಕಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಕಾಮ್ರಾ ವಿರುದ್ಧ ಎಫ್‌ಐಅರ್ ದಾಖಲಾಗಿದೆ.
ಈ ವರದಿ ಓದಿದ್ದೀರಾ?: ಶಿವಸೇನೆ ಕಾರ್ಯಕರ್ತರನ್ನು ಕುಟುಕಿದ ಕುನಾಲ್ ಕಾಮ್ರಾ ಹೊಸ ಹಾಡು
ಅಲ್ಲದೆ, ಕಾಮಿಡಿ ಕ್ಲಬ್ ಸ್ಟೂಡಿಯೋದಲ್ಲಿ ದಾಂಧಲೆ ನಡೆಸಿ, ಹಾನಿಗೊಳಿಸಿದ ಶಿವಸೇನೆಯ 40 ಕಾರ್ಯಕರ್ತರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 11 ಮಂದಿಯನ್ನು ಬಂಧಿಸಿದ್ದಾರೆ.
ಕಾಮ್ರಾ ಅವರ ಹಾಸ್ಯವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಹಲವಾರು ನಾಯಕರು ಖಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಸ್ಯನಟನ ವಿರುದ್ಧದ ದಾಖಲಿಸಿರುವ ಪ್ರಕರಣ ಮತ್ತು ನಡೆಯುತ್ತಿರುವ ಬೆಳವಣಿಗೆಗಳು ವಿಧ್ವಂಸಕ ಕೃತ್ಯ ಮತ್ತು ಬೆದರಿಕೆಯಾಗಿವೆ ಎಂದು ಟೀಕಿಸಿವೆ. ವಾಕ್ ಸ್ವಾತಂತ್ರ್ಯದ ಮೇಲೆ ಸರ್ಕಾರ ದಾಳಿ ಮಾಡುತ್ತಿದೆ ಎಂದು ಆರೋಪಿಸಿವೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಾಮ್ರಾ, “ನನ್ನ ಹೇಳಿಕೆಗಾಗಿ ನಾನು ಕ್ಷಮೆಯಾಚಿಸುವುದಿಲ್ಲ. ಈ ಗುಂಪಿಗೆ (ಶಿವಸೇನೆ) ಹೆದರುವುದಿಲ್ಲ. ನಾನು ಹೆದರಿ, ಅಡಗಿ ಕೂರುವುದೂ ಇಲ್ಲ” ಎಂದು ಹೇಳಿದ್ದಾರೆ.