ಪ್ರವಾಹ, ಭೂ ಕುಸಿತ ಸೇರಿದಂತೆ ಎಲ್ಲ ರೀತಿಯ ಪ್ರಾಕೃತಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಹಾಗೂ ವಿಕೋಪಗಳು ಸಂಭವಿಸುವ ಮುನ್ನವೇ ಜನರನ್ನು ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು ಎಂದು ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಚಿವ ಕೃಷ್ಣ ಭೈರೇಗೌಡ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿನ ಪ್ರಸ್ತುತ ಮಳೆಯ ವಿವರ, ಮಾನ್ಸೂನ್ ಮಾರುತದ ಪ್ರಭಾವ, ಯಾವ ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ, ಭೂ ಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಕುರಿತು ಚರ್ಚೆ ನಡೆಸಿದ್ದಾರೆ.
“ಈ ವರ್ಷ ಜೂನ್ ಮೂರನೇ ವಾರದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೆರೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಪ್ರವಾಹ ಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ತಂಡಗಳು ಸನ್ನದ್ದವಾಗಿರಬೇಕು. ಅಲ್ಲದೆ, 3500 ಕ್ಕೂ ಅಧಿಕ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದ್ದು ಅವರನ್ನೂ ಈ ಕೆಲಸಗಳಿಗೆ ಬಳಸಿಕೊಳ್ಳಬಹುದು” ಎಂದು ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದ್ದಾರೆ.
“2018ರಲ್ಲಿ ಕೊಡಗು ಭಾಗದಲ್ಲಿ ಉಂಟಾದ ಭೂ ಕುಸಿತದಿಂದ ಕನಿಷ್ಟ 21ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಇಂತಹ ಕಹಿ ಘಟನೆಗಳು ಸಂಭವಿಸಬಾರದು. ಹೀಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಅಗತ್ಯವಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶಾಸಕರಿಗೆ ತರಬೇತಿ ಶಿಬಿರ ವಿವಾದ | ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ: ಯು ಟಿ ಖಾದರ್
“ಈ ವರ್ಷದ ಮಳೆಗಾಲದಲ್ಲೂ ಮೂಡಿಗೆರೆ, ಸುಲ್ಯ, ಭಾಗಮಂಡಲ, ಕೊಡಗು-ಮಡಿಕೇರಿ, ಸಕಲೇಶಪುರ, ವಿರಾಜಪೇಟೆ ಸೇರಿದಂತೆ ಕೆಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕಾದ ಅಗತ್ಯವಿದೆ” ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಕಳೆದ 20 ವರ್ಷದಲ್ಲಿ 14 ವರ್ಷ ರಾಜ್ಯಕ್ಕೆ ಬರ
ಕಳೆದ 20 ವರ್ಷಗಳಲ್ಲಿ ರಾಜ್ಯ 14 ಬಾರಿ ಬರದ ಪರಿಸ್ಥಿತಿಯನ್ನು ಎದುರಿಸಿದೆ. 5 ಬಾರಿ ಅತಿವೃಷ್ಠಿ ಎದುರಿಸಿದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಅಗತ್ಯವಿದ್ದು, ಈ ಬಗ್ಗೆ ಅಧಿಕಾರಿಗಳು ರಾಷ್ಟ್ರೀಯ ಮಟ್ಟದ ಸೆಮಿನಾರ್ ಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ 7.500 ಮಳೆಮಾಪನ ಕೇಂದ್ರಗಳಿದ್ದು, ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ಮಳೆಯ ಡೇಟಾವನ್ನು ಅಪ್ಡೇಟ್ ಮಾಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.