ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಸತಿ ನಿಲಯದ ವಾರ್ಡನ್ ಶಾಂತಮ್ಮ ಅವರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ, ನಿಲಯವು ಅವ್ಯವಸ್ಥೆಯಿಂದ ಕೂಡಿದೆ. ವಾರ್ಡನ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾರ್ಡನ್ ಶಾಂತಮ್ಮ ವಿದ್ಯಾರ್ಥಿನಿಯರ ಜೊತೆ ಹಾಗೂ ಸಾರ್ವಜನಿಕರ ಜೊತೆಗೆ ಅನುಚಿತ ವರ್ತನೆ ತೋರುತ್ತಿದ್ದು, ಅವಾಚ್ಯ ಶಬ್ದಗಳಿಂದ ಬೈಯುತ್ತಾರೆಂದು ತಿಳಿದುಬಂದಿದೆ. ಅಲ್ಲದೆ, ವಾರ್ಡನ್ ಸರಿಯಾಗಿ ವಸತಿ ನಿಲಯಕ್ಕೆ ಬರುವುದಿಲ್ಲ. ವಿದ್ಯಾರ್ಥಿನಿಯರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳು ವ್ಯಕ್ತವಾಗಿವೆ” ಎಂದು ಕಿಡಿಕಾರಿದರು.
“ಈ ಹಿಂದೆ ಇದೇ ರೀತಿಯಾಗಿ ಕೆಟ್ಟದಾಗಿ ನಡೆದುಕೊಂಡಿದ್ದರಿಂದ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿ ವಾರ್ಡನ್ ಶಾಂತಮ್ಮನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ಇವರ ವಿರುದ್ಧ ಪ್ರತಿಭಟನೆ ಮಾಡಿದ್ದರಿಂದ ಬೇರೆ ಕಡೆ ಹಾಕಲಾಗಿತ್ತು. ಆದರೆ ಮತ್ತೆ ಇದೇ ವಸತಿ ನಿಲಯಕ್ಕೆ ಬಂದಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ಮಕ್ಕಳೊಂದಿಗೆ ಅಸಭ್ಯ ವರ್ತನೆ ತೋರುತ್ತಿರುವುದು ತಿಳಿದುಬಂದಿದೆ” ಎಂದು ಆರೋಪಿಸಿದರು.
“ಗುರುಮಠಕಲ್‌ನ ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಸತಿ ನಿಲಯದ ಚಾರ್ಜ್ ಕೂಡಾ ಶಾಂತಮ್ಮನಿಗೆ ಇದೆ. ಆದರೆ, ಈವರೆಗೆ ವಸತಿ ನಿಲಯ ಪ್ರಾರಂಭ ಮಾಡಿಲ್ಲ. ಹಾಗಾಗಿ ತಾವು ದಯಮಾಡಿ ಈ ವಾರ್ಡನ್ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಬೇಕು” ಎಂದು ಮನವಿ ಮಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ. ತಿಪ್ಪೇಸ್ವಾಮಿ
“ಒಂದು ವೇಳೆ ತಾವು ಕ್ರಮ ಕೈಗೊಳ್ಳದೇ ಇದ್ದಲ್ಲಿ ತಮ್ಮ ಕಚೇರಿ ಮುಂದೆ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಶಪ್ಪ ಹೆಗ್ಗಣಗೇರಾ, ಮಲ್ಲು ಬೆಳಗೇರಾ, ಚಂದ್ರು ನಡುಮನಿ, ದೇವಿಂದ್ರಪ್ಪ ಮುಷ್ಟೂರ ಸೇರಿದಂತೆ ಇತರರು ಇದ್ದರು.