ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ತನ್ನ ಆಪ್ತ ಸ್ನೇಹಿತ ಇಂಡಸ್ಟ್ರಿಯ ಮತ್ತೋರ್ವ ಸೂಪರ್‌ಸ್ಟಾರ್ ನಟ ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಪೂಜೆ ಸಲ್ಲಿಸಿದ್ದು ಇದೀಗ ವಿವಾದ ಸೃಷ್ಟಿಯಾಗಿದೆ.
ಮಮ್ಮುಟ್ಟಿ ಆರೋಗ್ಯ ಏರುಪೇರಾಗುತ್ತಿದ್ದಂತೆ ಮಾರ್ಚ್ 18ರಂದು ಮೋಹನ್ ಲಾಲ್ ಶಬರಿಮಲೆಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಈ ಭೇಟಿಯ ವಿಡಿಯೋ ವೈರಲ್ ಕೂಡಾ ಆಗಿತ್ತು. ಆದರೆ ಮಮ್ಮುಟ್ಟಿ ಆರೋಗ್ಯಕ್ಕಾಗಿ ಈ ಪೂಜೆ ಮಾಡಿಸಿದ್ದಾರೆ ಎಂಬ ರಸೀದಿ ಬಹಿರಂಗವಾಗುತ್ತಿದ್ದಂತೆ ಧಾರ್ಮಿಕ ನಂಬಿಕೆ ವಿಚಾರದಲ್ಲಿ ತೀವ್ರ ವಿವಾದ ಉಂಟಾಗಿದೆ.
ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಮೂರು ದಶಕಕ್ಕೂ ಅಧಿಕ ಕಾಲದಿಂದ ಸ್ನೇಹಿತರಾಗಿದ್ದಾರೆ. ಇಬ್ಬರೂ ಸುಮಾರು 55 ಸಿನಿಮಾಗಳಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದಿಂದ ಶಬರಿಮಲೆಗೆ ಹೋಗಿದ್ದ ಬಸ್ ಪಲ್ಟಿ; 27 ಭಕ್ತರಿಗೆ ಗಾಯ
ನಾವು ಈ ಸುದ್ದಿ ಓದಿದಾಗ ಹಿಂದೂ ಮುಸ್ಲಿಂ ಸ್ನೇಹಿತರ ಪರಸ್ಪರ ಭಾಂದವ್ಯ, ಕಾಳಜಿಯನ್ನು ಶ್ಲಾಘಿಸುತ್ತೇವೆ. ಆದರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಡೆದಿದ್ದೇ ಬೇರೆ. ಸಮುದಾಯದ ಎರಡೂ ಕಡೆಯವರು ಈ ಮೋಹನ್ ಲಾಲ್ ಪೂಜೆ ಸಲ್ಲಿಸಿರುವುದನ್ನು ಖಂಡಿಸಿದ್ದಾರೆ.
ಮಮ್ಮುಟ್ಟಿ ಅವರ ಜನ್ಮ ಹೆಸರು ಮುಹಮ್ಮದ್ ಕುಟ್ಟಿ ಎಂದು ಉಲ್ಲೇಖಿಸಲಾದ ರಸೀದಿಯು ವೈರಲ್ ಆಗುತ್ತಿದ್ದಂತೆ ಓರ್ವ ಮುಸ್ಲಿಂ ವ್ಯಕ್ತಿ ಪರವಾಗಿ ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದು ಸರಿಯೇ ಎಂದು ಒಂದು ವರ್ಗದ ಜನರು ಪ್ರಶ್ನಿಸಿದ್ದಾರೆ.
ಮೋಹನ್ ಲಾಲ್ ವಿರುದ್ಧ ಸಿಡಿದೆದ್ದಿರುವ ಗುಂಪು ತಮ್ಮ ಮುಸ್ಲಿಂ ಸ್ನೇಹಿತನ ಒಳಿತಿಗಾಗಿ ಹಿಂದೂ ದೇವರನ್ನು ಪೂಜಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಇನ್ನೊಂದು ಗುಂಪು ಮಮ್ಮುಟ್ಟಿ ತನ್ನ ಸ್ನೇಹಿತನಿಗೆ ದೇವಾಲಯದಲ್ಲಿ ತನಗಾಗಿ ಪ್ರಾರ್ಥಿಸುವಂತೆ ಹೇಳಿದ್ದರೆ ಧಾರ್ಮಿಕ ನಂಬಿಕೆಯ ವಿರುದ್ಧವಾಗಿದೆ. ಇದು ಮಹಾ ಅಪರಾಧ ಎಂದು ಹೇಳಿದೆ. ಇನ್ನೊಂದೆಡೆ ಬಲಪಂಥೀಯ ಗುಂಪು ಮುಸ್ಲಿಂ ವ್ಯಕ್ತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಅಪಚಾರ ಎಂದು ಹೇಳಿಕೊಂಡಿದೆ. ಹೀಗೆ ಒಂದೊಂದು ವಾದಗಳು ಕೇಳಿಬಂದಿದೆ.
ಇದನ್ನು ಓದಿದ್ದೀರಾ? ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ, ಸಂಪೂರ್ಣ ಸಮಿತಿ ವಿಸರ್ಜನೆ
ಇನ್ನು ಕೆಲವರು ಕುರಾನ್ ಅನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಪೂಜೆ ಸಲ್ಲಿಸಿರುವುದು ಮಮ್ಮುಟ್ಟಿಗೆ ಮೊದಲೇ ತಿಳಿದಿದ್ದರೆ ಮುಸ್ಲಿಂ ಸಮುದಾಯಕ್ಕೆ ಕ್ಷಮೆಯಾಚಿಸಬೇಕು. ಮಮ್ಮುಟ್ಟಿಗೆ ತಿಳಿಯದಂತೆ ಮೋಹನ್ ಲಾಲ್ ಪೂಜೆ ಸಲ್ಲಿಸಿದ್ದರೆ ಅದರಲ್ಲಿ ಮಮ್ಮುಟ್ಟಿ ತಪ್ಪಿಲ್ಲ. ಭಗವಂತ ಅಯ್ಯಪ್ಪನಲ್ಲಿ ಮೋಹನ್ ಲಾಲ್ ಅವರ ನಂಬಿಕೆ ಹೆಚ್ಚಿರುವ ಕಾರಣ ಪೂಜೆ ಮಾಡಿಸಿರಬಹುದು. ಆದರೆ ಮಮ್ಮುಟ್ಟಿ ಹೇಳಿದ ಕಾರಣಕ್ಕೆ ದೇಣಿಗೆ ನೀಡಿದ್ದರೆ ಅದು ದೊಡ್ಡ ಅಪರಾಧ. ಇಸ್ಲಾಮಿಕ್ ನಂಬಿಕೆ ಪ್ರಕಾರ ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸಬಾರದು” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋಹನ್ ಲಾಲ್, ನನ್ನ ಸ್ನೇಹಿತನಿಗಾಗಿ ನಾನು ಪ್ರಾರ್ಥಿಸಿದೆ. ಇದು ನನ್ನ ವೈಯಕ್ತಿಕ ಆಯ್ಕೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಯಾರೋ ರಸೀದಿಯನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದಾರೆ. ಆದರೆ ಇದು ಸಾರ್ವಜನಿಕವಾಗಿ ಹೇಳುವ ವಿಚಾರವಲ್ಲ” ಎಂದು ಹೇಳಿದ್ದಾರೆ. ಈ ನಡುವೆ ಸೋರಿಕೆಯಾಗಿರುವುದು ಭಕ್ತರಿಗೆ ನೀಡುವ ರಸೀದಿ. ಇದು ನಮ್ಮ ಸಿಬ್ಬಂದಿಗಳು ಮಾಡಿರುವುದಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ.
ಇವೆಲ್ಲವುದರ ನಡುವೆ ಅನ್ಯಧರ್ಮದ ಸ್ನೇಹಿತರಿಬ್ಬರು ಪರಸ್ಪರರ ಬಗ್ಗೆ ತಮ್ಮ ದೇವರಲ್ಲಿ ಪ್ರಾರ್ಥಿಸುವುದರಲ್ಲಿ ತಪ್ಪೇನಿದೆ ಎಂಬ ಅಭಿಪ್ರಾಯವೂ ಕೂಡಾ ಕೇಳಿಬಂದಿದೆ. ಸೌಹಾರ್ದತೆ, ಪ್ರೀತಿ, ಭಾಂದವ್ಯವನ್ನು ನಾವಿಲ್ಲಿ ಮೆಚ್ಚಬೇಕು. ಅದನ್ನು ಹೊರತುಪಡಿಸಿ ಈ ರೀತಿ ಎಲ್ಲಾ ವಿಚಾರದಲ್ಲಿಯೂ ಧಾರ್ಮಿಕ ಪ್ರಶ್ನೆ ಎತ್ತುವುದು ಸರಿಯಲ್ಲ ಎಂಬ ವಾದಗಳಿವೆ. ಇವೆಲ್ಲ ವಿವಾದವಾಗುವ ವಿಷಯವೇ ಅಲ್ಲ, ವಿವಾದವನ್ನು ಸೃಷ್ಟಿಸಲಾಗುತ್ತಿದೆ ಎಂಬುದು ಸ್ಪಷ್ಟ.
