ರಾಜ್ಯಾದ್ಯಂತ ಹೊಸದಾಗಿ ಮತ್ತು ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆಯುವ ಎಲ್ಲರಿಗೂ (ಮನೆ, ಅಂಗಡಿ, ಸಂಸ್ಥೆ ಇತ್ಯಾದಿ) ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಮಾತ್ರವೇ ಬಳಸಲು ಸರ್ಕಾರ ಸೂಚಿಸಿದೆ. ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಬಿಜೆಪಿ ಹಗರಣದ ಆರೋಪವನ್ನೂ ಮಾಡಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಬರೋಬ್ಬರಿ 15,500 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಆರೋಪವನ್ನು ಕಾಂಗ್ರೆಸ್ ಅಲ್ಲಗಳೆದಿದೆ.
ಮೀಟರ್‌ಗಳ ಅಳವಡಿಕೆ ಕೆಲಸಕ್ಕಾಗಿ ‘ಬಿಸಿಐಟಿಎಸ್’ ಕಂಪನಿಗೆ ರಾಜ್ಯ ಸರ್ಕಾರ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪ್ರಕ್ರಿಯೆಗಳು ಮುಗಿದಿದ್ದು, ಮಾರ್ಚ್ 1ರಿಂದಲೇ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭವಾಗಿದೆ. ಜೊತೆಗೆ, ಸ್ಮಾರ್ಟ್ ಮೀಟರ್‌ಗಳ ತಾಂತ್ರಿಕ ನಿರ್ವಹಣಾ ವೆಚ್ಚವನ್ನು ಗ್ರಾಹಕರೇ ಭರಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಮೀಟರ್‌ಗಳ ನಿರ್ವಹಣಾ ವೆಚ್ಚವು ಗ್ರಾಹಕರ ಮೇಲೆ ಬೀಳಲಿದೆ.
ಇತ್ತೀಚೆಗೆ, ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ವಿದ್ಯುತ್ ಶುಲ್ಕ ಹೆಚ್ಚಿಸಿವೆ. ಪ್ರತಿ ಯುನಿಟ್ ವಿದ್ಯುತ್‌ಗೆ 36 ಪೈಸೆ ಏರಿಕೆಯಾಗಿದೆ. ಇದೀಗ, ಸ್ಮಾರ್ಟ್ ಮೀಟರ್ ನಿರ್ವಹಣಾ ವೆಚ್ಚವನ್ನೂ ಗ್ರಾಹಕರ ಮೇಲೆ ಹೊರಿಸಲಾಗಿದೆ. ಇದು ಆಕ್ಷೇಪಗಳಿಗೆ ಕಾರಣವಾಗಿದೆ.
ಆದರೆ, ಈ ವೆಚ್ಚವು ಅಧಿಕವೂ ಅಲ್ಲ, ಗ್ರಾಹಕರಿಗೆ ಹೊರೆಯೂ ಆಗುವುದಿಲ್ಲ. ಪ್ರತಿ ಬಿಲ್‌ಗೆ ಕೇವಲ ಒಂದು (1) ಪೈಸೆ ಮಾತ್ರವೇ ವೆಚ್ಚ ಬೀಳುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
ಹಗರಣದ ಆರೋಪ ಮಾಡಿದ ಬಿಜೆಪಿ;
ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭವಾಗುತ್ತಿದ್ದಂತೆಯೇ, ಇದರ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ಮಾಜಿ ಸಚಿವ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ. ಬರೋಬ್ಬರಿ 15,565 ಕೋಟಿ ರೂ. ಅವ್ಯವಹಾರವಾಗಿದೆ ಎಂದು ದೂರಿದ್ದಾರೆ.
“ಕೆಇಆರ್‌ಸಿ ನಿಯಮದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ. ಆದರೂ, ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಇಂಧನ ಇಲಾಖೆ ಮುಂದಾಗಿದೆ. ಟೆಂಡರ್ ಕರೆದಾಗ ಕೆಟಿಪಿಪಿ ಕಾಯ್ದೆಯಡಿ ಬಿಡ್ ಸಾಮರ್ಥ್ಯವನ್ನು ತಿಳಿಸಿಲ್ಲ. ಬಿಡ್ ಸಾಮರ್ಥ್ಯವು 6,800 ಕೋಟಿ ರೂ. ಇರಬೇಕಿತ್ತು. ವ್ಯವಹಾರವು 1,920 ಕೋಟಿ ರೂ. ಇರಬೇಕಿತ್ತು. ಆದರೆ, ಬರೀ 107 ಕೋಟಿ ರೂ. ಎಂದು ಉಲ್ಲೇಖಿಸಲಾಗಿದೆ. ಆ ಬಳಿಕ, ಅಂದಾಜು ವೆಚ್ಚ 571 ಕೋಟಿ ರೂ. ಎಂದು ತಿದ್ದಲಾಗಿದೆ. ಟೆಂಟರ್‌ನ ಒಟ್ಟು ಮೊತ್ತ ತಿಳಿಸಿದೆ, ಬಿಡ್ ಕರೆಯಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: 2024ರ ಚುನಾವಣಾ ಖರ್ಚು-ವೆಚ್ಚ: ಬಿಜೆಪಿ ಖರ್ಚು ಮಾಡಿದ್ದು ಬರೋಬ್ಬರಿ 1,754 ಕೋಟಿ!
“ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಬಿಸಿಐಟಿಎಸ್ ಕಂಪನಿಗೆ ಬಿಡ್ ಮಾಡಲು ಅವಕಾಶ ಕೊಟ್ಟು, ಗುತ್ತಿಗೆಯನ್ನೂ ನೀಡಲಾಗಿದೆ. ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಕೇವಲ ಡಿಜಿಟಲ್ ಮೀಟರ್ ಅಳವಡಿಸಿರುವ ಕಂಪನಿಯನ್ನು ಬಿಡ್‌ಗೆ ಪರಿಗಣಿಸಲಾಗಿದೆ. ಈಗಾಗಲೇ ಹಲವು ರಾಜ್ಯಗಳು ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್ ಮೀಟರ್ ಖರೀದಿಸಿ, ಅಳವಡಿಸಿವೆ. ಆದರೆ, ಕರ್ನಾಟಕದಲ್ಲಿ ಪ್ರತಿ ಮೀಟರ್‌ಗೆ ದುಬಾರಿ 17,000 ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಕೆ.ಜೆ ಜಾರ್ಜ್ ಸ್ಪಷ್ಟನೆ;
ಅಶ್ವತ್ಥ ನಾರಾಯಣ ಅವರ ಆರೋಪವನ್ನು ಸರ್ಕಾರ ಅಲ್ಲಗಳೆದಿದೆ. ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ ಜಾರ್ಜ್, “ರಾಜ್ಯದಲ್ಲಿ ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲಾಗಿಲ್ಲ. ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಮಾತ್ರವೇ ಕಡ್ಡಾಯಗೊಳಿಸಲಾಗಿದೆ. ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅಶ್ವತ್ಥ ನಾರಾಯಣ ಅವರು ‘ಹಿಟ್ ಅಂಡ್ ರನ್’ ರೀತಿಯ ಆರೋಪ ಮಾಡಿದ್ದಾರೆ. ಅವ್ಯವಹಾರ ಅಥವಾ ನಿಮಯಗಳ ಉಲ್ಲಂಘನೆಯಾಗಿದೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಟೆಂಡರ್ ರದ್ದುಪಡಿಸಲು ಅವಕಾಶವಿದೆ” ಎಂದು ಹೇಳಿದ್ದಾರೆ.
“ಕೇಂದ್ರ ಇಂಧನ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣ ಹೊರತುಪಡಿಸಿ, ಎಲ್ಲ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಜಾರಿಗೆ ತರಲಾಗಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಇತ್ತೀಚಿಗೆ ಕೇಂದ್ರ ಇಂಧನ ಸಚಿವರು ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸೂಚಿಸಿದ್ದರು. ಕಪ್ಪು ಪಟ್ಟಿಗೆ ಸೇರಿಸಿದ್ದ ಕಂಪನಿಗೆ ಗುತ್ತಿಗೆ ನೀಡಿಲ್ಲ. ಗುತ್ತಿಗೆ ಪಡೆದಿರುವ ಕಂಪನಿಯನ್ನು ಉತ್ತರ ಪ್ರದೇಶ ಸರ್ಕಾರ ಎರಡು ವರ್ಷಗಳ ಕಾಲ ನಿರ್ಬಂಧಿಸಿತ್ತು ಮತ್ತು ದಂಡ ವಿಧಿಸಿತ್ತು. ಆನಂತರ, ನಿರ್ಬಂಧವನ್ನು ತೆರವುಗೊಳಿಸಿದೆ. ಇದೇ ಕಂಪನಿಗೆ 16 ರಾಜ್ಯಗಳು ಗುತ್ತಿಗೆ ನೀಡಿವೆ. ಕಪ್ಪು ಪಟ್ಟಿಗೆ ಸೇರಿಸಿರುವ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.
“ದುಬಾರಿ ವೆಚ್ಚಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸುತ್ತಿಲ್ಲ. ಸ್ಮಾರ್ಟ್ ಮೀಟರ್‌ಗಳ ಪೈಕಿ ಸಿಂಗಲ್ ಫೇಸ್‌ಗೆ 4,998 ರೂ. ಮತ್ತು ತ್ರೀಫೇಸ್‌ಗೆ 8,922 ರೂ. ವೆಚ್ಚವಾಗುತ್ತದೆ. ಬಿಜೆಪಿ ಹೇಳಿರುವಂತೆ ಅಧಿಕ ಮೊತ್ತವನ್ನು ವ್ಯಯಿಸಲಾಗುತ್ತಿಲ್ಲ. ಇದೇ ಮೊತ್ತದಲ್ಲಿಯೇ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿವೆ” ಎಂದು ಹೇಳಿದ್ದಾರೆ.