ಎ.ಕೆ. ಸಬ್ಬಯ್ಯನವರಿಂದ ಹಿಡಿದು ಯತ್ನಾಳ್‌ವರೆಗಿನ ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ, ಬೆಳೆಸಿದ್ದಾರೆ. ಇವರೆಲ್ಲರೂ ಶೂದ್ರರು. ಇವರನ್ನು ಮುಂದಿಟ್ಟು ಅಸ್ತ್ರದಂತೆ ಬಳಸಿ ಬಿಸಾಡಿದವರು ಸಂಘಪರಿವಾರದ ನಾಯಕರು. ಆಗಲೂ ಮುನ್ನಲೆಗೆ ಬರಲಿಲ್ಲ, ಈಗಲೂ ಇಲ್ಲ.
‘ಪಕ್ಷದೊಳಗಿನ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ಕಾರಣಕ್ಕೆ ಸಿಕ್ಕ ಪ್ರತಿಫಲವಿದು. ಇದ್ದದ್ದನ್ನು ಇದ್ದ ಹಾಗೇ ಹೇಳಿದ್ದಕ್ಕಾಗಿ ನನಗೆ ಉಚ್ಚಾಟನೆಯ ಬಹುಮಾನ ನೀಡಿದ್ದಾರೆ’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಅಷ್ಟೇ ಅಲ್ಲ, ‘ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಲ್ಲಿ ಬಂದ ಬಹುಮಾನ ಮತ್ತು ಬೇಸರ, ಅಧ್ಯಯನಯೋಗ್ಯವಾದುದು. ವಸಿಷ್ಠ-ವಾಲ್ಮೀಕಿ ಪರಂಪರೆಯನ್ನು ನೆನಪಿಸುವಂಥದ್ದು.
ಯತ್ನಾಳ ಮೂಲತಃ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬೆನ್ನಿಗಿರುವ ಬಹುಸಂಖ್ಯಾತ ಸಮುದಾಯ, ಜಮೀನ್ದಾರಿಕೆಯ ಗೌಡಿಕೆ ಗತ್ತು, ಅಧಿಕಾರ ಮತ್ತು ಹಣದ ಮದದಿಂದ ಉಡಾಫೆ ವ್ಯಕ್ತಿತ್ವ ರೂಢಿಸಿಕೊಂಡವರು. ಮಾತಿಗೂ ಮೆದುಳಿಗೂ ಹೊಂದಾಣಿಕೆ ಇಲ್ಲದಂತೆ ಮಾತನಾಡುವುದನ್ನೇ ರಾಜಕಾರಣದ ಭಾಷೆ ಎಂದು ತಿಳಿದವರು. ಏನು ಮಾಡಿದರೂ ನಡೆಯುತ್ತದೆ ಎನ್ನುವುದೇ ರಾಜಕಾರಣವೆಂದು ಅರ್ಥೈಸಿಕೊಂಡವರು. ಅದಕ್ಕೆ ತಕ್ಕಂತೆ ಅವರ ರಾಜಕಾರಣದ ಹಾದಿ ಅವರಿಗೆ ಪುಷ್ಟಿ ನೀಡಿತ್ತು. ಅದೇ ಸರಿ ಎನಿಸಿತ್ತು.
ಯತ್ನಾಳರ ಈ ದಾಢಸಿ ವ್ಯಕ್ತಿತ್ವವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡ ಸಂಘ ಪರಿವಾರ, ಅವರನ್ನು ಮುಸ್ಲಿಮರ ವಿರುದ್ಧ ಮತ್ತು ಬಿಜೆಪಿಗೆ ಬೇಡವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಅಸ್ತ್ರದಂತೆ ಬಳಸಿಕೊಂಡಿತು. ತಾನೊಂದು ಅಸ್ತ್ರ, ಶತ್ರು ಸಂಹಾರವಾದ ನಂತರ ಅದರ ಅಸ್ತಿತ್ವವೂ ಅಳಿದಂತೆ ಎಂಬ ಸಣ್ಣ ಸತ್ಯವನ್ನು ಅರಿಯದಾದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವ್ಯಂಗ್ಯ ವಿನೋದಗಳ ಮೇಲೆ ಬುಲ್ಡೋಝರ್ ಹರಿಸುವ ಊಸರವಳ್ಳಿಗಳು!
ಯತ್ನಾಳರು ಮೂಲತಃ ಮುಸ್ಲಿಮರ ವಿರೋಧಿಯಲ್ಲ. ಅವರೊಂದಿಗೇ ಕೂಡಿ ಆಡಿ ಬೆಳೆದವರು. ಅವರೊಂದಿಗೆ ಹಂಚಿ ಉಂಡವರು. ವ್ಯವಹಾರದಲ್ಲಿ ಭಾಗಿಯಾದವರು. ಅವರ ಬೆಂಬಲದಿಂದ ಗೆದ್ದು ಶಾಸಕರಾದವರು. ಆದರೆ ಸಂಘಪರಿವಾರದ ‘ವಿಘ್ನಸಂತೋಷಿ’ಗಳ ಸಂಚಿಗೆ ಬಲಿಯಾಗಿ ಮುಸ್ಲಿಮರ ವಿರುದ್ಧ ವಿನಾಕಾರಣ ಬೆಂಕಿ ಕಾರಿದರು. ವಕ್ಫ್ ಭೂಮಿ ಒತ್ತುವರಿ ಎಳೆದು ತಂದು ಶಾಂತಿ ಸಹಬಾಳ್ವೆಯ ಬದುಕಿಗೆ ಬೆಂಕಿ ಇಟ್ಟರು. ಶರೀಫರ ನಾಡಿಗೆ ಕಳಂಕ ತಂದರು.
ಹಾಗೆಯೇ ತಮ್ಮದೇ ಪಕ್ಷವಾದ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕಾದಾಟಕ್ಕಿಳಿದರು. ಅವರ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ನಿರಂತರ ಟೀಕಾ ಪ್ರಹಾರ ನಡೆಸಿದರು. ಅವರ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದಾಗ ಉಗ್ರವಾಗಿ ವಿರೋಧಿಸಿದರು. ಅವರು ಆರ್‍ಟಿಎಸ್ ಪ್ರವೀಣ, ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದರು. ಬಿಜೆಪಿ ಎಂಬ ಪಕ್ಷದಲ್ಲಿ ಕೋಟಿಗಟ್ಟಲೆ ಹಣ ನೀಡಿದರೆ, ಯಾವ ಕುರ್ಚಿಯನ್ನು ಬೇಕಾದರೂ ಖರೀದಿಸಬಹುದೆಂಬ ಸತ್ಯವನ್ನು ಬಿಚ್ಚಿಟ್ಟು, ಬಿಜೆಪಿಯ ನೀತಿಗೆಟ್ಟ ರಾಜಕಾರಣವನ್ನು ಬಯಲುಗೊಳಿಸಿದರು.
ಯಡಿಯೂರಪ್ಪನವರ ಕುಟುಂಬ ರಾಜಕಾರಣದ ಬಗ್ಗೆ ಮಾತಾಡಲಿ, ತಪ್ಪಲ್ಲ. ಆದರೆ ಅದು ಸಂಯಮದ ಎಲ್ಲೆ ಮೀರಬಾರದು. ಹಾಗೆಯೇ ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡವರನ್ನು ಹೊರಗೆಳೆಯಲಿ, ತೊಂದರೆ ಇಲ್ಲ. ಆದರೆ ಅದು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ನೆಮ್ಮದಿಯ ಬದುಕಿಗೆ ಭಂಗ ತರಬಾರದು.
ಇವೆರಡನ್ನೂ ಯತ್ನಾಳರು ಸಂಘಪರಿವಾರದ ‘ಸಂತೋಷ’ಕ್ಕಾಗಿಯೇ ಮಾಡಿದರು. ಅವರ ಕಿತಾಪತಿಗೆ, ಕಿಡಿಗೇಡಿ ಕೃತ್ಯಕ್ಕೆ ಸಂಘಿಗಳೂ ಸಂತೋಷದಿಂದಲೇ ಬೆಂಬಲಿಸಿ, ಬಲ ತುಂಬಿದರು. ಯಡಿಯೂರಪ್ಪನವರ ಚಾರಿತ್ರ್ಯವಧೆ ಮಾಡಿದರು; ಹಿಂದೂ-ಮುಸ್ಲಿಮರ ನಡುವೆ ದ್ವೇಷಾಸೂಯೆ ಬಿತ್ತಿದರು. ಪರಿಣಾಮ- ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೆ ಈಡಾದರು.
ಯತ್ನಾಳರಿಗೆ ಉಚ್ಚಾಟನೆ ಹೊಸದೇನೂ ಅಲ್ಲ. ಈಗಾಗಲೇ 2009 ಮತ್ತು 2018ರಲ್ಲಿಯೂ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಯತ್ನಾಳರಿಗೆ ಮೆದುಳು ಇದ್ದಿದ್ದರೆ, ಆಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಸಂಘಿಗಳ ಕುಮ್ಮಕ್ಕು ಕಣ್ಮುಚ್ಚಿಸಿತ್ತು. ದಾರಿ ತಪ್ಪಿಸಿತ್ತು.
ಅಸಲಿಗೆ ಸಂಘಪರಿವಾರದ ಕುಮ್ಮಕ್ಕಿಗೆ ಕೀಲುಗೊಂಬೆಯಂತೆ ಕುಣಿದು ಕಂಗೆಟ್ಟು ಕೂತಿರುವುದು ಯತ್ನಾಳರಷ್ಟೇ ಅಲ್ಲ. ಯತ್ನಾಳರ ಮುಂದಾಳತ್ವದಲ್ಲಿ ಗುಂಪುಗೂಡಿದ್ದ, ಯಡಿಯೂರಪ್ಪ-ವಿಜಯೇಂದ್ರರನ್ನು ವಿರೋಧಿಸುತ್ತಿದ್ದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಹರೀಶ್, ಪ್ರತಾಪ್ ಸಿಂಹಗಳ ರಾಜಕೀಯ ಭವಿಷ್ಯವೂ ಬರಿದಾಗಿದೆ. ಹಾಗೆಯೇ ಇವರೊಂದಿಗೆ ಸೇರದೆ, ತಮ್ಮದೇ ರೀತಿಯಲ್ಲಿ ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಸಿ.ಟಿ. ರವಿ, ಅಶ್ವತ್ಥನಾರಾಯಣ, ಅಶೋಕ, ಬಸವರಾಜ ಬೊಮ್ಮಾಯಿಗಳ ಮುಂದಿನ ಹಾದಿಗೂ ಕಲ್ಲು ಬಿದ್ದಿದೆ. ಹಾಗಾದರೆ ಸಂಘಪರಿವಾರಕ್ಕೆ, ಬಿಜೆಪಿ ಹೈಕಮಾಂಡಿಗೆ ಬೇಕಾಗಿರುವುದೇನು, ಬಿಜೆಪಿ ಎನ್ನುವುದು ಈ ಮಟ್ಟಿಗಿನ ಅರಾಜಕ ಪಕ್ಷವೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದರೆ, ಅಚ್ಚರಿ ಇಲ್ಲ.
ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ನೆಲೆಯೊದಗಿಸಿದವರು ಬಿ.ಎಸ್. ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರೂ ಕೂಡ ಎ.ಕೆ.ಸುಬ್ಬಯ್ಯ, ಬಿ.ಬಿ. ಶಿವಪ್ಪರಂತಹ ಸಜ್ಜನರನ್ನು ಪಕ್ಷದಿಂದ ಹೊರಹೋಗುವಂತೆ ನೋಡಿಕೊಂಡರು. ಸಂಘಪರಿವಾರದ ಪಿತೂರಿಗೆ ತಲೆಕೊಟ್ಟ ಈಶ್ವರಪ್ಪ ಕೂಡ ಯಡಿಯೂರಪ್ಪನವರ ವಿರುದ್ಧ ಕಾದಾಟಕ್ಕಿಳಿದು, ನಾಶವಾದರು. ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ, ಜೈಲಿಗೆ ಕಳುಹಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಶಾಸಕರ ವೇತನ ಹೆಚ್ಚಳ: ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವೇ?
ಅಂದರೆ, ಎ.ಕೆ. ಸಬ್ಬಯ್ಯನವರಿಂದ ಹಿಡಿದು ಯತ್ನಾಳವರೆಗಿನ ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ, ಬೆಳೆಸಿದ್ದಾರೆ. ಇವರೆಲ್ಲರೂ ಶೂದ್ರರು. ಇವರನ್ನು ಮುಂದಿಟ್ಟು ಅಸ್ತ್ರದಂತೆ ಬಳಸಿ ಬಿಸಾಡಿದವರು ಸಂಘಪರಿವಾರದ ನಾಯಕರು. ಆಗಲೂ ಮುನ್ನಲೆಗೆ ಬರಲಿಲ್ಲ, ಈಗಲೂ ಇಲ್ಲ.
ಒಟ್ಟಿನಲ್ಲಿ ಪಕ್ಷ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಬೇಕಾಗಿದ್ದ ಮಾನದಂಡಗಳಾದ ಹಿರಿತನ, ಅನುಭವ, ಯೋಗ್ಯತೆ, ಅರ್ಹತೆ, ನಾಯಕತ್ವ, ವಾಕ್ಚಾತುರ್ಯಗಳೆಂಬ ಗುಣಗಳು ಗೌಣವಾಗಿವೆ. ಆ ಜಾಗವನ್ನು ವಿವಾದ, ತಂತ್ರಗಾರಿಕೆ, ನಿರ್ವಹಣೆ, ನಿಭಾವಣೆ, ಭಂಡತನ, ಕಿಲಾಡಿತನಗಳು ಆಕ್ರಮಿಸಿಕೊಂಡಿವೆ. ಇದಕ್ಕೆ ಶೂದ್ರವರ್ಗ ಬಲಿಯಾಗುತ್ತಲೇ ಬಂದಿದೆ. ಅದಕ್ಕೆ ವಸಿಷ್ಠ ಮತ್ತು ವಾಲ್ಮೀಕಿಯರ ಪರಂಪರೆ ಇದೆ. ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳುವ ಜಾಣ್ಮೆ ಬೇಕಷ್ಟೇ.
